ಪ್ರತಿಭಾನ್ವೇಷಣೆಲೇಖನ ಸಂಗಮ

“ನಾದ ಮಾಂತ್ರಿಕ ಎನ್.ಜಿ ಹೆಗಡೆ”

Share news

ಯಕ್ಷಗಾನವು ಹಾಡು, ವಾದನ, ನೃತ್ಯ, ವೇಷ, ಅಭಿನಯ, ಮಾತುಗಾರಿಕೆಗಳ ಮಿಶ್ರಣದ ಸಮಷ್ಟಿ ಕಲೆಯಾಗಿದೆ. ಈ ಎಲ್ಲಾ ಅಂಗಗಳೂ ಶಾಸ್ತ್ರದ ಮೇರೆಯೊಳಗಿದ್ದು ಪರಂಪರೆಯುಳ್ಳದ್ದಾಗಿ ಆಕರ್ಷಣೀಯವಾಗಿದೆ. ವಾದನ ವಿಭಾಗದಲ್ಲಿ ಕಾಣಿಸುವುದೇ ಚೆಂಡೆ ಮದ್ದಳೆಯ ನುಡಿತಗಳು. ಗಾಯನ ಮತ್ತು ನರ್ತನಗಳಿಗೆ ಇದು ಪೂರಕವಾಗಿರುತ್ತದೆ. ಯಕ್ಷಗಾನ ಕಲೆಯಲ್ಲಿ ವಾದನ ಕ್ರಮವು ಹೇಗಿರಬೇಕೆಂದು ವಿದ್ವಾಂಸರೂ, ಹಿರಿಯ ಮದ್ದಳೆವಾದಕರೂ ತಿಳಿಸಿರುತ್ತಾರೆ. ಅದೇ ದಾರಿಯಲ್ಲಿ ಸಾಗಬೇಕಾದುದು ಅಭ್ಯಾಸಿಗಳಿಗೆ ಕರ್ತವ್ಯ. ಯಕ್ಷಗಾನದಲ್ಲಿ ಭಾಗವತನೇ ನಿರ್ದೇಶಕ. ಹಾಡುಗಾರಿಕೆಯೇ ಪ್ರಧಾನವು.

ಭಾಗವತನ ಹಾಡುಗಾರಿಕೆಯನ್ನು ಮೆರೆಸುವ ವಾದನ ಕ್ರಮವು ಬೇಕೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹಾಡಿಗಾಗಿ ಮತ್ತು ಕುಣಿತಕ್ಕಾಗಿ ವಾದನವು ಇರುವುದಾದರೂ ಕುಣಿದದ್ದಕ್ಕೆಲ್ಲಾ ಬಾರಿಸಲೂ ಬಾರದು ಎಂದುದನ್ನು ಹಿರಿಯ ವಾದಕರು ಹೇಳಿರುತ್ತಾರೆ. ಚೆಂಡೆ ಮದ್ದಲೆಗಳ ನುಡಿತಗಳು ಅತ್ಯಂತ ಸ್ಪಷ್ಟವಾಗಿರಬೇಕು. ವೇಗದ ಅವಸರದಲ್ಲಿ ಸ್ಪಷ್ಟತೆಗೆ ತೊಡಕಾಗಬಾರದು ಎಂಬ ವಿಚಾರವನ್ನೂ ಹೇಳಿರುತ್ತಾರೆ. ಹೀಗೆ ಸಾಗಿಬಂದ ಅನೇಕರು ಖ್ಯಾತ ಮದ್ದಳೆಗಾರರಾಗಿ ಪ್ರಸಿದ್ಧರಾದರು. ಪ್ರಸ್ತುತ ಅದೇ ದಾರಿಯಲ್ಲಿ ಸಾಗುತ್ತಾ ಕಲಾ ವ್ಯವಸಾಯವನ್ನು ಮಾಡುತ್ತಿರುವ ಮದ್ದಳೆಗಾರರಲ್ಲಿ ಶ್ರೀ ನಾರಾಯಣ ಗೋಪಾಲ ಹೆಗಡೆ (ಎನ್. ಜಿ ಹೆಗಡೆ)  ಅವರನ್ನೂ ಗುರುತಿಸಬಹುದು.

