ಪ್ರತಿಭಾನ್ವೇಷಣೆಲೇಖನ ಸಂಗಮ

"ಯಕ್ಷಲೋಕದ ಆರತಿ"

Share news

ಶ್ರೀ ಭೀಮ ಭಟ್ (ನಿವೃತ್ತ ಮುಖ್ಯೋಪಾಧ್ಯಾಯರು), ಮತ್ತು ಶ್ರೀಮತಿ ಲೀಲಾ ಕೆ.ಭಟ್ ಇವರ ಮಗಳಾಗಿ ೦೬.೦೧.೧೯೮೩ ರಂದು ಆರತಿ ಪಟ್ರಮೆ ಅವರ ಜನನ. ಎಂ.ಎ ಇಂಗ್ಲಿಷ್, ಎಂ.ಎ.ಪತ್ರಿಕೋದ್ಯಮ ಇವರ ವಿದ್ಯಾಭ್ಯಾಸ. ಪ್ರಸ್ತುತ ತುಮಕೂರಿನ ವಿದ್ಯಾನಿಧಿ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಯಕ್ಷಗಾನದ ಗುರುಗಳು:-
ನಾಟ್ಯ ಗುರುಗಳು:- ಶ್ರೀ ವೆಂಕಟೇಶ ಎಸ್.ತುಳುಪುಳೆ
ಅರ್ಥಗಾರಿಕೆ ಗುರುಗಳು:- ಶ್ರೀ ಉಜಿರೆ ಅಶೋಕ ಭಟ್
ರಂಗನಡೆ, ಪಾತ್ರ ಪ್ರಸ್ತುತಿ:- ಶ್ರೀ ಸೂರಿಕುಮೇರು ಗೋವಿಂದ ಭಟ್.
ತಂದೆಯವರು ಹವ್ಯಾಸಿ ಅರ್ಥಧಾರಿಗಳು, ನಿಡ್ಲೆಯಲ್ಲಿ ಇದ್ದ ಯಕ್ಷಗಾನದ ಪರಿಸರ ಪಟ್ರಮೆ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಸರಕಾರಿ ಪ್ರೌಢ ಶಾಲೆ ನಿಡ್ಲೆಯಲ್ಲಿ ವಿಜ್ಞಾನ ಶಿಕ್ಷಕರು ಮತ್ತು ಶ್ರೀ ಮೊಂಟೆತಡ್ಕ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಶಿಶಿಲದ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶ್ರೀ ವೆಂಕಟೇಶ ಎಸ್ ತುಳುಪುಳೆ ಅವರಿಂದ ತೆಂಕುತಿಟ್ಟು ನಾಟ್ಯಾಭ್ಯಾಸ. ದಕ್ಷಯಜ್ಞದ ದಕ್ಷನಾಗಿ ರಂಗ ಪ್ರವೇಶ (1997).

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗವನ್ನು ಅಧ್ಯಯನ ಮಾಡುವೆ. ಸಂಬಂಧಿಸಿದ ಕಥಾಭಾಗವನ್ನು ಓದಿ, ಹಿರಿಯ ಕಲಾವಿದರ ವಿಡಿಯೋ/ ಆಡಿಯೋ ನೋಡಿ, ನಿರ್ವಹಿಸಬೇಕಾದ ಪಾತ್ರದ ಸ್ವಭಾವ, ಸ್ವರೂಪ ಅರ್ಥ ಮಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಪಟ್ರಮೆ ಅವರು ಹೇಳುತ್ತಾರೆ.

ದಕ್ಷಯಜ್ಞ, ಕರ್ಣಪರ್ವ, ಗದಾಯುದ್ಧ, ಸತ್ವಪರೀಕ್ಷೆ, ಸುದರ್ಶನ ಗರ್ವಭಂಗ, ಕೃಷ್ಣಾರ್ಜುನ ಕಾಳಗ, ಜಾಂಬವತಿ ಕಲ್ಯಾಣ, ರತಿ ಕಲ್ಯಾಣ, ವೀರಮಣಿ ಕಾಳಗ, ಮ್ಯಾಕ್ ಬೆತ್ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ರಾಜವೇಷ (ಕೋಲುಕಿರೀಟ) ಇಷ್ಟ. ಕೌರವ, ಅತಿಕಾಯ, ಕರ್ಣ, ಅರ್ಜುನ, ಮ್ಯಾಕ್ ಬೆತ್, ಪಕಡಿಯಲ್ಲಿ ಕೃಷ್ಣ, ವಿಷ್ಣು ಇತ್ಯಾದಿ ನೆಚ್ಚಿನ ವೇಷಗಳು. ಸ್ತ್ರೀ ಪಾತ್ರ ಕಷ್ಟ! ಕುಶಲವರ ಕಾಳಗದ ಸೀತೆ, ದಕ್ಷ ಯಜ್ಞದ ದಾಕ್ಷಾಯಿಣಿ ಪ್ರಯತ್ನಿಸಿದ್ದೇನೆ ಎಂದು ಪಟ್ರಮೆ ಅವರು ಹೇಳುತ್ತಾರೆ.

