ಆರೋಗ್ಯಲೇಖನ ಸಂಗಮ

ಅಮೃತದ ಗುಣವುಳ್ಳ ಅಮೃತಬಳ್ಳಿ

Share news

ಅಮೃತಬಳ್ಳಿಯು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದ್ದು, ಇದು ‘ಮೆನಿಸ್ಪರ್ಮೇಸೀ’ ಕುಟುಂಬಕ್ಕೆ ಸೇರಿದ ಒಂದು ಹಸಿರುಬಳ್ಳಿ. ಈ ಸಸ್ಯವು
ನುಣುಪಾದ ಪೊದೆಯಂತೆ ಇದ್ದು, ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣಕಾಡುಗಳಲ್ಲಿ ಬೆಳೆಯುತ್ತದೆ. ಇದರ ಎಲೆಗಳು ಹೃದಯದ ಆಕಾರವನ್ನು ಹೊಂದಿರುತ್ತವೆ. ಅಮೃತಬಳ್ಳಿ ಅನೇಕ ಗುಣಲಕ್ಷಣಗಳ ಭಂಡಾರವಾಗಿದ್ದು, ‘ಗಿಲ್ಲೊಯಿನ್’ ಎಂದು ಕರೆಯಲ್ಪಡುವ ಇದು ಗ್ಲುಕೋಸೈಡ್‌ಗಳು ಮತ್ತು ಟೆನೋಸ್ಪೊರಿನ್, ಪಾಲ್ಮರಿನ್ ಮತ್ತು ಟಿನೋಸ್ಪೊರಿಕ್‌ನಂತಹ ಆಮ್ಲಗಳಿಂದ ಸಮೃದ್ಧವಾಗಿದೆ. ಅಮೃತಬಳ್ಳಿಯನ್ನು ಸಂಸ್ಕೃತದಲ್ಲಿ ‘ಕುಡುಚಿ’ ಎಂದು ಕರೆಯುತ್ತಾರೆ. ಅಮೃತ ಬಳ್ಳಿ ಹೆಸರಲ್ಲೇ ಇರುವಂತೆ ಇದು ನಿಜಕ್ಕೂ ಅಮೃತವೇ ಹೌದು. ಅಮೃತ ಎಂದರೆ ಮೃತದ (ಸಾವಿನ) ವಿರುದ್ಧ ಪದ ಅಮೃತ. ಸಂಸ್ಕೃತದಲ್ಲಿ ಅಮೃತವೆಂದರೆ ಸಾವು ಬರದೇ ಇರುವಂತದ್ದು ಎಂದರ್ಥ. ಅಮೃತಬಳ್ಳಿ ಇದನ್ನು ತಿಂದರೆ ಸಾವಿರ ವರ್ಷ ಸಾಯುವುದಿಲ್ಲ ಎಂಬ ಅರ್ಥವಲ್ಲ. ಅದಕ್ಕೆ ವಿಭಿನ್ನವಾದ ಪ್ರಾಮುಖ್ಯತೆ ಇರುವುದರಿಂದ ಗೌರವ ಸೂಚಕಾರ್ಥವಾಗಿ ಅಮೃತ ಬಳ್ಳಿ ಎಂದು ಕರೆಯಲಾಗುತ್ತದೆ.

ಈ ಒಂದು ಬಳ್ಳಿಯ ಒಂದು ಕಡ್ಡಿಯನ್ನು ನೆಟ್ಟರೆ ಹರಡಿ ಬೆಳೆಯುವುದಲ್ಲದೇ, ವಿಶೇಷವಾದ ಆರೈಕೆಯ ಅಗತ್ಯವಿಲ್ಲ, ಗೊಬ್ಬರವೂ ಬೇಕಿಲ್ಲ. ಪ್ರತಿ ದಿನ ಒಂದು ಬಿಂದಿಗೆ ನೀರು ಹಾಕಿದರೆ ಎಲ್ಲಾ ಕಾಲದಲ್ಲಿಯೂ ಚಿಗುರುತ್ತದೆ. ಹಿಂದಿನ ಕಾಲದಲ್ಲಿ ತುಳಸಿಗಿಡ ನೆಡುವಂತೆ ಎಲ್ಲರೂ ತಮ್ಮ ಹಿತ್ತಲಿನಲ್ಲಿ ಅಮೃತ ಬಳ್ಳಿಯನ್ನು ನೆಡುತ್ತಿದ್ದರು. ಅಮೃತಬಳ್ಳಿಯಲ್ಲಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ಆಂಟಿ-ಆಕ್ಸಿಡೆಂಟ್, ಉರಿಯೂತ, ಕ್ಯಾನ್ಸರ್ ವಿರೋಧಿ ಅಂಶಗಳು ಹೇರಳವಾಗಿದ್ದು, ಈ ಎಲ್ಲಾ ಅಂಶಗಳು ಒಟ್ಟಾಗಿ ಎಲ್ಲಾ ರೀತಿಯ ಕಾಯಿಲೆಗಳಿಂದ ದೂರವಿರಿಸುತ್ತದೆ.


