ಪ್ರತಿಭಾನ್ವೇಷಣೆಲೇಖನ ಸಂಗಮ

ಪದ್ಮಶ್ರೀ ಚಿಟ್ಟಾಣಿ ವಂಶ ವಲ್ಲರಿ

Share news

ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ನಮಗೆ ಅನೇಕ ಯಕ್ಷಸಂಸಾರ ಕಾಣಲು ಸಿಗುತ್ತೆ. ಅಂತಹ ಒಂದು ಯಕ್ಷ ಕುಟುಂಬದ ಪರಿಚಯವನ್ನು ನಾವು ಇವತ್ತು ಮಾಡಲು ಹೊರಟಿದ್ದೇವೆ. ಇಂದಿನ ಯಕ್ಷ ಸಾಧಕರು ಲೇಖನದಲ್ಲಿ ಅವರುಗಳು ಯಾರು ಎಂದರೆ ಸುಬ್ರಹ್ಮಣ್ಯ ರಾಮಚಂದ್ರ ಹೆಗಡೆ ಚಿಟ್ಟಾಣಿ, ನರಸಿಂಹ ರಾಮಚಂದ್ರ ಹೆಗಡೆ ಚಿಟ್ಟಾಣಿ ಹಾಗೂ ಕಾರ್ತಿಕ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ.

ಸುಬ್ರಹ್ಮಣ್ಯ ರಾಮಚಂದ್ರ ಹೆಗಡೆ ಚಿಟ್ಟಾಣಿ :

ಚಿಟ್ಟಾಣಿ ರಾಮಚಂದ್ರ ಹೆಗಡೆ ಹಾಗೂ ಸುಶೀಲಾ ಹೆಗಡೆ ದಂಪತಿಯ ಸುಪುತ್ರನಾಗಿ ದಿನಾಂಕ ೨೫.೦೩.೧೯೬೨ ರಂದು ಜನನ. ಎಸೆಸೆಲ್ಸಿವರೆಗೆ ವಿದ್ಯಾಭ್ಯಾಸ. ಗೋವಿಂದ ಭಟ್ಟ ಗುಡ್ಡೆಬಾಳು ಇವರ ಯಕ್ಷಗಾನದ ಗುರುಗಳು. ಇವರ ತಂದೆ ರಾಮಚಂದ್ರ ಹೆಗಡೆ ಚಿಟ್ಟಾಣಿ ಅವರು ಯಕ್ಷರಂಗಕ್ಕೆ ಬರಲು ಪ್ರೇರಣೆ.

ರಂಗಕ್ಕೆ ಬರುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ: ಹಿರಿಯ ಕಲಾವಿದರ ಅನುಭವದ ಹೇಳಿಕೆಯನ್ನು ಪಡೆದುಕೊಂಡು, ಪ್ರಸಂಗದ ಪದ್ಯಗಳನ್ನು ಅವಲೋಕಿಸಿ, ನನ್ನ ಕಲ್ಪನೆಯನ್ನೂ ಸೇರಿಸಿ ಪಾತ್ರಕ್ಕೆ ಸಿದ್ಧನಾಗುತ್ತೇನೆ. ಕೃಷ್ಣಾರ್ಜುನ, ರತ್ನಾವತಿ ಕಲ್ಯಾಣ, ಜರಾಸಂಧ ವಧೆ, ಚಕ್ರ ಚಂಡಿಕೆ, ಗಧಾಯುದ್ಧ ಮುಂತಾದವುಗಳು ನೆಚ್ಚಿನ ಪ್ರಸಂಗಗಳು. ಕೃಷ್ಣ, ಅರ್ಜುನ, ವಲಲ ಭೀಮ, ಕೌರವ, ಮಾಗಧ, ಬರ್ಬರೀಕ ಮುಂತಾದವುಗಳು ನೆಚ್ಚಿನ ವೇಷಗಳು.

ಯಕ್ಷಗಾನ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಹಿಂದಿನಿಂದ ನಡೆದು ಬಂದ ಪೌರಾಣಿಕ ಪ್ರಸಂಗಗಳ ಪಾತ್ರಾಭಿನಯ ಕಲಾವಿದರ ಮೌಲ್ಯವನ್ನು ಪ್ರಕಟಿಸುತ್ತದೆ. ಇಂದಿಗೂ ಪೌರಾಣಿಕ ಪ್ರಸಂಗ ಕಲಾವಿದರ ಪ್ರತಿಭೆಗೆ ಮುಖ್ಯ ಕಾರಣ. ಬದಲಾವಣೆ ಕಾಲಕ್ಕನುಸರಿಸಿ ನಡೆಯಲೇಬೇಕು.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ: ಕಲಾವಿದರ ಕಲಾ ಪ್ರತಿಭೆಯನ್ನು ಗುರುತಿಸಿ ಕಲಾವಿದರ ಅರ್ಹತೆಯನ್ನು ಗುರುತಿಸಬಲ್ಲ ಪ್ರೇಕ್ಷಕರ ಸಂಖ್ಯೆ ತುಂಬಾ ವೃದ್ಧಿಸಿದೆ.

ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:ಯಕ್ಷಗಾನ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಪಾತ್ರ ನಿರ್ವಹಿಸಿ ಪೌರಾಣಿಕ ಪ್ರಸಂಗಗಳ ಪಾತ್ರಕ್ಕೆ ಮೌಲ್ಯಾಧಾರಿತ ಶಕ್ತಿ ತುಂಬಲು ಪ್ರಯತ್ನ ಮುಂದುವರೆಸುತ್ತೇನೆ.

ಅನೇಕ ಸಂಘ ಸಂಸ್ಥೆಗಳು ಹಾಗೂ ಕಲಾಭಿಮಾನಿಗಳಿಂದ ಪುರಸ್ಕಾರಗಳು ದೊರೆತಿವೆ.ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇವರ ಹವ್ಯಾಸಗಳು. ಪೆರ್ಡೂರು, ಗುಂಡಬಾಳ, ಬಚ್ಚಗಾರು, ಸಾಲಿಗ್ರಾಮ, ಮಂದಾರ್ತಿ ಮೇಳಗಳಲ್ಲಿ ತಿರುಗಾಟ ನಡೆಸಿದ ಅನುಭವ. ಶ್ರೀಮತಿ ಪಾರ್ವತಿ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ ಸುಬ್ರಹ್ಮಣ್ಯ ರಾಮಚಂದ್ರ ಹೆಗಡೆ ಚಿಟ್ಟಾಣಿ.

ನರಸಿಂಹ ರಾಮಚಂದ್ರ ಹೆಗಡೆ ಚಿಟ್ಟಾಣಿ :

ರಾಮಚಂದ್ರ ಹೆಗಡೆ ಹಾಗೂ ಸುಶೀಲಾ ದಂಪತಿಯ ಸುಪುತ್ರನಾಗಿ ದಿನಾಂಕ ೨೭.೦೭.೧೯೬೭ರಂದು ಜನನ. ೮ನೇತರಗತಿವರೆಗೆ ವಿದ್ಯಾಭ್ಯಾಸ.
ಗೋವಿಂದ ಭಟ್ಟ ಗುಡ್ಡೆಬಾಳು ಇವರ ಯಕ್ಷಗಾನದ ಗುರುಗಳು. ತಂದೆ ಪದ್ಮಶ್ರೀ ದಿ.ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರು ಯಕ್ಷರಂಗಕ್ಕೆ ಬರಲು ಪ್ರೇರಣೆ.

ರಂಗಕ್ಕೆ ಹೋಗುವ ಮೊದಲು ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ: ರಂಗಸ್ಥಳಕ್ಕೆ ಹೋಗುವಾಗ ಅನುಭವ ಇದ್ದ ಕಲಾವಿದರಲ್ಲಿ ಹಾಗೂ ಭಾಗವತರಲ್ಲಿ ಕೇಳಿ ತಿಳಿದುಕೊಳ್ಳುವುದು. ಶರಸೇತು ಬಂಧನ , ಕೀಚಕ ವಧೆ, ಗಧಾಯುದ್ಧ ನೆಚ್ಚಿನ ಪ್ರಸಂಗಗಳು.
ಕೀಚಕ, ಭಸ್ಮಾಸುರ, ಹನುಮಂತ, ಕೌರವ ನೆಚ್ಚಿನ ವೇಷಗಳು.

ಯಕ್ಷಗಾನ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ :ಬೆಳಗಿನ ತನಕ ನೋಡುವ ಪ್ರೇಕ್ಷಕರ ಕೊರತೆ ಇದೆ. ಕಾಲ ಕ್ರಮೇಣ ಕಾಲಮಿತಿಯ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ.

ಯಕ್ಷಗಾನ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಪ್ರಜ್ಞಾವಂತ ಪ್ರೇಕ್ಷಕರು ಹೆಚ್ಚಾಗಿದ್ದಾರೆ ಎಂಬ ಸಂತೋಷ ಒಂದೆಡೆ. ಕಲಾವಿದರಿಗೆ ಪ್ರೇಕ್ಷಕರೇ ದೇವರು.

ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಕಾಲಕ್ಕನುಗುಣವಾಗಿ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು. ಪೌರಾಣಿಕ ವೇಷಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡುವುದು. ಗುಂಡಬಾಳ, ಸಾಲಿಗ್ರಾಮ, ಅಮೃತೇಶ್ವರಿ, ಪೆರ್ಡೂರು, ಸೌಕೂರು, ಮಂದಾರ್ತಿ, ಹಾಗೂ ಸಿಗಂಧೂರು ಮೇಳಗಳಲ್ಲಿ ತಿರುಗಾಟ ನಡೆಸಿದ ಅನುಭವ.ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಗಳು ಇವರಿಗೆ ಸಂದಿವೆ. ಕೃಷಿ ಚಟುವಟಿಕೆ, ಯಕ್ಷಗಾನಕ್ಕೆ ಸಂಬಂಧ ಪಟ್ಟ ಅಧ್ಯಯನ ಇವರ ಹವ್ಯಾಸಗಳು. ಶೈಲಾ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ ನರಸಿಂಹ ರಾಮಚಂದ್ರ ಹೆಗಡೆ ಚಿಟ್ಟಾಣಿ.

