ಪ್ರೇರಣೆಲೇಖನ ಸಂಗಮ

ಸ್ವಾತಂತ್ರ್ಯದ ಹೊಸ್ತಿಲಲ್ಲಿ ನೆನಪಿಸಿಕೊಳ್ಳಬೇಕಾದ ವೀರ ವನಿತೆ ಕನಕ್ಲತಾ ಬರುವಾ

Share news

ಭಾರತದ ಸ್ವಾತಂತ್ರ್ಯ ದಿನ ಸಮೀಪಿಸುತ್ತಿದೆ. ಈ ಸ್ವಾತಂತ್ರ್ಯದ ಹಿಂದೆ ನೂರಾರು ಸ್ವಾತಂತ್ರ್ಯ ಹೋರಾಟಗಾರರ ನಾವು ಪಠ್ಯಪುಸ್ತಕಗಳಲ್ಲಿ ಕೇಳಿರದ ಇತಿಹಾಸದ ಪುಟಗಳಲ್ಲಿ ದಾಖಲಾಗದ ನಾವು ಮರೆತಿರುವ ರೋಚಕ ಕಥೆಗಳಿವೆ. ಅವಿಸ್ಮರಣೀಯ ಘಟನೆಗಳಿವೆ. ತ್ಯಾಗ ಬಲಿದಾನದೊಂದಿಗೆ ರಾಷ್ಟ್ರಸೇವೆಗೆ ಧುಮುಕಿದ ಶ್ರೇಷ್ಠ ವ್ಯಕ್ತಿಗಳಿದ್ದಾರೆ. ಇದರಲ್ಲಿ ಈಶಾನ್ಯ ರಾಜ್ಯದ ಕನಕ್ಲತಾ ಬರುವಾ ಎಂಬ 17 ವರ್ಷದ ಯುವತಿಯ ಸಾಹಸಗಾಥೆಯೇ ಅಚ್ಚರಿ ಪಡುವಂತದ್ದು, ಸದಾ ನೆನಪಿಸಿಕೊಳ್ಳುಬೇಕಾದದ್ದು.

ಅಸ್ಸಾಂನ 17 ವರ್ಷದ ಕನಕ್ಲತಾ ಬರುವಾ ಧೈರ್ಯದಿಂದ ಗುಂಡುಗಳನ್ನು ಎದುರಿಸಿದರು. ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ದೃಡ ಸಂಕಲ್ಪದಿಂದ ತಾನೇ ಎದುರು ನಿಂತು ಮುನ್ನುಗ್ಗಿ ಪೋಲಿಸರ ಗುಂಡಿಗೆ ತನ್ನ ಪ್ರಾಣತ್ಯಾಗ ಮಾಡಿದ ದೇಶದ ವೀರ ನಾರೀ ಶಕ್ತಿ ಎಂದರೂ ತಪ್ಪಾಗಲಾರದು. ತಾನಂದುಕೊಂಡಂತೆಯೇ ಕೊನೆಗೂ ಭಾರತ ಧ್ವಜ ಹಾರಿಸಿದ ಅಪರೂಪದ ವೀರಬಾಲೆ ಕನಕ್ಲತಾರ ಸಾಹಸ, ದೈರ್ಯ ಬದುಕಿದ ರೀತಿ ಎಲ್ಲವು ಯುವಜನರಿಗೆ ಪ್ರೇರಣೆ ನೀಡುವಂತದ್ದು.

ಕನಕ್ಲತಾ ಬರುವಾ 22 ಡಿಸೆಂಬರ್ 1924 ರಂದು ಅಸ್ಸಾಂನ ಅವಿಭಜಿತ ದಾರಂಗ್ ಜಿಲ್ಲೆಯ ಬೊರಂಗಬರಿ ಗ್ರಾಮದಲ್ಲಿ ಕೃಷ್ಣಕಾಂತ ಮತ್ತು ಕರ್ಣೇಶ್ವರಿ ಬರುವಾ ದಂಪತಿಯ ಪುತ್ರಿಯಾಗಿ ಜನಿಸಿದರು. ಹದಿಮೂರು ವರ್ಷ ಇರುವಾಗಲೇ ಆ ಚಿಕ್ಕ ವಯಸ್ಸಿನಲ್ಲಿ ಹೆತ್ತವರನ್ನು ಕಳೆದುಕೊಂಡಳು. ಅವಳು ಜಂಟಿ ಕುಟುಂಬದಲ್ಲಿ ವಾಸಿಸುತ್ತಿದ್ದರೂ ಸಹ ತನ್ನ ಕಿರಿಯ ಸಹೋದರ ಮತ್ತು ಸಹೋದರಿಯ ಕಾಳಜಿ ವಹಿಸುವ ದೃಷ್ಟಿಯಿಂದ ಮೂರನೆಯ ತರಗತಿಯ ನಂತರ ಅವಳು ಶಾಲೆಯಿಂದ ಹೊರಗುಳಿಯಬೇಕಾಯಿತು. ಆಕೆಯ ಪೂರ್ವಜರು ಅಹೋಮ್ ರಾಜರ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದರು ಎಂದು ಹೇಳಲಾಗುತ್ತದೆ.