ಸಸ್ಯದ ವರ್ಣನೆ :

ಅಮೃತಬಳ್ಳಿಯ ವೈಜ್ಞಾನಿಕ ಹೆಸರು ‘ಟಿನೋಸ್ಪೊರಾ ಕಾರ್ಡಿಫೋಲಿಯಾ’. ಇದನ್ನು ‘ಇಂಡಿಯನ್ ಕ್ವಿನೈನ್’ ಎಂದೂ ಕರೆಯುತ್ತಾರೆ. ಇತರ ಗಿಡಮರಗಳ ಆಸರೆಯಲ್ಲಿ ಹಬ್ಬುವ ಈ ಬಳ್ಳಿಯು ಒರಟಾದ, ಬೂದಿಮಿಶ್ರಿತ ಕಂದು ಬಣ್ಣದ ತೊಗಟೆ ಹೊಂದಿದ್ದು, ಕೆಲವು ಬಾರಿ ಹಾಲು ಮಿಶ್ರಿತ ಹಳದಿ ಬಣ್ಣದ ಹೂಗಳಿದ್ದು, ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಗಿಡಗಳಲ್ಲಿ ಬಿಡುತ್ತವೆ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣವನ್ನು ಹೋಲುವ, ಹೊಳಪುಳ್ಳ, ದುಂಡಗಿನ ಹಣ್ಣನ್ನು ಕಾಣಬಹುದು. ಇದರ ಕಾಂಡ, ಎಲೆ ಮತ್ತು ಬೇರು ಅತ್ಯಂತ ಉಪಯುಕ್ತವಾದ ಭಾಗಗಳು.

ಅಮೃತಬಳ್ಳಿಯು ನಮ್ಮ ಮನೆಯ ಅಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಹೀಗೆ ಮಾಡುವುದರಿಂದ ಇದು ಬಿಸಿಲಿಗೆ ಬಾಡಿ ಒಣಗುವುದಿಲ್ಲ ಮತ್ತು ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ‘ಅ-ಮೃತ’ ಎಂಬ ಹೆಸರಿದೆ. ಈ ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು. ಇದರ ತೊಗಟೆಯು ಬೂದಿ ಮಿಶ್ರಿತ ಕಂದು ಬಣ್ಣವನ್ನು ಹೊಂದಿದ್ದು, ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿಯಿಂದ ಕೂಡಿರುತ್ತದೆ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದೊಂದಿಗೆ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳನ್ನು, ಕಾಡಿನ ಪೊದೆಗಳನ್ನು ಮತ್ತು ತೋಟಗಳ ಬೇಲಿಗಳ ಆಶ್ರಯಿಸಿಕೊಂಡು ಹಬ್ಬುತ್ತದೆ. ಇದರ ಎಲೆಗಳು ಹಸಿರು ಮತ್ತು ಹೃದಯಾಕಾರವಾಗಿದ್ದು, ಮೃದುವಾಗಿರುತ್ತದೆ.

ಕಾಂಡದ ಮೇಲೆ ತೆಳುವಾದ ಪೊರೆಯಿದ್ದು, ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಅಮೃತಬಳ್ಳಿಯ ಪ್ರತಿಯೊಂದು ಭಾಗವೂ ಕಹಿಯಾಗಿದ್ದು, ಬೇವಿನ ಮರದ ಮೇಲೆ ಹಬ್ಬಿರುವ ಬಳ್ಳಿಯು ಅತೀ ಶ್ರೇಷ್ಟವಾದುದು ಎಂಬ ಮಾತಿದೆ. ಇದು ಫೆಬ್ರವರಿ ತಿಂಗಳಲ್ಲಿ ಹೂವನ್ನು ಬಿಡುತ್ತದೆ. ಈ ಬಳ್ಳಿಯನ್ನು ದೊಡ್ಡ ಬಂಗಲೆಗಳ ಮುಂದೆ, ಪ್ರವಾಸಿ ಮಂದಿರಗಳ ಮುಂದೆ ಚಪ್ಪರ ಹಾಕಿ ನೆಟ್ಟು, ಥಂಡಿಸಡಕ್ ಅಥವಾ ಶೀತದ್ವಾರ ನಿರ್ಮಿಸುತ್ತಾರೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು ಮತ್ತು ಈ ಬಳ್ಳಿಯಡಿಯಲ್ಲಿ ನಿಲ್ಲುವ ಅಥವಾ ಸಾಗುವ ಮನುಷ್ಯ, ಎತ್ತಿನಗಾಡಿ, ಪಶು-ಪಕ್ಷಿಗಳು ಮತ್ತು ಈಗಿನ ಆಧುನಿಕ ವಾಹನಗಳು ಅಪಘಾತಗಳಿಂದ ಸುರಕ್ಷಿತವಾಗಿ ಇರುತ್ತವೆ ಎನ್ನುವ ನಂಬಿಕೆಯಿದೆ.