ಕಾರ್ತಿಕ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ :

ಸುಬ್ರಹ್ಮಣ್ಯ ಹೆಗಡೆ ಹಾಗೂ ಪಾರ್ವತಿ ಸುಬ್ರಹ್ಮಣ್ಯ ಹೆಗಡೆ ದಂಪತಿಯರ ಕುವರನಾಗಿ ದಿನಾಂಕ ೦೮.೧೨.೧೯೯೧ರಂದು ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ. ದಿ.ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತರು, ಶ್ರೀಧರ ಭಟ್ಟ ಕಾಸರಗೋಡು ಇವರ ಯಕ್ಷಗಾನ ಗುರುಗಳು. ಅಜ್ಜ ಪದ್ಮಶ್ರೀ ದಿ. ರಾಮಚಂದ್ರ ಹೆಗಡೆ ಚಿಟ್ಟಾಣಿ ಇವರಿಂದ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು ಎಂದು ಕಾರ್ತಿಕ್ ಹೇಳುತ್ತಾರೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ: ಹಿರಿಯ ಅನುಭವಿ ಕಲಾವಿದರಲ್ಲಿ ಕೇಳಿ ತಿಳಿದು, ಭಾಗವತರಲ್ಲಿ ಚರ್ಚಿಸಿ ರಂಗಪ್ರವೇಶ ಮಾಡುತ್ತೇನೆ. ಸುಧನ್ವ ಮೋಕ್ಷ, ಚಕ್ರಚಂಡಿಕೆ, ಮಾಗಧ ವಧೆ, ಕಂಸ ವಧೆ, ಲವಕುಶ ಮುಂತಾದವುಗಳು ನೆಚ್ಚಿನ ಪ್ರಸಂಗಗಳು. ಕೃಷ್ಣ, ಮದನ, ರುದ್ರಕೋಪ, ಚಂದ್ರಹಾಸ, ಕಲಾಧರ, ಸುಧನ್ವ ಮುಂತಾದವುಗಳು ನೆಚ್ಚಿನ ವೇಷಗಳು.

ಯಕ್ಷಗಾನ ಇಂದಿನ ಸ್ಥಿತಿಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಬೆಳಗಿನ ತನಕ ಆಟಗಳಿಗೆ ಪ್ರೇಕ್ಷಕರ ಕೊರತೆ. ಕಾಲ ಕ್ರಮೇಣ ಕಾಲಮಿತಿಯ ಕಾರ್ಯಕ್ರಮಗಳಿಗೆ ಹೊಂದಿಕೊಳ್ಳುವ ಅನಿವಾರ್ಯತೆ.

ಯಕ್ಷಗಾನ ರಂಗದ ಇಂದಿನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಪ್ರಜ್ಞಾವಂತ ಪ್ರೇಕ್ಷಕರು ಹೆಚ್ಚಾಗಿದ್ದಾರೆ ಎಂಬ ಸಂತೋಷ ಒಂದೆಡೆ. ಕಲೆಯ ಅಭಿಮಾನಿಗಳಾಗಿರಬೇಕೇ ಹೊರತು ಕಲಾವಿದನ ಅಭಿಮಾನಿಗಳಾಗಿರುವುದು ಸ್ವಲ್ಪ ಮಟ್ಟಿನ ವಿಷಾದ.

ಯಕ್ಷಗಾನ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ : ಕಾಲಕ್ಕನುಗುಣವಾಗಿ ನಮ್ಮನ್ನು ನಾವು ಒಗ್ಗಿಸಿಕೊಳ್ಳುವುದು. ಪೌರಾಣಿಕ ವೇಷಗಳ ಬಗ್ಗೆ ಹೆಚ್ಚು ಅಧ್ಯಯನಶೀಲನಾಗುವುದು.

ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳಿಂದ ಸನ್ಮಾನಗಳು ದೊರೆತಿದೆ. ಕೃಷಿ ಚಟುವಟಿಕೆ, ಪೌರಾಣಿಕ ಪ್ರಸಂಗಗಳ ಅಧ್ಯಯನ ಇವರ ಹವ್ಯಾಸಗಳು.
ಗುಂಡಬಾಳ, ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಮೇಳಗಳಲ್ಲಿ ತಿರುಗಾಟ ನಡೆಸಿ ಪ್ರಸ್ತುತ ಪೆರ್ಡೂರು ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ.

ಅರ್ಪಿತಾ ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ ಕಾರ್ತಿಕ ಚಿಟ್ಟಾಣಿ. ಈ ಯಕ್ಷ ಕುಟುಂಬಕ್ಕೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by: Shanmuka Focus, Ashok Donderangadi, Nagaraj N Bhat, Manjunath Bairy, Dheeraj Udupa Uppinakudru.

ಬರಹ : ಶ್ರವಣ್ ಕಾರಂತ್ ಕೆ


Share news

Related Articles

Leave a Reply

Your email address will not be published. Required fields are marked *

Back to top button