ಕನಕ್ಲತಾ ಬರುವಾ ಬಾಲ್ಯದಿಂದಲೂ ಸ್ವಾತಂತ್ರ್ಯ ಹೋರಾಟದತ್ತ ಸೆಳೆಯಲ್ಪಟ್ಟಳು. ವಿದೇಶಿ ಆಡಳಿತದ ವಿರುದ್ಧ ಆಳವಾದ ಅಸಮಾಧಾನ ಅವಳೊಳಗೆ ಬೆಳೆದಿತ್ತು. ಸ್ಥಳೀಯ ನಾಯಕರಾದ ಚೆನಿರಾಮ್ ದಾಸ್, ಮಹೀಮ್ ಚಂದ್ರ, ಜ್ಯೋತಿ ಪ್ರಸಾದ್ ಅಗರ್ವಾಲ್ ಅವರ ಮೇಲೆ ಬ್ರಿಟಿಷರು ನೀಡುತ್ತಿದ್ದ ಕ್ರೂರ ಕಿರುಕುಳ ಅವಳನ್ನು ಮತ್ತಷ್ಟು ಕೆರಳಿಸಿತು. ಅದೇ ಸಮಯಕ್ಕೆ ಶ್ರೀ ಜ್ಯೋತಿ ಪ್ರಸಾದ್ ಅಗರ್ವಾಲ್ ಅಸ್ಸಾಂನ ಪ್ರಖ್ಯಾತ ಸಾಂಸ್ಕೃತಿಕ ವ್ಯಕ್ತಿ, ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಈ ಪ್ರದೇಶದಲ್ಲಿ ಕ್ವಿಟ್ ಇಂಡಿಯಾ ಚಳವಳಿಗೆ ಬೆಂಬಲ ಸಂಗ್ರಹಿಸಲು, ಅವರು ತೇಜ್ಪುರದಲ್ಲಿ ಮೃತ್ಯುವಾಹಿನಿ (ಡೆತ್ ಸ್ಕ್ವಾಡ್) ಅನ್ನುವ ಸಂಸ್ಥೆ ಸ್ಥಾಪಿಸಿದ್ದರು. ವೀರ್ ಬಾಲ ಎಂದೂ ಕರೆಯಲ್ಪಡುವ ಕನಕ್ಲತಾ ಬರುವಾ ಮೃತ್ಯು ವಾಹಿನಿಯ ಸಕ್ರಿಯ ಸದಸ್ಯೆಯಾದಳು.

ಕ್ವಿಟ್ ಇಂಡಿಯಾ ಚಳುವಳಿಯ(Quit India Movement) ಸಂದರ್ಭದಲ್ಲಿ ಎಲ್ಲಾ ರಾಷ್ಟ್ರೀಯ ನಾಯಕರ ಬಂಧನ ಮತ್ತು ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆಯ ನಂತರ ಮೃತ್ಯು ವಾಹಿನಿ ಸೆಪ್ಟೆಂಬರ್ 20, 1942 ರಂದು ಗೋಹಪುರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ನಿರ್ಧರಿಸಿದರು. ಈ‌ ಕಾರ್ಯದ ನೇತೃತ್ವ ಕನಕ್ಲತಾ ಬರುವಾಗೆ ವಹಿಸಲಾಯಿತು. ಮುಂದೆ ರಾಷ್ಟ್ರಧ್ವಜವನ್ನು ಮೇಲಕ್ಕೆತ್ತಿ ತಾನೇ ಎದುರು ನಿಂತು ಕನಕ್ಲತಾ ಬರುವಾ ಮೆರವಣಿಗೆಯನ್ನು ‘ಡು ಆರ್ ಡೈ’ ಘೋಷಣೆಯೊಂದಿಗೆ ಪ್ರಾರಂಭಿಸಿದಳು.

