ಲೇಖನ ಸಂಗಮಸಿನಿ ವಿಹಾರ

ಸೌಂದರ್ಯಳಂಥ ಪಾತ್ರಕ್ಕಾಗಿ ಹಂಬಲಿಸುತ್ತಿರುವ ರಾಧಿಕಾ ಶ್ರವಂತ್

Share news

ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆ.ಎಸ್.ರಾಮ್ ಜೀ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ “ಮಂಗಳ ಗೌರಿ ಮದುವೆ” ಧಾರಾವಾಹಿಯಲ್ಲಿ ಖಳನಾಯಕಿ ಸೌಂದರ್ಯ ಆಗಿ ನಟಿಸಿ ಕಿರುತೆರೆ ಅಂಗಳದಲ್ಲಿ ಮನೆಮಾತಾದ ಚೆಲುವೆಯ ಹೆಸರು ರಾಧಿಕಾ ಶ್ರವಂತ್. ಸೌಂದರ್ಯ ಪಾತ್ರದ ಮೂಲಕ ಈಗಲೂ ಗುರುತಿಸಲ್ಪಡುವ ರಾಧಿಕಾ ಶ್ರವಂತ್ ಸದ್ಯ ಬಣ್ಣದ ಬದುಕಿನಿಂದ ದೂರವಿದ್ದಾರೆ.

ಹೌದು, ನಟ, ನಿರ್ದೇಶಕ ಶ್ರವಂತ್ ಅವರ ಬಾಳಸಂಗಾತಿಯಾಗಿರುವ ರಾಧಿಕಾ ಗರ್ಭಿಣಿಯಾದ ಕಾರಣ ಸೌಂದರ್ಯ ಪಾತ್ರಕ್ಕೆ ವಿದಾಯ ಹೇಳಿದ್ದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ರಾಧಿಕಾ ಮುದ್ದು ಮಗಳು ಜಾಹ್ನವಿಯ ಪಾಲನೆ ಪೋಷಣೆಯ ಸಲುವಾಗಿ ನಟನೆಯಿಂದ ಬ್ರೇಕ್ ಪಡೆದುಕೊಂಡರು.

ಬರೋಬ್ಬರಿ ಮೂರು ವರ್ಷಗಳಿಂದ ನಟನಾ ಕ್ಷೇತ್ರದಿಂದ ದೂರವಿರುವ ರಾಧಿಕಾಗೆ ಈಗಲೂ ನಟನೆಯತ್ತ ವಿಶೇಷ ಒಲವು. ಅವಕಾಶ ದೊರೆತರೆ ಮತ್ತೊಮ್ಮೆ ಬಣ್ಣ ಹಚ್ಚುವ ಇರಾದೆ ರಾಧಿಕಾಗಿದೆ. “ಮಂಗಳಗೌರಿ ಮದುವೆ ಧಾರಾವಾಹಿಯ ಸೌಂದರ್ಯ ಪಾತ್ರ ನನಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಗರ್ಭಿಣಿಯಾದ ಕಾರಣ ನಾನು ಸೌಂದರ್ಯ ಪಾತ್ರಕ್ಕೆ ವಿದಾಯ ಹೇಳುವುದು ಅನಿವಾರ್ಯವಾಗಿತ್ತು. ಮಗಳು ಜಾಹ್ನವಿಯ ಆರೈಕೆಯಲ್ಲಿ ಸಮಯ ಕಳೆಯುತ್ತಿತ್ತು. ಜೊತೆಗೆ ಕೊರೊನಾ ಸಮಯ ಆಗಿದ್ದರಿಂದ ಮನೆಯಿಂದ ಹೊರಗೆ ಕಾಲಿಡುವುದು ಕೂಡಾ ಕಷ್ಟವಾಗಿತ್ತು. ಹಾಗಾಗಿ ನಟನೆಗೆ ಮರಳಲಿಲ್ಲ. ಈಗ ಮಗಳಿಗೆ ಎರಡು ವರ್ಷ. ಅವಳು ದೊಡ್ಡವಳಾದ ಕಾರಣ ನಟನೆಗೆ ಮರಳಲು ಮನಸ್ಸಾಗುತ್ತಿದೆ” ಎಂದು ಹೇಳುತ್ತಾರೆ ರಾಧಿಕಾ ಶ್ರವಂತ್.

ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಎರಡು ಕನಸು’ ಧಾರಾವಾಹಿಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ರಾಧಿಕಾ ಶ್ರವಂತ್ ನಂತರ ‘ಅಳಗುಳಿಮನೆ’, ‘ರಾಧಾ ಕಲ್ಯಾಣ’, ‘ಖುಷಿ ಕಣಜ’, ‘ಕಾದಂಬರಿ’, ‘ಮುಂಗಾರುಮಳೆ’, ‘ಪುಟ್ಮಲ್ಲಿ’, ‘ಆತ್ಮಬಂಧನ’, ‘ಅರಮನೆ ಗಿಳಿ’ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು.

ಕೊನೆಯದಾಗಿ “ಮಂಗಳ ಗೌರಿ ಮದುವೆ” ಧಾರಾವಾಹಿಯ ಸೌಂದರ್ಯ ಆಗಿ ಅಭಿನಯಿಸಿದ್ದ ರಾಧಿಕಾ ಇಂದು ಧಾರಾವಾಹಿಯಿಂದ ದೂರವಿದ್ದರೂ ಆ ಪಾತ್ರದ ಮೂಲಕವೇ ಕಿರುತೆರೆಯಲ್ಲಿ ಫೇಮಸ್ಸು! ಇಂದಿಗೂ ರಾಧಿಕಾ ಅವರನ್ನು ಕಂಡಾಗ ಜನರಿಗೆ ಸೌಂದರ್ಯ ಪಾತ್ರ ಕಣ್ಣ ಮುಂದೆ ಬರುತ್ತದೆ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ.

“ಮೂರು ವರ್ಷದ ಬಳಿಕ ನಾನು ಇದೀಗ ನಟನೆಗೆ ಮರಳುವ ನಿರ್ಧಾರ ಮಾಡುತ್ತಿದ್ದೇನೆ. ಸೌಂದರ್ಯಳಂತಹ ಪಾತ್ರಗಳಿಗೆ ಜೀವ ತುಂಬಬೇಕು ಎಂಬುದು ನನ್ನ ಮಹಾದಾಸೆ. ಹಾಗಾಗಿ ಅಂತಹುದೇ ಪಾತ್ರಕ್ಕಾಗಿ ಹುಡುಕುತ್ತಿದ್ದೇನೆ” ಎಂದು ಹೇಳುವ ರಾಧಿಕಾ ಶ್ರವಂತ್ ಮತ್ತೆ ಯಾವಾಗ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.


Share news

Related Articles

Leave a Reply

Your email address will not be published. Required fields are marked *

Back to top button