ಪ್ರತಿಭಾನ್ವೇಷಣೆಲೇಖನ ಸಂಗಮ
Trending

ಯಕ್ಷಗಾನ ರಂಗದ ಯಕ್ಷಸಿರಿ ಶ್ರೀನಿಧಿ ಖಾರ್ವಿ

Share news

ಭಾರತೀಯ ಕಲೆಗಳೆಲ್ಲಾ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ, ಪ್ರಸಾರ ಮಾಡುತ್ತವೆ; ಧರ್ಮಪ್ರಸಾರವನ್ನು ಮಾಡುವುದಕ್ಕೆ ಮಾಧ್ಯಮವಾಗಿವೆ. ಆದುದರಿಂದಲೇ ಅವುಗಳೆಲ್ಲಾ ನಮ್ಮ ಹೆಮ್ಮೆಯ ಸಂಕೇತ ಎಂದು ಅಭಿಮಾನದಿಂದ ಹೇಳುತ್ತೇವೆ. ಯಕ್ಷಗಾನವಂತೂ ಗಂಡುಕಲೆಯೆಂದೇ ಪ್ರಸಿದ್ಧವಾಗಿದೆ. ವೃತ್ತಿ ಕಲಾವಿದರು, ಹವ್ಯಾಸೀ ಕಲಾವಿದರ ಜೊತೆಯಲ್ಲಿ ಶಾಲಾ ವಿದ್ಯಾರ್ಥಿಗಳೂ ರಂಗವೇರಿ ಮಿಂಚುತ್ತಿದ್ದಾರೆ. ಇಂತಹ ಶ್ರೀಮಂತ ಕಲೆಯಾದ ಯಕ್ಷಗಾನದಲ್ಲಿ ಕಲಾ ಸೇವೆಯನ್ನು ಮಾಡುತ್ತಿರುವ ಯುವ ಕಲಾವಿದೆ ಶ್ರೀನಿಧಿ ಖಾರ್ವಿ.

ನಾಗರಾಜ್ ಖಾರ್ವಿ ಹಾಗೂ ಶೋಭಾ ಖಾರ್ವಿ ಇವರ ಮಗಳಾಗಿ ೨೦.೦೧.೨೦೦೩ ರಂದು ಜನನ. ಪ್ರಸ್ತುತ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇಲ್ಲಿ ತೃತೀಯ ಬಿಕಾಂ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ಹಾಗೂ ತಾಯಿಯ ಪ್ರೇರಣೆಯಿಂದ ಇವರು ಯಕ್ಷಗಾನ ರಂಗಕ್ಕೆ ಬಂದರು. ರಾಮಚಂದ್ರ ಭಟ್ ಹೆಮ್ಮಾಡಿ ಇವರ ಯಕ್ಷಗಾನದ ಗುರುಗಳು.

ಶ್ರೀನಿಧಿ ಖಾರ್ವಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿ ರಂಗ ಪ್ರವೇಶ ಮಾಡಿದ್ದು ಹವ್ಯಾಸಿ ಯಕ್ಷಗಾನ ಬಳಗ ನಾಯಕವಾಡಿ ಗುಜ್ಜಾಡಿ. ನಂತರ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘ ಹೆಮ್ಮಾಡಿ ಇದರಲ್ಲಿ ಯಕ್ಷಗಾನ ವೇಷವನ್ನು ಮಾಡುತ್ತಿದ್ದಾರೆ. ಹಟ್ಟಿಯಂಗಡಿ ಮೇಳದಲ್ಲಿ ಅತಿಥಿ ಕಲಾವಿದೆಯಾಗಿ ಕುಶನ ಪಾತ್ರವನ್ನು ಮಾಡಿರುತ್ತಾರೆ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತೀರಿ:-
ಯಾವುದೇ ಪಾತ್ರ ಆದರೂ ಕೂಡ ಮೊದಲು ಆ ಪಾತ್ರದ ಬಗ್ಗೆ ಗುರುಗಳ ಮುಖೇನ ತಿಳಿದುಕೊಳ್ಳುತ್ತೇನೆ ಎಂದು ಹೇಳುತ್ತಾರೆ ಶ್ರೀನಿಧಿ ಖಾರ್ವಿ.

ಅಭಿಮನ್ಯು ಕಾಳಗ, ಶ್ರೀ ಕೃಷ್ಣ ಪಾರಿಜಾತ, ಕಂಸವಧೆ, ಸುಂದೋಪಸುಂದ ಕಾಳಗ, ಲವಕುಶ, ಸುಧನ್ವಾರ್ಜುನ ಕಾಳಗ, ದೇವಿ ಮಹಾತ್ಮೆ ಇವರ ನೆಚ್ಚಿನ ಪ್ರಸಂಗಗಳು.
ಅಭಿಮನ್ಯು, ಲವ, ಕುಶ, ಕೃಷ್ಣ, ವಿಷ್ಣು, ಕಂಸ, ಸುಧನ್ವ ನೆಚ್ಚಿನ ವೇಷಗಳು.

