ಪ್ರೇರಣೆಲೇಖನ ಸಂಗಮಸುಳ್ಯ

ಕಲೆಯ ಗುಡಿಯೊಳಗಿನ ಕಲೆಗಾರ

Share news

ಯಕ್ಷಗಾನ,ಸಂಗೀತ, ನಾಟಕ, ಬಣ್ಣಗಾರಿಕೆ, ಕಲಾ ಪ್ರಕಾರಗಳನ್ನು ತಮ್ಮದಾಗಿಸಿಕೊಂಡು, ಇನ್ನೂ ಕೆಲವರು ಪರಂಪರೆಯಿಂದ ಮೈಗೂಡಿಸಿಕೊಂಡು ಕಲಾವಿದರಾಗಿ ಮೆರೆಯುತ್ತಾರೆ. ಪ್ರಶಸ್ತಿಗಾಗಿ ಕಲಾವಿದರಾಗದೆ,ಕಲಾವಿದರಾಗಿ ಪ್ರಶಸ್ತಿಯನ್ನು ಪಡೆದುಕೊಳ್ಳುವುದಾದರೆ ಅದು ಅರ್ಥಪೂರ್ಣ. ಈ ವಿಧದಲ್ಲಿ ಕೆಲವರು “ಕಲಾವಿದರಾದರೆ”,ಇನ್ನೊಂದು ವಿಧದಲ್ಲಿ “ಕಲೆಗಾರನಾಗುವುದು”.

ಮಣ್ಣಿನಿಂದ ವಿವಿಧ ಸಲಕರಣೆಗಳು ಉದಾಹರಣೆಗೆ ,ಘಟಂ,ಮಡಿಕೆ,ತಪಲೆ,ಹೂಜಿ,ಬಾವಡೆ ಇತ್ಯಾದಿ.ಮರದ ವಿಷಯಕ್ಕೆ ಬರುವುದಾದರೆ, ಕುಸುರಿ ಕೆತ್ತನೆಗಳು,ಪೀಠೋಪಕರಣಗಳು,ಬಿದಿರು ಹಾಗೂ ಬೆತ್ತದಿಂದ ವಿವಿಧ ರೀತಿಯ ಪ್ರಾಕಾರಗಳು ತಯಾರಿಸಲ್ಪಡುತ್ತವೆ. ಹೀಗಾಗಿಯೇ ಕಲಾವಿದನಿಗೂ ,ಕಲೆಗಾರನಿಗೂ ಅವಿನಾಭಾವ ಸಂಬಂಧ, ಇದು ಪ್ರಕೃತಿಯೇ ಬೆಸೆದ ಬಂಧ.

ಇಲ್ಲೊಬ್ಬ ವೃದ್ಧ ಕಲೆಗಾರ ಈತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ,ಕಳಂಜ ಗ್ರಾಮದ ಕೋಟೆಮುಂಡುಗಾರಿನ ಕೋಡಿಯಡ್ಕ ಎಂಬಲ್ಲಿನ ನಿವಾಸಿ. ಸುಮಾರು ನೂರು ವರುಷಗಳ ಹಿಂದೆ ಇಲ್ಲೇ ಪಕ್ಕದ ಶೇಡಿಕಜೆಯಿಂದ ಇಲ್ಲಿಗೆ ಬಂದು ನೆಲೆಸಿದ ಪುಟ್ಟ ಭೈರ ಹಾಗೂ ಚೋಮು ದಂಪತಿಗಳಿಗೆ ಜನಿಸಿದ ಮಕ್ಕಳಲ್ಲಿ ಎರಡು ಗಂಡು ,ಮೂರು ಹೆಣ್ಣು ಮಕ್ಕಳು. ಇವರಲ್ಲಿ ಹಿರಿಯವನೇ ಈ ಕಲೆಗಾರ ಸುಬ್ಬ ಭೈರ. ಇವರ ಹೆಂಡತಿ ನೀಲಮ್ಮ.ಇವರಿಗೆ ನಾಲ್ಕು ಜನ ಮಕ್ಕಳು. ಮೂರು ಗಂಡು ಹಾಗೂ ಒಬ್ಬಳು ಹೆಣ್ಣು ಮಗಳು. ತಿಳಿದ ಮಟ್ಟಿಗೆ ಭೈರರಲ್ಲಿ ಎರಡು ವಿಧ. ಒಂದು ಬಟ್ಟಿ ಭೈರ, ಇನ್ನೊಂದು ಮಣ್ಣು ಭೈರ. ಈ ಸುಬ್ಬ ಬಟ್ಟಿ ಭೈರರ ಸಾಲಿಗೆ ಸೇರುತ್ತಾರೆ.

