ಪರಿಸರಲೇಖನ ಸಂಗಮ

ಜೀವವೈವಿಧ್ಯಗಳ ವಿಸ್ಮಯ ಲೋಕ ಬಂಡಿಪುರ ಅಭಯಾರಣ್ಯ

Share news

ಒಮ್ಮೆ ಹುಲಿಯನ್ನು ನೋಡಬೇಕು ಇಂದು ನೋಡಲು ಸಿಗಬಹುದೇ, ನಾಳೆ ಸಿಗಬಹುದೇ ಎಂದು ಚಡಪಡಿಸಿ ಕೊನೆಗೆ ಸಿಗುವುದೇ ಇಲ್ಲ ಎಂದು ಮರಳಿ ಹೋಗುವಾಗ ಬದಿಯಲ್ಲಿ ಹಸಿರ ಮಧ್ಯೆ ಹುಲಿ ಕುಳಿತಿರುವುದನ್ನು ನೋಡಿ ಸಂತೋಷ ಪಡುವ ಆ ಕ್ಷಣವೇ ರೋಮಾಂಚನಕಾರಿ. ಬಂಡಿಪುರ ಅಭಯಾರಣ್ಯದ ದೊಡ್ಡದಾದ ತೆರೆದ ಕಿಟಕಿಯ ಬಸ್ಸಿನಲ್ಲಿ ಹಚ್ಚ ಹಸಿರು ಕಾಡಿನ ಮಧ್ಯೆ ಪ್ರಯಣ ಆರಂಭವಾದರೆ ಏನೋ ಒಂದು ರೀತಿಯ ಶುದ್ಧ ಗಾಳಿಯನ್ನು ಉಸಿರಾಡುತ್ತಿರುವ ಅನುಭವ. ಕಾಡಿನಲ್ಲಿ ಪ್ರಯಾಣ ಮಾಡಿದಂತೆ ಪೇಟೆಯ ಕಲ್ಮಶ ಗಾಳಿಗೂ ಕಾಡಿನಲ್ಲಿ ಹಸಿರು ಗಿಡ ಮರಗಳ ಗಾಳಿಗೂ ಬಹಳ ವ್ಯತ್ಯಾಸವಿದೆ ಎಂಬುದು ಅರಿವಾಗುತ್ತದೆ.

ಬಂಡಿಪುರ ಅಭಯಾರಣ್ಯ ವಿಶಾಲವಾದ 874 ಚದರ ಹೆಕ್ಟೇರ್ ಪ್ರದೇಶ ವ್ಯಾಪಿಸಿದೆ. ನೀಲಗಿರಿ ತಪ್ಪಲಿನಲ್ಲಿರುವ ಅತೀ ದೊಡ್ಡ ಅರಣ್ಯವು ಹೌದು. ತಮಿಳುನಾಡಿನ ಮದುಮಲೈ ರಾಷ್ಟ್ರೀಯ ಉದ್ಯಾನವನ ಮತ್ತು ಕೇರಳದ ವಾಯನಾಡ್ ವನ್ಯಜೀವಿ ಅಭಯಾರಣ್ಯ ಇವೆರಡಕ್ಕೆ ಹೊಂದಿಕೊಂಡಿದೆ‌. ಮೊದಲು ಮೈಸೂರು ಸಾಮ್ರಾಜ್ಯದ ಮಹಾರಾಜರಿಗೆ ಖಾಸಗಿ ಬೇಟೆಯಾಡಲು ಮೀಸಲಾಗಿದ್ದ ಪ್ರದೇಶವಾಗಿತ್ತು. ನಂತರ 1974 ರಲ್ಲಿ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ ಹುಲಿ‌ ಸಂರಕ್ಷಣ ಪ್ರದೇಶವಾಗಿ ಸ್ಥಾಪಿಸಲ್ಪಟ್ಟಿದೆ. ಇಂದು ಬಂಡಿಪುರ ಅಭಯಾರಣ್ಯ ಅನೇಕ ಅಳಿವಿನಂಚಿನಲ್ಲಿರುವ ಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ.

