ಪ್ರೇರಣೆಲೇಖನ ಸಂಗಮ

40 ದೇಶಗಳ 700ಕ್ಕೂ ಹೆಚ್ಚು ವಿಧದ ವಿದೇಶಿ ಹಣ್ಣುಗಳನ್ನು ಬೆಳೆಯುತ್ತಿರುವ ದಕ್ಷಿಣ ಕನ್ನಡದ ಕೃಷಿ ಸಾಧಕರು ಅನಿಲ್ ಬಳಂಜ

Share news

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಅನಿಲ್ ಬಳಂಜ ಅವರು ಕಳೆದ 20 ವರ್ಷಗಳಿಂದ 30 ಎಕರೆ ಭೂಮಿಯಲ್ಲಿ ವಿಶ್ವದ 40 ದೇಶಗಳ ಸುಮಾರು 700ಕ್ಕೂ ಅಧಿಕ ವಿಧವಾದ ಹಣ್ಣುಗಳನ್ನು ಬೆಳೆಸುತ್ತಿರುವ ಅಪರೂಪದ ಕೃಷಿಕರು. ತಮ್ಮ 19 ನೇ ವಯಸ್ಸಿನಲ್ಲೇ ಜೀವನೋಪಾಯಕ್ಕಾಗಿ ಅಡಿಕೆ, ತೆಂಗು ಮತ್ತು ರಬ್ಬರ್ ಬೆಳೆಯುವ ಕೃಷಿ ಜೀವನವನ್ನು ಪ್ರಾರಂಭಿಸಿದರು.

ತಮ್ಮ ತಂದೆ ಹಲವಾರು ತಳಿಯ ಹಲಸು ಮತ್ತು ಮಾವಿನ ಹಣ್ಣುಗಳನ್ನು ಬೆಳೆಸುವುದನ್ನು ನೋಡುತ್ತಾ ಬೆಳೆದರು. ತಾವು ಕೂಡ ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಲು ನಿರ್ಧರಿಸಿದರು. ಭಾರತದಲ್ಲಿ ಅಪರೂಪಕ್ಕೆ ಬೆಳೆಯುವ ವಿವಿಧ ಬಗೆಯ ವಿದೇಶಿ ಹಣ್ಣುಗಳ ಗಿಡಗಳನ್ನು ತಮ್ಮ ಜಮೀನಿನಲ್ಲಿ ನೆಟ್ಟರು. ಇಂದು ಅನಿಲ್ ಬಳಂಜ ಅವರ ಫಾರ್ಮ್ 40 ದೇಶಗಳಿಂದ ಸಂಗ್ರಹಿಸಿದ 700 ಕ್ಕೂ ಹೆಚ್ಚು ವಿದೇಶಿ ಹಣ್ಣಿನ ಪ್ರಭೇದಗಳಿಂದ ತುಂಬಿದೆ. ಪ್ರತಿ ಹಣ್ಣಿನ ಬೀಜಗಳನ್ನು ವಿದೇಶದಲ್ಲಿರುವ ತಮ್ಮ ಸ್ನೇಹಿತರು ಮತ್ತು ನರ್ಸರಿಗಳಿಂದ ಪಡೆಯುತ್ತಾರೆ.

ಅನಿಲ್ ಬಳಂಜ ತಮ್ಮ 30 ಎಕರೆ ಜಮೀನಿನಲ್ಲಿ ಬೀಜರಹಿತ ಮಾವು, ಹಲಸು, ನಿಂಬೆ, ಪೇರಳೆ ಬೆಳೆಯುತ್ತಾರೆ ಹಾಗೂ ವಿದೇಶಿ ಹಣ್ಣಿನ ಗಿಡಗಳು ಮಲೇಷ್ಯಾ, ಕಾಂಬೋಡಿಯಾ, ವಿಯೆಟ್ನಾಂ, ಬ್ರೆಜಿಲ್, ಥೈಲ್ಯಾಂಡ್ ಗಳ ಅಪರೂಪದ ಸಸ್ಯಗಳನ್ನು ಕಾಣಬಹುದು. ವಿದೇಶಿ ಹಣ್ಣಿನ ಸಸ್ಯಗಳನ್ನು ಬೆಳೆಸಲು ಸಾಕಷ್ಟು ತಾಳ್ಮೆ ಬೇಕಾಗುತ್ತದೆ ಏಕೆಂದರೆ ಕೆಲವು ಬೀಜಗಳಿಂದ ಸಸ್ಯಗಳು ಇಳುವರಿಯನ್ನು ಪ್ರಾರಂಭಿಸಲು 8-15 ವರ್ಷಗಳವರೆಗೆ ತೆಗೆದುಕೊಳ್ಳುತ್ತದೆ. ಕೆಲವು ನಾಟಿ ತಳಿಗಳು 2-3 ವರ್ಷಗಳಲ್ಲಿ ಇಳುವರಿಯನ್ನು ಪ್ರಾರಂಭಿಸುತ್ತವೆ.