೩೦.೦೫.೧೯೭೯ ರಂದು ಶ್ರೀಮತಿ ನಾಗವೇಣಿ ಹಾಗೂ ಶ್ರೀಯುತ ಗೋಪಾಲ ಹೆಗಡೆ ಇವರ ಮಗನಾಗಿ ಜನನ. ೭ ನೇ ತರಗತಿ ವರೆಗೆ ವಿದ್ಯಾಭ್ಯಾಸ. ಶ್ರೀಯುತ ಶಂಭು ಹೆಗಡೆ ಕೆರೆಮನೆ, ವಿದ್ವಾನ್ ಗಣಪತಿ ಭಟ್, ಎ.ಪಿ ಪಾಟಕ್, ಹೆರಂಜಾಲು ಗೋಪಾಲ ಗಾಣಿಗ ಇವರ ಯಕ್ಷಗಾನದ ಗುರುಗಳು. ಯಕ್ಷಗಾನ ರಂಗದಲ್ಲಿ ಒಟ್ಟು ೨೪ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಒಂದೊಂದು ವಿಷಯದಲ್ಲಿ ಒಬ್ಬೊಬ್ಬ ಭಾಗವತರು, ಚೆಂಡೆ ಮದ್ದಳೆ ಹಾಗೂ ವೇಷಧಾರಿಗಳು ಇಷ್ಟ ಎಂದು ಹೇಳುತ್ತಾರೆ ಹೆಗಡೆಯವರು.

ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-
ಯಕ್ಷಗಾನದ ಇಂದಿನ ಸ್ಥಿತಿ ಉತ್ತಮವಾಗಿದೆ. ಬಹುತೇಕ ಪ್ರೇಕ್ಷಕರು ಇಡೀ ರಾತ್ರಿ ಆಟ ನೋಡುವ ಮನಸ್ಥಿತಿ ಇಲ್ಲದಿರುವುದರಿಂದ ಸಮಯ ಮಿತಿ ಪ್ರದರ್ಶನಗಳು ನಡೆಯುತ್ತಿದೆ ಹಾಗೂ ಇತ್ತೀಚೆಗೆ ಮಕ್ಕಳು, ಯುವ ಪ್ರೇಕ್ಷಕರು ಯಕ್ಷಗಾನದ ಕಡೆಗೆ ವಾಲುತ್ತಿರುವುದು ಯಕ್ಷಗಾನಕ್ಕೆ ಪೂರಕ ಬೆಳವಣಿಗೆ. ಅನೇಕ ಯುವಕರು ಯಕ್ಷಗಾನಕ್ಕೆ ಮಾರುಹೋಗಿ, ಅಭಿಮಾನಿಗಳಾಗುತ್ತಿರುವುದು ಸಂತಸದ ವಿಷಯ. ಕೇವಲ‌ ಮನರಂಜನೆಗೆ ಇಟ್ಟುಕೊಳ್ಳದೇ, ಇಲ್ಲಿ ಸಿಗುವ ಅನೇಕ ವಿಚಾರಾನುಭವಗಳಿಂದ ಸ್ವಾಸ್ಥ್ಯ ಪ್ರಪಂಚದಲ್ಲಿ ಶಿಷ್ಟ ಕಲೆಯ ಮಹತ್ವ ಹೆಚ್ಚುವಂತೆ ಮಾಡಿದರೆ ಒಳ್ಳೆಯದು.