ಸಂಪೂರ್ಣ ಭಾರತದಲ್ಲಿ ಅತೀ ಹೆಚ್ಚು ಹುಲಿಗಳನ್ನು ಬಂಡಿಪುರ ಅಭಯಾರಣ್ಯ ಹೊಂದಿದೆ. ಪ್ರತಿಯೊಂದು ಹುಲಿಗೂ ಹೆಸರನ್ನು ಇಡಲಾಗಿದೆ. ಅನಿಮೇಶನ್ ಕಾರ್ಟೂನ್ ಗಳಲ್ಲಿ ನೋಡುವ ಕರಿಚಿರತೆ ನಿಜವಾಗಿಯೂ ನೋಡುವ ಅವಕಾಶ ಸಿಗುವ ಅಪರೂಪದ ಅರಣ್ಯ ಹಾಗೂ ಕರಿಚಿರತೆ ನೋಡಲೆಂದೇ ದೇಶ ವಿದೇಶದಿಂದ ಜನ ಬರುತ್ತಲೇ ಇರುತ್ತಾರೆ. ಅದೃಷ್ಟವಿದ್ದರೆ ಮೊದಲ ಬಾರಿಗೆ ಅರಣ್ಯಕ್ಕೆ ಬಂದವರಿಗೂ ಕಂಡು ಬಿಡುತ್ತದೆ. ಕೆಲವಾರು ಸಂದರ್ಭದಲ್ಲಿ 10 ಅಥವಾ ಹೆಚ್ಚು ಬಾರಿ ಬಂದು ಅದೃಷ್ಟ ಪರೀಕ್ಷೆ ಮಾಡಿದರೂ ಸಿಗದೇ ಮರಳಿ ಹೋಗಿ ಮತ್ತೆ ಒಮ್ಮೆಯಾದರೂ ಕಾಣಬಹುದು ಎಂಬ ವಿಶ್ವಾಸದೊಂದಿಗೆ ಪ್ರಯತ್ನ ಮಾಡುತ್ತಲೇ ಇರುವವರೂ ಇದ್ದಾರೆ.

ವನ್ಯಜೀವಿ ಛಾಯಾಗ್ರಾಹಕರಿಗೆ ಒಂದು ಹುಲಿ ಕಂಡರೂ ಹಬ್ಬವೇ ಹಬ್ಬ. ನಾವಿಲ್ಲಿ ಅನೇಕ ಛಾಯಾಗ್ರಾಹಕರ ಗುಂಪನ್ನೇ ನೋಡಬಹುದು. ವಿವಿಧ ಬಗೆಯ ಪ್ರಾಣಿಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿಯಲು ಕಾದು ಕುಳಿತಿರುತ್ತಾರೆ. ಹುಲಿಯನ್ನು ಕಂಡರೆ ಮೊದಲು ಖುಷಿ ಪಡುವವರು ವನ್ಯಜೀವಿ ಛಾಯಾಗ್ರಾಹಕರು. ಓಡಿ ಕಿಟಿಕಿಯ ಬಳಿ ಹೋಗಿ ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸುತ್ತಾರೆ. ವನ್ಯಜೀವಿ ಛಾಯಾಗ್ರಾಹಕರು ತೆಗೆದ ಫೋಟೋ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಹೆಚ್ಚು ಹೆಚ್ಚು ಬಂಡಿಪುರ ಅಭಯಾರಣ್ಯಕ್ಕೆ ಆಕರ್ಷಿಸುತ್ತದೆ.