ಯಕ್ಷಗಾನದ ಇಂದಿನ ಸ್ಥಿತಿಗತಿ:-
ಯಕ್ಷಗಾನ ಕಲೆಗೂ ಕೂಡ ಒಳ್ಳೆಯ ಸ್ಥಾನಮಾನ ಇಂದಿನ ದಿನಗಳಲ್ಲಿ ಸಿಗುತ್ತಿದೆ. ಇಂದಿನ ಯುವ ಪೀಳಿಗೆ ಕೂಡ ಯಕ್ಷಗಾನ ಕಲಿಯುವಲ್ಲಿ ಒಲವು ತೋರಿಸುತ್ತಿದ್ದಾರೆ. ಇದು ಯಕ್ಷಗಾನ ಕಲೆ ಉಳಿಯುವಲ್ಲಿ ಕಾರಣವಾಗಬಹುದು ಎಂದು ಹೇಳುತ್ತಾರೆ ಶ್ರೀನಿಧಿ ಖಾರ್ವಿ.

ಇಂದಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಸಿನಿಮಾ ರಂಗಕ್ಕೆ ಹೇಗೆ ಅಭಿಮಾನಿಗಳು ಇದ್ದಾರೆಯೋ ಅದೇ ರೀತಿ ಯಕ್ಷಗಾನ ರಂಗಕ್ಕೆ ಕೂಡ ಅಭಿಮಾನಿಗಳು ಇದ್ದಾರೆ. ಯಕ್ಷಗಾನ ನೋಡಲು ಪ್ರೇಕ್ಷಕರ ಸಂಖ್ಯೆ ಕೂಡ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇಂದಿನ ದಿನಗಳಲ್ಲಿ ಯಕ್ಷಗಾನ ಅಭಿಮಾನಿಗಳ ಸಂಘ ಕೂಡ ಹೆಚ್ಚಾಗುತ್ತಿರುವುದು ಖುಷಿಯ ವಿಚಾರ.

ಯಕ್ಷಗಾನ ರಂಗದಲ್ಲಿ ನಿಮ್ಮ ಮುಂದಿನ ಯೋಜನೆಯ ಬಗ್ಗೆ ಕೇಳಿದಾಗ:-
ಇನ್ನೂ ನಾನು ಬೆಳೆಯುತ್ತಿರುವ ಪ್ರತಿಭೆ ಅಷ್ಟೇ. ಮುಂದಿನ ದಿನಗಳಲ್ಲಿ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕು ಎನ್ನುವುದು ನನ್ನ ಆಸೆ.

ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. NSS ವತಿಯಿಂದ ನಡೆದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ, ಅದರಲ್ಲಿ ಇವರ ಯಕ್ಷಗಾನ ಕಲೆಯನ್ನು ಗುರುತಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ, ರಾಷ್ಟ್ರ ಮಟ್ಟದ ಶಿಬಿರದಲ್ಲಿ ಇವರ ಯಕ್ಷಗಾನ ನೃತ್ಯಕ್ಕೆ ಪ್ರಥಮ ಸ್ಥಾನವನ್ನು ಸಿಕ್ಕಿರುತ್ತದೆ.
JCI ಸಪ್ತಾಹ 2022 “ಒಡ್ಡೋಲಗ” ಇದರ ಯಕ್ಷಗಾನ ನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸಿಕ್ಕಿರುತ್ತದೆ.

ಹಾಡುವುದು, ಯಕ್ಷಗಾನ, ಏಕಪಾತ್ರಾಭಿನಯ, ಕುಣಿತ ಭಜನೆ ಇವರ ಹವ್ಯಾಸಗಳು.

ನನ್ನ ಯಕ್ಷಗಾನ ಕಲೆಗೆ ಪ್ರೋತ್ಸಾಹಿಸಿದ ಹಾಗೂ ಅವಕಾಶಗಳನ್ನು ಕಲ್ಪಿಸಿಕೊಟ್ಟ ನನ್ನ ತಂದೆ ತಾಯಿಗೆ, ರಾಮಚಂದ್ರ ಭಟ್ ಸರ್, ಸುಜಯೀಂದ್ರ ಹಂದೆ ಸರ್, ಸುಶ್ಮಿತಾ ಸಾಲಿಗ್ರಾಮ ಮೇಡಂ, ರಕ್ಷಿತ್ ರಾವ್ ಗುಜ್ಜಾಡಿ ಸರ್ ಹಾಗೂ LIC ಕೃಷ್ಣ ಖಾರ್ವಿ ಇವರಿಗೆ ಹೃದಯ ಪೂರ್ವಕ ಧನ್ಯವಾದಗಳು ಎಂದು ಹೇಳುತ್ತಾರೆ ಶ್ರೀನಿಧಿ ಖಾರ್ವಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos By:- Raghu Karanth

ಬರಹ:- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.


Share news

Related Articles

Leave a Reply

Your email address will not be published. Required fields are marked *

Back to top button