ಪೋಲಿಸ್ ಠಾಣೆಯ ಬಳಿ ಸಾಗುತ್ತಿದ್ದಂತೆ ರೆಬತಿ ಮಹನ್ ಸೋಮ್ ನೇತೃತ್ವದ ಪೊಲೀಸ್ ಪಡೆಗಳ ಭಾರೀ ದಳವು ಮುಂದುವರಿಯದಂತೆ ಎಚ್ಚರಿಕೆ ನೀಡಿತು. ಜೊತೆಗೆ ಪ್ರತಿಭಟನಾಕಾರರನ್ನು ತಡೆಯಲು ಪ್ರಯತ್ನಿಸಿತು. ಎಚ್ಚರಿಕೆಯಿಂದ ಹಿಂಜರಿಯದೆ ವೀರ ಯೋಧರಂತೆ ಅವರು ಮುಂದೆ ಸಾಗಿದರು. ಕೂಡಲೇ ಪೋಲಿಸರು ಹೋರಾಟಗಾರರ ಮೇಲೆ ಗುಂಡು ಹಾರಿಸಲು ಆರಂಭಿಸಿದರು. ಪೋಲಿಸರ ಒಂದು ಗುಂಡು ನೇರವಾಗಿ ಎದುರೇ ಇದ್ದ ಕನಕ್ಲತಾ ಬರುವಾಗೆ ಬಂದು ಬಡಿಯಿತು. ಅವಳು ಧ್ವಜವನ್ನು ಹಿಡಿದುಕೊಂಡೆ ನೆಲಕ್ಕೆ ಅಪ್ಪಳಿಸಿದಳು.

ಅಷ್ಟರಲ್ಲಿ ಇನ್ನೊಬ್ಬ ಸ್ವಾತಂತ್ರ್ಯ ಹೋರಾಟಗಾರ ಮುಕುಂದ ಕಾಕತಿ ಧ್ವಜವನ್ನು ಅವಳಿಂದ ತೆಗೆದುಕೊಳ್ಳುವವರೆಗೂ ಅದನ್ನು ನೆಲಕ್ಕೆ ಬೀಳಲು ಬಿಡಲಿಲ್ಲ. ಆತನಿಗೂ ಪೊಲೀಸರು ಗುಂಡು ಹಾರಿಸಿದರು. ಕೊನೆಗೆ ಮತ್ತೋರ್ವ ಸ್ವಾತಂತ್ರ್ಯ ಹೋರಾಟಗಾರ ರಾಂಪತಿ ರಾಜ್‌ಖೋವಾ ಅಂತಿಮವಾಗಿ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿಬಿಟ್ಟ. ಆದರೆ ಇನ್ನೊಂದು ಕಡೆ ಇಬ್ಬರೂ ಭಾರತಮಾತೆಯ ಬಲಿಪೀಠದ ಮೇಲೆ ತಮ್ಮ ಪ್ರಾಣವನ್ನು ಅರ್ಪಿಸಿದ್ದರು. ಆದರೆ ಅವರ ತ್ಯಾಗ ವ್ಯರ್ಥವಾಗಲಿಲ್ಲ. ಸಾವನ್ನು ಲೆಕ್ಕಿಸದ ಹೋರಾಟ, ಸಮರ್ಪಣಾ ಭಾವ ಕನಕ್ಲತಾ ಬರುವಾಳ ಮೈನವಿರೇಳಿಸುವ ಸಾಹಸವನ್ನು ಭಾರತೀಯಯರಾದ ನಾವ್ಯಾರೂ ಮರೆಯುವಂತಿಲ್ಲ.

ವೀರ್ ಬಾಲ ಕನಕ್ಲತಾ ಬರುವಾಳಂತಹ ಭಾರತದ ಸ್ವಾತಂತ್ರ್ಯ ಸಂಗ್ರಾಮ ವೀರರ ಹೋರಾಟಗಳನ್ನು ನಮ್ಮ ಇತಿಹಾಸ ಪುಸ್ತಕಗಳಲ್ಲಿ ಸೇರಿಸಬೇಕಿದೆ. ಇಂತಹ ಸಾವಿರಾರು ಮಕ್ಕಳು, ಮಹಿಳೆಯರು, ಪುರುಷರು ವೃದ್ಧರು, ತಾಯಂದಿರು ವಯಸ್ಸಿನ ಮಿತಿ ಇಲ್ಲದೆ ದೇಶಕ್ಕಾಗಿ ಹೋರಾಡಿದ ಅವರೆಲ್ಲರ ಬಲಿದಾನದಿಂದ ನಮಗಿಂದು ಸ್ವಾತಂತ್ರ್ಯ ಲಭಿಸಿದೆ ಎಂಬುದು ನೆನಪಿಡಬೇಕಾದ ಸಂಗತಿ. ಅವರನ್ನು ಸ್ಮರಿಸಿ ಇನ್ನಷ್ಟು ಪ್ರೇರಣೆ ಪಡೆದುಕೊಂಡು ಭಾರತಮಾತೆಯ ಸೇವೆಯೊಂದಿಗೆ ಪುನೀತರಾಗೋಣ.


Share news

Related Articles

Leave a Reply

Your email address will not be published. Required fields are marked *

Back to top button