ಪ್ರೇರಣೆಲೇಖನ ಸಂಗಮ

ಕಷ್ಟದ ಹಾದಿಯಲ್ಲೇ ಸಾಧನೆಯ ಶಿಖರವೇರಿದ ಡಿ.ಎಸ್.ಪಿ ಅನಿತಾ ಪ್ರಭಾ ಶರ್ಮಾ ಜೀವನಗಾಥೆ

Share news

ಪ್ರತಿಯೊಬ್ಬ ಪ್ರಾಮಾಣಿಕ ವಿದ್ಯಾರ್ಥಿಗೂ ತಾನು ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ತಲುಪಬೇಕು ಎನ್ನುವ ಕನಸು ಇರುವುದು ಸಹಜ. ತನ್ನ ಆಸೆಯಂತೆ ಉನ್ನತ ಸ್ಥಾನವನ್ನು ತಲುಪಬೇಕಾದರೆ ಅದಕ್ಕಾಗಿ ಕಠಿಣ ಪರಿಶ್ರಮಪಡಬೇಕು ಎನ್ನುವುದೂ ಅಷ್ಟೇ ಸತ್ಯ. ಇದೇ ರೀತಿಯ ಕನಸನ್ನು ಕಂಡಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಮಧ್ಯಪ್ರದೇಶದ ಅನಿತಾ ಪ್ರಭಾ ಶರ್ಮಾ. ತನ್ನ ಶಾಲಾ ಜೀವನದುದ್ದಕ್ಕೂ ಕಲಿಕೆಯಲ್ಲಿ ಅತ್ಯತ್ತಮ ಸಾಧನೆ ಮಾಡುತ್ತಿದ್ದ ಅನಿತಾ 10ನೇ ತರಗತಿಯಲ್ಲಿ 92% ಅಂಕಗಳನ್ನು ಗಳಿಸಿದ್ದಳು. ಇಷ್ಟೆಲ್ಲ ಸಾಧನೆಯನ್ನು ಮಾಡಿದ್ದರೂ ತನ್ನ ದುರಾದೃಷ್ಟವೋ ಏನೋ ಎಂಬತೆ ಅನಿತಾಗೆ ಕೇವಲ 17ನೇ ವಯಸ್ಸಿನಲ್ಲಿ ಅವಳಿಗಿಂತ ಬರೋಬ್ಬರಿ 10 ವರ್ಷ ಹಿರಿಯ ವ್ಯಕ್ತಿಯ ಜೊತೆಗೆ ಅವಳ ಹೆತ್ತವರು ಮದುವೆ ಮಾಡಿದರು. ಅಷ್ಟು ಸಣ್ಣ ವಯಸ್ಸಿನಲ್ಲಿ ವಿವಾಹವಾಗಿ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಡಿ, ಅನಿತಾವರು ಅವರ 25ನೇ ವಯಸ್ಸಿನಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿ.ಎಸ್.ಪಿ) ಆಗುವ ಮೂಲಕ ಇತರ ಮಹಿಳೆಯರಿಗೆ ಮಾದರಿ ಆಗಿದ್ದಾರೆ.

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಕೋಟ್ಮಾ ಗ್ರಾಮದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ ಬೆಳೆದರು. ಅನಿತಾರ ಹೆತ್ತವರಿಬ್ಬರೂ ಶಿಕ್ಷಕರಾಗಿದ್ದರು ಮತ್ತು ಈಕೆ ಓದಿನಲ್ಲಿ ತೀರಾ ಮುಂದಿದ್ದಳು. ಮನೆಯಲ್ಲಿ ಶಿಕ್ಷಣ ಮುಖ್ಯವಾಗಿದ್ದರೂ, ಆಕೆಯ ಪೋಷಕರು ಮಗಳ ಜವಾಬ್ದಾರಿಗಳಿಂದ ಮುಕ್ತರಾಗಲು ಬಯಸಿ ಮಕ್ಕಳ ಚಿಕ್ಕ ವಯಸ್ಸಿನಲ್ಲಿಯೇ ಅನಿತಾ ಮತ್ತು ಅವರ ಸಹೋದರಿ ಇಬ್ಬರಿಗೂ ಮದುವೆ ಮಾಡಿದರು. ಬಾಲ್ಯವಿವಾಹ ಕಾನೂನುಬಾಹಿರ ಎಂದು ಅನಿತಾಳ ಹೆತ್ತವರು ಸ್ಪಷ್ಟವಾಗಿ ತಿಳಿದಿದ್ದರೂ. ಅನಿತಾಳಿಗೆ ಇನ್ನೂ 17 ವರ್ಷ ವಯಸ್ಸಿದ್ದಾಗಲೇ ಅವಳಿಗೆ ಮದುವೆ ಮಾಡಲು ನಿರ್ಧರಿಸಿದರು.

