ಪ್ರೇರಣೆಲೇಖನ ಸಂಗಮ

30 ವರ್ಷಗಳಿಂದ 1 ರೂಪಾಯಿಗೆ ಇಡ್ಲಿಯನ್ನು ನೀಡುವ ಇಡ್ಲಿ ಅಜ್ಜಿ

Share news

ದೇಶ ಒಂದು ಕಡೆಯಲ್ಲಿ ಕೊರೋನದಿಂದ ಆರ್ಥಿಕವಾಗಿ ತತ್ತರಿಸಿ ಹೋಗಿದೆ, ಹೀಗಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಆದಷ್ಟು ಜನರ ಹಸಿವು ನೀಗಿಸಲು ಪ್ರಯತ್ನಿಸುತ್ತಿದೆ. ಮಾತ್ರವಲ್ಲದೇ, ಆರ್ಥಿಕ ಕಷ್ಟದಲ್ಲಿರುವವರಿಗೆ ಅನೇಕ ವ್ಯಕ್ತಿಗಳು, ಸಂಘಟನೆಗಳು, ಸಂಸ್ಥೆಗಳು ಕೂಡ ಹಸಿವು ನೀಗಿಸುವ ಕಾರ್ಯದಲ್ಲಿ ಕೈಜೋಡಿಸಿವೆ. ಇಂತಹ ಸಂದರ್ಭದಲ್ಲಿ ಕಳೆದ ಹಲವು ವರ್ಷಗಳಿಂದ ನೂರಾರು ಜನರ ಹೊಟ್ಟೆ ತುಂಬಿಸುತ್ತಾ ಬಂದಿರುವ 85 ವರ್ಷದ ಇಳಿ ವಯಸ್ಸಿನ ಶ್ರೀಮತಿ ಎಂ. ಕಮಲಥಾಳ್ ಎಂಬ ಅಜ್ಜಿಯೊಬ್ಬರು  ಎಲ್ಲರಿಗೂ ಮಾದರಿಯಾಗಿದ್ದಾರೆ.

ತಮಿಳುನಾಡಿನ ಕೊಯಮತ್ತೂರಿನ ವಡಿವೇಲಂಪಾಳ್ಯನಲ್ಲಿ ವಾಸಿಸುತ್ತಿರುವ ಎಂ. ಕಮಲಥಾಳ್ ಇವರು ಇಡ್ಲಿ ಅಜ್ಜಿ ಎಂದೇ ಅಲ್ಲಿ ಹೆಸರುವಾಸಿ. ತಮ್ಮ ಆದಾಯದ ಬಗ್ಗೆ ಕೊಂಚವೂ ಯೋಚಿಸದೇ ಇಂದಿಗೂ ಕೇವಲ 1 ರೂಪಾಯಿಗೆ 1 ಇಡ್ಲಿಯನ್ನು ಸುಮಾರು 30 ವರ್ಷಗಳಿಗಿಂತ ಅಧಿಕ ವರ್ಷಗಳ ಕಾಲದಿಂದ ನಿಸ್ವಾರ್ಥವಾಗಿ ಮಾರುತ್ತಿರುವುದು ನಿಜಕ್ಕೂ ಎಲ್ಲಾ ದೇಶವಾಸಿಗಳೂ ಹೆಮ್ಮೆ ಪಡುವಂತಹ ವಿಷಯ. 10 ಪೈಸೆಯಿಂದ ಆರಂಭವಾದ ಇಡ್ಲಿಯ ಬೆಲೆ ಕ್ರಮೇಣ 25, 50, 75 ಪೈಸೆಗಳಾಗಿ ಕಳೆದ 15 ವರ್ಷಗಳಿಂದ 1 ರೂಪಾಯಿಗೇ ಸೀಮಿತವಾಗಿರುವುದು ಅಚ್ಚರಿ ಪಡುವ ಸಂಗತಿ.

