ಲೇಖನ ಸಂಗಮಸಿನಿ ವಿಹಾರ

ನಟಿಯಾಗಿ ಮನ ಸೆಳೆದ ನಿಖಿತ ಯಕ್ಷಗಾನ ಕಲಾವಿದೆಯೂ ಹೌದು..

Share news

ನಟನಾ ಜಗತ್ತಿಗೂ ಕರಾವಳಿಗೂ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಕರಾವಳಿಯ ಅನೇಕ ಜನ ನಟ ನಟಿಯರು ಇಂದು ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿಖಿತ ದೊರ್ತೋಡಿ ಇದಕ್ಕೆ ಪ್ರಸಕ್ತ ಉದಾಹರಣೆ.

ಸಿರಿಕನ್ನಡ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದಲ್ಲಿ ಪ್ರಸಾರವಾಗುತ್ತಿರುವ ‘ಮತ್ತೆ ಮಾಯಾಮೃಗ’ ಧಾರಾವಾಹಿಯಲ್ಲಿ ಬೃಂದಾ ಮಗಳು ಡಾಕ್ಟರ್ ಮಹತಿಯಾಗಿ ಅಭಿನಯಿಸುತ್ತಿರುವ ನಿಖಿತ ಎಂಬಿಎ ಪದವೀಧರೆಯೂ ಹೌದು. ಬಾಲ್ಯದಿಂದಲೂ ನಿಖಿತಗೆ ಬಣ್ಣದ ಜಗತ್ತಿನತ್ತ ವಿಶೇಷ ಆಕರ್ಷಣೆ. ಪದವಿ ಪಡೆದ ಬಳಿಕ ನಟಿಯಾಗುವ ನಿರ್ಧಾರ ಮಾಡಿದ ನಿಖಿತ ಬಣ್ಣದ ಪಯಣಕ್ಕೆ ಮುನ್ನುಡಿ ಬರೆದುದು ರಂಗಭೂಮಿ.

‘ಸಮಷ್ಟಿ’ ಎನ್ನುವ ನಾಟಕ ತಂಡ ಸೇರಿದ ನಿಖಿತಾ ಹಂತಹಂತವಾಗಿ ನಟನೆಯ ಆಗು ಹೋಗುಗಳನ್ನು, ರೀತಿ ನೀತಿಗಳನ್ನು ಅರಿತರು. ಮೂರು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ನಿಖಿತ ದೊರ್ತೋಡಿ ಮುಂದೆ ಮುಖ ಮಾಡಿದ್ದು ಕಿರುತೆರೆಯತ್ತ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸತ್ಯಂ ಶಿವಂ ಸುಂದರಂ’ ಧಾರಾವಾಹಿಯಲ್ಲಿ ಸುಂದರನ ಪ್ರೇಯಸಿ ಟೀನಾ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಈಕೆ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ತದ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಗಿಣಿರಾಮ’ ಧಾರಾವಾಹಿಯಲ್ಲಿ ಇಂಗ್ಲಿಷ್ ಟೀಚರ್ ಮಾಳವಿಕಾ ಪಾತ್ರಕ್ಕೆ ಜೀವ ತುಂಬಿದ್ದ ನಿಖಿತ ಅಲ್ಲೂ ವೀಕ್ಷಕರಿಗೆ ಹತ್ತಿರವಾದರು.

ಇದೀಗ ‘ಮತ್ತೆ ಮಾಯಾಮೃಗ’ದಲ್ಲಿ ಡಾಕ್ಟರ್ ಮಹತಿಯಾಗಿ ಮೋಡಿ ಮಾಡುತ್ತಿರುವ ನಿಖಿತ
ಅವರ ನಟನಾ ಕೌಶಲ್ಯ ಕೇವಲ ಕಿರುತೆರೆಗೆ ಮಾತ್ರ ಸೀಮಿತವಲ್ಲ‌. ಬದಲಿಗೆ ಮನೋಜ್ಞ ನಟನೆಯ ಮೂಲಕ ಹಿರಿತೆರೆಯಲ್ಲೂ ಕಮಾಲ್ ಮಾಡದ್ದಾರೆ ಉಪ್ಪಿನಂಗಡಿ ಚೆಲುವೆ. ಪವನ್ ಭಟ್ ನಿರ್ದೇಶನದ ‘ಕಟ್ಟಿಂಗ್ ಶಾಪ್’ ಸಿ‌ನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿರುವ ನಿಖಿತ ‘ಸೈಕಿಕ್’ ಎನ್ನುವ ಸೈಕಲಾಜಿಕಲ್ ಥ್ರಿಲ್ಲರ್ ನಲ್ಲಿಯೂ ಬಣ್ಣ ಹಚ್ಚಿದ ಬೆಡಗಿ. ಇದರ ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ‘19.20.21’ ಸಿನಿಮಾದಲ್ಲಿಯೂ ಪ್ರಮುಖ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ ನಿಖಿತ.

“ಕರಾವಳಿಯ ಗಂಡು ಮೆಟ್ಟಿದ ಕಲೆ” ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಯಕ್ಷಗಾನವನ್ನು ಕೂಡಾ ಕರಗತ ಮಾಡಿಕೊಂಡಿರುವ ನಿಖಿತ ಹಲವು ವೇದಿಕೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ನಟನೆ, ಯಕ್ಷಗಾನ ಮಾತ್ರವಲ್ಲದೇ ಮಾಡೆಲಿಂಗ್ ಮಿಂಚಿ ಸೈ ಎನಿಸಿಕೊಂಡಿರುವ ನಿಖಿತ ಝರ್ಟಾನ್ ಮೇಕಪ್ ಸ್ಟುಡಿಯೋ ,ಎಂ.ಜೆ ಗಾಡ್ಜಿಯಸ್ ಮೇಕಪ್ ಸ್ಟುಡಿಯೋ ಮಾಡೆಲಿಂಗ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button