ಆರೋಗ್ಯಲೇಖನ ಸಂಗಮ
Trending

ಎಕ್ಕವೆಂಬ ಮನೆ ಮುಂದಿರುವ ದಿವ್ಯ ಔಷಧಿ

Share news

ಪ್ರಕೃತಿಯಲ್ಲಿ ಹಲವಾರು ಕೌತುಕಗಳಿವೆ. ವೈವಿಧ್ಯಮಯ ಜೀವರಾಶಿಗಳು ಹಾಗೂ ಮರಗಿಡಗಳಿವೆ. ಮರಗಿಡಗಳ ಪೈಕಿ ಕೆಲವೊಂದು ಮನುಷ್ಯನಿಗೆ ಬಹಳಷ್ಟು ಉಪಕಾರಿಯಾಗಿದ್ದುಕೊಂಡು ಔಷಧೀಯ ಗುಣವನ್ನೂ ನೀಡುತ್ತದೆ. ದಿನಬೆಳಗಾದ್ರೆ ನಾವೆಲ್ಲರೂ ನಿತ್ಯ ನೋಡುವ ಗಿಡವೊಂದು ಅದ್ಭುತವನ್ನು ಸೃಷ್ಟಿಸುತ್ತದೆಯೆಂದರೆ ನಂಬಲೇಬೇಕು.
ಅದರ ಹೂವು ಎಲೆ ಬೇರುಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಈ ಗಿಡಕ್ಕೆ ೧೦-೧೫ ವರ್ಷ ತುಂಬಿ ಬೆಳೆದು ನಿಂತಾಗ ಇದರ ಬೇರಿನಲ್ಲಿ ಗಣೇಶನ ಮೂರ್ತಿಗಳು ಪ್ರಾಕೃತಿಕವಾಗಿ ರೂಪುಗೊಳ್ಳುತ್ತವೆಯಂತೆ. ಅದನ್ನು ಜತನದಿಂದ ಹೆಕ್ಕಿ ತೆಗೆದು ಮನೆಯಲ್ಲಿಟ್ಟು ಪೂಜೆ ಮಾಡಿದಲ್ಲಿ ಅದು ಸಕಲ ಸಂಕಷ್ಟಗಳ ನಿವಾರಣೆ ಮಾಡುತ್ತದೆಯೆಂಬ ಪ್ರತೀತಿ ಹಾಗೂ ನಂಬಿಕೆಯೂ ಈ ಗಿಡದ ಬಗ್ಗೆ ಇದೆ. ಆಯುರ್ವೇದವಷ್ಟೇ ಅಲ್ಲದೆ ಜ್ಯೋತಿಷ್ಯದಲ್ಲೂ ಪ್ರಾಮುಖ್ಯತೆಯನ್ನು ಹೊಂದಿದೆ.ಅದುವೇ ಎಕ್ಕದ ಗಿಡ.

ಹಳ್ಳಿಗಳಿಗಷ್ಟೇ ಸೀಮಿತವಾಗಿ ಹೆಚ್ಚು ಪರಿಚಿತವಾಗಿದ್ದ ಈ ಗಿಡ ಇಂದು ಪಟ್ಟಣಗಳ ಬಾಲ್ಕನಿಗಳಲ್ಲೂ ಜಾಗವನ್ನು ಪಡೆದುಕೊಂಡು ರಾರಾಜಿಸುತ್ತಿವೆ. ಹಳ್ಳಿಗಳಲ್ಲಿ ಓಡಾಡುವಾಗ ಕಾಲಿಗೆ ಮುಳ್ಳೇನಾದರೂ ಚುಚ್ಚಿಕೊಂಡರೆ ತಕ್ಷಣ ಮಾಡುವ ಕೆಲಸವೇ ಈ ಗಿಡದ ಹಾಲನ್ನು ಮುಳ್ಳು ಚುಚ್ಚಿದ ಜಾಗಕ್ಕೆ ಹಚ್ಚುವುದು. ಹಚ್ಚಿದ ಕೆಲವೇ ಗಂಟೆಗಳಲ್ಲಿ ಕಾಲಿನಲ್ಲಿದ್ದ ಮುಳ್ಳು ಹೊರಬರುತ್ತದೆ. ಇದು ಎಕ್ಕದ ಗಿಡ. ಎಕ್ಕದ ಗಿಡ ಎಕ್ಕೆ ಗಿಡ ಬಿಳಿ ಎಕ್ಕವೆಂಬ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಈ ಗಿಡ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಹೊಲಗಳಲ್ಲಿ ಕಾಣಿಸುತ್ತದೆ. ಅದರಲ್ಲೂ ಈ ಬಿಳಿ ಎಕ್ಕದ ಹೂವಿಗೆ ಹಾಗೂ ಹೂವಿನ ಹಾರಕ್ಕೆ ಶಿವಾಲಯಗಳಲ್ಲಿ ಬಹು ಬೇಡಿಕೆ. ಗಣಪತಿ ದೇವಸ್ಥಾನಕ್ಕೆ ಹೋಗುವವರು, ಆಂಜನೇಯನಿಗೆ ಪೂಜೆ ಸಲ್ಲಿಸುವರು ಎಕ್ಕದ ಹೂವಿನ ಹಾರವನ್ನು ತೆಗೆದುಕೊಂಡು ಹೋಗುತ್ತಾರೆ. ಕನಿಷ್ಟಪಕ್ಷ ಒಂದೆರಡು ಹೂವನ್ನಾದರು ದೇವರಿಗೆ ಇಡುವುದು ಆಚಾರ.

