ಭಾರತದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಇಲ್ಲದೆ ಇರುವುದರಿಂದ ಶೇಕಡ 80ರಷ್ಟು ಸೆಮಿಕಂಡಕ್ಟರ್ಗಳ ಬೇಡಿಕೆಯನ್ನು ಚೀನಾ, ವಿಯೆಟ್ನಾಂ, ತೈವಾನ್ ನಿಂದ ಆಮದು ಮಾಡಿಕೊಳ್ಳುತ್ತಿದೆ. ಭಾರತದ ತಾಂತ್ರಿಕ ಹಾಗೂ ಸಂವಹನ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ಉಜ್ವಲ ಭವಿಷ್ಯ ಸಾಧಿಸಲು ಸೆಮಿಕಂಡಕ್ಟರ್ ನಿರ್ಣಾಯಕ ಪಾತ್ರ ವಹಿಸುತ್ತದೆ. ಹಲವು ದಶಕಗಳಿಂದ ಸೆಮಿಕಂಡಕ್ಟರ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದ ಜಗತ್ತಿನ ಕೆಲವು ದೇಶಗಳು, ಈಗ ತಾವೇ ಅದನ್ನು ತಯಾರಿಸುವತ್ತ ತಮ್ಮ ದೃಷ್ಟಿಯನ್ನು ನೆಟ್ಟಿವೆ. 5ಜಿ ಬಂದಮೇಲೆ ಸೆಮಿಕಂಡಕ್ಟರ್ ನ ಬೇಡಿಕೆ ದುಪ್ಪಟ್ಟಾಗಿದೆ. 2026ರ ಒಳಗೆ ಭಾರತ 80 ಬಿಲಿಯನ್ ಅಷ್ಟು ಸೆಮಿಕಂಡಕ್ಟರ್ ಗಳನ್ನು ಉಪಯೋಗಿಸಲಿದ್ದು, 2030ರ ಒಳಗೆ ಇದರ ಉಪಯೋಗ 11೦ ಬಿಲಿಯನ್ ಅಷ್ಟು ಹೆಚ್ಚಲಿದೆ.
ಏನಿದು ಸೆಮಿಕಂಡಕ್ಟರ್
ವಿದ್ಯುತ್ ವಾಹಕಗಳು ಹಾಗೂ ಅವಾಹಕಗಳ ನಡುವೆ ವಿದ್ಯುತ್ ಪ್ರಸರಿಸುವ ಭಾಗವೇ ಸೆಮಿಕಂಡಕ್ಟರ್. ಸೆಮಿಕಂಡಕ್ಟರ್ ಅನ್ನು ಆಧುನಿಕ ಎಲೆಕ್ಟ್ರಾನಿಕ್ಸ್ ನ ಮೆದುಳು ಎಂದು ಕರೆಯುತ್ತಾರೆ. ಸೆಮಿಕಂಡಕ್ಟರ್ ಅನ್ನು ಮೈಕ್ರೋಚಿಪ್ ಹಾಗೂ ಇಂಟಿಗ್ರೇಟೆಡ್ ಸರ್ಕ್ಯೂಟ್ಸ್ ಎಂದೂ ಕರೆಯಲಾಗುತ್ತದೆ. ಗಾಲಿಯಮ್ ಆರ್ಸೆನೈಡ್, ಇಂಡಿಯಮ್ ಫೋಸೈಡ್, ಸಿಲಿಕಾನ್ ಹಾಗೂ ಜರ್ಮೇನಿಯಮ್ ನಿಂದ ಇದನ್ನು ತಯಾರಿಸಲಾಗುತ್ತದೆ.
