ಆರೋಗ್ಯಲೇಖನ ಸಂಗಮ

ತರಕಾರಿ ಮತ್ತು ಹಣ್ಣಿನ ಜ್ಯೂಸ್‌ಗಳಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ

Share news

ಪ್ರತಿಯೊಬ್ಬ ಮನುಷ್ಯನ ದೇಹವನ್ನು ವೈರಸ್‌ಗಳು, ಪರಾವಲಂಬಿ ಹುಳುಗಳು, ರೋಗಕಾರಕಗಳು ಅಥವಾ ಪ್ಯಾತೋಜೆನ್ಸ್ಗಳನ್ನು ಪತ್ತೆಹಚ್ಚಿ ಅವುಗಳ ವಿರುದ್ದ ಹೋರಾಡುಲು ರೋಗನಿರೋಧಕ ವ್ಯವಸ್ಥೆ ಅಥವಾ ಪ್ರತಿರಕ್ಷಣಾ ವ್ಯವಸ್ಥೆ (ಇಂಗ್ಲಿಷ್‌ನಲ್ಲಿ ಇಮ್ಯೂನ ಸಿಸ್ಟೆಮ್) ಇರುತ್ತದೆ. ಇದು ರೋಗಗಳನ್ನು ತರುವ ಜೀವಿಗಳೊಳಗೆ ಹೋರಾಡಲು ಇರುವ ಅತಿ ಸಂಕೀರ್ಣ ಜೈವಿಕ ಮಿಲಿಟರಿ ರಕ್ಷಣಾವ್ಯೂಹವಾಗಿದೆ (ಹೋಸ್ಟ್ ಡಿಫೆನ್ಸ್ ಸಿಸ್ಟಮ್).ರೋಗನಿರೋಧಕ ವ್ಯವಸ್ಥೆಯು
ಬ್ಯಾಕ್ಟೀರಿಯಾ, ಪರಾವಲಂಬಿಗಳು, ಶಿಲೀಂಧ್ರ, ವೈರಲ್ ಸೋಂಕುಗಳು ಮತ್ತು ಗೆಡ್ಡೆಯ ಕೋಶಗಳ ಬೆಳವಣಿಗೆಯಂತಹ ಪೀಡೆಗಳಿಂದ (ಮಾನವ) ದೇಹವನ್ನು ಸಂರಕ್ಷಿಸುವ ಅನೇಕ ವಿಧಗಳ ಪರಸ್ಪರ ಅವಲಂಬಿತ ಜೀವಕೋಶಳಿಂದ ಕೂಡಿದೆ.

ರೋಗನಿರೋಧಕ ವ್ಯವಸ್ಥೆಯ ಕೋಶಗಳು ಬ್ಯಾಕ್ಟೀರಿಯಾವನ್ನು ಉಂಟುಮಾಡಿ ಪರಾವಲಂಬಿಗಳು ಅಥವಾ ಗೆಡ್ಡೆಯಂತಹ ಜೀವಕೋಶಗಳನ್ನು ಅಥವಾ ವೈರಲ್ ಸೋಂಕಿತ ಜೀವಕೋಶಗಳನ್ನು ಕೊಲ್ಲುತ್ತವೆ. ಈ ರೋಗನಿರೋಧಕ ಶಕ್ತಿಯು ಒಂದು ನಿರ್ದಿಷ್ಟ ಹಂತದವರೆಗೆ ಮನುಷ್ಯನ ದೇಹದೊಳಗೆ ವಿವಿಧ ಸ್ರಾವದ ರೂಪದಲ್ಲಿರುತ್ತದೆ. ಆದರೆ ಈ ರೋಗ ನಿರೋಧಕ ಶಕ್ತಿಯನ್ನು ನಿರಂತರವಾಗಿ ವರ್ಧಿಸಿಕೊಳ್ಳುವುದು ಅವಶ್ಯಕವಾಗಿದೆ. ನಾವು ತಿನ್ನುವ ಆಹಾರ ಮತ್ತು ದೈಹಿಕ ಚಟುವಟಿಕೆಗಳ ಕಾರಣದಿಂದ ರೋಗ ನಿರೋಧಕ ವ್ಯವಸ್ಥೆಯು ಬಲಿಷ್ಠವಾಗುತ್ತದೆ. ಬಹುಮುಖ್ಯವಾಗಿ ನಾವು ತಿನ್ನುವ ಕೆಲವೊಂದು ಆಹಾರ ಮತ್ತು ಪಾನೀಯಗಳು ದೇಹದ ರೋಗನಿರೋಧಕ ಶಕ್ತಿಯನ್ನು ವರ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕರೋನ ವೈರಸ್ ದೇಹದೊಳಗೆ ಪ್ರವೇಶಿಸದಂತೆ
ಮುಂಜಾಗ್ರತೆಯನ್ನು ಕೈಗೊಳ್ಳುವುದು ಮತ್ತು ದೇಹದೊಳಗಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಷ್ಟೇ ಇದಕ್ಕಿರುವ ಪರಿಹಾರೋಪಾಯಗಳು.

ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು. ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಗಳಂತಹ ಸಮಸ್ಯೆಗಳು ಬರದಂತೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಉತ್ತಮ ಹಾಗೂ ಆರೋಗ್ಯಕರ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್, ನಿಂಬೆಹಣ್ಣು, ಶುಂಠಿ ಮತ್ತು ಜೇನಿನ ಜ್ಯೂಸ್ ಮತ್ತು ಈರುಳ್ಳಿಯ ಜ್ಯೂಸ್ ಹೆಚ್ಚು ಪರಿಣಾಮಕಾರಿಯಾಗಿದೆ.

1. ಸೇಬು, ಕ್ಯಾರೆಟ್ ಮತ್ತು ಕಿತ್ತಳೆ ಹಣ್ಣಿನ ಜ್ಯೂಸ್ :

ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು ಮತ್ತು ತರಕಾರಿಗಳು ನಮ್ಮ ಆಹಾರ ಪದ್ಧತಿಯಲ್ಲಿ ಸೇರಿಕೊಳ್ಳುವುದು ಅವಶ್ಯಕ. ಅವುಗಳಲ್ಲಿರುವ ಅಧಿಕ ಪೌಷ್ಟಿಕಾಂಶಗಳು ದೇಹವನ್ನು ಸೇರಿ ಆರೋಗ್ಯವನ್ನು ರಕ್ಷಿಸುತ್ತದೆ. ಹಣ್ಣು ಮತ್ತು ತರಕಾರಿಗಳೆರಡನ್ನೂ ಸೇರಿಸಿ ತಯಾರಿಸಿದ ಜ್ಯೂಸ್‌ಗಳಲ್ಲಿ ರೋಗನಿರೋಧಕ ಶಕ್ತಿ, ಮತ್ತು ಪೋಷಕಾಂಶಗಳು ಯಥೇಚ್ಛವಾಗಿರುತ್ತದೆ.

ಕ್ಯಾರೆಟ್ ತರಕಾರಿಯಲ್ಲಿ ಬೀಟಾ ಮತ್ತು ಕ್ಯಾರೋಟಿನ್ ಅಂಶ ಹೆಚ್ಚಿದ್ದು, ಉಸಿರಾಟದ ಚಟುವಟಿಕೆಯನ್ನು ಉತ್ತಮಪಡಿಸುತ್ತದೆ. ಸೇಬಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು ದೇಹದ ಜೀವಶಗಳನ್ನು ಮತ್ತು ಅಂಗಾಂಶಗಳನ್ನು ರಕ್ಷಿಸುತ್ತದೆ. ಇವುಗಳು ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ. ಮಧುಮೇಹಿಗಳಿಗೆ ಅತ್ಯಗತ್ಯವಿರುವ ನಾರಿನ ಅಂಶ ಇವುಗಳಲ್ಲಿ ಹೇರಳವಾಗಿದೆ. ಕಿತ್ತಳೆ ಹಣ್ಣು ತಿನ್ನಲಷ್ಟೇ ರುಚಿಯಲ್ಲದೆ, ಅವುಗಳಲ್ಲಿನ ಪೌಷ್ಟಿಕಾಂಶಗಳು ಮನುಷ್ಯನಿಗೆ ಉಂಟಾಗುವ ಯಾವುದೇ ರೀತಿಯ ವೈರಾಣುಗಳ ಸೋಂಕನ್ನು ತಡೆಯುತ್ತವೆ. ತಲಾ ಒಂದೊಂದು ಕ್ಯಾರೆಟ್, ಸೇಬು ಮತ್ತು ಕಿತ್ತಳೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಪ್ರತ್ಯೇಕವಾಗಿ ಮಿಕ್ಸರ್ ಜಾರ್‌ನಲ್ಲಿ ಹಾಕಿ ಚೆನ್ನಾಗಿ ರುಬ್ಬಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ನಿಯಮಿತವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