ಅಮೃತಬಳ್ಳಿಯನ್ನು ನಾಟಿ ಮಾಡಿದ 3-4 ತಿಂಗಳುಗಳ ನಂತರ ಇದರ ಎಲೆಗಳು ಕೊಯ್ಲಿಗೆ ಬರುತ್ತದೆ. ನಂತರ ಪ್ರತಿ ತಿಂಗಳಿಗೊಮ್ಮೆ ಬಲಿತ ಎಲೆಗಳನ್ನು ಕೊಯ್ಲು ಮಾಡಿ ಉಪಯೋಗಿಸಬಹುದು. ಪ್ರತಿಯೊಂದು ಗಿಡದಿಂದ ವರ್ಷದಲ್ಲಿ ಬರೋಬ್ಬರಿ 1 ಕೆ.ಜಿ ಒಣಗಿದ ಎಲೆಗಳನ್ನು ಮತ್ತು 500ಗ್ರಾಂ ಕಾಂಡದ ಇಳುವರಿಯನ್ನು ಪಡೆಯಬಹುದು. ಅಮೃತಬಳ್ಳಿಯು ಭಾರತ ಮತ್ತು ಶ್ರೀಲಂಕಾದ ಉಷ್ಣಪ್ರದೇಶದಲ್ಲಿ ನೈಸರ್ಗಿಕವಾಗಿ ಬೆಳೆಯುವುದರಿಂದ ಇದನ್ನು ಎಲ್ಲಾ ಪ್ರದೇಶದಲ್ಲಿ ಬೆಳೆಸಬಹುದು. ಇದಕ್ಕೆ ಹೇರಳವಾಗಿನೀರು ಮತ್ತು ಕೊಟ್ಟಿಗೆ ಗೊಬ್ಬರ ಅವಶ್ಯಕ.

ಔಷಧೀಯ ಗುಣಗಳು :