ಎಕ್ಕದಗಿಡದ ಎಲೆ ಡಯಾಬಿಟಿಸ್ ಕಡಿಮೆ ಮಾಡುತ್ತದೆಯೆಂದು ಹೇಳಲಾಗುತ್ತದೆ. ಎಕ್ಕದ ಗಿಡದ ಎಲೆಯ ಅಡಿ ಭಾಗ ಪಾದದ ಕೆಳಗೆ ಬರುವಂತೆ ಇಟ್ಟು ಅದರ ಮೇಲೆ ಕಾಲು ಚೀಲವನ್ನು ಹಾಕಿ ಬೆಳಗಿನಿಂದ ಸಂಜೆಯವರೆಗೂ ಇರಬೇಕು. ನಂತರ ಎಲೆಯನ್ನು ತೆಗೆದರೆ ಅದು ಮನುಷ್ಯನ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆಯೆಂದು ಹೇಳಲಾಗುತ್ತದೆ. ಇದೇ ರೀತಿ ನಿರಂತರವಾಗಿ ೩-೪ ತಿಂಗಳು ಮಾಡಿದರೆ ಮಧುಮೇಹ ಗಣನೀಯವಾಗಿ ನಿಯಂತ್ರಣಕ್ಕೆ ಬರುತ್ತದೆಯೆಂದು ತಿಳಿದುಬಂದಿದೆ. ಇನ್ನು ಎಕ್ಕದ ಗಿಡದ ಬೇರಿನ ರಸವನ್ನು ವಿಷ ಜಂತುಗಳು ಕಡಿದಾಗ ಬಳಸಲಾಗುತ್ತದೆ. ವಿಷಯುಕ್ತ ಚೇಳುಗಳು ಕಚ್ಚಿದಾಗ ಎಕ್ಕದ ಬೇರನ್ನು ಅರಿಶಿನದೊಂದಿಗೆ ಸ್ವಲ್ಪ ನೀರಿನಲ್ಲಿ ತೇಯ್ದು ಸೇವಿಸಿದರೆ ವಿಷದ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

ಬಂಗು ಎಂಬ ಮುಖದ ಮೇಲೆ ಹಾಗೂ ಮೈಕೈಗಳ ಮೇಲೆ ಕಪ್ಪುಕಲೆ ಆಗುವ ಸಮಸ್ಯೆಗೆ ಎಕ್ಕದ ಎಲೆಯು ರಾಮಬಾಣ. ಈ ಗಿಡದ ಬೇರನ್ನು ಸ್ವಲ್ಪ ನಿಂಬೆ ರಸದಲ್ಲಿ ಅರಿಶಿಣದೊಂದಿಗೆ ತೇಯ್ದು ಬಂಗು ಇರುವ ಜಾಗಕ್ಕೆ ಹಚ್ಚಿದರೆ ಕಾಲಕ್ರಮೇಣ ಬಂಗು ನಿವಾರಣೆಯಾಗುತ್ತದೆ. ಮೂಲವ್ಯಾಧಿಗೂ ಎಕ್ಕದ ಗಿಡವನ್ನು ಔಷಧವಾಗಿ ಬಳಸಲಾಗುತ್ತದೆ. ಮೂಲವ್ಯಾಧಿ ಮೊಳಕೆ ಇರುವ ಜಾಗಕ್ಕೆ ಎಕ್ಕದ ಎಲೆಯ ಹಾಲನ್ನ ಹಚ್ಚುವುದರಿಂದ ಮೂಲವ್ಯಾಧಿಯೂ ಶಮನವಾಗುತ್ತದೆ. ಮಂಡಿನೋವು ಮತ್ತು ಕಾಲು ನೋವಿರುವವರು ಎಕ್ಕದ ಗಿಡದ ಎಲೆಯನ್ನು ಕೆಂಡದಲ್ಲಿ ಸುಟ್ಟು ಅದನ್ನು ನೋವಿರುವ ಜಾಗಕ್ಕೆ ಕಟ್ಟಿದರೆ ಶೀಘ್ರವಾಗಿ ನೋವು ನಿವಾರಣೆಯಾಗುತ್ತದೆ. ಆಯುರ್ವೇದದಲ್ಲಿ ಸಾಕಷ್ಟು ಬಳಕೆಯಲ್ಲಿರುವ ಈ ಗಿಡ ಮನೆ ಔಷಧವೆಂದೇ ಪರಿಗಣಿಸಲ್ಪಟ್ಟಿದೆ. ಯಾವುದೇ ರೋಗಕ್ಕೂ ಔಷಧಿಗಳು ಕೆಲಸ ಮಾಡದೆ ಇದ್ದರೆ ಎಕ್ಕದ ಗಿಡವನ್ನು ಅಂತಿಮವಾಗಿ ಬಳಸಿರೆಂದು ಆಯುರ್ವೇದವದಲ್ಲಿ ಹೇಳಲಾಗಿದೆ. ಎಕ್ಕವು ವಿವಿಧ ರೋಗಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇನ್ನು ಎಕ್ಕದ ಗಿಡದ ಬೇರಿನಿಂದ ತಯಾರಿಸಲಾದ ಗಣಪತಿ ಪ್ರತಿಮೆಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ.ಇದರಿಂದಾಗಿಯೇ ಎಕ್ಕದ ಗಿಡದ ಅಡಿಯಿಂದ ಮುಡಿಯವರೆಗೂ ಬಹೂಪಯೋಗಕಾರಿಯೇ ಎನ್ನಬಹುದು.