ಸೆಮಿಕಂಡಕ್ಟರ್ ಚಿಪ್ನ ಬಳಕೆ
ಸೆಮಿಕಂಡಕ್ಟರ್ ಸಿಲಿಕಾನ್ ಚಿಪ್ ಆಗಿದ್ದು ಇದನ್ನು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಸಲಾಗುತ್ತದೆ. ಈ ಸೆಮಿಕಂಡಕ್ಟರ್ಗಳನ್ನು ವಾಹನಗಳು, ಸ್ಮಾರ್ಟ್ ಫೋನ್ ಗಳು, ಕಂಪ್ಯೂಟರ್, ಕಾರು, ಡಿಜಿಟಲ್ ಕ್ಯಾಮೆರಾಗಳು, ಎಸಿ ಮತ್ತು ರೆಫ್ರಿಜರೇಟರ್ಗಳಲ್ಲಿ ಬಳಕೆ ಮಾಡಲಾಗುತ್ತದೆ. ಇಷ್ಟು ಮಾತ್ರವಲ್ಲದೆ ಹಲವು ಕ್ಷಿಪಣಿಗಳಲ್ಲಿ ಸೆಮಿಕಂಡಕ್ಟರ್ ಚಿಪ್ಸ್ ಅಗತ್ಯವಿದೆ. ಸೆಮಿಕಂಡಕ್ಟರ್ ಚೀಪ್ ಯಾವುದೇ ಉತ್ಪನ್ನದ ನಿಯಂತ್ರಣ ಮತ್ತು ಮೆಮೊರಿಕಾರ್ಯಗಳನ್ನು ನಿರ್ವಹಿಸುತ್ತದೆ. ಅಷ್ಟೇ ಅಲ್ಲ, ಸೆನ್ಸರ್ಗಳು, ಚಾಲಕರ ನೆರವು, ಪಾರ್ಕಿಂಗ್ ಹಿಂಬದಿಯ ಕ್ಯಾಮೆರಾ, ಏರ್ ಬ್ಯಾಗ್ ಗಳು ಮತ್ತು ಹೈಟೆಕ್ ಕಾರುಗಳ ತುರ್ತು ಬ್ರೇಕಿಂಗ್ ನಲ್ಲಿಯೂ ಸೆಮಿಕಂಡಕ್ಟರ್ಗಳ ಅಗತ್ಯ ಬಹಳಷ್ಟು ಇದೆ. ಇಷ್ಟೇ ಅಲ್ಲದೆ, ಜೀವ ರಕ್ಷಕ ಸಾಧನಗಳಾದ ಕೃತಕ ಹೃದಯ ನಿಯಂತ್ರಕ (ಫೇಸ್ ಮೇಕರ್) ಹಾಗೂ ಇನ್ಸುಲಿನ್ ಪಂಪ್ ಗಳಲ್ಲೂ ಸೆಮಿಕಂಡಕ್ಟರ್ ಇರುತ್ತದೆ.
ಸೆಮಿಕಂಡಕ್ಟರ್ ರಾಜ ತಾಂತ್ರಿಕತೆ
ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಸಿಂಗಾಪುರಕ್ಕೆ ಭೇಟಿ ನೀಡಿ, ಸಿಂಗಾಪುರದ ಪ್ರಧಾನಿ ಲಾರೆನ್ಸ್ ವೊಂಗ್ ಅವರ ಜೊತೆ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಜ್ಞಾನ ವರ್ಗಾವಣೆ, ಪ್ರತಿಭೆ ಅಭಿವೃದ್ದಿ ಮತ್ತು ಉತ್ಪಾದನೆಯಲ್ಲಿ ಸಹಭಾಗಿತ್ವದ ಬಗ್ಗೆ ಈ ಒಪ್ಪಂದ ಕೇಂದ್ರೀಕರಿಸಲಿದೆ.
ಸ್ವಾವಲಂಬನೆ ಸಾಧಿಸುವುದರಿಂದ ಭಾರತಕ್ಕೇನು ಲಾಭ?
ಸೆಮಿಕಂಡಕ್ಟರ್ ತಯಾರಿಕಾ ಘಟಕಗಳನ್ನು ಪ್ರಾರಂಭಿಸುವುದರಿಂದ ಡೌನ್ ಸ್ಟ್ರೀಮ್ ಕೈಗಾರಿಕೆಗಳಿಗೆ-ಅಂದರೆ ಉತ್ಪಾದನಾ ಹಂತದಿಂದ ಸಿದ್ಧ ವಸ್ತುಗಳನ್ನು ತಯಾರು ಮಾಡುವ ಕೈಗಾರಿಕೆಗಳು, ಉದಾಹರಣೆಗೆ: ಲ್ಯಾಪ್ಟಾಪ್, ಆಟೋಮೊಬೈಲ್, ಸರ್ವರ್, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಸಾಕಷ್ಟು ಉಪಯೋಗವಾಗಲಿದ್ದು ಇನ್ನಷ್ಟು ಡೌನ್ ಸ್ಟ್ರೀಮ್ ಕೈಗಾರಿಕೆಗಳು ಪ್ರಾರಂಭವಾಗುತ್ತದೆ. ಇದರಿಂದ ಉದ್ಯೋಗ ಹಾಗೂ ಉತ್ತಮ ಆರ್ಥಿಕತೆ ಸಾಧಿಸಬಹುದು. ಮತ್ತು ಬೇರೆ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಭಾರತಕ್ಕೆ ಬೇಡಿಕೆ ಇರುವ ಶೇಕಡ 80ರಷ್ಟು ಸೆಮಿಕಂಡಕ್ಟರ್ ಅನ್ನು ಈಗ ಆಮದು ಮಾಡಿಕೊಳ್ಳುತ್ತಿದೆ, ಒಂದು ವೇಳೆ ಸ್ಥಳೀಯವಾಗಿ ಸೆಮಿಕಂಡಕ್ಟರ್ ಗಳನ್ನು ಉತ್ಪಾದನೆ ಮಾಡದಿದ್ದರೆ ದೇಶದ ಆಮದಿಗೆ 90 ಬಿಲಿಯನ್ ನಷ್ಟು ಹೊರೆಯಾಗಬಹುದು. ಇದಲ್ಲದೆ ದೇಶದ ಮಿಲಿಟರಿ ಉಪಕರಣಗಳು, ಉಪಗ್ರಹಗಳಿಗೆ ಸೆಮಿಕಂಡಕ್ಟರ್ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಉದಾಹರಣೆಗೆ: ವಾಯು ಯುದ್ಧದಲ್ಲಿ ಏರ್ ಕ್ರಾಫ್ಟ್ ರಡಾರ್ ಮೂಲಕ ನೂರಾರು ಕಿಲೋಮೀಟರ್ ದೂರದಲ್ಲಿರುವ ಶತ್ರು ವಿಮಾನವನ್ನು ಪತ್ತೆ ಹಚ್ಚಬಹುದು. ಯಾವ ರಡಾರ್ ಮೊದಲು ಪತ್ತೆ ಹಚ್ಚಬಲ್ಲದೋ ಅವು ಯುದ್ಧವನ್ನು ಗೆಲ್ಲಬಹುದು-ಈ ಕಾರ್ಯ ತಂತ್ರದ ಪ್ರಯೋಜನವನ್ನು ಪಡೆಯಲು ಸೆಮಿಕಂಡಕ್ಟರ್ ಬೇಕು. ಕೃತಕ ಬುದ್ಧಿಮತ್ತೆ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ನಂತಹ ನೂತನ ತಂತ್ರಜ್ಞಾನಗಳಿಗೂ ಸೆಮಿಕಂಡಕ್ಟರ್ ಅವಶ್ಯಕತೆ ಇದೆ.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಮೂಲಕ ಭಾರತದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಘಟಕಗಳ ಸ್ಥಾಪನೆ ಹಾಗೂ ಇವುಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿಸುವ ಕೆಲಸ ಮಾಡುತ್ತಿದೆ. ಈ ಮಿಷನ್ ನಲ್ಲಿ ಅಂತರಾಷ್ಟ್ರೀಯ ತಜ್ಞರು ಉಪಸ್ಥಿತರಿದ್ದು ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಬೇಕಾದ ರೂಪರೇಷೆಗಳನ್ನು ಸಿದ್ಧಪಡಿಸುವುದು ಹಾಗೂ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಪ್ರೋಗ್ರಾಮ್ ಫಾರ್ ಡೆವಲಪ್ಮೆಂಟ್ ಆಫ್ ಸೆಮಿಕಂಡಕ್ಟರ್ ಅಂಡ್ ಡಿಸ್ಪ್ಲೇ ಎಕೋ ಸಿಸ್ಟಮ್ (ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆ ಹಾಗೂ ಪೂರಕ ಪರಿಸರ ನಿರ್ಮಿಸುವ ಯೋಜನೆಯನ್ನು) ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಜವಾಬ್ದಾರಿಯನ್ನು ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಹೊತ್ತಿದೆ.
ಸೆಮಿಕಾನ್ ಇಂಡಿಯಾ
ಕೇಂದ್ರ ಆಯವ್ಯಯ 2024 ರಲ್ಲಿ ಸೆಮಿಕಾನ್ ಇಂಡಿಯಾ ಪ್ರೋಗ್ರಾಮ್ ಗೆ 6, 903ರೂ. ಕೋಟಿ ಅಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರ ದೃಷ್ಟಿ ಹಾಗೂ ಸ್ವತಹ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಅನುಭವ ಇರುವ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಖಾತೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮಾರ್ಗದರ್ಶನದಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ದಾಪುಗಾಲನ್ನಿಡುತ್ತಿದೆ. ಅಸ್ಸಾಂ ಹಾಗೂ ಗುಜರಾತಿನಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸೆಮಿಕಂಡಕ್ಟರ್ ಘಟಕಗಳ ಸ್ಥಾಪನೆಗೆ ಬೃಹತ್ ಹೂಡಿಕೆ ಮಾಡಿದೆ. ಇದಲ್ಲದೆ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್, ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ 2019 ನಾವಿನ್ಯತೆ, ಉದ್ಯಮಶೀಲತೆ ಭೌದ್ಧಿಕ ಆಸ್ತಿ ಹಕ್ಕು (ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್) ಅನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ.