 • ಇದು ವಾತ, ಪಿತ್ತ, ಕಫ ಮೊದಲಾದ ತ್ರಿದೋಷಗಳಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತಬಳ್ಳಿಯು ಪರಿಣಾಮಕಾರಿ ಔಷಧಿ. ಅಮೃತಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮೊದಲು) ಸೇವಿಸಬೇಕು.
 • ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ, ಲವಂಗ, ತುಳಸಿ, ಅರಸಿನ ಪುಡಿ, ಕಾಳುಮೆಣಸು, ಜೀರಿಗೆ, ಶುಂಠಿ) ಬೆರೆಸಿ ಕಷಾಯ ಮಾಡಿ ಕುಡಿಯಬಹುದು.
 • ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದ್ದು, ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು.
 • ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರೆದು ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಮಧುಮೇಹ ರೋಗಕ್ಕೆ ಔಷಧಿಯಾಗಿಯೂ ಈ ಬಳ್ಳಿಯನ್ನು ಬಳಸುತ್ತಾರೆ. ಅದರ ತಜಾ ಕಾಂಡವನ್ನು ಜಜ್ಜಿ, ಹಿಸುಕಿ ರಸ ತೆಗೆದು 2 ಚಮಚ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ದಿನಕ್ಕೆ 3 ಬಾರಿ ಆಹಾರ ಸೇವನೆಯ ಮೊದಲು ಕುಡಿಯಬೇಕು.
 • ಹೃದಯ ಶೂಲೆ ರೋಗಕ್ಕೆ ಅಮೃತಬಳ್ಳಿಯ ಅರ್ಧ ಟೀ ಚಮಚ ಚೂರ್ಣಕ್ಕೆ ಒಂದೆರಡು ಮೆಣಸು ಕಾಳಿನ ಪುಡಿ ಸೇರಿಸಿ ಬಿಸಿ ನೀರಿನಲ್ಲಿ ಕದಡಿ ದಿವಸಕ್ಕೆ ಎರಡು ವೇಳೆ ಸೇವಿಸಬೇಕು.
 • ಸ್ಮರಣ ಶಕ್ತಿಯವೃದ್ಧಿಗೆ ಶತಾವರಿ, ಶುಂಠಿ ವಾಯುವಿಳಂಗ, ಬಜೆ, ಬ್ರಾಹ್ಮಿ, ಅಳಲೆಕಾಯಿ, ಉತ್ತರಾಣೆ ಮತ್ತು ಸಮಭಾಗ ಅಮೃತಬಳ್ಳಿ ಸೇರಿಸಿ ನಯವಾದ ಚೂರ್ಣ ಮಾಡಿಟ್ಟುಕೊಳ್ಳಬೇಕು. ಅರ್ಧ ಟೀ ಚಮಚ ಚೂರ್ಣಕ್ಕೆ ಸ್ವಲ್ಪ ತುಪ್ಪ ಸೇರಿಸಿ ನೆಕ್ಕಬೇಕು. ಇದರ ಮೇಲೆ ಕೆಂಪು ಕಲ್ಲುಸಕ್ಕರೆ ಹಾಕಿರುವ ಬಿಸಿ ಹಾಲನ್ನು ಕುಡಿಯಬೇಕು. ಕೆಲವು ದೂರವಾಣಿ ಸಂಖ್ಯೆಗಳನ್ನಾಗಲಿ ಅಥವಾ 15ರಿಂದ 19ರ ತನಕ ಮಗ್ಗಿಯನ್ನು ನೆನಪಿನಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಕೆಲವೇ ತಿಂಗಳಲ್ಲಿ ಫಲ ದೊರೆಯುತ್ತದೆ.
 • ಬಾಯಾರಿಕೆ ಮತ್ತು ವಾಂತಿಯ ನಿಯಂತ್ರಣಕ್ಕಾಗಿ ಸುಮಾರು 25 ಗ್ರಾಂನಷ್ಟು ಅಮೃತಬಳ್ಳಿಯನ್ನು ಅರೆದು ಶುದ್ಧವಾದ ನೀರು ಹಾಕಿ ಕಾಯಿಸಿ ಕಷಾಯ ಮಾಡಿಟ್ಟುಕೊಳ್ಳಬೇಕು. ಇದನ್ನು ದಿನಕ್ಕೆ ಮೂರು ವೇಳೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು.