ಸುಬ್ಬ ಭೈರ 40 ವರ್ಷದಿಂದೀಚೆ ಇಲ್ಲಿ ಮನೆ ಮಾಡಿಕೊಂಡು ಕುಟುಂಬದವರೊಂದಿಗೆ ಜೀವಿಸುತ್ತಿದ್ದಾರೆ. ಈಗ 85ರ ವೃದ್ಧ. ಇವರ ಕುಲಕಸುಬು ಬಿದಿರು ಹಾಗೂ ಬೆತ್ತವನ್ನು ಹೆಣೆದು ,ಬಟ್ಟಿ,ತೊಟ್ಟಿಲು,ಕಣ್ಣಿನ ತಡ್ಪೆ, ತಡ್ಪೆ ಮುಂತಾದವು ಗಳನ್ನು ತನ್ನ ಕೈಚಳಕದಿಂದ ತಯಾರಿಸುವುದು.ಹಾಗಾಗಿ ಇವರೊಬ್ಬ ಕಲೆಗಾರ.ಇವರು ವೃತ್ತಿಯನ್ನು ತಮ್ಮ 12ನೇ ವಯಸ್ಸಿನಲ್ಲೇ ತನ್ನ ತಂದೆ ತಯಾರಿಸುವುದನ್ನು ನೋಡಿ ಕಲಿತುಕೊಂಡು,ಪಾರಂಪರಿಕ ಕಸುಬನ್ನು ಮುಂದುವರೆಸಿದ್ದಾರೆ.ಇದನ್ನೇ ಗುಡಿಕೈಗಾರಿಕೆ ಅಂತ ಕರೆಯುವುದು.

ಇಂತಹವುಗಳನ್ನು ತಯಾರಿಸಲು ಅಲ್ಲೇ ಪಕ್ಕದ ಜಾಗಗಳಿಗೆ ಹೋಗಿ(ನಮ್ಮ ಮನೆಗೂ ಬಿದಿರಿಗಾಗಿ ಬಂದಿದ್ದರು)ಬಿದಿರು ಬೆತ್ತವನ್ನು ಹೊತ್ತು ತಂದು , ಅದನ್ನು ಹೆಣೆದು ಬೇಕಾದವರಿಗೆ,ಬೇಕಾದದ್ದನ್ನು ತಯಾರಿಸಿ ಕೊಡುತ್ತಿದ್ದ.ಅದೂ ಅಲ್ಲದೆ ಪಕ್ಕದ ಬೆಳ್ಳಾರೆ ಪೇಟೆಗೆ ಹೋಗಿ ,ಸಂತೆಯಲ್ಲಿಟ್ಟು ಮಾರಿ ತಕ್ಕ ಮಟ್ಟಿಗೆ ಹಣಗಳಿಸಿ ತನ್ನ ಜೀವನೋಪಾಯಕ್ಕಾಗಿ ದಾರಿ ಮಾಡಿಕೊಂಡಿದ್ದಾರೆ.ಈಗಿನ ಹೊಸ ತಂತ್ರಜ್ಞಾನ ದಿಂದಾಗಿ( ಕಾಲ ಬದಲಾಗಿದೆ) ಇಂತಹ ಗುಡಿ ಕೈಗಾರಿಕೆಗಳು ಅಳಿವಿನಂಚಿನಲ್ಲಿರುವ ಈ ಕಾಲ ಘಟ್ಟದಲ್ಲಿ ಅದನ್ನು ಈ ಇಳೀ ವಯಸ್ಸಿನಲ್ಲೂ ಸುಬ್ಬ ಉಳಿಸಿಕೊಂಡಿರುವುದು ತುಂಬಾ ಶ್ಲಾಘನೀಯ. ಈ ಕಾಲದಲ್ಲಿ ಈ ಕಸುಬನ್ನು ಉಳಿಸಿಕೊಂಡಿರುವ ಜನ ಬಹಳ ವಿರಳ ಎನ್ನುತ್ತಾರೆ ಕಲೆಗಾರ ಸುಬ್ಬ.


Share news

Related Articles

Leave a Reply

Your email address will not be published. Required fields are marked *

Back to top button