ಲೇಖನ ಸಂಗಮಹಿಂದೂ ಆಚಾರ-ವಿಚಾರ

ಬಾಂಧವ್ಯ ಬೆಸೆಯುವ ರಾಖಿ ಹಬ್ಬ

Share news

ಹಿಂದೂ ದಿನದರ್ಶಿನಿ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬ ರಕ್ಷಾ ಬಂಧನ. ಈ ದಿನವೂ ಸಹೋದರ ಸಹೋದರಿಯರ ನಡುವಿನ ಪ್ರೀತಿಗೆ ಸಮರ್ಪಣೆಯಾಗಿದೆ. ರಕ್ಷಾಬಂಧನ ಎರಡು ಪದಗಳಿಂದ ಕೂಡಿದೆ, ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಈ ಹಬ್ಬದಲ್ಲಿ ಸಹೋದರರು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಶಕ್ಕಾಗಿ ಪ್ರಾರ್ಥಿಸುತ್ತಾಳೆ. ರಾಕಿಯೂ ಒಂದು ದಾರವಲ್ಲ ಅದು ಅವರಿಬ್ಬರ ನಡುವಿನ ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು.

ರಕ್ಷಾಬಂಧನದ ದಿನ ಕುಟುಂಬದ ಪ್ರತಿಯೊಬ್ಬ ಸದಸ್ಯರು ಬೆಳಗ್ಗೆ ಬೇಗ ಎದ್ದು ಆಚರಣೆಗಳನ್ನು ಆರಂಭಿಸುತ್ತಾರೆ. ರಾಖಿಯನ್ನು ಸಹೋದರಿಯು ಸಹೋದರನ ಮಣಿಕಟ್ಟಿಗೆ ಕಟ್ಟುತ್ತಾಳೆ ಮತ್ತು ಸಹೋದರನಿಗೆ ಆರತಿ ಬೆಳಗುತ್ತಾಳೆ. ಈ ಹಬ್ಬವು ಮೊದಲು ಉತ್ತರ ಭಾರತದಲ್ಲಿ ಮಾತ್ರ ಹೆಚ್ಚು ಪ್ರಚಲಿತದಲ್ಲಿತ್ತು. ಇತ್ತೀಚಿನ ವರ್ಷ ದೇಶಾದ್ಯಂತ ಎಲ್ಲರೂ ಆಚರಿಸುತ್ತಾರೆ.

ಹಿಂದಿನ ಕಾಲದಲ್ಲಿ ರಾಖಿ ಕೇವಲ ರಕ್ಷಣೆಯ ಪ್ರತೀಕವಾಗಿ ಪರಿಗಣಿಸಲ್ಪಟ್ಟಿತ್ತು . ಋಷಿಗಳು ತಮ್ಮ ದರ್ಶನಕ್ಕಾಗಿ ಬರುವ ಜನರಿಗೆ ಇದನ್ನು ಕಟ್ಟುತ್ತಿದ್ದರು ಜೊತೆಗೆ ಸಾಧುಗಳು ತಮ್ಮ ಕೈಗೆ ತಾವೇ ರಾಖಿ ಕಟ್ಟಿಕೊಂಡು ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯುತ್ತಿದ್ದರು ಹೀಗೆ ಇದು ಪಾಪವನ್ನು ಮುರಿಯುವ ಪುಣ್ಯ ನೀಡುವ ಪರ್ವ ಅಥವಾ ಎಲ್ಲಾ ವರಗಳನ್ನು ನೀಡುವ ಮತ್ತು ಪಾಪಗಳನ್ನು ನಿವಾರಿಸುವ ಅಂಶವಾಗಿ ರಾಖಿ ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ.