ಯಕ್ಷಗಾನ ಅಕಾಡಮಿ ಸದಸ್ಯೆ ಆಗಿದ್ದ ನೀವು ಅಲ್ಲಿನ ಅನುಭವ ಹಾಗೂ ಕಲಾವಿದರ ಕುರಿತು ಮಾಡಿದ ‘ಮಾತಿನ ಮಂಟಪ’ ಕಾರ್ಯಕ್ರಮದ ಬಗ್ಗೆ ನಿಮ್ಮ ಅನುಭವ ಹಾಗೂ ಮಾತಿನ ಮಂಟಪ ಮಾಡುವಾಗ ನೀವು ಎದುರಿಸಿದ ಸವಾಲುಗಳು:-
ಅಕಾಡೆಮಿಯ ಸದಸ್ಯತ್ವದ ಮೂರು ವರ್ಷಗಳು ಸಂಪನ್ನಗೊಂಡಿವೆ. (ಅಕ್ಟೋಬರ್ 15, 2019- ಅಕ್ಟೋಬರ್ 14, 2022). ಅನಿರೀಕ್ಷಿತವಾಗಿ ಬಂದೊದಗಿದ ಅವಕಾಶವನ್ನು ನನ್ನಿಂದ ಸಾಧ್ಯವಾದಷ್ಟು ಅರ್ಥಪೂರ್ಣವಾಗಿಸಿದ್ದೇನೆ ಎಂಬ ಸಂತೃಪ್ತಿಯಿದೆ. ಮೊದಲ ವರ್ಷದಲ್ಲಿ ಸ್ಥಾಯಿಸಮಿತಿಯ ಸದಸ್ಯೆಯೂ ಆಗಿದ್ದು ನನಗೆ ಅಕಾಡೆಮಿಯ ಒಟ್ಟೂ ಕಾರ್ಯವೈಖರಿಯನ್ನು ಪರಿಚಯಿಸಿತು. ತುಮಕೂರಿನಲ್ಲಿ ಯಕ್ಷಗಾನ ಅಕಾಡೆಮಿಯ ಮೂರು ಕಾರ್ಯಕ್ರಮಗಳೂ ನಡೆದವು. ನಮ್ಮೊಂದಿಗೆ ಇದ್ದವರಲ್ಲಿ ನಮ್ಮವರೇ ಯಾರು ಎಂಬದನ್ನೂ ಈ ಮೂರು ವರ್ಷಗಳು ಅರ್ಥ ಮಾಡಿಸಿದವು. ಹಲವು ಮಂದಿಯ ಸ್ನೇಹ ವಿಶ್ವಾಸ ಒದಗಿತು. ಕೆಲವರು ಕಾರಣವೇ ಇಲ್ಲದೇ ಮೊಸರಿನಲ್ಲಿ ಕಲ್ಲು ಹುಡುಕಿದರು. ‘ಸಾಮಾಜಿಕ ಬದುಕಿಗೆ ಬಂದ ಮೇಲೆ ಚರ್ಮ ಗಟ್ಟಿಯಾಗಿರಬೇಕು, ಎಮ್ಮೆ ಚರ್ಮದಂತೆ’ ಎಂದು ಬುದ್ಧಿವಾದ ಹೇಳಿದವರು ಅಧ್ಯಕ್ಷರಾಗಿದ್ದ ಪ್ರೊ. ಎಂ.ಎ. ಹೆಗಡೆಯವರು. ಅವರೊಂದಿಗಿನ ಕೆಲಸ ನಿರ್ವಹಣೆಯ ಕುರಿತು ವಿವರವಾಗಿ ಬರೆಯುವುದಿದೆ.