ಅನಿತಾಳ ಅತ್ತೆ ಮಾವ ಆರ್ಥಿಕವಾಗಿ ದುರ್ಬಲರಾಗಿದ್ದರೂ ಅವರು ಅನಿತಾಗೆ ಪದವಿ ಶಿಕ್ಷಣವನ್ನು ಪೂರ್ಣಗೊಳಿಸಲು ಅನುಮತಿ ನೀಡಿದರು. ತನ್ನ ಕನಸನ್ನು ಬಿಡದ ಅನಿತಾ ಮದುವೆಯಾದ ಮೇಲೂ ಮನೆಕೆಲಸವನ್ನೆಲ್ಲ ಲೆಕ್ಕಿಸದೆ ಓದನ್ನು ಮುಂದುವರೆಸಿದ್ದಳು. ಆದರೆ ಮತ್ತೊಮ್ಮೆ ಅವರ ಅದೃಷ್ಟ ಅವರೆಡೆಗೆ ಕರುಣೆ ತೋರಲಿಲ್ಲ! ಅನಿತಾ ತನ್ನ ಮೂರನೇ ವರ್ಷದ ಪದವಿ ಓದುತ್ತಿದ್ದಾಗ ಅವಳ ಪತಿ ಅಪಘಾತಕ್ಕೆ ಸಿಲುಕಿ ತನ್ನ ಎರಡೂ ಕೈಗಳನ್ನು ಮುರಿದುಕೊಂಡರು. ಅಪಘಾತಕ್ಕೀಡಾದ ಪತಿಯನ್ನು ನೋಡಿಕೊಳ್ಳುವುದು ಪತ್ನಿಯ ಧರ್ಮವೆಂದು ತಿಳಿದು ಗಂಡನ ಆರೈಕೆಗೆ ನಿಂತ ಅನಿತಾ ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ಮುಂದಿನ ವರ್ಷ ಮತ್ತೆ ಪರೀಕ್ಷೆ ಬರೆದು ಪದವಿ ಶಿಕ್ಷಣವನ್ನು ಮುಗಿಸಿದರು. ಇದರ ಪರಿಣಾಮವಾಗಿ, ಅವರು ಪ್ರೊಬೇಷನರಿ ಬ್ಯಾಂಕ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅನರ್ಹರಾಗಿದ್ದರು.

ಈ ಸೋಲು ಅನಿತಾಳ ಉತ್ಸಾಹವನ್ನು ಕಿಂಚಿತ್ತೂ ತಡೆಯಲು ಸಾಧ್ಯವಾಗಲಿಲ್ಲ. ಅನಿತಾ ತನ್ನ ಕುಟುಂಬದ ನಿರ್ವಹಣೆಗಾಗಿ ಬ್ಯೂಟಿಷಿಯನ್ ಕೋರ್ಸ್ ಕಲಿತು ನಂತರ ಪಾರ್ಲರ್‌ನಲ್ಲಿ ಕೆಲಸ ಮಾಡುವ ಮೂಲಕ ಆದಾಯವನ್ನು ಗಳಿಸಲು ಪ್ರಾರಂಭಿಸಿದಳು. ಅದೇ ಸಮಯದಲ್ಲಿ, ಅನಿತಾ ಮತ್ತು ಅವಳ ಗಂಡನ ನಡುವೆ ಇದ್ದ ಹೆಚ್ಚಿನ ವಯಸ್ಸಿನ ಅಂತರದ ಕಾರಣದಿಂದಾಗಿ ತನ್ನ ಪತಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗಲಿಲ್ಲ.