 • ಮೂತ್ರನಾಳದಲ್ಲಿ ಕಲ್ಲು ಇರುವವರು ಅಮೃತಬಳ್ಳಿ, ನೆಗ್ಗಿಲು, ಅಶ್ವಗಂಧ, ನೆಲ್ಲಿ, ಶುಂಠಿಯನ್ನು ಸಮಪ್ರಮಾಣದಲ್ಲಿ ಹಾಕಿ ನಯವಾಗಿ ಚೂರ್ಣ ಮಾಡಿಟ್ಟುಕೊಳ್ಳಬೇಕು. 10 ಗ್ರಾಂ ಚೂರ್ಣವನ್ನು ಶುದ್ಧ ನೀರು ಹಾಕಿ ಕಷಾಯ ಮಾಡಿ ವೇಳೆಗೆ ಒಂದು ಟೀ ಚಮಚದಷ್ಟು ಕುಡಿಯಬೇಕು
 • ಪಿತ್ತದ ಸಮಸ್ಯೆ ಇರುವವರು ಅಮೃತಬಳ್ಳಿಯ ಎಲೆ, ಸಾಸಿವೆ, ಶ್ರೀಗಂಧದ ಚಕ್ಕೆ ಇವುಗಳನ್ನು ಸಮ ಪ್ರಮಾಣದಲ್ಲಿ ಎಮ್ಮೆಯ ಹಾಲಿನಲ್ಲಿ ಅರೆದು ಮೈಗೆ
 • ಹಚ್ಚಿಕೊಂಡರೆ ಪಿತ್ತ ವಿಕಾರ ಕಡಿಮೆಯಾಗಿ ಆಗಿ ಪಿತ್ತದ ಗಂಧೆಗಳು ಮತ್ತು ನೆವೆ ಉರಿ ಶಮನವಾಗುತ್ತದೆ.
 • ಹೊಟ್ಟೆಯುರಿ ಇದ್ದರೆ ಅಮೃತಬಳ್ಳಿಯ ಹಸಿಸೊಪ್ಪಿನ 2 ಟೀ ಚಮಚದಷ್ಟು ರಸಕ್ಕೆ ಸ್ವಲ್ಪ ಓಂ ಕಾಳಿನ ಪುಡಿ ಸೇರಿಸಿ ಮಜ್ಜಿಗೆಯಲ್ಲಿ ಕದಡಿ ಕುಡಿಯಬೇಕು.
 • ವಾತದ ಜ್ವರ ಇದ್ದಲ್ಲಿ ಅಮೃತಬಳ್ಳಿಯ ತ್ರಿಫಲ ಚೂರ್ಣ, ತುಂಗೇಗುಡ್ಡೆ ಕೊತ್ತಂಬರಿ, ಶತಾವರಿ, ಕಳ್ಳಂಗಡಲೆ ಮತ್ತು ಬೇಲದ ಬೇರು ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು. ಸ್ವಲ್ಪ ಚೂರ್ಣಕ್ಕೆ ಎರಡು ಬಟ್ಟಲು ನೀರು ಹಾಕಿ ಕಾಯಿಸಿ ಅರ್ಧ ಬಟ್ಟಲು ಕಷಾಯ ಆಗುವಂತೆ ಕುದಿಸಿ ಅದನ್ನು ಆರಿಸಿ ಕುಡಿಯಬೇಕು.
 • ಬುದ್ಧಿ ಭ್ರಮಣೆ ಇದ್ದರೆ ಹಸಿ ಅಮೃತಬಳ್ಳಿಯನ್ನು ತಣ್ಣನೆಯ ಹಾಲಿನಲ್ಲಿ ನುಣ್ಣನೆ ರುಬ್ಬಿ ತಲೆಗೆ ಲೇಪನ ಹಾಕಬೇಕು. ಒಂದೆರಡು ತಾಸುಗಳ ನಂತರ ಬಿಸಿ ನೀರಿನಿಂದ ಸ್ನಾನ ಮಾಡಿದರೆ ಪರಿಹಾರ ಕಾಣಬಹುದು.
 • ದೃಷ್ಟಿಮಾಂದ್ಯವಿದ್ದಲ್ಲಿ ಅಮೃತಬಳ್ಳಿ ತ್ರಿಫಲ ಚೂರ್ಣ, ಹಿಪ್ಪಲಿಯನ್ನು ಸಮ ಪ್ರಮಾಣ ಸೇರಿಸಿ ಜಜ್ಜಿ ಕಷಾಯ ಮಾಡಿ ಅರ್ಧ ಬಟ್ಟಲು ಕಷಾಯಕ್ಕೆ ಜೇನುತುಪ್ಪ ಸೇರಿಸಿ ಕುಡಿಯಬೇಕು.
 • ಬೊಜ್ಜು ಕಡಿಮೆ ಆಗಲು ಮತ್ತು ಆಯಸ್ಸು ಹೆಚ್ಚಲು ಅಮೃತಬಳ್ಳಿ ಪರಿಣಾಮಕಾರಿ ಔಷಧಿ. ಇದರ ಕಷಾಯಕ್ಕೆ ಒಂದು ಗುಲಗಂಜಿಯಷ್ಟು ಲೋಹ ಭಸ್ಮವನ್ನು ಮತ್ತು ಒಂದು ಟೀ ಚಮಚ ಜೇನು ತುಪ್ಪವನ್ನು ಸೇರಿಸಿ ಸೇವಿಸಬೇಕು. ನಂತರ ಸುಮಾರು 40 ದಿನಗಳ ಕಾಲ ಅರಳ ಅಂಗಸಾಧನೆ, ಕೊಬ್ಬು ರಹಿತ ಆಹಾರ, ತಣ್ಣೀರು ಸ್ನಾನ ಮತ್ತು ದೀರ್ಘ ನಡಿಗೆ ಅಭ್ಯಾಸ ಮಾಡಿಕೊಳ್ಳಬೇಕು.