ಕೊರೋನಾ ಬಂದು ಲಾಕ್ ಡೌನ್ ಆಗಿ ತುಂಬಾ ವಿಘ್ನಗಳು ಉಂಟಾದದ್ದು ನಿಜ. ಆದರೆ ಲಾಕ್ ಡೌನ್ ಅವಧಿಯನ್ನು ಅರ್ಥಪೂರ್ಣವಾಗಿಸುವ ಅವಕಾಶ ಒದಗಿದ್ದು ಮಾತಿನ ಮಂಟಪ-ನೆನಪಿನ ಬುತ್ತಿ ಸಂವಾದ ಸರಣಿಯ ಮೂಲಕ. ಅಕಾಡೆಮಿ-ಕಲಾವಿದರ ನಡುವೆ ಈ ಕಾರ್ಯಕ್ರಮ ಸೇತುವಾಯಿತು ಎಂಬ ಸಂತೋಷವಿದೆ. ಅನೇಕ ಮಂದಿ ಕಲಾವಿದರನ್ನು ಈ ಕಾರಣಕ್ಕಾಗಿ ಸಂಪರ್ಕಿಸಿದಾಗ ಅವರ ಪ್ರತಿಕ್ರಿಯೆಯೇ ಮುದ ಕೊಡುತ್ತಿತ್ತು. ಇನ್ನೂ ಹಲವರು ಇದೇನೋ ಅಗತ್ಯವಿಲ್ಲದ ತಲೆಹರಟೆ ಎಂದು ವರ್ತಿಸಿದವರೂ ಇದ್ದಾರೆ. ಹತ್ತಾರು ಮಂದಿ ಬೇರೆ ಬೇರೆ ಕಾರಣಗಳಿಗೆ ಮಾತನಾಡಲು ನಿರಾಕರಿಸಿದ್ದೂ ಇದೆ. ಅತ್ಯಂತ ಅಭಿಮಾನದಿಂದ ನಾವು ಮೆಚ್ಚಿಕೊಂಡಿದ್ದ ಕಲಾವಿದರು ತೀರಾ ಭಿನ್ನವಾಗಿ ‘ಛೀ, ಇದೊಂದು ಕಾರ್ಯಕ್ರಮವಾ!’ ಅಂದವರೂ ಇದ್ದಾರೆ. ಬಹುಶಃ ಕೋವಿಡ್ ಲಾಕ್ ಡೌನ್ ಕಾರಣದಿಂದ ಇದ್ದ ಒತ್ತಡವೂ ಇರಬಹುದು. ಅದೇನೇ ಇರಲಿ, ಒಟ್ಟು 150 ಮಂದಿ ಹಿರಿಯ-ಕಿರಿಯ ಕಲಾವಿದರೊಂದಿಗೆ ನಡೆಸಿದ ಸಂವಾದಗಳು ಯಕ್ಷಗಾನದೊಳಗಿನ ಪ್ರಪಂಚವನ್ನು ಕೊಂಚ ಮಟ್ಟಿಗಾದರೂ ಅರಿಯುವಲ್ಲಿ ಪೂರಕವಾಗಿ ಒದಗಿದವು. ಇನ್ನುಳಿದಿರುವುದು ಅವುಗಳನ್ನು ಅಕ್ಷರರೂಪಕ್ಕೆ ಇಳಿಸುವುದು. ಅದರ ಪ್ರಕ್ರಿಯೆ ಆರಂಭಗೊಂಡು ಆಮೆಗತಿಯಲ್ಲಿ ಮುಂದುವರಿಯುತ್ತಿದೆ. ಇನ್ನಾರು ತಿಂಗಳಿನಲ್ಲಿ ಎರಡು ಸಂಪುಟವನ್ನಾದರೂ ಪ್ರಕಟಿಸುವ ಗುರಿಯಿದೆ ಎಂದು ಆರತಿ ಪಟ್ರಮೆ ಅವರು ಹೇಳುತ್ತಾರೆ.

೨೦೧೪ ಸೆಪ್ಟೆಂಬರ್ ೭ ರಂದು ಬಯಲುಸೀಮೆಯಲ್ಲಿ ಕರಾವಳಿ ಕರ್ನಾಟಕದ ಕಲೆಯಾದ ಯಕ್ಷಗಾನವನ್ನು ಪಸರಿಸುವ ಉದ್ದೇಶದಿಂದ ತುಮಕೂರಿನಲ್ಲಿ ಯಕ್ಷದೀವಿಗೆ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಗತಿಯನ್ನು ಆರಂಭಿಸಿದ್ದಾರೆ. ಯಕ್ಷದೀವಿಗೆ ಸಂಸ್ಥೆಯ ವತಿಯಿಂದ ಸತ್ವ ಪರೀಕ್ಷೆ, ಗಧಾಯುದ್ಧ, ಸುದರ್ಶನ ಗರ್ವಭಂಗ, ಜಾಂಬವತಿ ಕಲ್ಯಾಣ, ಪಂಚವಟಿ ಹೀಗೆ ಅನೇಕ ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ. ಯಕ್ಷದೀವಿಗೆಯನ್ನು ಯಕ್ಷಗಾನ ಅಧ್ಯಯನ ಕೇಂದ್ರವಾಗಿ ಬೆಳೆಸುವ ಕನಸಿದೆ. ತುಮಕೂರಿನಲ್ಲಿ ಯಕ್ಷಗಾನ ಆಸಕ್ತಿ ಬೆಳೆಸುವ ಪ್ರಯತ್ನ. ಆಟ- ಕೂಟಗಳ ಸಂಯೋಜನೆ. ಯಕ್ಷಗಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸುವ ಯೋಜನೆಗಳಿವೆ.