ಈ ನಡುವೆ ಬ್ಯಾಂಕಿಗ್ ಉದ್ಯೋಗಕ್ಕೆ ಸೇರ್ಪಡೆ ಆಗಲು ಸಾಧ್ಯವಿಲ್ಲ ಎನ್ನುವುದನ್ನು ಅರಿತ ಅನಿತಾ ತನ್ನ ಸರ್ಕಾರಿ ನೌಕರಿ ಪಡೆಯುವ ಕನಸನ್ನು ಎಂದೂ ಮರೆಯಲಿಲ್ಲ! ತನ್ನ ಭವಿಷ್ಯಕ್ಕಾಗಿ ೨೦೧೩ರಲ್ಲಿ ಫಾರೆಸ್ಟ್ ಗಾರ್ಡ್ ಪರೀಕ್ಷೆಯನ್ನು ಬರೆಯಲು ನಿರ್ಧರಿಸಿದರು. ಆ ಹುದ್ದೆಗೆ ನಡೆದ ದೈಹಿಕ ತರಬೇತಿಯಲ್ಲಿ ಅನಿತಾ ೧೪ ಕಿ.ಮೀ ನಡಿಗೆಯನ್ನು ಕೇವಲ ನಾಲ್ಕು ಗಂಟೆಗಳಲ್ಲಿ ಪೂರ್ಣಗೊಳಿಸಿದರು. ತರಬೇತಿಯನ್ನು ಸಮರ್ಪಕವಾಗಿ ಪೂರೈಸಿದ ಅನಿತಾ ಅವರು ೨೦೧೩ರ ಡಿಸೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿ ನೇಮಕಗೊಂಡರು.

ಈ ಗೆಲುವು ಅನಿತಾ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಅನಿತಾ ಅವರಂತಹ ಕನಸಿನ ಬೆಂಬತ್ತಿದ್ದ ಹುಡುಗಿಗೆ ಈ ಗೆಲುವು ಸಾಕಾಗಲಿಲ್ಲ. ಅವರು ಮತ್ತೊಮ್ಮೆ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆ ಬರೆಯಲು ನಿರ್ಧರಿಸಿದರು. ಈ ಹುದ್ದಗೆ ನಡೆದ ಆಯ್ಕೆ ಪ್ರಕ್ರಿಯೆಯ ದೈಹಿಕ ಪರೀಕ್ಷೆಯಲ್ಲಿ ಅನಿತಾ ತನ್ನ ಮೊದಲ ಪ್ರಯತ್ನದಲ್ಲಿ ಅನುತ್ತೀರ್ಣ ಆದರು. ಆದರೂ ಸೋಲೊಪ್ಪದ ಅನಿತಾ ತನ್ನ ದೌರ್ಬಲ್ಯಗಳನ್ನು ಅರಿಯುವ ಪ್ರಯತ್ನವನ್ನು ಮಾಡಿ ಅದರಿಂದ ಹೊರಬರುವ ಕೆಲಸ ಮಾಡಿ ಎರಡನೇ ಬಾರಿಗೆ ಉಪ-ನಿರೀಕ್ಷಕಿಯಾಗಿ ನೇಮಕಗೊಂಡಳು.

