ಪ್ರೇರಣೆಲೇಖನ ಸಂಗಮ

ಸಾವಯವ ಕೃಷಿಗೆ ಬೆನ್ನೆಲುಬಾಗಿ ನಿಂತ ಕಮಲಾ ಪೂಜಾರಿ

Share news

ಸಾವಯವ ಕೃಷಿಯನ್ನೇ ಜಿವನವನ್ನಾಗಿಸಿಕೊಂಡು ಬದುಕು ನಡೆಸುತ್ತಿರುವ ಕಮಲಾ ಪೂಜಾರಿ ಅವರ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆ. ಒಡಿಸ್ಸಾದ ಕೊರಾಪುಟ್ ಜಿಲ್ಲೆಯ ಪುಟ್ಟಗ್ರಾಮ ಪತ್ರಪುಟ್‌ನ ಬುಡಕಟ್ಟು ಜನಾಂಗದವರು. ಇವರು ತಮ್ಮ ಅಕ್ಕ-ಪಕ್ಕದ ಗ್ರಾಮಗಳು ರಾಸಾಯನಿಕ ಗೊಬ್ಬರ ಮುಕ್ತವಾಗುವಂತೆ ನೋಡಿಕೊಂಡಿದ್ದಾರೆ.ನೂರಾರು ಸ್ಥಳೀಯ ಭತ್ತದ ಬೀಜಗಳನ್ನು ಸಂರಕ್ಷಿಸಿದ್ದಾರೆ.ತಮ್ಮ ಗ್ರಾಮದ ಮನೆ-ಮನೆಗೆ ಸಾಗಿ ರಾಸಾಯನಿಕ ಗೊಬ್ಬರದಿಂದಾಗುವ ತೊಂದರೆಗಳನ್ನು ವಿವರಿಸುವ ಜನಜಾಗೃತಿ ಸಭೆಗಳನ್ನು, ರೈತರ ಸಭೆಯನ್ನು ಮಾಡಿ, ಜನರು ಸಾವಯವ ಕೃಷಿಯತ್ತ ಮರಳುವಂತೆ ಮಾಡಿದ್ದಾರೆ.

ಸಾಂಪ್ರದಾಯಿಕ ಕೃಷಿಯನ್ನು ಗಂಭೀರವಾಗಿ ತೆಗೆದುಕೊಂಡು, ಜೇಪೋರ್‌ನಲ್ಲಿರುವ ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್‌ನಿಂದ ಸಾಂಪ್ರದಾಯಿಕ ಬೇಸಾಯದ ಬಗ್ಗೆ ಮೂಲಭೂತ ತರಬೇತಿಯನ್ನು ಪಡೆದರು. ತರಬೇತಿಯನ್ನು ಪಡೆದ ನಂತರ, ಅವರು ತಮ್ಮ ಜನರನ್ನು ಸಾವಯವ ಕೃಷಿ ಮಾಡಲು ಸಜ್ಜುಗೊಳಿಸಿದರು, ಅನೇಕ ಗುಂಪು ಕೂಟಗಳನ್ನು ಏರ್ಪಡಿಸಿ ರಾಸಾಯನಿಕ ಗೊಬ್ಬರಗಳನ್ನು ತ್ಯಜಿಸಲು ಜನರೊಂದಿಗೆ ಸಂವಹನ ನಡೆಸಿದರು.

ಹಳ್ಳಿಯಿಂದ ಹಳ್ಳಿಗೆ ಮನೆ ಮನೆಯ ಬಾಗಿಲವರೆಗೆ ಸಾಗಿ ಜಾಗೃತಿ ಮೂಡಿಸಿದ ಸಾಧಕಿ. ಆಕೆಯ ಪ್ರಯತ್ನವು ಕೂಡ ಫಲ ನೀಡಿತು. ನಬರಂಗಪುರ ಜಿಲ್ಲೆಯ ಪತ್ರಾಪುಟ್ ಗ್ರಾಮ ಮತ್ತು ನೆರೆಹೊರೆಯ ಹಳ್ಳಿಗಳ ರೈತರು ರಾಸಾಯನಿಕ ಗೊಬ್ಬರಗಳನ್ನು ತ್ಯಜಿಸಿದರು. ಅವರು ಸ್ವಾಮಿನಾಥನ್ ಪ್ರತಿಷ್ಠಾನದ ಸಹಾಯದಿಂದ ಪತ್ರಾಪುಟ್‌ನಲ್ಲಿ ಸ್ಥಳೀಯ ಮಹಿಳೆಯರೊಂದಿಗೆ ಬೀಜ ಬ್ಯಾಂಕ್ ನ್ನು ರಚಿಸಿದರು.

ನಶಿಸಿ ಹೋಗುತ್ತಿರುವ ಅರಿಶಿಣ, ಭತ್ತ, ಜೀರಿಗೆಯ ವಿವಿಧ ಜಾತಿಗಳನ್ನು ಸಂಗ್ರಹಿಸಿದ್ದಾರೆ. ಒಡಿಸ್ಸಾ ರಾಜ್ಯ ಯೋಜನಾ ಮಂಡಳಿಯಲ್ಲಿ ಸದಸ್ಯೆಯಾಗಿ ಆಯ್ಕೆಯಾದ ಬುಡಕಟ್ಟು ಜನಾಂಗದ ಮೊದಲ ಮಹಿಳೆ.2002 ರಲ್ಲಿ ‘ಈಕ್ವೇಟರ್ ಆಫ್ ಇನಿಶಿಯೇಟಿವ್ ಅವಾರ್ಡ್’ ಹಾಗೂ ಭುವನೇಶ್ವರದಲ್ಲಿರುವ ಒಡಿಶಾ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ (OUAT) ಕಮಲಾ ಅವರ ಹೆಸರನ್ನು ಇಡಲಾಯಿತು. ಒಡಿಶಾ ಸರ್ಕಾರವು 2004 ರಲ್ಲಿ ಅತ್ಯುತ್ತಮ ಮಹಿಳಾ ರೈತೆ ಎಂದು ಗೌರವಿಸಿತು. 2019ರಲ್ಲಿ ಕೇಂದ್ರ ಸರ್ಕಾರ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಹೀಗೆ ಅವರ ಪರಿಸರ ಕಾಳಜಿ ರಾಸಾಯನಿಕ ಗೊಬ್ಬರ ಬಳಕೆಯ ವಿರುದ್ಧದ ಹೋರಾಟ ಗ್ರಾಮ ಗ್ರಾಮಗಳಲ್ಲಿ ಮಾಡಿದ ಜನಜಾಗೃತಿ ನಿಜಕ್ಕೂ ಸ್ಫೂರ್ತಿದಾಯಕ.


Share news

Related Articles

Leave a Reply

Your email address will not be published. Required fields are marked *

Back to top button