 • ಸ್ತ್ರೀಯರ ರಕ್ತ ಪ್ರದರ ಸಮಸ್ಯೆ ಇದ್ದಲ್ಲಿ 20 ಗ್ರಾಂ ಹಸಿ ಅಮೃತಬಳ್ಳಿಯ ರಸಕ್ಕೆ ಒಂದು ಟೀ ಚಮಚದಷ್ಟು ಸಕ್ಕರೆ ಬೆರೆಸಿ ದಿವಸಕ್ಕೆ ಎರಡು ಬಾರಿ ಸೇವಿಸಬೇಕು.
 • ಉರಿಮೂತ್ರ ಸಮಸ್ಯೆ ಇದ್ದಲ್ಲಿ ಅಮೃತಬಳ್ಳಿ ನಯವಾದ ಚೂರ್ಣವನ್ನು ಹಸುವಿನ ಹಾಲಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಕದಡಿ ಒಂದು ಗ್ರಾಂನಂತೆ ದಿನಕ್ಕೆ ಎರಡು ಬಾರಿ ಸೇವಿಸಬೇಕು.
 • ಅಮೃತಬಳ್ಳಿಯನ್ನು ಕೊರೊನಾ ವಿರುದ್ಧದ ಚಿಕಿತ್ಸೆಗಳಲ್ಲಿ ರೋಗನಿರೋಧಕ ಶಕ್ತಿವರ್ಧನೆಗೆ ಬಳಸಲಾಗುತ್ತದೆ.
 • ಎರಡು ಚಮಚ ಅಮೃತಬಳ್ಳಿಯ ಪುಡಿಯನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಬಂದ ನಂತರ ಸೋಸಿ ಕುಡಿಯಬೇಕು.ಈ ಕಷಾಯವನ್ನು ತಯಾರಿಸಿದ ಎಂಟು ಗಂಟೆಯ ಒಳಗಾಗಿ ಕುಡಿಯುವುದು ಉತ್ತಮ.
 • ಎರಡು ಗ್ರಾಂ ಅಮೃತಬಳ್ಳಿಯ ಕಾಂಡದ ಪುಡಿಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಪ್ರತಿದಿನ ಸೇವಿಸಿದರೆ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇದನ್ನು ನಿರಂತರವಾಗಿ ಎರಡು ತಿಂಗಳ ಅವಧಿಯವರೆಗೂ ಸೇವಿಸಬಹುದು.
 • ಒಂದು ಚಮಚ ಅಮೃತಬಳ್ಳಿಯ ಕಾಂಡದ ಪುಡಿಯನ್ನು ಒಂದು ಲೋಟ ನೀರಿಗೆ ಸೇರಿಸಿ ಚೆನ್ನಾಗಿ ಕುದಿಸಿ ಅರ್ಧ ಲೋಟಕ್ಕೆ ಇಳಿದ ನಂತರ ಈ ಕಷಾಯವನ್ನು ದಿನಕ್ಕೆ ಒಂದು ಬಾರಿ ಸೇವಿಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
 • ಕೊರೊನಾ ವೈರಸ್ ಹರಡದಂತೆ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳ ಜತೆಗೆ ಅಮೃತಬಳ್ಳಿಯ ಕಾಂಡದ ಕಷಾಯ ಸೇವಿಸುವುದು ಸೂಕ್ತ.
 • ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವವರು ನಿಯಮಿತವಾಗಿ ಅಮೃತಬಳ್ಳಿ ಕಷಾಯವನ್ನು ಕುಡಿಯುತ್ತಿದ್ದರೆ ಕೆಲವೇ ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
 • ಅಮೃತಬಳ್ಳಿ ಕಷಾಯ ಮಾಡಲು, 4-5 ತುಳಸಿ ಎಲೆ, 2 ಕರಿ ಮೆಣಸು, ಸ್ವಲ್ಪ ಕಚ್ಚಾ ಅರಿಶಿನ, ಸ್ವಲ್ಪ ಶುಂಠಿ, ಒಂದು ಚಿಟಿಕೆ ಅಶ್ವಗಂಧವನ್ನು ಅಮೃತಬಳ್ಳಿ ತುಂಡಿಗೆ ಸೇರಿಸಿ ಇವೆಲ್ಲವನ್ನೂ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಕನಿಷ್ಠ 2 ಗ್ಲಾಸ್ ನೀರನ್ನು ಬಿಸಿ ಮಾಡಿ ಅದಕ್ಕೆ ಈ ರುಬ್ಬಿದ ಮಿಶ್ರಣ ಹಾಕಿ ಕಡಿಮೆ ಶಾಖದಲ್ಲಿ ನೀರನ್ನು ಕುದಿಸಬೇಕು. ಪಾತ್ರೆಯಲ್ಲಿ ನೀರು ಅರ್ಧ ಆದಾಗ, ನೀರನ್ನು ಸೋಸಿ ಕಷಾಯವನ್ನು ಉಗುರು ಬಿಸಿ ಇರುವಾಗ ಕುಡಿಯಬೇಕು. ಇದನ್ನು ಒಮ್ಮೆ ಕುಡಿಯುವಾಗ ಅರ್ಧದಿಂದ ಒಂದು ಲೋಟ ಕುಡಿಯಬಹುದು.
