ಕ್ಯಾನ್ಸರ್ ಔಷಧಿಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ ದರಗಳನ್ನು ಶೇಕಡ 12 ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೋಮವಾರ 54ನೇ ಜಿ ಎಸ್ ಟಿ ಕೌನ್ಸಿಲ್ ಸಭೆಯ ಮುಕ್ತಾಯದ ನಂತರ ಘೋಷಿಸಿದರು.
ಅಂತೇಯೇ ಖಾರದ ಲಘು ಆಹಾರ ಪದಾರ್ಥಗಳ ಮೇಲಿನ ಜಿಎಸ್‌ಟಿ ದರಗಳನ್ನು ಸಹ ನಿರೀಕ್ಷಿತವಾಗಿ ಶೇಕಡ 18 ರಿಂದ ಶೇಕಡ 12ಕ್ಕೆ ಇಳಿಸಲಾಗಿದೆ. ಈ ಕುರಿತು ಸಚಿವ ಸಮಿತಿಯನ್ನು ರಚಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿ.ಎಸ್.ಟಿ ಕೌನ್ಸಿಲ್ ಸೋಮವಾರ ನಿರ್ಧರಿಸಿದೆ. ಈಗಿರುವ ಜಿಎಸ್‌ಟಿ ದರವನ್ನು ತರ್ಕಬದ್ದಗೊಳಿಸುವ ಸಮಿತಿಯ ನೇತೃತ್ವವನ್ನು ಬಿಹಾರ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ವಹಿಸಲಿದ್ದಾರೆ. ಈ ಸಮಿತಿ ಪರಿಹಾರ ಸೆಸ್ ಗೆ ಸಂಬಂಧಿಸಿದ ಸಮಸ್ಯೆಯನ್ನು ನಿಭಾಯಿಸಲಿದೆ. ಅಕ್ಟೋಬರ್ ಅಂತ್ಯದೊಳಗೆ ತಂಡ ತನ್ನ ವರದಿಯನ್ನು ಸಲ್ಲಿಸಲಿದೆ. ಮಾರ್ಚ್ 2026 ಕ್ಕೆ ಇದರ ಅವಧಿ ಮುಗಿಯಲಿದೆ ಎಂದು ಸೀತಾರಾಮನ್ ಹೇಳಿದರು.
ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರಿಸಿದ ನಿರ್ಮಲಾ ಸೀತಾರಾಮನ್, ಜಿಎಸ್‌ಟಿ ಸಂಗ್ರಹದ ಶೇಕಡ 75ರಷ್ಟು ರಾಜ್ಯಗಳಿಗೆ ಹೋಗುತ್ತದೆ. ಪ್ರತಿಪಕ್ಷ ಸದಸ್ಯರು ತಮ್ಮ ರಾಜ್ಯ ಹಣಕಾಸು ಸಚಿವರನ್ನು ಜಿ ಎಸ್ ಟಿ ಕೌನ್ಸಿಲ್ ನಲ್ಲಿ ಪ್ರಸ್ತಾಪ ಮಂಡಿಸಲು ಕೇಳಿಕೊಳ್ಳಬೇಕು ಎಂದಿದ್ದರು.
ಆರೋಗ್ಯ ವಿಮೆ ಜಿ ಎಸ್ ಟಿ ಕಡಿತಕ್ಕೆ ಚರ್ಚೆ
ಆರೋಗ್ಯ ವಿಮೆ ಮೇಲಿನ ದರ ಕಡಿತದ ಕುರಿತು ನಿರ್ಧರಿಸಲು ಕೌನ್ಸಿಲ್ ನವಂಬರ್ ನಲ್ಲಿ ಮತ್ತೊಮ್ಮೆ ಸಭೆ ಸೇರಲಿದೆ ಆರೋಗ್ಯ ಮತ್ತು ಜೀವ ವಿಮಾ ಕಂತುಗಳನ್ನು ಜಿ.ಎಸ್.ಟಿ ಇಂದ ವಿನಾಯಿತಿ ನೀಡುವಂತೆ ಪ್ರತಿಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ನಡೆದ ಚರ್ಚೆಯ ಮೇಲೆ ಒತ್ತಾಯಿಸಿದರು. ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಈ ಬಗ್ಗೆ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಧಾರ್ಮಿಕ ಪ್ರವಾಸಗಳ ಕಾಪ್ಟರ್ ಸೇವೆಗೆ ಜಿಎಸ್‌ಟಿ ಶೇಕಡ 5 ಕ್ಕೆ ಇಳಿಕೆ
ಧಾರ್ಮಿಕ ಪ್ರವಾಸಗಳ ಹೆಲಿಕಾಫ್ಟರ್ ಸೇವೆಗಳಿಗೆ ಎಸ್‌ಟಿಯನ್ನು ಶೇಕಡ 5 ಕ್ಕೆ ಇಳಿಕೆ ಮಾಡಲು ಜಿಎಸ್‌ಟಿ ಸಮಿತಿ ನಿರ್ಧರಿಸಿದೆ ಎಂದು ಉತ್ತರಖಂಡ ಆರ್ಥಿಕ ಸಚಿವ ಪ್ರೇಮ್ ಚಂದ್ ಅಗರ್ವಾಲ್ ಹೇಳಿದ್ದಾರೆ. ಕೇದಾರನಾಥ, ಬದರಿನಾಥ ದಂತಹ ಧಾರ್ಮಿಕ ಉದ್ದೇಶಗಳಿಗೆ ಹೆಲಿಕಾಪ್ಟರ್ ಸೇವೆಗಳನ್ನು ಬಳಸುವುದಕ್ಕೆ ಈಗ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇನ್ನು ಮುಂದೆ ಅದನ್ನು ಶೇಕಡ 5ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದು ಅಗರ್ವಾಲ್ ಹೇಳಿದ್ದಾರೆ.