ಅನಿಲ್ ಬಳಂಜ ತಮ್ಮ ಜಮೀನಿನಲ್ಲಿ ಕೊಯ್ಲು ಮಾಡಿದ ಮೊದಲ ವಿದೇಶಿ ಹಣ್ಣು ಬ್ರೆಜಿಲ್‌ನ ರೋಲಿನಿಯಾ ಡೆಲಿಸಿಯೋಸಾ (ಬಿರಿಬಾ). ಅವರು ಅನೇಕ ವರ್ಷಗಳ ಹಿಂದೆ ಭಾರತದಲ್ಲಿ ಸೆಂಪೆಡಾಕ್ (ಮಲೇಷಿಯನ್ ಹಣ್ಣು) ಕೊಯ್ಲು ಮಾಡಿದ ಮೊದಲ ಕೃಷಿಕರು. ಇತ್ತೀಚೆಗೆ ಬ್ಲೂ ಜಾವಾ ಬಾಳೆ ಎಂಬ ಇಂಡೋನೇಷಿಯನ್ ಹಣ್ಣನ್ನು ಕೊಯ್ಲು ಮಾಡಿದ್ದಾರೆ.

ಪ್ರತಿ ಹಣ್ಣು ಬೆಳೆಯಲು ಅನುಕೂಲಕರವಾದ ತಾಪಮಾನ, ಮಣ್ಣಿನ ವಿಧ, ವೈಜ್ಞಾನಿಕ ಹೆಸರುಗಳು ಮತ್ತು ಔಷಧೀಯ ಮೌಲ್ಯಗಳ ವಿವರವಾದ ದಾಖಲೆಯನ್ನು ಸಹ ತಿಳಿದಿದ್ದಾರೆ. ಅವರು ಸಂಗ್ರಹಿಸಿದ ಹಣ್ಣುಗಳನ್ನು ಜನರಿಗೆ ಪರಿಚಯಿಸಲು ಸ್ವಂತ ನರ್ಸರಿಯನ್ನೂ ನಡೆಸುತ್ತಿದ್ದಾರೆ.

ಅನಿಲ್ ಬಳಂಜ ಅವರ ಕೃಷಿ ಭೂಮಿಯು ಒಂದೇ ಜಾತಿಯ ಹಲವಾರು ಪ್ರಭೇದಗಳನ್ನು ಹೊಂದಿದೆ. 25 ವಿಧದ ಚೆರ್ರಿ, 30 ವಿಧದ ಸೀತಾಫಲ ಮತ್ತು 30 ವಿಧದ ಗಾರ್ಸಿನಿಯಾ ಇತ್ಯಾದಿ ಹೊಂದಿದ್ದಾರೆ. ಅನಾನಸ್, ಪೇರಳೆ, ಅಡಿಕೆ, ತೆಂಗಿನಕಾಯಿ, ನೀರು ಸೇಬು, ಮಾವು, ಹಲಸು, ನಿಂಬೆ, ಹೀಗೆ ವಿವಿಧ ಗೆಡ್ಡೆಗಳು ಮತ್ತು ಔಷಧೀಯ ಸಸ್ಯಗಳ ಸಂಗ್ರಹವನ್ನು ಹೊಂದಿದ್ದಾರೆ. ಕೆಲವು ತಳಿಗಳನ್ನು ಬೆಳೆಯುವುದು ದುಬಾರಿಯಾಗಿದ್ದರೂ, ಅನಿಲ್ ಅವರು ಪ್ರೀತಿಯಿಂದ ಉತ್ಸಾಹದೊಂದಿಗೆ ಛಲ ಬಿಡದೆ ಸಾಧನೆ ಮಾಡುತ್ತಾ ಉಳಿದ ಕೃಷಿಕರಿಗೆ ಮಾದರಿಯಾಗಿದ್ದಾರೆ. ಅವರ ಕೃಷಿಯಲ್ಲಿನ ಸಾಧನೆ ನಿಜಕ್ಕೂ ಶ್ಲಾಘನೀಯ.

ಸಸ್ಯಗಳು, ಹಣ್ಣುಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ಅನಿಲ್ ಬಳಂಜ ಅವರ ಬಳಂಜ ಫಾರ್ಮ್ ಯೂಟ್ಯೂಬ್ ಚಾನೆಲ್ ಮೂಲಕ ಪಡೆಯಬಹುದು ಹಾಗೂ ಬಳಂಜ ಫಾರ್ಮ್ ಗೂ ಭೇಟಿ ನೀಡಿ ಗಿಡಗಳನ್ನು ಖರೀದಿಸಬಹುದು.


Share news

Related Articles

Leave a Reply

Your email address will not be published. Required fields are marked *

Back to top button