ಲೇಖನ ಸಂಗಮಸಿನಿ ವಿಹಾರ

ನಟಿಯಾಗಿ ಕಿರುತೆರೆಯಲ್ಲಿ ಮಿಂಚುತ್ತಿರುವ ಮೇಧಾ ಗಾಯಕಿಯೂ ಹೌದು!

Share news

ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಮತ್ತೆ ಮಾಯಾಮೃಗ” ಧಾರಾವಾಹಿಯಲ್ಲಿ ಪೂರ್ವಿ ಪಾತ್ರಧಾರಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಮೇಧಾ ವಿದ್ಯಾಭೂಷಣ. ಅಚಾನಕ್ ಆಗಿ ದೊರೆತ ಅವಕಾಶದಿಂದ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಮೇಧಾ ವಿದ್ಯಭೂಷಣ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದ ಹುಡುಗಿ.

ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ಮೇಧಾ ವಿದ್ಯಾಭೂಷಣ ಅವರಿಗೆ ಕಲೆ ಎಂಬುದು ರಕ್ತಗತವಾಗಿ ಬಂದುದು ಹೌದು. ಒಂದು ಕಾಲದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪೀಠಾಧಿಪತಿಗಳಾಗಿದ್ದ ವಿದ್ಯಾಭೂಷಣ ಮತ್ತು ರಮಾ ಅವರ ದಂಪತಿಗಳ ಮಗಳಾಗಿರುವ ಮೇಧಾ ವಿದ್ಯಾಭೂಷಣ ನಟಿಯಾಗುವ ಮೊದಲೇ ಸಂಗೀತಗಾರ್ತಿಯಾಗಿ ಗುರುತಿಸಿಕೊಂಡಿದ್ದರು.

ತಂದೆ ವಿದ್ಯಾಭೂಷಣ ಅವರು ಅದ್ಭುತ ಗಾಯಕರಾಗಿದ್ದ ಕಾರಣ ಮನೆಯಲ್ಲಿ ಸಂಗೀತದ ವಾತಾವರಣ. ತಂದೆಯ ಸುಮಧುರ ಹಾಡುಗಳನ್ನು ಕೇಳುತ್ತಲೇ ಬೆಳೆದ ಮೇಧಾ ಸಂಗೀತಗಾರ್ತಿಯಾಗಲು ಮನೆಯ ವಾತಾವರಣವೇ ಪ್ರೇರಣೆ. ಶಾಸ್ತ್ರೋಕ್ತವಾಗಿ ಸಂಗೀತ ಕಲಿತಿರುವ ಮೇಧಾ ಈಗಾಗಲೇ ಕೆಲವೊಂದು ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ದಾಸರ ಪದಗಳಿಗೂ ಮೇಧ ದನಿ ನೀಡಿದ್ದು ಅದು ಸಿಡಿ ರೂಪದಲ್ಲಿ ಹೊರಬಂದಿದೆ.

ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಕೂಡಾ ಮುಂದಿದ್ದ ಮೇಧಾ ವಿದ್ಯಾಭೂಷಣ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದಾರೆ. “ಮತ್ತೆ ಮಾಯಾಮೃಗ” ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿರುವ ಮೇಧಾ ತುಂಬಾ ಖುಷಿಯಲ್ಲಿದ್ದಾರೆ.

ಟಿ.ಎನ್.ಸೀತಾರಾಮ್ ಅವರ ನಿರ್ದೇಶನದ ಧಾರಾವಾಹಿಗಳನ್ನು ನೋಡುತ್ತಲೇ ಬೆಳೆದವಳು ನಾನು. ಈಗ ಅವರದೇ ನಿರ್ದೇಶನದ ಮತ್ತೆ ಮಾಯಾಮೃಗ ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದೇನೆ. ಇದು ನನ್ನ ಪಾಲಿಗೆ ಒಲಿದ ಅದೃಷ್ಟವೇ ಎಂದು ಹೇಳಬಹುದು. ಮೊದಲ ಬಾರಿಗೆ ಜನಪ್ರಿಯ ನಿರ್ದೇಶಕರ ಧಾರಾವಾಹಿಯಲ್ಲಿ ನಟಿಸುವ ಅವಕಾಶ ನನಗೆ ದೊರಕಿದೆ. ನಾನಿನ್ನು ನಟನಾ ಕ್ಷೇತ್ರಕ್ಕೆ ಹೊಸಬಳಾಗಿರುವ ಕಾರಣ ನಟಿಸಲು ಸಾಧ್ಯವೇ ಎಂಬ ಅನುಮಾನ ನನ್ನನ್ನು ಕಾಡಿತ್ತು. ಬಂದ ಅವಕಾಶ ಬೇಡ ಎನ್ನಲು ಮನಸ್ಸಾಗದೇ ಒಪ್ಪಿಕೊಂಡೆ. ಧಾರಾವಾಹಿ ತಂಡದವರ ಬೆಂಬಲ ಹಾಗೂ ಮನೆಯವರ ಪ್ರೋತ್ಸಾಹದಿಂದ ಪೂರ್ವಿ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಾಯಿತು” ಎಂದು ಸಂತಸದಿಂದ ಹೇಳುತ್ತಾರೆ ಮೇಧಾ ವಿದ್ಯಾಭೂಷಣ.


Share news

Related Articles

Leave a Reply

Your email address will not be published. Required fields are marked *

Back to top button