ಪ್ರೇರಣೆಲೇಖನ ಸಂಗಮ

ನಾದವಿಶಾರದೆ ಮೇಘನಾ ಸಾಲಿಗ್ರಾಮ

Share news

ಸಂಗೀತ ಎಲ್ಲರನ್ನೂ ಆಕರ್ಷಿಸುವುದಿಲ್ಲ. ಅದರಲ್ಲೂ ಸ್ಯಾಕ್ಸೋಫೋನ್ ಹೆಚ್ಚಿನ ಸಂಗೀತ ಕಲಾವಿದರನ್ನು ಆಕರ್ಷಿಸದ ವಾದ್ಯ. ಈ ವಾದ್ಯವನ್ನು ಪುರುಷರು ಮಾತ್ರ ನುಡಿಸುವ ಕಾಲವೊಂದಿತ್ತು. ಆದರೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮೇಘನಾ ತಮ್ಮ ಕಿರಿ ವಯಸ್ಸಿನಲ್ಲಿ ಸ್ಯಾಕ್ಸೋಫೋನ್ ಕಲಿತು ಸಾವಿರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀಮತಿ ಜಯಲಕ್ಷ್ಮಿ ಹಾಗೂ ದುರ್ಗಾದಾಸ್ ಇವರ ಮಗಳಾಗಿ ಏಪ್ರಿಲ್ ೨೧ ರಂದು ಜನನ. ಬಿ.ಸಿ.ಎ ವರೆಗೆ ವಿದ್ಯಾಭ್ಯಾಸ. ಡಾ.ಕದ್ರಿ ಗೋಪಾಲನಾಥ್ ಇವರು ಸ್ಯಾಕ್ಸೋಫೋನ್ ಕಲಿಯಲು ಪ್ರೇರಣೆ. ಸುಂದರ್ ಶೇರಿಗಾರ್, ಮಧೂರ್ ಬಾಲಸುಬ್ರಮಣ್ಯ ಮತ್ತು ಅಶೋಕ್ ಹಿರಿಯಡ್ಕ ಇವರ ಗುರುಗಳು. ೨೦ ವರ್ಷಗಳಿಂದ ಸ್ಯಾಕ್ಸೋಫೋನ್ ಅಭ್ಯಾಸ ಮಾಡುತ್ತಿದ್ದಾರೆ. ತೋಡಿ, ಹಂಸಧ್ವನಿ, ಹಿಂದೋಳ ಇವರ ನೆಚ್ಚಿನ ರಾಗಗಳು. ಕೀರ್ತನೆ, ಪಂಚರತ್ನ ಕೀರ್ತನೆ, ದಾಸರ ಪದ ನುಡಿಸಲು ಇಷ್ಟಪಡುತ್ತೇನೆ ಎಂದು ಹೇಳುತ್ತಾರೆ ಮೇಘನಾ.

ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ನೀವು ಎದುರಿಸಿದ ಸವಾಲುಗಳೇನು :

೮ ನೇ ವಯಸ್ಸಿಗೆ ಸ್ಯಾಕ್ಸೋಫೋನ್ ಕಲಿಯಲು ಆರಂಭಿಸಿದ್ದೇನೆ. ಅತೀ ಚಿಕ್ಕ ವಯಸ್ಸಿನವಳಾದ್ದರಿಂದ ಸ್ಯಾಕ್ಸೋಫೋನ್ ನುಡಿಸುವುದು ಮತ್ತು ಸ್ಯಾಕ್ಸೋಫೋನ್ ಗಾಳಿವಾದನ ಆಗಿದ್ದರಿಂದ ನುಡಿಸಲು ತುಂಬಾ ಕಷ್ಟವಾಯಿತು. ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡಲು ಬೇರೆ ಬೇರೆ ದೇಶ – ರಾಜ್ಯಗಳಿಗೆ ಹೋಗುತ್ತೇವೆ, ಅಲ್ಲಿನ ವಾತಾವರಣಕ್ಕೆ ಸ್ಯಾಕ್ಸೋಫೋನ್ ನುಡಿಸಲು ಸ್ವಲ್ಪ ಕಷ್ಟ .