2. ಶುಂಠಿ, ನಿಂಬೆ ಹಣ್ಣು ಮತ್ತು ಜೇನು ತುಪ್ಪದ ಜ್ಯೂಸ್ :

ಕಾಡು ಜೇನುತುಪ್ಪದಲ್ಲಿ ಆ್ಯಂಟಿ ಆಕ್ಸಿಡೆಂಟ್ ಯಥೇಚ್ಛವಾಗಿದ್ದು, ಮನುಷ್ಯನ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪದೊಂದಿಗೆ ಶುಂಠಿ ಮತ್ತು ನಿಂಬೆ ಹಣ್ಣು ಸೇರಿದರೆ ಮನುಷ್ಯನ ದೇಹದಲ್ಲಿ ಶೀತ ಮತ್ತು ಜ್ವರದ ಲಕ್ಷಣಗಳನ್ನು ಶಮನಗೊಳಿಸುತ್ತದೆ. ಅದೇ ರೀತಿ ಅರಿಶಿಣವು ದೇಹಕ್ಕೆ ಬಲವನ್ನು ಕೊಡುವ ವಿಟಮಿನ್ ಮತ್ತು ಖನಿಜಾಂಶವನ್ನು ಹೊಂದಿದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ‘ಸಿ’ ಅಂಶ ಅಧಿಕವಾಗಿರುವುದರಿಂದ ಇದರ ಸೇವನೆಯಿಂದ ಜೀರ್ಣಕ್ರಿಯೆ ಸುಗಮಗೊಂಡು ಅಜೀರ್ಣತೆ ಇಲ್ಲವಾಗುತ್ತದೆ. ಶುಂಠಿಯಲ್ಲಿ ಆಂಟಿ ಇನ್ಫಾಮೇಟರಿ ಹೇರಳವಾಗಿದ್ದು, ವಯಸ್ಕರಲ್ಲಿ ಕಂಡುಬರುವ ಆಸ್ಟಿಯೋ ಆರ್ಥರೈಟಿಸ್ಸ ಮಸ್ಯೆಯನ್ನು ಶಮನಗೊಳಿಸಿ, ಶೀತ, ಜ್ವರ ಲಕ್ಷಣಗಳನ್ನು ಶಮನಗೊಳಿಸುತ್ತದೆ. ನಿಂಬೆ, ಜೇನು ಮತ್ತು ಶುಂಠಿಯ ಮಿಶ್ರಣವು ಬೆಳಗಿನ ಅಸ್ವಸ್ಥತೆ, ವಾಂತಿಯ ಸಮಸ್ಯೆ ಹಾಗೂ ಮಾಂಸ ಖಂಡಗಳ ಸೆಳೆತವನ್ನು ನಿವಾರಿಸುತ್ತದೆ. ಜೇನುತುಪ್ಪ ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ, ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿ ಕೆಲಸ ನಿರ್ವಹಿಸಲು ಸಹಾಯವಾಗುತ್ತದೆ.

ಕೆಮ್ಮಿನ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಒಂದು ಗ್ಲಾಸ್ ಕುದಿಯುವ ನೀರಿಗೆ ಸ್ವಲ್ಪ ತುರಿದ ಶುಂಠಿ, ಒಂದು ಚಿಟಿಕೆ ಅರಿಶಿನ, 2-3 ಚಮಚಗಳಷ್ಟು ನಿಂಬೆ ಹೆಣ್ಣಿನರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತು ತಣ್ಣಗಾದ ನಂತರ ಒಂದು ಚಮಚದಷ್ಟು ಜೇನುತುಪ್ಪ ಹಾಕಿ ಚೆನ್ನಾಗಿ ಕದಡಿ ನಿಯಮಿತವಾಗಿ ಸೇವಿಸಬೇಕು.