ಹುಲಿಗಳು ತಮ್ಮ ಜಾಗವನ್ನು ಗುರುತು ಮಾಡಿ ಆ ಜಾಗದಲ್ಲೇ ಓಡಾಡುತ್ತವೆ. ಕೆಲವೊಮ್ಮೆ ಹುಲಿ ಆಹಾರವಾಗಿ ಜಿಂಕೆಯನ್ನು ತಿನ್ನುವ ರೋಚಕ ದೃಶ್ಯವು ನೋಡ ಸಿಗುತ್ತದೆ. ಮೂನ್ನೂರಕ್ಕೂ ಹೆಚ್ಚು ಜಿಂಕೆಗಳು ಬಂಡಿಪುರದಲ್ಲಿದೆ. ಹುಲಿಗಳು ಅವುಗಳನ್ನು ಸಮಯ ನೋಡಿ ಹೊಂಚು ಹಾಕಿ ಬೇಟೆಯಾಡುವ ರೋಮಾಂಚನಕಾರಿ ಬಹಳ ಅಪರೂಪದ ದೃಶ್ಯವು ಕಾಡಿನ ಮಧ್ಯೆ ಕೆಲವೊಮ್ಮೆ ನೋಡ ಸಿಗುತ್ತದೆ.

ಕಾಡಿನಲ್ಲಿ ಹುಲಿ ಎಲ್ಲಿ ಇದೆ ಎಂದು ಪತ್ತೆ ಹಚ್ಚಲು ಪಾದದ ಅಚ್ಚಿನ ಗುರುತು ಹಿಡಿದು ಅದರ ಹಿಂದೆ ಸಾಗಿ ಊಹಿಸುತ್ತಾರೆ. ಕೆಲವೊಮ್ಮೆ ಊಹೆ ನಿಜವಾಗುತ್ತದೆ. ಇಲ್ಲವಾದರೆ ಪ್ರತಿ ಬಾರಿ ಹುಲಿ ನಡೆದು ಬರುವಾಗ ಮರಗಳ ಮೇಲೆ ಕುಳಿತಿರುವ ವಿಶಿಷ್ಟ ಜಾತಿಯ ಮಂಗಗಳು ಒಂದು ರೀತಿ ಬಾಯಲ್ಲಿ ಸದ್ದು ಮಾಡಲು ಪ್ರಾರಂಭಿಸುತ್ತವೆ. ಅದು ಎಲ್ಲಾ ಉಳಿದ ಪ್ರಾಣಿಗಳಿಗೆ ಹುಲಿ ಬರುತ್ತಿದೆ ಎಂಬ ಎಚ್ಚರಿಕೆ ಗಂಟೆ ಜಿಂಕೆಗಳು ಅಲ್ಲಿಂದ ಸುರಕ್ಷಿತ ಜಾಗಕ್ಕೆ ಓಡುತ್ತವೆ. ನಮಗೆ ಹುಲಿ ಎಲ್ಲಿದೆ ಎಂದು ತಿಳಿಯಲು ಅದೊಂದೆ ಸಾಧನ. ಹಾಗಾಗಿ ನಿಶ್ಯಬ್ದವಾಗಿ ಕೇಳುತ್ತಿರಬೇಕು. ಮಂಗಗಳ ಶಬ್ದ ಬಂದ ಜಾಗಕ್ಕೆ ಹೋಗಿ ಸ್ವಲ್ಪ ಸಮಯ ಕಾದರೆ ಹುಲಿ ಬರುವುದನ್ನು ನೋಡಬಹುದು.