ಮೇಘನಾ ಅವರಿಗೆ ಸಿಕ್ಕಿರುವ ಪ್ರಶಸ್ತಿಗಳು :

♦ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ (ರಾಜ್ಯ ಪ್ರಶಸ್ತಿ 2022)
♦ ಶ್ರೇಷ್ಠ ಯುವ ಸಂಗೀತಗಾರ ಪ್ರಶಸ್ತಿ (2020)
♦ “ದೇವಾಡಿಗ ಸಾಧಕ ಪ್ರಶಸ್ತಿ” ದುಬೈ (2014)
♦ ಆರ್ಯಭಟ ಅಂತರಾಷ್ಟ್ರ ಪ್ರಶಸ್ತಿ (2013)
♦ ಉಡುಪಿ ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ(2005)
♦ ಗಂಗೂಬಾಯಿ ಹಾನಗಲ್ ಕಲಾ ಕಣ್ಮಣಿ ಪ್ರಶಸ್ತಿ (2007)
♦ ಡಾ.ಶಿವರಾಮ್ ಕಾರಂತ್ ಸದ್ಭಾವನಾ ಪ್ರಶಸ್ತಿ (2009)
♦ ಅಸಾಧಾರಣ ಪ್ರತಿಭಾ ಪ್ರಶಸ್ತಿ (ರಾಜ್ಯ ಪ್ರಶಸ್ತಿ 2006 )

ಮೇಘನಾ ಅವರಿಗೆ ಸಿಕ್ಕಿರುವ ಬಿರುದುಗಳು :

♦ ನಾದವಿಶಾರದೆ ಬಿರುದು ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಉಡುಪಿ.
♦ ಕಲಾಕುಸುಮ ಬಿರುದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ.

ಸ್ಯಾಕ್ಸೋಫೋನ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳ ಬಯಸುವವರಿಗೆ ಇವರ ಹಿತನುಡಿಗಳು ಹಾಗೂ ಸ್ಯಾಕ್ಸೋಫೋನ್ ಕ್ಷೇತ್ರದಲ್ಲಿ ನಿಮ್ಮ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ,”ಸ್ಯಾಕ್ಸೋಫೋನ್ ಕಲಿಯುವಾಗ ನಿರಂತರ ಅಭ್ಯಾಸ ಅತೀ ಮುಖ್ಯ ಎಂಬುವುದು ಇವರ ಅಭಿಪ್ರಾಯ ಹಾಗೂ ಮುಂದಿನ ದಿನಗಳಲ್ಲಿ ಸ್ಯಾಕ್ಸೋಫೋನ್ ತರಗತಿಗಳನ್ನು ಮಾಡಬೇಕು ಎಂಬ ಯೋಜನೆ ಇದೆ”.

ದುಬೈ, ಕತಾರ್, ಮುಂಬೈ, ದೆಹಲಿ, ಹೈದರಾಬಾದ್, ಚೆನ್ನೈ, ಬೆಂಗಳೂರು, ಮೈಸೂರು ದಸರಾ ಕಾರ್ಯಕ್ರಮಗಳಲ್ಲದೇ ದೇಶ ವಿದೇಶಗಳಲ್ಲಿ ಕಛೇರಿಗಳನ್ನು ನೀಡಿ ಎಲ್ಲರ ಮೆಚ್ಚುಗೆಗಳಿಸಿದ್ದಾರೆ.

ಮೇಘನಾ ಅವರು ಫೆಬ್ರವರಿ ೧೭ ರಂದು ಪ್ರಶಾಂತ್ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ
ಸುಪ್ರಭಾತ, ಶಕ್ತಿನಗರ ಮಂಗಳೂರು.


Share news

Related Articles

Leave a Reply

Your email address will not be published. Required fields are marked *

Back to top button