ಪುರಾಣದ ಪ್ರಕಾರ ಮಹಾಭಾರತದ ಸಂದರ್ಭದಲ್ಲಿ ಶ್ರೀ ಕೃಷ್ಣನಿಗೆ ಆಕಸ್ಮಿಕವಾಗಿ ತನ್ನ ಬೆರಳು ಸುದರ್ಶನ ಚಕ್ರದಿಂದ ಕತ್ತರಿಸಿದಾಗ ಪಾಂಡವರ ಪತ್ನಿ ದ್ರೌಪದಿ ಶ್ರೀ ಕೃಷ್ಣನ ನೋಡಿ ತಕ್ಷಣ ತನ್ನ ವಸ್ತ್ರದ ಒಂದು ತುಂಡನ್ನು ಕತ್ತರಿಸಿ ಆ ಬೆರಳಿಗೆ ಕಟ್ಟುತ್ತಾಳೆ ಇದನ್ನೇ ರಕ್ಷೆ ಎಂದು ಹೇಳಲಾಗುತ್ತದೆ ಅಂತಹ ಸಂದರ್ಭದಲ್ಲಿ ಶ್ರೀ ಕೃಷ್ಣನು ದುಷ್ಟರಿಂದ ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಾನೆ. ನಂತರದ ದಿನಗಳಲ್ಲಿ ಕೌರವರ ವಿರುದ್ಧ ಪಗಡೆಯಾಟದಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾದ ಸಂದರ್ಭದಲ್ಲಿ ಸೀರೆಯನ್ನು ಎಷ್ಟು ಎಳೆದರೂ ಮುಗಿಯದ ಹಾಗೆ ಮಾಡಿ ಶ್ರೀ ಕೃಷ್ಣನು ತನ್ನ ಮಾತಿನಂತೆ ದ್ರೌಪದಿಯನ್ನು ರಕ್ಷಣೆ ಮಾಡುತ್ತಾರೆ.

ರಾಖಿಯ ಬಗ್ಗೆ ಇತಿಹಾಸದ ಪುಟಗಳನ್ನು ನೋಡುವುದಾದರೆ, ಇಡೀ ಜಗತ್ತನ್ನೇ ಗೆಲ್ಲಬೇಕು ಎಂದು ದಂಡೆತ್ತಿ ಹೊರಟಿದ್ದ ಅಲೆಕ್ಸಾಂಡರ್ ಒಮ್ಮೆ ಭಾರತದ ಮೇಲೆ ದಾಳಿ ಮಾಡಲು ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿ ನಿಂತ ಯುವಕನೇ ಪೋರಸ್ ಅವರಿಬ್ಬರ ನಡುವೆ ಯುದ್ಧ ಪ್ರಾರಂಭವಾಯಿತು, ಈ ಸಂದರ್ಭದಲ್ಲಿ ಅಲೆಕ್ಸಾಂಡರ್ ನ ಪತ್ನಿ ಪೋರಸ್ ಗೆ ಒಂದು ಪವಿತ್ರ ಧಾರವನ್ನು ಕಳುಹಿಸಿದಳು ಆ ಧಾರವೇ ರಾಕಿ ಅದರೊಂದಿಗೆ ಒಂದು ಮನವಿ ಇತ್ತು, ಅದರಲ್ಲಿ ಆಕೆ ತನ್ನ ಪತಿಯಾದ ಅಲೆಕ್ಸಾಂಡರ್ ಅನ್ನು ಕೊಲ್ಲದಂತೆ ಮನವಿ ಮಾಡಿದ್ದಳು. ಆ ಮನವಿಯಂತೆ ಪೋರಸ್ ಅಲೆಕ್ಸಾಂಡರ್ ನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣವೆಂದರೆ ಆತನ ಕೈಯಲ್ಲಿ ಕಟ್ಟಿಕೊಂಡಿದ್ದ ರಾಖಿ.

ಇನ್ನೊಂದು ಘಟನೆ ಹೇಳುವುದಾದರೆ ಚಿತ್ತೂರಿನ ರಾಣಿ ಕರುಣಾವತಿಯು ಗಂಡನನ್ನು ಕಳೆದುಕೊಂಡು ವಿಧವೆಯ ಜೀವನ ನಡೆಸುತ್ತಿದ್ದಳು, ಈ ಸಂದರ್ಭದಲ್ಲಿ ಆಕೆಯ ರಾಜ್ಯದ ಮೇಲೆ ಚಕ್ರವರ್ತಿ ಬಹುದ್ದೂರ್ ಷಾನು ದಂಡೆತ್ತಿ ಬರುವ ನಿರ್ಧಾರ ಮಾಡಿದ್ದನು ಇದನ್ನು ತಿಳಿದ ಕಿತ್ತೂರಿನ ರಾಣಿ ಹುಮಾಯುನನ ಸಹಾಯವನ್ನು ಬಯಸಿ ರಾಕಿಯನ್ನು ಕಳುಹಿಸಿದ್ದಳು. ಈ ರಾಖಿಯು ಚಕ್ರವರ್ತಿ ಹುಮಾಯುನನಿಗೆ ತಲುಪಿತು. ಅವಳು ಬಯಸಿದಂತೆ ಅವನು ರಾಣಿ ಕರುಣಾವತಿಯ ಸಹಾಯಕ್ಕೆ ತನ್ನ ಸೇನೆಯನ್ನು ಕಳುಹಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರುಣಾವತಿಯು ಇತರೆ ಹೆಂಗಸರೊಂದಿಗೆ ಸೇರಿ ತನ್ನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾ ನನ್ನು ಹುಮಾಯೂನ್ ಹೊರಗೆ ಹಾಕಿ ರಾಣಿಯ ಮಗ ವಿಕ್ರಮಾಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.