 • ಅಮೃತಬಳ್ಳಿ ಕಷಾಯದ ಬದಲು ಅಮೃತಬಳ್ಳಿ ಜ್ಯೂಸನ್ನೂ ತಯಾರಿಸಿ ಕುಡಿಯಬಹುದು. ಇದಕ್ಕಾಗಿ, ಅಮೃತಬಳ್ಳಿ ಕಾಂಡವನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು, ಬಿಸಿ ನೀರಿನಲ್ಲಿ ಕುದಿಸಿ, ನೀರು ಅರ್ಧ ಆದಾಗ, ಆಫ್ ಮಾಡಿ ಮತ್ತು ಅದನ್ನು ತಣ್ಣಗಾಗಲು ಬಿಡಬೇಕು. ಪ್ರತಿದಿನ ಒಂದು ಲೋಟ ರಸವನ್ನು ಸೇವಿಸಬಹುದು.
 • ಅಮೃತಬಳ್ಳಿಯ ರಸವನ್ನು ಮಜ್ಜಿಗೆ ಜೊತೆಗೆ ಸೇರಿಸಿ ಕುಡಿಯುವುದರಿಂದ ಮತ್ತು ಈ ಬಳ್ಳಿಯ ಪುಡಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಸೋಸಿ ಕಷಾಯದ ರೂಪದಲ್ಲಿ ತೆಗೆದುಕೊಳ್ಳುವುದರಿಂದ ಮೂಲವ್ಯಾಧಿಯಿಂದ ಬಳಲುತ್ತಿರುವರು ಶಮನ ಕಾಣಬಹುದು.
 • ಅಮೃತಬಳ್ಳಿಯ ರಸವು ತೀವ್ರವಾದ ಜ್ವರ, ನೆಗಡಿ, ಕೆಮ್ಮುಗಳಿಗೆ ರಾಮಬಾಣವಾಗಿದ್ದು, ಇದು ರಕ್ತದಲ್ಲಿರುವ ಪ್ಲೇಟ್ಲೆಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಡೆಂಗ್ಯೂ ಜ್ವರದ ರೋಗಲಕ್ಷಣಗಳನ್ನೂ ನಿವಾರಿಸುತ್ತದೆ. ಇದನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಸೇವಿಸುವುದರಿಂದ ಮಲೇರಿಯಾದಂತಹ ರೋಗವನ್ನೂ ತಡೆಗಟ್ಟಬಹುದು.
 • ಅಮೃತಬಳ್ಳಿಯ ಎಲೆಯನ್ನು ನೀರಿನಲ್ಲಿ ಮೆಂತೆಕಾಳಿನೊಂದಿಗೆ ಕುದಿಸಿ ಅದಕ್ಕೆ ಅರಿಶಿನ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂತ್ರದಲ್ಲಿರುವ ಸಕ್ಕರೆ ಅಂಶವು ಕಡಿಮೆಯಾಗುತ್ತದೆ.
 • ಅಮೃತಬಳ್ಳಿಯ ಎಲೆ ಮತ್ತು ಕಾಂಡಗಳನ್ನು ಜಜ್ಜಿ ಪೇಸ್ಟಿನಂತೆ ಮಾಡಿಕೊಂಡು ನಿಂಬೆ ಹಣ್ಣಿನ ರಸವನ್ನು ಚರ್ಮಕ್ಕೆ ಲೇಪನ ಮಾಡುವುದರಿಂದ ಚರ್ಮರೋಗವು ನಿವಾರಣೆಯಾಗುತ್ತದೆ. ಇದು ಚರ್ಮವನ್ನು ಸುಂದರವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
 • ಅಮೃತಬಳ್ಳಿಯು ಕಣ್ಣಿನ ಸ್ಪಷ್ಟತೆಯನ್ನು ಹೆಚ್ಚಿಸುವುದಲ್ಲದೇ ಕನ್ನಡಕವಿಲ್ಲದೆಯೇ ಉತ್ತಮವಾಗಿ ನೋಡುವ ಸಾಮರ್ಥ್ಯವನ್ನು ಪಡೆಯುವಂತೆ ಮಾಡಿ ಮುಖದ ಮೇಲಿರುವ ಗಾಢ ಕಲೆಗಳು, ಗುಳ್ಳೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

