ಭಾರತೀಯ ವಾಯುಪಡೆ (ಐಎಎಫ್) ಮುಂದಿನ ಎರಡು ವರ್ಷಗಳಲ್ಲಿ ದೇಶೀಯ ಬಯಾಂಡ್-ವಿಶುವಲ್-ರೇಂಜ್ (ಬಿವಿಆರ್) ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಪಡೆಯುವ ಸಾಧ್ಯತೆಯಿದೆ. ಅಸ್ಟ್ರಾ ಎಂಕೆ-2 ರ ಎಲ್ಲಾ ಪ್ರಯೋಗಗಳು 2026ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.
140 ಕೀ.ಮೀ ಗೂ ಹೆಚ್ಚು ವ್ಯಾಪ್ತಿಯನ್ನು ಹೊಂದಿರುವ ಈ ಕ್ಷಿಪಣಿಯು ಸ್ವದೇಶಿ ನಿರ್ಮಿತ ಫೈಟರ್ ಜೆಟ್ ತೇಜಸ್ ಲಘು ಯುದ್ಧ ವಿಮಾನ ಬಳಸುವ ಅತ್ಯಂತ ಶಕ್ತಿಯುತ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ. ಮುಂದಿನ ವರ್ಷ ಅಸ್ಟ್ರಾ ಎಂಕೆ 2 ಕಾಗೆ ಸರಣಿ ಅಭಿವೃದ್ಧಿ ಮತ್ತು ಬಳಕೆದಾರ ಪ್ರಯೋಗಗಳನ್ನು ಯೋಜಿಸಲಾಗಿದೆ. 2026ರ ವೇಳೆಗೆ ಕ್ಷಿಪಣಿ ಸೇರ್ಪಡೆಗೆ ಸಿದ್ಧವಾಗುವ ವೇಳೆಗೆ ಎಲ್ಲಾ ಪ್ರಯೋಗಗಳು ಪೂರ್ಣಗೊಳ್ಳಲಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ಅಭಿವೃದ್ಧಿಪಡಿಸಿದ ಅಸ್ಟ್ರಾ ಎಂಕೆ-1 ಪ್ರಸ್ತುತ ಐಎಎಫ್ ಬಳಸುತ್ತಿದೆ, ಇದು 80-110 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ.
ಬಿ ವಿ ಆರ್ ಸಾಮರ್ಥ್ಯವನ್ನು ಹೊಂದಿರುವ ಏರ್-ಟು-ಏರ್ ಕ್ಷಿಪಣಿಯು ಐಎಎಫ್ ಫೈಟರ್ ಜೆಟ್ ಗಳಿಗೆ ದೊಡ್ಡ ಸ್ಟ್ಯಾಂಡ್ ಆಫ್ ಶ್ರೇಣಿಗಳನ್ನು ಒದಗಿಸುತ್ತದೆ. ಇದು ಎದುರಾಳಿ ವಾಯುರಕ್ಷಣಾ ಕ್ರಮಗಳಿಗೆ ತಮ್ಮನ್ನು ಒಡ್ಡಿಕೊಳ್ಳದೆ ಶತ್ರು ವಿಮಾನಗಳನ್ನು ತಟಸ್ಥಗೊಳಿಸುತ್ತದೆ. ಆ ಮೂಲಕ ವಾಯು ಪ್ರದೇಶದ ಶ್ರೇಷ್ಠತೆಯನ್ನು ಪಡೆಯುತ್ತದೆ ಮತ್ತು ಉಳಿಸಿಕೊಳ್ಳುತ್ತದೆ.