ಇಂತಹ ಮಹತ್ವಪೂರ್ಣ ರಕ್ಷಾಬಂಧನ ಹಬ್ಬ ಮೊದಲು ಸಹೋದರ ಸಹೋದರಿಯರ ನಡುವೆ ಈ ಹಬ್ಬ ಆಚರಿಸುತ್ತಿದ್ದರು. ಆದರೆ ಇಂದು ತಮ್ಮ ಆಪ್ತ ಸ್ನೇಹಿತರು, ಬಂಧುಗಳು ಎಲ್ಲರಿಗೂ ರಾಕಿಯನ್ನು ಕಟ್ಟುವ ಮೂಲಕ ಶಾಂತಿಯುತವಾಗಿ ಸಹ ಬಾಳ್ವೆ ನಡೆಸುವ ಸಂದೇಶವನ್ನು ಸಾರುತ್ತದೆ.

ರಾಖಿ ಹಬ್ಬವನ್ನು ಮೊದಲು ಪ್ರಚಾರ ಮಾಡಿ ಅದಕ್ಕೆ ಜನಪ್ರಿಯ ತಂದು ಕೊಟ್ಟವರು ರವೀಂದ್ರನಾಥ ಠಾಗೋರ್. ಶಾಂತಿ ಮತ್ತು ಸಹಬಾಳ್ವೆಯ ಮೌಲ್ಯವು ಮನುಷ್ಯನಿಗೆ ತೀರ ಅಗತ್ಯವಾದದ್ದು, ಇದನ್ನು ರಕ್ಷಾಬಂಧನವು ಸಾರಿ ಸಾರಿ ಹೇಳುತ್ತದೆ. ರಕ್ಷಾಬಂಧನದ ನೆಪದಲ್ಲಿ ದೂರ ಇರುವ ಸಹೋದರ ಸಹೋದರಿಯರು ಪರಸ್ಪರ ಒಟ್ಟಾಗಿ ಹಬ್ಬವನ್ನು ಆಚರಣೆ ಮಾಡುತ್ತಾರೆ, ಇದರಿಂದ ಪರಸ್ಪರ ಕಷ್ಟ ಸುಖಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು.

ಸಹೋದರ ಸಹೋದರಿಯರು ಒಂದಾಗಿ ಇರುವುದರಿಂದ ಇಡೀ ಕುಟುಂಬವು ಸಂತೋಷದಿಂದ ಈ ಹಬ್ಬವನ್ನು ಆಚರಿಸುತ್ತದೆ. ಈ ಹಬ್ಬವು ಎಲ್ಲರ ನಡುವಿನ ಸಂಬಂಧವನ್ನು ಬೆಸೆಯುವ ದಿನವಾಗಿ ಗುರುತಿಸಲಾಗಿದೆ. ಶಾಂತಿ, ಸಹಬಾಳ್ವೆ, ಸಂಬಂಧವನ್ನು ಬೆಳೆಸೋಣ… ದೇಶವನ್ನು ಮುನ್ನಡೆಸೋಣ.. ಈ ಹಬ್ಬವು ಎಲ್ಲೇಡೆ ಸಂತೋಷ ತರಲಿ.

ಬರಹ : ಚಿರಂತನ ಕೆ.ವಿ


Share news

Related Articles

Leave a Reply

Your email address will not be published. Required fields are marked *

Back to top button