ಯಕ್ಷಗಾನ ರಂಗದ ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-
♦ ಯಕ್ಷಗಾನದ ಸಾಂಪ್ರದಾಯಿಕತೆಗೆ ಪ್ರಾಶಸ್ತ್ಯ ನೀಡಿ ಅದರಂತೇ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದು.
♦ಪೂರ್ವ ರಂಗ, ವಿವಿಧ ಒಡ್ಡೋಲಗಗಳು, ಕುಣಿತಗಳು, ಪ್ರವೇಶ ನಾಟ್ಯಗಳನ್ನು ಮತ್ತೆ ರಂಗದಲ್ಲಿ ಪ್ರದರ್ಶಿಸುವಂತೆ ತರಬೇತಿ ನೀಡುವುದು.
♦ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಯಕ್ಷಗಾನ ತರಬೇತಿ ಜೊತೆಗೆ ಯಕ್ಷಗಾನ ಕಲೆಯ ಆಸಕ್ತಿಯನ್ನು ಮೂಡಿಸುವುದು.
♦ ಹಿರಿಯ ಕಲಾವಿದರಿಂದ ನಮ್ಮ ವಿದ್ಯಾರ್ಥಿಗಳಿಗೆ ವಿಶೇಷವಾದ ತರಬೇತಿಗಳನ್ನು ಏರ್ಪಡಿಸುವುದು.
♦ ಪ್ರವಾಸಗಳ ಮೂಲಕ ಹಿರಿಯ ಕಲಾವಿದರ ಮನೆಗೆ ಭೇಟಿ ಕೊಟ್ಟು ಅವರಿಂದ ವಿದ್ಯಾರ್ಥಿಗಳಿಗೆ ಅನುಭವ ದೊರೆಯುವಂತೆ ಮಾಡುವುದು.
♦ ನಿವೃತ್ತ ಕಲಾವಿದರಿಗೆ ನಮ್ಮ ಸಂಸ್ಥೆಯಿಂದ ಧನಸಹಾಯವನ್ನು ಮಾಡುವುದು.
♦ ನಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ಕಿರಿಯ ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ಕೊಡಿಸುವುದು.
♦ ಕಮ್ಮಟ, ಕಾರ್ಯಗಾರಗಳ ಮೂಲಕ ಯಕ್ಷಗಾನೇತರ ಕಲಾ ಪ್ರೇಕ್ಷಕರರಲ್ಲಿ ಯಕ್ಷಗಾನದ ಒಲವು ಮೂಡಿಸುವುದು.
♦ ವಿಕಲಚೇತನರು, ಅಂಧರು ಮುಂತಾದವರಿಗೆ ಅವರ ಸಾಧ್ಯತೆಗಳನ್ನು ನೋಡಿ ಯಕ್ಷಗಾನವನ್ನು ಕಲಿಸುವುದು.

ಇಡಗುಂಜಿ, ಕಮಲಶಿಲೆ, ಸಾಲಿಗ್ರಾಮ, ಜಲವಳ್ಳಿ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಮಂದಾರ್ತಿ ಮೇಳದಲ್ಲಿ ಸೇವೆಯನ್ನು ಮಾಡುತ್ತಿದ್ದಾರೆ.
ಅನೇಕ ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ಗುರುತಿಸಿ ಸನ್ಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ನನಗೆ ಗೊತ್ತಿರುವ ವಿಷಯವನ್ನು ಬೇರೆಯವರಿಗೆ ಹೇಳಿಕೊಡುವುದೇ ಹವ್ಯಾಸ ಎಂದು ಹೇಳುತ್ತಾರೆ ಹೆಗಡೆಯವರು.

ನಾರಾಯಣ ಗೋಪಾಲ ಹೆಗಡೆ ಅವರು ಮಂಜುಳಾ ಅವರನ್ನು  ಮದುವೆಯಾಗಿ ಮಗ ಸಾಕೇತ್ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos by:- YakshaPrasanna, Sgbhagwat click.
ಶ್ರವಣ್ ಕಾರಂತ್ ಕೆ


Share news

Related Articles

Leave a Reply

Your email address will not be published. Required fields are marked *

Back to top button