ಅನಿತಾ ತನ್ನ ಸಬ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷೆಗೆ ಎರಡು ತಿಂಗಳು ಇರುವಾಗ ತನ್ನ ಅಂಡಾಶಯದಲ್ಲಿ ಉಂಟಾದ ಗೆಡ್ಡೆಯ ಸಮಸ್ಯೆಯನ್ನು ನಿವಾರಿಸಲು ಶಸ್ತಚಿಕಿತ್ಸೆಗೂ ಒಳಗಾಗಿದ್ದಳು. ಶಸ್ತಚಿಕಿತ್ಸೆಯ ನಂತವೂ ದೈಹಿಕ ಪರೀಕ್ಷೆಯನ್ನು ಅನಿತಾ ಪರೀಕ್ಷೆಯನ್ನು ಗೆದ್ದು, ತನ್ನ ಅನಾರೋಗ್ಯವನ್ನೂ ಸೋಲಿಸಿದಳು. ಪರೀಕ್ಷೆಯಲ್ಲಿ ಪಾಸಾದ ಅನಿತಾರನ್ನು ಮೊದಲು ಉಪ-ವಿಭಾಗೀಯ ಜಿಲ್ಲಾ ಮೀಸಲು ಪೊಲೀಸ್ ಲೈನ್‌ಗೆ ನೇಮಿಸಲಾಯಿತು. ತನ್ನ ತರಬೇತಿಗಾಗಿ ಅನಿತಾ ಸಾಗರ್‌ಗೆ ತೆರಳಿ ತನ್ನ ಗಂಡನಿಂದ ವಿಚ್ಛೇದನ ಪಡೆಯುವ ನಿರ್ಧಾರವನ್ನು ಮಾಡಿದರು. ಸಾಗರ್‌ನಲ್ಲಿ ತರಬೇತಿ ನಡೆಯುತ್ತಿದ್ದಾಗಲೇ ಅವರು ಈ ಹಿಂದೆ ಬರೆದಿದ್ದ ಮಧ್ಯಪ್ರದೇಶ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಯ ಫಲಿತಾಂಶ ಬಂದು ಅದರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಮಹಿಳೆಯರಲ್ಲೇ ಅನಿತಾ 17ನೇ ರ‍್ಯಾಂಕ್, ಒಟ್ಟಾರೆಯಾಗಿ 47ನೇ ರ‍್ಯಾಂಕ್ ಪಡೆದು ಡಿ.ಎಸ್.ಪಿ ಹುದ್ದೆಗೆ ಆಯ್ಕೆಯಾದರು. ತರಬೇತಿಯ ನಂತರ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಗೆ ಉಪ ಪೋಲೀಸ್ ವರಿಷ್ಠಾಧಿಕಾರಿ ಆಗಿ ನಿಯೋಜನೆಗೊಂಡರು. ನಂತರ, ಅವರು MPPSC ಪರೀಕ್ಷೆಗೆ ಕುಳಿತು ಏಪ್ರಿಲ್ 2016 ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಮಹಿಳೆಗೆ ಎಲ್ಲವನ್ನೂ ಮಾಡುವ ಶಕ್ತಿ ಇದೆ! ಅನಿತಾ ಪ್ರಭಾ ಶರ್ಮಾ ಅವರ ಜೀವನದ ಕಥೆಯು ತಮ್ಮ ಜೀವನ ಸರಿಯಲ್ಲ ಎಂದು ಭಾವಿಸುವ ಎಲ್ಲರಿಗೂ ಅತ್ಯುತ್ತಮ ಉದಾಹರಣೆಯಾಗಿದೆ. ತನ್ನ ಬದುಕು ಹೀಗೇ ಇರಬೇಕು ಎಂದು ಅನಿತಾ ನಿರ್ಧರಿಸಿದರು ಮತ್ತು ತನ್ನ ನಿರ್ದಾರದಂತೆ ಬದುಕಿನ ಹಾದಿಯನ್ನು ಕಂಡುಕೊಳ್ಳಲು ಕಠಿಣ ಪರಿಶ್ರಮಪಟ್ಟು ಇಂದು ಎಲ್ಲರೂ ಗುರುತಿಸುವಂತಹ ಡಿ.ಎಸ್.ಪಿ ಹುದ್ದೆಗೆ ಏರಿದರು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160


Share news

Related Articles

Leave a Reply

Your email address will not be published. Required fields are marked *

Back to top button