ಸೆಮಿಕಂಡಕ್ಟರ್ ಮಿಷನ್ ಗೆ ಅಮೆರಿಕ ಸಹಕಾರ
ಪ್ರಧಾನಿ ಮೋದಿ ಅವರು ಸಿಂಗಾಪುರ ಸೆಮಿಕಂಡಕ್ಟರ್ ಕಂಪನಿಗಳಿಗೆ ಭಾರತದಲ್ಲಿ ತಮ್ಮ ಸೇವೆಯನ್ನು ವಿಸ್ತರಿಸಲು ಮುಕ್ತವಾದ ಅಹ್ವಾನವನ್ನು ನೀಡಲು ಒಪ್ಪಿದ್ದಾರೆ. ಇಷ್ಟೇ ಅಲ್ಲದೆ ಭಾರತದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಗೆ ಅಮೆರಿಕ ಸಹಕಾರ ನೀಡಲಿದೆ ಎಂದು ಹೇಳಿದೆ. ಕಳೆದ ಕೆಲವು ವರ್ಷಗಳಿಂದ ಮೋದಿ ಅವರು ಕೈಗೊಂಡಿರುವ ಅನೇಕ ವಿದೇಶ ಪ್ರವಾಸದಲ್ಲಿ ಸೆಮಿಕಂಡಕ್ಟರ್ ಬಗ್ಗೆ ಚರ್ಚೆಯಾಗುತ್ತಿದೆ. ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರ ನಿರಂತರ ಪ್ರಯತ್ನದಿಂದ ಭಾರತದಲ್ಲಿ ಅನೇಕ ಕಂಪನಿಗಳು ಸೆಮಿಕಂಡಕ್ಟರ್ ಘಟಕಗಳನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ. ವಿಶ್ವದ ಶೇಕಡ 20ರಷ್ಟು ಸೆಮಿಕಂಡಕ್ಟರ್ ವಿನ್ಯಾಸ ಇಂಜಿನಿಯರ್ ಗಳು ಭಾರತೀಯರೇ ಎಂಬುದು ಹಲವರಿಗೆ ಗೊತ್ತಿಲ್ಲ. ಕೆಮಿಕಂಡಕ್ಟರ್ ವಿನ್ಯಾಸ ಹಾಗೂ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ದಿನಗಳು ಬಹಳ ದೂರವಿಲ್ಲ.
ಪ್ರಧಾನಿ ಸಿಂಗಾಪುರ ಪ್ರವಾಸದ ಹಿಂದಿನ ದೂರ ದೃಷ್ಟಿ ಏನು?ವಿಶ್ವಸಮಿ ಕಂಡಕ್ಟರ್ ಮಾರುಕಟ್ಟೆಯಲ್ಲಿ ಸಿಂಗಾಪುರ ಪ್ರಮುಖ ಪಾತ್ರ ವಹಿಸುತ್ತದೆ. ವಿಶ್ವದ ಶೇಕಡಾ ಹತ್ತರಷ್ಟು ಉತ್ಪಾದನೆ, ಶೇಕಡ ಐದರಷ್ಟು ತಯಾರಿಕಾ ಸಾಮರ್ಥ್ಯ ಹಾಗೂ ಶೇಕಡ 20ರಷ್ಟು ಸಲಕರಣೆ ತಯಾರಿಕೆಯ ಸಾಮರ್ಥ್ಯ ಹೊಂದಿದೆ. ಆದರೆ, ಸೆಮಿಕಂಡಕ್ಟರ್ ಕೈಗಾರಿಕೆಗಳನ್ನು ವಿಸ್ತರಿಸಲು ಮಾನವ ಸಂಪನ್ಮೂಲ ಹಾಗೂ ಭೂಮಿಯ ಕೊರತೆ ಇದೆ. ಪ್ರಧಾನಿ ಮೋದಿ ಅವರು ಸಿಂಗಾಪೂರಿನ ಕಂಪನಿಗಳಿಗೆ ಮಾನವ ಸಂಪನ್ಮೂಲ ಹಾಗೂ ಭೂಮಿಯನ್ನು ನೀಡಲು ಒಪ್ಪಿದ್ದಾರೆ. ಇದರಿಂದ ಭಾರತಕ್ಕೆ ಸಾಕಷ್ಟು ಲಾಭವಾಗಲಿದ್ದು ಉದ್ಯೋಗ, ಆರ್ಥಿಕತೆ ಹಾಗೂ ಸೆಮಿಕಂಡಕ್ಟರ್ ಗೆ ಬೇಕಾದ ಪರಿಸರವನ್ನು ಸೃಷ್ಟಿಸಲು ಸಹಕಾರಿಯಾಗಲಿದೆ.
ಪ್ಯಾರಾಲಿಂಪಿಕ್ಸ್ 2024ರಲ್ಲಿ 29 ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಭಾರತ