ಲೇಖನ ಸಂಗಮಸಿನಿ ವಿಹಾರ

ರವಿಕೆ ಪ್ರಸಂಗದ ಮೂಲಕ ರಂಜಿಸಲಿದ್ದಾರೆ ಕಿರುತೆರೆಯ ಗುಂಡಮ್ಮ

Share news

ಜೀ ಕನ್ನಡ ವಾಹಿನಿಯಲ್ಲಿ ಶ್ರುತಿ ನಾಯ್ಡು ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ “ಬ್ರಹ್ಮಗಂಟು” ಧಾರಾವಾಹಿಯಲ್ಲಿ ನಾಯಕಿ ಗೀತಾ ಆಲಿಯಾಸ್ ಗುಂಡಮ್ಮ ಆಗಿ ಅಭಿನಯಿಸಿ ಸೀರಿಯಲ್ ಪ್ರಿಯರ ಮನ ಸೆಳೆದ ಗೀತಾಭಾರತಿ ಭಟ್ ಮೂಲತಃ ಕಾರ್ಕಳದವರು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ಅಭಿನಯಿಸುವ ಸುವರ್ಣಾವಕಾಶ ಪಡೆದುಕೊಂಡಿರುವ ಗೀತಾಭಾರತಿ ಭಟ್ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನೆ ಮಾತಾದ ಬೆಡಗಿ.

ನಾಲ್ಕು ವರ್ಷಗಳ ಕಾಲ ಗುಂಡಮ್ಮ ನಾಗಿ ನಟಿಸಿ ಕರುನಾಡಿನಾದ್ಯಂತ ಮನೆ ಮಾತಾಗಿದ್ದ ಗೀತಾಭಾರತಿ ಭಟ್ ಜೀ ಕುಟುಂಬ ಅವಾರ್ಡ್ಸ್ ನಲ್ಲಿ “ಮನೆ ಮೆಚ್ಚಿದ ಸೊಸೆ” ಪ್ರಶಸ್ತಿಯನ್ನು ಪಡೆದುಕೊಂಡ ಬೆಡಗಿ. ಬ್ರಹ್ಮಗಂಟು ಧಾರಾವಾಹಿಯ ನಂತರ ರಿಯಾಲಿಟಿ ಶೋ ಕಡೆಗೆ ಮುಖ ಮಾಡಿದ ಗುಂಡಮ್ಮ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟರು.

ತಮ್ಮ ನಡೆ, ನುಡಿಯ ಮೂಲಕ ಕಿರುತೆರೆ ವೀಕ್ಷಕರಿಗೆ ಮಗದಷ್ಟು ಹತ್ತಿರವಾದ ಗೀತಾ ಭಾರತಿ ಭಟ್ ಅವರ ನಟನಾ ಪ್ರತಿಭೆ ಕೇವಲ ಕಿರುತೆರೆಗಷ್ಟೇ ಸೀಮಿತವಲ್ಲ. ಬದಲಿಗೆ ಹಿರಿತೆರೆಯಲ್ಲಿಯೂ ಆಕೆ ನಟನಾ ಕಂಪನ್ನು ಪಸರಿಸಿ ಸೈ ಎನಿಸಿಕೊಂಡಿದ್ದಾರೆ.

ಗಗನ್ ಎಂ ನಿರ್ದೇಶನದ ‘ಮಂಕು ಬಾಯ್ ಫ್ಯಾಕ್ಸಿ ರಾಣಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಹಾರಿದ್ದಾರೆ ಕಿರುತೆರೆಯ ಗುಂಡಮ್ಮ. ಈ ಸಿನಿಮಾವೂ ಇದೇ ವರುಷ ಜನವರಿಯಂದು ಬಿಡುಗಡೆಯಾಗಿದ್ದು “ಈ ಸಿನಿಮಾ ನನ್ನ ಪಾಲಿಗೆ ತುಂಬಾ ಸ್ಪೆಷಲ್. ಯಾಕೆಂದರೆ ಇದು ನಾನು ನಾಯಕಿಯಾಗಿ ಅಭಿನಯಿಸಿದ ಮೊದಲ ಸಿನಿಮಾ. ಸಿನಿಮಾದ ಶೂಟಿಂಗ್ ಅನುಭವವೂ ಕೂಡಾ ಸೊಗಸಾಗಿತ್ತು. ಆದರೆ ಶೂಟಿಂಗ್ ಆಗುತ್ತಿರುವ ಸಮಯದಲ್ಲಿ ನನಗೆ ಮಂಗಳೂರು ಕನ್ನಡ ಮಾತನಾಡಲು ಕಷ್ಟವಾಗುತ್ತಿತ್ತು. ಸಿನಿಮಾದ ಪಾತ್ರಕ್ಕಾಗಿ ಮಂಗಳೂರು ಕನ್ನಡ ಕಲಿಯಲಾರಂಭಿಸಿದೆ. ಶೂಟಿಂಗ್ ಮುಗಿಯುವ ಸಮಯದಲ್ಲಿ ಸರಿಯಾಗಿ ಮಂಗಳೂರು ಕನ್ನಡ ಮಾತನಾಡಲು ಕಲಿತೆ” ಎಂದು ಹೇಳಿಕೊಂಡಿದ್ದರು ಗೀತಾ ಭಾರತಿ ಭಟ್.

ಇದರ ಜೊತೆಗೆ ಸಂತೋಷ್ ಕೊಡಂಕೇರಿ ನಿರ್ದೇಶನದ “ರವಿಕೆ ಪ್ರಸಂಗ” ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಗೀತಾಭಾರತಿ ಭಟ್. ಈಗಾಗಲೇ ಸಿನಿಮಾದ ಟ್ರೈಲರ್ ಕೂಡಾ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮನ ಸೆಳೆದಿದೆ. ರವಿಕೆ ಪ್ರಸಂಗದ ಕುರಿತು ಮಾತನಾಡಿದ ಗುಂಡಮ್ಮ “ಈ ಸಿನಿಮಾದ ಕಥೆ ನನಗೆ ತುಂಬಾ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ರವಿಕೆ ಮೇಲೆ ವಿಶೇಷ ಪ್ರೀತಿ. ರವಿಕೆಯ ಅಳತೆ, ಡಿಸೈನ್ ಸರಿಯಾಗಿರಬೇಕು ಎಂದು ಟೈಲರ್ ಹತ್ತಿರ ಅನೇಕ ಸಾರಿ ಚರ್ಚೆ ಮಾಡುತ್ತಾರೆ. ರವಿಕೆ ಪ್ರಸಂಗವೂ ಕೂಡಾ ಅದಕ್ಕೆ ಹೊರತಾಗಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮಹಿಳೆ ಮತ್ತು ಟೈಲರ್ ಮಧ್ಯೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ ‘ರವಿಕೆ ಪ್ರಸಂಗ’. ಸಿನಿಮಾದ ಸಂಭಾಷಣೆ ಮಂಗಳೂರು ಕನ್ನಡದಲ್ಲಿದ್ದು ಸಿನಿಪ್ರಿಯರನ್ನು ರಂಜಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳುತ್ತಾರೆ ಗೀತಾಭಾರತಿ ಭಟ್.

ಸದ್ಯ ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಗೀತಾಭಾರತಿ ಭಟ್ ಅವರ ಹಿರಿತೆರೆ ಪಯಣ ಶುರುವಾಗಿದ್ದು ‘ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಮೂಲಕ. ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದಲ್ಲಿ ನಾಯಕಿಯ ಸಣ್ಣ ವಯಸ್ಸಿನ ಪಾತ್ರಕ್ಕೆ ಜೀವ ತುಂಬಿದ್ದ ಗೀತಾಭಾರತಿ ಭಟ್ ಮುಂದೆ ‘ಲವ್ ಮಾಕ್ಟೈಲ್’ ಸಿನಿಮಾದಲ್ಲಿ ನಾಯಕ ಆದಿ ಗೆಳತಿ ರೀಮಾ ಆಗಿ ಕಾಣಿಸಿಕೊಂಡರು. ‘ಲವ್ ಮಾಕ್ಟೈಲ್’ ಸಿನಿಮಾ ತೆಲುಗಿಗೆ ರಿಮೇಕ್ ಆಗಿದ್ದು, ಅಲ್ಲಿಯೂ ರೀಮಾ ಪಾತ್ರದಲ್ಲಿ ಸ್ವತಃ ಗೀತಾಭಾರತಿ ಭಟ್ ಅವರೇ ಕಾಣಿಸಿಕೊಂಡಿದ್ದು ವಿಶೇಷ.

ನಟನೆಯ ಹೊರತಾಗಿ ಗಾಯಕಿಯೂ ಗುರುತಿಸಿಕೊಂಡಿದ್ದಾರೆ ಗೀತಾಭಾರತಿ ಭಟ್. ಕರ್ನಾಟಕ ಶಾಸ್ತ್ರೀಯ ಸಂಗೀತದ ಜೊತೆಗೆ ಹಿಂದೂಸ್ಥಾನಿ ಸಂಗೀತವನ್ನು ಶಾಸ್ತ್ರೋಕ್ತವಾಗಿ ಕಲಿತಿರುವ ಗೀತಾ ಭಾರತಿ ಭಟ್ ಒಂದಷ್ಟು ಸಿನಿಮಾಗಳಿಗೆ ರೀ ರೆಕಾರ್ಡಿಂಗ್, ಟ್ರ್ಯಾಕ್, ಹಿನ್ನಲೆ ಗೀತೆಗಳನ್ನು ಹಾಡಿದ್ದಾರೆ. ಇದರ ಜೊತೆಗೆ ಆದಿತ್ಯ ವಿನೋದ್ ನಿರ್ದೇಶನದ ‘ಸ್ವೀಟೂ’ ಎನ್ನುವ ಆಲ್ಬಂ ಹಾಡಿನಲ್ಲಿಯೂ ಈಕೆ ಬಣ್ಣ ಹಚ್ಚಿದ್ದಾರೆ.


Share news

Related Articles

Leave a Reply

Your email address will not be published. Required fields are marked *

Back to top button