ಅಮೃತಬಳ್ಳಿಯನ್ನು ಹೇಗೆ ಸೇವಿಸಬೇಕು ?

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅಮೃತಬಳ್ಳಿಯನ್ನು ಬಳಸುವುದರಲ್ಲಿ ಬಹುತೇಕರು ನಿರತರಾಗಿದ್ದರೂ, ಹೆಚ್ಚಿನವರಿಗೆ ಇದನ್ನು ಹೇಗೆ ಸೇವಿಸಬೇಕು ಮತ್ತು ಆರೋಗ್ಯಕ್ಕೆ ಎಷ್ಟು ಬೇಕೆಂದು ಗೊತ್ತಿಲ್ಲ. ಅಮೃತಬಳ್ಳಿಯನ್ನು 3 ರೀತಿಯಲ್ಲಿ ಸೇವಿಸಬಹುದು. ಅವುಗಳೆಂದರೆ,

 1. ಅಮೃತಬಳ್ಳಿಯ ಚೂರ್ಣ ಮತ್ತು ಮಾತ್ರೆಗಳು
 2. ಅಮೃತಬಳ್ಳಿಯ ರಸ
 3. ಅಮೃತಬಳ್ಳಿಯ ಕಷಾಯ.

ಯಾವಾಗ ಸೇವಿಸಬೇಕು?

 1. ಒಂದು ಕಪ್ ನೀರಿಗೆ 2-3 ಟೀ ಚಮಚ (10-15 ಮಿ.ಲೀ) ಅಮೃತಬಳ್ಳಿ ರಸವನ್ನು ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಕಷಾಯ ಮಾಡುವಾಗ ಜೇನುತುಪ್ಪವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಮೂರು ಬಾರಿ ಊಟದ ನಂತರ ಮಾತ್ರ ಸೇವಿಸಿ. ಒಂದೆರಡು ಚಮಚ ಸೇರಿಸಿ ಸಾಕು.
 2. ಒಂದು ವೇಳೆ ಅತಿಯಾಗಿ ಅಮೃತಬಳ್ಳಿ ರಸ ಸೇವಿಸಿದರೆ ಸಮಸ್ಯೆ ಉಂಟಾಗಬಹುದು ಎನ್ನುವುದನ್ನು ವೈದ್ಯರೇ ಖಚಿತಪಡಿಸಿದ್ದಾರೆ. ಅಮೃತಬಳ್ಳಿ ರಸದ ಕಷಾಯವನ್ನು ದಿನದಲ್ಲಿ ಒಂದೊಂದು ಲೋಟದಂತೆ (ಅತಿಯಾಗಿ) ಮೂರು ಬಾರಿ ಸೇವಿಸಿದರೆ ಯಕೃತ್ತಿನ ಸಮಸ್ಯೆಯೂ ಕಾಣಿಸಿಳ್ಳಬಹುದು. ಅಮೃತಬಳ್ಳಿಯ ಅಪರಿಮಿತ ಔಷಧೀಯ ಗುಣದ ಕಾರಣದಿಂದ ಗಿಡಗಳಲ್ಲಿಎಲೆಗಳು ಮಾಯವಾಗುತ್ತಿದ್ದು, ಈ ಸಸ್ಯದ ಎಲೆಗಿಂತಲೂ ಕಾಂಡವನ್ನು ಬಳಸುವುದು ಉತ್ತಮ. ಅಮೃತಬಳ್ಳಿಯ ಎಲೆಗಳಿಗಿಂತ ಕಾಂಡ ಹೆಚ್ಚಿನ ಶಕ್ತಿ ಹೊಂದಿದ್ದು, ಔಷಧ ತಯಾರಿಗೆ ಅಥವಾ ಅಮೃತಬಳ್ಳಿಯ ಪುಡಿ ತಯಾರಿಸಲು ಇದರ ಕಾಂಡವನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಇದು ಕಷಾಯ ತಯಾರಿಕೆಗೆ ಸೂಕ್ತ ಚೂರ್ಣ. ಅಮೃತಬಳ್ಳಿಯು ವೈದ್ಯಕೀಯ ಶಾಸ್ತ್ರದಲ್ಲಿ ಅಗ್ರಗಣ್ಯವಾದ ಗಿಡಮೂಲಿಕೆಗಳ ಪೈಕಿ ಒಂದಾಗಿದೆ. ಇದು ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇಂತಹ ಗಿಡಮೂಲಿಕೆಗಳನ್ನು ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಬಳಸುವುದರಿಂದ ಆರೋಗ್ಯವನ್ನು ವರ್ಧಿಸಬಹುದು. ಆದರೆ ಇವತ್ತಿನ ಕಲುಷಿತಭರಿತ ಆಹಾರ ಪದಾರ್ಥಗಳಿಂದ ಸೇವಿಸುವ ಆಹಾರವು ವಿಷವಾಗಿ ಪರಿಣಮಿಸಿದೆ. ಕೆಲವೊಮ್ಮೆ ಎಷ್ಟೇ ಕಾಳಜಿಯಿಂದ ಇದ್ದರೂ ಅನಾರೋಗ್ಯಕ್ಕೆ ತುತ್ತಾಗುವುದು ಸಹಜ. ಒಬ್ಬೊಬ್ಬರ ದೇಹ ಪ್ರಕೃತಿಯು ಒಂದೊಂದು ರೀತಿ ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ವೈದ್ಯರ ಸಲಹೆಯನ್ನು ತೆಗೆದುಕೊಂಡೇ ಇದನ್ನು ಸೇವಿಸುವುದು ಉತ್ತಮ.

ಲೇಖನ :
ಸಂತೋಷ್ ರಾವ್ ಪೆರ್ಮುಡ

Share news

Related Articles

Leave a Reply

Your email address will not be published. Required fields are marked *

Back to top button