3. ಈರುಳ್ಳಿ ನೀರಿನ ಜ್ಯೂಸ್ :

ಈರುಳ್ಳಿಯಲ್ಲಿ (ಉಳ್ಳಾಗಡ್ಡಿ) ಆ್ಯಂಟಿ ಆಕ್ಸಿಡೆಂಟ್ ಮತ್ತು ಆಂಟಿ ಇನ್ಫಾಮೇಟರಿ ಅಂಶ ಹೆಚ್ಚಾಗಿದ್ದು, ಇದು ದೇಹದಲ್ಲಡಗಿರುವ ಟೈಗ್ಲಿಸರೈಡ್ ಮತ್ತು
ಹೃದ್ರೋಗ ತರಿಸುವ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳನ್ನು ತಗ್ಗಿಸುತ್ತದೆ. ಇದರಲ್ಲಿ ದೇಹಕ್ಕೆ ಅಗತ್ಯವಾದ ಅಮೈನೋ ಆಮ್ಲ, ನಾರಿನಂಶ, ಫೋಲಿಕ್
ಆಮ್ಲ ಮತ್ತು ವಿಟಮಿನ್ ‘ಬಿ’ ಅಂಶಗಳಿದ್ದು, ದೇಹವನ್ನು ಆರೋಗ್ಯಕರವಾಗಿಡುತ್ತದೆ. ಈರುಳ್ಳಿಯ ಜ್ಯೂಸ್ ವೈರಾಣು ಸೋಂಕಿನಿಂದ ದೇಹಕ್ಕುಂಟಾಗುವ ಅಸ್ವಸ್ಥತೆಯನ್ನು ದೂರವಾಗಿಸಿ ದೇಹದ ‘ಮೆಟಬಾಲಿಸಂ’ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಈರುಳ್ಳಿಯಲ್ಲಿರುವ ತಯೋ ಸಲ್ಫೇಟ್ ಅಂಶ ಮನುಷ್ಯನ ದೇಹಕ್ಕೆ ಉಪಕಾರಿಯಾಗಿದೆ. ಇದರಲ್ಲಿ ೨೫ ಬಗೆಯ ಪ್ಲೇವನಾಯ್ಡ್ ಆಂಟಿ ಆಕ್ಸಿಡೆಂಟ್ ಅಂಶಗಳಿದ್ದು, ಹೃದಯದ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೃದಯದ ಸಮಸ್ಯೆಯಿರುವವರು ರಾತ್ರಿ ಊಟದ ನಂತರ ಒಂದು ಈರುಳ್ಳಿ ಮತ್ತು ತುಂಡು ಬೆಲ್ಲ ತಿನ್ನಬೇಕು. ಈರುಳ್ಳಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಅಂಶಗಳೂ ಸಮೃದ್ಧವಾಗಿದೆ. ಒಂದು ಕಪ್ ನೀರಿಗೆ ಸಣ್ಣಗೆ ತುಂಡರಿಸಿದ ಈರುಳ್ಳಿ ತುಂಡುಗಳನ್ನು ಹಾಕಿ ೬ ರಿಂದ ೮ ಗಂಟೆಗಳ ಕಾಲ ನೀರಿನಲ್ಲಿ ನೆನೆಬಿಡಬೇಕು. ಇದನ್ನು ಸೋಸಿಕೊಂಡು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮನೆಯಲ್ಲೇ ಲಭ್ಯವಿರುವ ಔಷಧೀಯ ಗುಣಗಳಿರುವ ಹಲವಾರು
ಹಣ್ಣು ತರಕಾರಿಗಳನ್ನು ಮರೆತು ಬಾಟಲಿಗಳಲ್ಲಿ ಇಟ್ಟಿರುವ ಹಾಗೂ ಯಾವುದೇ ಅರೋಗ್ಯಕರ ಅಂಶಗಳೇ ಇಲ್ಲದ ಸಾಫ್ಟ್ಡ್ರಿಂಕ್ಸ್ಗಳ ಕಡೆಗೆ ನಾವೆಲ್ಲ ಮುಖ ಮಾಡುತ್ತಿರುವುದು ಖೇದಕರ. ಆದ್ದರಿಂದ ಇತಹ ಮಹಾ ಪಿಡುಗುಗಳಿಂದ ನಮ್ಮ ದೇಹವನ್ನು ರಕ್ಷಿಸಿಕೊಳ್ಳಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಇಂತಹ ಹಣ್ಣು ಮತ್ತು ತರಕಾರಿಗಳ ಜ್ಯೂಸ್ ಕುಡಿಯುವುದು ಉತ್ತಮ.

ಲೇಖನ : ಸಂತೋಷ್ ರಾವ್ ಪೆರ್ಮುಡ
Share news

Related Articles

Leave a Reply

Your email address will not be published. Required fields are marked *

Back to top button