೧೯೭೦ರ ದಶಕದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸೂರಿಕುಮೇರು ಗೋವಿಂದ ಭಟ್ಟರು ಡಿವಿಜಿಯವರು ಮಾಡಿದ ಮ್ಯಾಕ್ ಬೆತ್ ನಾಟಕದ ಕನ್ನಡ ಅನುವಾದವನ್ನು ಆಧರಿಸಿ ಮ್ಯಾಕ್ ಬೆತ್ ಯಕ್ಷಗಾನ ಪ್ರಸಂಗವನ್ನು ರಚಿಸಿದ್ದರು. ಉಜಿರೆಯ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದರು, ಅದೇ ಮೊದಲನೇ ಹಾಗೂ ಕೊನೆಯ ಪ್ರದರ್ಶನ.

ವಿಲಿಯಂ ಶೇಕ್ಸ್ ಪಿಯರ್ ನಾಟಕಗಳ ಯಕ್ಷಗಾನ ರೂಪಾಂತರಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದ ಪಟ್ರಮೆ ಅವರು ಅಂದಿನ ತಂಡದಲ್ಲಿ ಭಾಗವಹಿಸಿದವರ ಸಂಪರ್ಕ ದೊರೆತು ಪ್ರಸಂಗದ ಪ್ರತಿ ದೊರಕಿತು. ಅದರ ಆಧಾರದಲ್ಲಿ ತುಮಕೂರಿನಲ್ಲಿ ೨೦೨೦ರಲ್ಲಿ ಮ್ಯಾಕ್ ಬೆತ್ ಯಕ್ಷಗಾನ ಪ್ರದರ್ಶನವನ್ನು ನೀಡಿರುತ್ತಾರೆ. ಈ ಯಕ್ಷಗಾನ ಪ್ರದರ್ಶನದಲ್ಲಿ ತಂಡದಲ್ಲಿದ್ದ ಬಹುತೇಕ ಮಂದಿ ತುಮಕೂರಿನವರು. ಮ್ಯಾಕ್ ಬೆತ್ ಯಕ್ಷಗಾನವು ಅಪಾರ ಪ್ರಶಂಸೆ ಪಡೆಯಿತು ಎಂದು ಪಟ್ರಮೆ ಅವರು ಹೇಳುತ್ತಾರೆ.

ಅಸ್ರಣ್ಣ ಪ್ರಶಸ್ತಿ 2022, ಅಂತರಕಾಲೇಜು ಯಕ್ಷೋತ್ಸವ 2001- 2002 ರ ವೈಯಕ್ತಿಕ ಚಾಂಪಿಯನ್ ಶಿಪ್ ಪಟ್ರಮೆ ಅವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿಗಳು. ಎಲ್ಲಿಹಳು ನನ್ನ ಛಾಯಾ ಕವನ ಸಂಕಲನ, ನವೋತ್ಥಾನದ ಹರಿಕಾರ ಸ್ವಾಮಿ ವಿವೇಕಾನಂದ ತೀರದ ತುಡಿತ, ಬದುಕು ನಂಬಿಕೆಯ ಕಡಲು, ಒಂದು ಕಪ್ ಚಹಾ ಸಿಗಬಹುದೇ? ಪಟ್ರಮೆ ಅವರು ಬರೆದಿರುವ ಪುಸ್ತಕಗಳು. ಯಕ್ಷಗಾನ, ಬರವಣಿಗೆ.‌ ಮೃದಂಗ ಅಭ್ಯಾಸ ಇವರ ಹವ್ಯಾಸಗಳು.

ಆರತಿ ಪಟ್ರಮೆ ಅವರು ಸಿಬಂತಿ ಪದ್ಮನಾಭ ಇವರನ್ನು ೨೬.೧೧.೨೦೦೭ ರಂದು ಮದುವೆಯಾಗಿ ಮಕ್ಕಳಾದ ಖುಷಿ, ಸಂವೃತ (ಯಕ್ಷಗಾನ ಹಿಮ್ಮೇಳ- ಮುಮ್ಮೇಳವನ್ನು ಅವಿನಾಶ್ ಬೈಪಾಡಿತ್ತಾಯರ ಬಳಿ ಅಭ್ಯಾಸ ಮಾಡುತ್ತಿದ್ದಾರೆ) ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಬರಹ:- ಶ್ರವಣ್ ಕಾರಂತ್ ಕೆ


Share news

Related Articles

Leave a Reply

Your email address will not be published. Required fields are marked *

Back to top button