ಅಜ್ಜಿಯ ಹೋಟೆಲ್ ಫೈವ್ ಸ್ಟಾರ್ ಸಣ್ಣ ಗೂಡಿನಂತಿರುವ ಪುಟ್ಟ ಜಾಗ. ಇಲ್ಲಿಯ ಇಡ್ಲೀ, ಸಾಂಬರ್ ಮತ್ತು ಚಟ್ನಿಯ ರುಚಿಯನ್ನು ಸವಿಯಲು ನೂರಾರು ಕಿಮೀ ದೂರಗಳಿಂದಲೂ ಜನರು ಹುಡುಕಿಕೊಂಡು ಬೆಳ್ಳಂಬೆಳಗ್ಗೆ ಅಜ್ಜಿಯ ಹೋಟೆಲ್ ಮುಂದೆ ಹಾಜರಾಗಿ ಸಾಲು ಗಟ್ಟಿ ನಿಲ್ಲುವುದನ್ನು ನೋಡುವುದಕ್ಕೇ ಏನೋ ಒಂದು ಸಂತೋಷ. ಆಕೆ ಇಡ್ಲಿ ತಯಾರಿಸುವ ಕೈಗಳು ಸ್ವಾಭಿಮಾನದ ಸಂಕೇತ. ಹಾಗೆಯೇ ರುಚಿಕರ ಇಡ್ಲಿ ಜೊತೆಗೆ ತಾಯಿಯ ಮಮತೆಯ ಭಾವ ಎಲ್ಲವು ಅಜ್ಜಿಯ ಹೋಟೆಲಿನಲ್ಲಿ ಲಭ್ಯ.

ಅಜ್ಜಿಯ ಇಡ್ಲಿ ತಯಾರಿಸುವ ಕಾರ್ಯ ಬೆಳೆಗ್ಗೆ 5 ಗಂಟೆಯಿಂದವೇ ಪ್ರಾರಂಭ. ಆಧುನಿಕ ಯಂತ್ರಗಳನ್ನು ಬಳಸದೆ ಸಾಂಪ್ರದಾಯಿಕ ಕಲ್ಲಿನ ಮೂಲಕವೇ ಹಿಟ್ಟು ರುಬ್ಬಿ, ಪ್ರತಿದಿನ ಅಂದಾಜು ಸುಮಾರು 1000-1200 ಬಿಸಿ ಬಿಸಿಯಾದ ಇಡ್ಲಿಗಳನ್ನು ತಯಾರು ಮಾಡಲಾಗುತ್ತದೆ. ಪ್ರತೀ ದಿನ ಬೆಳಿಗ್ಗೆ 6 ಗಂಟೆಗೆ ಗ್ರಾಹಕರಿಗೆ ಸೇವೆ ನೀಡುವ ಅಜ್ಜಿಯ ಈ ಉಪಾಹಾರ ಗೃಹ ಸಾಧಾರಣವಾಗಿ ಮಧ್ಯಾಹ್ನದವರೆಗೂ ತೆರೆದಿರುತ್ತದೆ. ಅಜ್ಜಿಯ ಉಪಹಾರಗೃಹಕ್ಕೆ ಬಂದ ಗ್ರಾಹಕರ್ಯಾರೂ ಈ ವರೆಗೆ ಖಾಲಿ ಹೊಟ್ಟೆಯಲ್ಲಿ ಹೋದ ಉದಾಹರಣೆಯೇ ಇಲ್ಲ.

“ನಾನೂ ಆರ್ಥಿಕವಾಗಿ ಬಡವಿ. ಆದರೂ ನನ್ನ ಕೈಯಲ್ಲಾದ ಮಟ್ಟಿಗೆ ಇತರರಿಗೆ ಸಹಾಯವನ್ನು ಮಾಡಬೇಕು ಎಂಬ ಹಂಬಲ. ಹಾಗಾಗಿ ನನಗೆ ನಷ್ಟವಾದರೂ ಪರವಾಗಿಲ್ಲ ಇತರರು ಹಸಿದ ಹೊಟ್ಟೆಯಲ್ಲಿ ಇರಬಾರದು” ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಾರೆ. ಇದುವರೆಗೂ ನಾವು ಹಾಕಿದ ಬಂಡವಾಳಕ್ಕೆ ನಷ್ಟವಂತೂ ಆಗಿಲ್ಲ ಎಂದು ಹೇಳುವ ಅಜ್ಜಿ ಮಾತು ಇತರರಿಗೂ ಆದರ್ಶ ಎಂದು ಹೇಳಿದರೆ ಅತಿಶಯವಲ್ಲ.

