ಲೇಖನ ಸಂಗಮಸಿನಿ ವಿಹಾರ

ಪೋಷಕ ಪಾತ್ರಗಳಲ್ಲಿ ಮೋಡಿ ಮಾಡುವ ಪುತ್ತೂರ ಹುಡುಗನಿಗೆ ಖಳನಾಯಕನಾಗಿ ನಟಿಸುವ ಆಸೆ…

Share news

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಒಲವಿನ ನಿಲ್ದಾಣ’ ಧಾರಾವಾಹಿಯಲ್ಲಿ ನಾಯಕ ಸಿದ್ಧಾಂತ್ ಅಣ್ಣ ಅದ್ವೈತ್ ಪಾತ್ರಕ್ಕೆ ಜೀವ ತುಂಬುತ್ತಿರುವ ಶ್ರೀರಾಮ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಪ್ರತಿಭೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಶ್ರೀರಾಮ್ ಇಂದು ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ ರಮಣ’ ಧಾರಾವಾಹಿಯಲ್ಲಿ ನಾಯಕ ರಮಣನ ಅಸಿಸ್ಟೆಂಟ್ ಸುಮೇಧ ಆಗಿ ಕಾಣಿಸಿಕೊಂಡಿದ್ದ ಶ್ರೀರಾಮ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಸೈ ಎನಿಸಿಕೊಂಡರು‌. ನಂತರ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಶ್ಯಾಮಲತ್ತೆಯ ಮಗ ಶ್ಯಾಮಸುಂದರ ಆಗಿ ತೆರೆಯ ಮೇಲೆ ಮಿಂಚಿದರು.

“ಮಗಳು ಜಾನಕಿ” ಧಾರಾವಾಹಿಯ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹೂಮಳೆ’ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಕಾವೇರಿ ಹಿರಿಯ ಮಗ ಉದಯ್ ಪಾತ್ರಕ್ಕೆ ಜೀವ ತುಂಬಿದ ಶ್ರೀರಾಮ್ ಅವರ ನಟನಾ ಪ್ರತಿಭೆ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ‌. ಬದಲಿಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.

ದಿ ಪ್ಲಾನ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಪುತ್ತೂರಿನ ಹ್ಯಾಂಡ್ ಸಮ್ ಹುಡುಗ ಶ್ರೀರಾಮ್ ಮುಂದೆ ‘ದರ್ಪಣ’ ಸಿನಿಮಾದಲ್ಲಿ ಖಳನಾಯಕನಾಗಿ ಮಿಂಚಿದರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಿಮ್ಮಿಕ್’ ನಲ್ಲಿ ಗಣೇಶ್ ಸ್ನೇಹಿತನಾಗಿ ನಟಿಸಿದ ಶ್ರೀರಾಮ್ ಕೋಸ್ಟಲ್ ವುಡ್ ನಲ್ಲಿಯೂ ಮೋಡಿ ಮಾಡಿದ ಪ್ರತಿಭೆ. ತುಳುವಿನ ‘ಪೆಟ್ಕಮ್ಮಿ ‘ ಸಿನಿಮಾದಲ್ಲಿ ನಟಿಸಿರುವ ಶ್ರೀರಾಮ್ ಗೆ ವಿಲನ್ ಆಗಿ ಮಿಂಚುವ ಬಯಕೆ.

ಖಳನಾಯಕನ ಪಾತ್ರದಲ್ಲಿ ಅಭಿನಯನಕ್ಕೆ ಅವಕಾಶ ಜಾಸ್ತಿ. ನಾಯಕನ ಪಾತ್ರದಲ್ಲಿ ನಟನೆಗೆ ಅವಕಾಶಗಳು ಕಡಿಮೆ. ನಾಯಕ ಅಂದ ಮೇಲೆ ಮುಖ್ಯವಾಗಿ ಆತ ಒಳ್ಳೆಯವನಾಗಿರಬೇಕು. ಜೊತೆಗೆ ಲವರ್ ಬಾಯ್ ಆಗಿ ತೆರೆ ಮೇಲೆ ಮಿಂಚಬೇಕು. ನಟನೆಯಲ್ಲಿಯೂ ಅಷ್ಟೇ, ಒಂದೇ ತರಹದ ಏಕತಾನತೆ. ಖಳನಾಯಕನ ಪಾತ್ರವಾದರೆ ಅಲ್ಲಿ ಎಕ್ಸ್ ಪ್ರೆಶನ್ ಗೆ ಅವಕಾಶ ಜಾಸ್ತಿ. ಹಾಗಾಗಿ ಶ್ರೀರಾಮ್ ಅವರಿಗೆ ಖಳನಾಯಕನಾಗಿ ಅಬ್ಬರಿಸುವ ಮಹಾದಾಸೆ.

ಪೋಷಕ ಪಾತ್ರಗಳ ಮೂಲಕವೇ ಬಣ್ಣದ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಶ್ರೀರಾಮ್ ಅವರನ್ನು ಬಾಲ್ಯದಿಂದಲೂ ನಾಯಕನ ಪಾತ್ರಕ್ಕಿಂತ ಖಳನಾಯಕನ ಪಾತ್ರಗಳು ಆಕರ್ಷಿಸಿದ್ದೇ ಹೆಚ್ಚು. ಬಹುಶಃ ಅದೇ ಕಾರಣದಿಂದ ಶ್ರೀರಾಮ್ ಅವರಿಗೆ ನಾಯಕನ ಬದಲು ಖಳನಾಯಕನಾಗಿ ಗುರುತಿಸಿಕೊಳ್ಳುವ ಬಯಕೆ. ಅವರ ಕನಸು ಆದಷ್ಟು ಬೇಗ ನೆರವೇರಲಿ ಎಂಬುದೇ ಭಾರತವಾಣಿಯ ಹಾರೈಕೆ.

ಅನಿತಾ ಬನಾರಿ


Share news

Related Articles

Leave a Reply

Your email address will not be published. Required fields are marked *

Back to top button