ಆರೋಗ್ಯಲೇಖನ ಸಂಗಮ

ಬಾಯಾರಿಕೆ ನೀಗುವ ಕಲ್ಲಂಗಡಿ ಹಣ್ಣಿನ ಆರೋಗ್ಯ ಪುರಾಣ

Share news

ದಿನದಿಂದ ದಿನಕ್ಕೆ ಬಿಸಿಲಿನ ಶಾಖ ಹೆಚ್ಚಾಗುತ್ತಿದೆ. ನೆತ್ತಿ ಸುಡುವ ಬಿಸಿಲಿನ ಪರಿಣಾಮದಿಂದಾಗಿ ಮನೆಯ ಹೊರಗೆ ಕಾಲಿಡಲು ಸಾಧ್ಯವಾಗದಂತಹ ಪರಿಸ್ಥಿತಿ. ಬಿಸಿಲಿನ ಝಳ ಎಷ್ಟಿದೆ ಎಂದರೆ ನೀರು ಕುಡಿದಷ್ಟು ಮತ್ತಷ್ಟು ಕುಡಿಯೋಣ ಎಂದೆನಿಸುತ್ತದೆ. ಕ್ಷಣಮಾರ್ಧದಲ್ಲಿ ಗಂಟಲಿನ ಪಸೆ ಮಾಯವಾಗುತ್ತದೆ. ಇಂತಹ ಬಿರುಬೇಸಗೆಯ ಸಮಯದಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆ ಮಾಡಿದರೆ ದೇಹಕ್ಕೆ ಹಿತ ಎಂದೆನಿಸುವುದರಲ್ಲಿ ಎರಡು ಮಾತಿಲ್ಲ!

ರುಚಿರುಚಿಯಾಗಿರುವ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಬಾಯಾರಿಕೆಯು ನೀಗುವುದಲ್ಲದೇ ಆರೋಗ್ಯವನ್ನು ಕೂಡಾ ವೃದ್ಧಿಸುತ್ತದೆ. ಅಧಿಕ ನೀರಿನ ಪ್ರಮಾಣವನ್ನು ಒಳಗೊಂಡಿರುವ ಕಲ್ಲಂಗಡಿ ಹಣ್ಣಿನ ಸೇವನೆಯಿಂದ ದೇಹಕ್ಕೆ ಅಗತ್ಯವಿರುವಂತಹ ಪೋಷಕಾಂಶಗಳು ಕೂಡಾ ಸಿಗುತ್ತದೆ.

ಆಫ್ರಿಕಾ ಮೂಲದ ಕಲ್ಲಂಗಡಿ ಹಣ್ಣು ಕುಕರ್ಬಿಟೇಸಿಯಿ ಕುಟುಂಬಕ್ಕೆ ಸೇರಿದೆ. ನೆಲದ ಮೇಲೆ ಅಗಲವಾಗಿ ಹರಡಿಕೊಂಡು ಬೆಳೆಯುವ ಈ ಹಣ್ಣನಲ್ಲಿ 92% ನೀರಿನ ಅಂಶವಿದೆ. ಬಳಲಿದ ದೇಹಕ್ಕೆ ಶಕ್ತಿ ನೀಡುವ ಕಲ್ಲಂಗಡಿ ಹಣ್ಣು ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾಲ್ಸಿಯಂ, ಮ್ಯಾಂಗನೀಸ್, ಸಸಾರಕನಕ, ಕಬ್ಬಿಣ, ವಿಟಮಿನ್ ಸಿ ಮುಂತಾದ ಪೋಷಕಾಂಶಗಳ ಆಗರವಾಗಿರುವ ಕಲ್ಲಂಗಡಿ ಹಣ್ಣು ಕಾಮಾಲೆ ರೋಗಕ್ಕೆ ಉತ್ತಮ ಮದ್ದು ಹೌದು. ಬಾಯಾರಿಕೆಯ ಜೊತೆಗೆ ದೇಹದಲ್ಲಿನ ಉರಿ ಕಡಿಮೆಗೊಳಿಸಲು ಬಳಸುವ ಇದು ಕಿಡ್ನಿಯನ್ನು ಆರೋಗ್ಯವಾಗಿಡಲು ಸಹಕಾರಿ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುವ ಕಲ್ಲಂಗಡಿ ಹಣ್ಣಿಗೆ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಶಕ್ತಿಯಿದೆ. ಇನ್ನು ಇದರಲ್ಲಿ ಫಾಲಿಕ್ ಆ್ಯಸಿಡ್ ಅಧಿಕವಾಗಿರುವುದರಿಂದ ಗರ್ಭಿಣಿಯರು ಮರೆಯದೇ ತಿನ್ನಬೇಕು.

ಎಲ್ಲದಕ್ಕಿಂತ ಮುಖ್ಯವಾಗಿ ಖನಿಜಾಂಶಗಳ ಆಗರವಾಗಿರುವ ಈ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಪೋಷಕಾಂಶದ ಕೊರತೆ ಉಂಟಾಗದಂತೆ ನೋಡಿಕೊಳ್ಳಬಹುದು. ಇದರಲ್ಲಿರುವ ಪ್ರತ್ಯಾಮ್ಲಗಳು ದೇಹಕ್ಕೆ ಹಾನಿಯನ್ನುಂಟು ಮಾಡುವ ಬೇಡದ ರಾಸಾಯನಿಕಗಳನ್ನು ಹೊರಹಾಕುತ್ತದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೂ ಉತ್ತಮವಾದುದು


Share news

Related Articles

Leave a Reply

Your email address will not be published. Required fields are marked *

Back to top button