ಮುಖ್ಯವಾಗಿ ತಾಳ್ಮೆಯ ಪಾಠವನ್ನು ಕಲಿಸುವುದು ಅರಣ್ಯ ಪ್ರಯಾಣ. ಒಬ್ಬ ವನ್ಯಜೀವಿ ಛಾಯಾಗ್ರಾಹಕನಿಗೆ ಬಹು ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ಏಕೆಂದರೆ ಹಕ್ಕಿಯ ಅಥವಾ ಪ್ರಾಣಿಗಳ ಪ್ರತಿಯೊಂದು ಚಲನವಲನಗಳನ್ನು ಗಮನಿಸುತ್ತಾ ಸರಿಯಾದ ಸಮಯಕ್ಕೆ ಅದನ್ನು ಸೆರೆ ಹಿಡಿಯುವ ಕೆಲಸವೇ ಬಹು ಸ್ವಾರಸ್ಯಕರ. ಒಂದು ಸ್ವಲ್ಪ ತಡವಾದರೂ ಅಥವಾ ತಾಳ್ಮೆಯಿಂದ ಕಾಯದೇ ಹೋದರೆ ಏನೋ ಒಂದು ಒಳ್ಳೆಯ ಪ್ರಾಣಿಗಳ ಚಲನವಲನ ತಪ್ಪಿ ಬಿಡುತ್ತದೆ. ಹುಲಿ ನೋಡಲು ತಾಳ್ಮೆ ಬೇಕಾಗುತ್ತದೆ. 2 ಗಂಟೆ ನಾವು ಕಾಡಿನ ಒಳಗೆ ಇರುತ್ತವೆ ಆ ಸಮಯದಲ್ಲಿ ಎಷ್ಟು ಹೊತ್ತಿಗೂ ಹುಲಿ ಕಾಣುವ ಸಾಧ್ಯತೆ ಇದೆ. ಹಾಗಾಗಿ ತಾಳ್ಮೆಯನ್ನು ಹೇಳಿಕೊಡುವ ಪಾಠಶಾಲೆ ಬಂಡಿಪುರ ಅಭಯಾರಣ್ಯ.

ಆನೆಗಳ ಹಿಂಡು ಅಳಿವಿನಂಚಿನಲ್ಲಿರುವ ವಿಶಿಷ್ಟ ಜಾತಿಯ ಕೆಂಪು ಬಾಲದ ಅಳಿಲುಗಳು ಹಾಗೂ ಬೇರೆ ಬೇರೆ ವಿಧವಾದ ದೊಡ್ಡ ದೇಹದ ಎಂದೂ ನೋಡಿರದ ಹಕ್ಕಿಗಳು, ಈ ರೀತಿ ಸಾವಿರಾರು ಜೀವ ವೈವಿಧ್ಯಗಳು ಒಟ್ಟಾಗಿ ಒಂದೇ ಎಂಬ ಭಾವನೆಯಿಂದ ಸಹಬಾಳ್ವೆಯಿಂದ ಒಂದೇ ಅರಣ್ಯದಲ್ಲಿ ವಿವಿಧತೆ ನೋಡುವುದು ವಿಸ್ಮಯಕಾರಿ ಅನುಭವ. ವನ್ಯ ಜೀವಿಗಳೊಂದಿಗೆ ಸುತ್ತ ಹಸಿರ ಮರಗಿಡಗಳ ಮಧ್ಯೆ ಕಳೆಯುವ ಆ ಕ್ಷಣಗಳು ನೂರಾರು ಅನುಭವಗಳನ್ನು ಉಂಟುಮಾಡುತ್ತವೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳ ಮತ್ತು ಉಳಿದ ಪ್ರಾಣಿಗಳನ್ನು ಬಂಡಿಪುರ ಅಭಯಾರಣ್ಯಕ್ಕೆ ಒಮ್ಮೆಯಾದರೂ ಭೇಟಿ ನೀಡಿ ವೀಕ್ಷಿಸೋಣ. ಮಾತ್ರವಲ್ಲದೆ ಅವುಗಳ ಬಗ್ಗೆ ಅಧ್ಯಯನ ಮಾಡಿ ತಿಳಿದು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ ಮತ್ತು ಅಭಯಾರಣ್ಯಗಳನ್ನು ರಕ್ಷಿಸಿ ಕಾಡು ಬೆಳೆಸಿ ಪ್ರಾಣಿಗಳಿಗೂ ನಮ್ಮಂತೆ ಸ್ವಚ್ಛಂದವಾಗಿ ಬದುಕಲು ಅವಕಾಶ ಕಲ್ಪಿಸಿ ಹಸಿರಿನೊಂದಿಗೆ ಉಸಿರಾಡೋಣ.


Share news

Related Articles

Leave a Reply

Your email address will not be published. Required fields are marked *

Back to top button