ಅದೆಷ್ಟೋ ಬಾರಿ ಒಂದು ರೂಪಾಯಿಯೂ ಕೊಡದೆ ಇಡ್ಲಿ ತಿಂದು ಹೋದವರು, ಮತ್ತೆ ಇನ್ನೊಮ್ಮೆ ಬಂದಾಗ ಆ ಹಣವನ್ನು ವಾಪಸ್ ಕೇಳದೆ ನಗುನಗುತ್ತಾ ಮತ್ತೆ ಇಡ್ಲಿ ನೀಡುವ ಅಪರೂಪದ ವ್ಯಕ್ತಿತ್ವ ಅಜ್ಜಿಯದ್ದು. ಈ ನಿಸ್ವಾರ್ಥ ಸೇವೆಗಾಗಿ ಹೆಚ್ಚಿನ ಹಣವನ್ನು ಕೊಟ್ಟಿರುವುದೂ ಉಂಟು. ಮುಂದೆ ಎಂದಾದರೂ ಇಡ್ಲಿಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ಇದೆಯೇ ? ಎಂದು ಅಜ್ಜಿಯನ್ನು ಕೇಳಿದಾಗ, ಇದೊಂದು ಪುಣ್ಯದ ಕೆಲಸ, ಭಗವಂತನ ಕೃಪೆಯಿಂದ ಮತ್ತು ಎಲ್ಲರ ಸಹಾಕಾರದಿಂದ ನಡೆದು ಕೊಂಡು ಹೋಗುತ್ತಿದೆ, ಹಾಗಾಗಿ ತಿನ್ನುವವರು ನೆಮ್ಮದಿಯಾಗಿ ತಿನ್ನಲಿ ಬಿಡಿ ಎಂದು ಹೇಳುತ್ತಾರೆ ಇಡ್ಲಿ ಅಜ್ಜಿ.

ಹಾಗೇ ಅಲ್ಲಿಯ ಸ್ಥಳೀಯ ಶಾಲೆಗೆ ಹೋಗುವ ಮಕ್ಕಳುಗಳೂ ಸಹಾ ಬೆಳಿಗ್ಗೆ ಹೊಟ್ಟೆಯ ತುಂಬಾ ಇಡ್ಲಿಗಳನ್ನು ಇಲ್ಲಿಯೇ ತಿಂದುಕೊಂಡು, ಜೊತೆಗೆ ಮಧ್ಯಾಹ್ನದ ಊಟಕ್ಕೂ ಡಬ್ಬಿಗಳಲ್ಲಿ ಅದೇ ಇಡ್ಲಿಗಳನ್ನು ತೆಗೆದುಕೊಂಡು ಹೋಗುವುದನ್ನು ಕಾಣಬಹುದಾಗಿದೆ. ಕೊಯಮತ್ತೂರಿನ ಮಿಕ್ಸರ್, ಗ್ರೈಂಡರ್ ತಯಾರಿಕಾ ಕಂಪನಿಯೊಂದು ಪ್ರೀತಿಯಿಂದ ಅಜ್ಜಿಗೆ ಮಿಕ್ಸರ್, ಗ್ರೈಂಡರ್ ಉಡುಗೊರೆಯಾಗಿ ಕೊಟ್ಟರೆ, ಉಜ್ವಲ ಯೋಜನೆಯಡಿಯಲ್ಲಿ ಭಾರತ್ ಗ್ಯಾಸ್ ಅವರು ಉಚಿತವಾಗಿ ಅಜ್ಜಿಯ ಮನೆಗೇ ಬಂದು ಗ್ಯಾಸ್ ಕನೆಕ್ಷನ್ ಮಾಡಿಕೊಟ್ಟಿದೆ.

ಕೊರೋನ ಸಂದರ್ಭದಲ್ಲಿ ಸರ್ಕಾರ ಯಾವುದೇ ಆರ್ಥಿಕ ಸೌಲಭ್ಯ ಒದಗಿಸಲಿಲ್ಲ ಎನ್ನುತ್ತ ಸರ್ಕಾರವನ್ನು ದೂಷಿಸುತ್ತಾ ಕುಳಿತವರಿಗೆ, ಸ್ವಾಭಿಮಾನಿಯಾಗಿ ದುಡಿದು ಸಂಪಾದಿಸಿ ತಾನೂ ತಿಂದು, ಮತ್ತೊಬ್ಬರ ಹಸಿವನ್ನು ನೀಗುತ್ತಿರುವ ಇಡ್ಲಿ ಅಜ್ಜಿಯ ಜೀವನ ಅನುಕರಣೀಯ. ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಶ್ರೇಷ್ಠ ಉದಾಹರಣೆ. ಜೊತೆಗೆ ಇಡ್ಲಿ ಅಜ್ಜಿಯ ಮಾದರಿ ಜೀವನ ನಮಗೆಲ್ಲಾ ಸ್ಫೂರ್ತಿ.


Share news

Related Articles

Leave a Reply

Your email address will not be published. Required fields are marked *

Back to top button