ಬಿಳಿ ಎಕ್ಕದ ಗಿಡವು ಭಾರತದ ಎಲ್ಲಾ ವಿಧದ ಹವಾಮಾನಗಳ ಪ್ರದೇಶಗಳಲ್ಲೂ ಚೆನ್ನಾಗಿ ಬೆಳೆಯುತ್ತವೆ. ಆದರೆ ಪುರಾತನವಾದ ಗಿಡವು ಇಂದು ವಿನಾಶದೆಡೆಗೆ ಸಾಗುತ್ತಿದೆ. ಎಕ್ಕ ಗಿಡದಲ್ಲಿ ಗುಲಾಬಿ, ನೀಲಿ ಬಣ್ಣದ ಹೂಗಳಿರುವಂತಹ ಸಸ್ಯಗಳು ಎಲ್ಲಾ ಕಡೆಗಳಲ್ಲಿ ಸಿಗುತ್ತವೆ. ಆದರೆ ಬಿಳಿ ಬಣ್ಣದ ಹೂವಿರುವ ಎಕ್ಕದ ಗಿಡ ಸಿಗುವುದು ಬಹಳ ವಿರಳ. ಇದನ್ನು ಶ್ವೇತಾರ್ಕವೆಂದೂ ಕರೆಯುತ್ತಾರೆ. ಈ ಗಿಡವು ೫ ರಿಂದ ೭ ಅಡಿಎತ್ತರವಾಗಿ, ೪ ರಿಂದ
೫ ಅಡಿ ವಿಸ್ತಾರವಾಗಿ ಸುತ್ತಲೂ ಹರಡಿಕೊಂಡು ಮಂದೆಯಾಗಿ ಬೆಳೆಯುತ್ತವೆ. ಈ ಸಸ್ಯಕ್ಕೆ ಬಲಿಷ್ಠವಾದ ಟೊಂಗೆಗಳಿದ್ದು, ವಟವೃಕ್ಷದ ಎಲೆಗಳಂತೆ ಎಲೆಗಳಿರುತ್ತದೆ. ಗಿಡದ ಕಾಂಡ ಮತ್ತು ಎಲೆಗಳಿಗೆ ಗಾಯವಾದರೆ ಬಿಳಿ
ಹಾಲಿನಂತ ದ್ರಾವಣ ಸುರಿಯುತ್ತದೆ. ಶುಭ್ರ ಹಾಲಿನ ಬಣ್ಣದ ಹೂಗಳಿದ್ದು, ಇದರ ಬೀಜಗಳು ಅಗಸೇ ಗಿಡದ ಬೀಜಗಳಂತಿರುತ್ತವೆ. ಭಾರತದಲ್ಲಿ ಅನೇಕ ರೀತಿಯಲ್ಲಿರುವ ಎಕ್ಕ ಸಸ್ಯಗಳನ್ನು ಕಾಣಬಹುದಾಗಿದ್ದರೂ ಬಹುತೇಕ ನೀಲಿ ಬಣ್ಣದಲ್ಲಿರುವುವು. ಕೆಲವು ಕಂದು ಬಣ್ಣದಲ್ಲಿರುತ್ತವೆ. ಎಕ್ಕ ಗಿಡಕ್ಕೆ ಸಸ್ಯಗಳಲ್ಲಿಯೇ ವಿಶೇಷವಾದ ಸ್ಥಾನವಿದ್ದು, ಕನಿಷ್ಠ ೨೭ ವರ್ಷಗಳಷ್ಟು ಹಳೆಯದಾದ ಎಕ್ಕ ಗಿಡಕ್ಕೆ ತಾಂತ್ರಿಕ ಪ್ರಯೋಗದಲ್ಲಿ ಅತ್ಯಂತ ಮಹತ್ವವಿರುವುದು. ಪಕ್ವಗೊಂಡ ಎಕ್ಕದ ಗಿಡದ ಬೇರುಗಳಲ್ಲಿ ಗಣೇಶನ ಮೂರ್ತಿಗಳು ನಿರ್ಮಾಣಗೊಳ್ಳುತ್ತವೆಯೆಂದು ಹಿರಿಯರು ಹೇಳುತ್ತಾರೆ.

ಇದೊಂದು ಪ್ರಕೃತಿಯ ಆಶ್ಚರ್ಯವೆಂದರೆ ತಪ್ಪಿಲ್ಲ. ಈ ರೀತಿಯ ಎಕ್ಕದ ಬೇರನ್ನು ಪಡೆಯಲು ೫೬ ಅಡಿಗಳಷ್ಟು ನೆಲವನ್ನು ಅಗೆದು ತೆಗೆಯಬೇಕಾಗುವುದು. ಹಿಂದಿನ ಕಾಲದಲ್ಲಿ ಸಿದ್ಧರು ತಾವು ಅನೇಕ ಬಿಳಿ ಎಕ್ಕ ಮೂರ್ತಿಗಳನ್ನು ಸಂಪಾದಿಸಿ ಸಂಗ್ರಹಿಸಿಡುತ್ತಿದ್ದರು. ತಮ್ಮ ಚೀಲಗಳಲ್ಲಿಟ್ಟು ಬೇರೆ ಬೇರೆ ಊರುಗಳಿಗೆ ಹೋಗುವಾಗ ಸತ್ಪಾತ್ರರಿಗೆ ಅದನ್ನು ಪ್ರಸಾದಿಸುತ್ತಿದ್ದರು. ಈ ರೀತಿಯ ಮಹಿಮೆಯನ್ನು ಇಂದು ವಿರಳವಾಗಿ ಕಾಣಬಹುದಾಗಿದೆ. ಅತಿ ಹಳೆಯ ಎಕ್ಕ ಗಿಡದ ಬೇರನ್ನು ತೆಗೆಯಲು ತುಂಬಾ ಆಳವಾಗಿ ಅಗೆಯಬೇಕಾಗಿದ್ದು, ಗುದ್ದಲಿಯನ್ನು ಬಳಸಿ ಈ ಗಣಪತಿಯ ಮೂರ್ತಿಯನ್ನು ಎಚ್ಚರಿಕೆಯಿಂದಲೇ ಹೊರಗೆ ತೆಗೆಯಬೇಕು. ಗಿಡದ ವಯಸ್ಸು ಹೆಚ್ಚುತ್ತಾ ಹೋದಂತೆ ಗಣಪತಿಯ ಮೂರ್ತಿಗಳು ಅತಿ ಕಡಿಮೆ ಸಂಖ್ಯೆಯಲ್ಲಿ ಸಿಗುತ್ತದೆ.

ಪ್ರಕೃತಿಯ ಅದ್ಭುತ ಸೃಷ್ಟಿಯಲ್ಲೊಂದಾಗಿರುವ ಎಕ್ಕದ ಗಿಡವು ಆಯುರ್ವೇದೀಯ ಗುಣ ಹಾಗೂ ವೈದಿಕ ಅಂಶಗಳ ಕಾರಣದಿಂದ ಪವಿತ್ರವಾದ ಸ್ಥಾನವನ್ನು ಪಡೆದಿದೆ. ಇಂತಹ ಅಪೂರ್ವವಾದ ಸಸ್ಯವನ್ನು ಮನೆ ಮನೆಗಳಲ್ಲಿ ಬೆಳೆಸಿ ಇದರ ಸಂತತಿಯು ವಿನಾಶದೆಡೆಗೆ ಸಾಗದಂತೆ ಕಾಳಜಿವಹಿಸುವುದರೊAದಿಗೆ ಈ ಗಿಡದ ಆಯುರ್ವೇದೀಯ ಅಂಶ ಹಾಗೂ ಔಷಧೀಯ ಗುಣವನ್ನು ಯುವ ಪೀಳಿಗೆಗೂ ಪರಿಚಯಿಸಬೇಕಿದೆ.

ಲೇಖನ:
ಸಂತೋಷ್ ರಾವ್ ಪೆರ್ಮುಡ


Share news

Related Articles

Leave a Reply

Your email address will not be published. Required fields are marked *

Back to top button