ನಮ್ಮ ದೇಶವು 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿದೆ. ಇಂತಹ ಹೆಮ್ಮೆಯ ಸಂದರ್ಭದಲ್ಲಿ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ ಎ ಎಲ್) ಸ್ವದೇಶಿ ನಿರ್ಮಿತ ಅತ್ಯಾಧುನಿಕ ಕಮಿಕೇಜ್ ಡ್ರೋನ್ ಅನ್ನು ಅನಾವರಣಗೊಳಿಸಿದೆ.
ರಷ್ಯಾ-ಉಕ್ರೇನ್ ಸಮರ ಹಾಗೂ ಇಸ್ರೇಲ್-ಗಾಜ ಸಂಘರ್ಷದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಮಿಕೇಜ್ ಡ್ರೋನುಗಳು ಆತ್ಮಾಹುತಿ ಬಾಂಬರ್ ರೀತಿಯಲ್ಲಿ ಕಾರ್ಯನಿರ್ವಹಿಸಬಲ್ಲವು. ಇಂತಹ ಡ್ರೋನ್ಗಳು ಮುಂದಿನ ದಿನಗಳಲ್ಲಿ ಭಾರತದ ಸೇನಾ ಬತ್ತಳಿಕೆ ಸೇರಲಿವೆ.
ಸುಮಾರು 25 ಕೆ.ಜಿಯಷ್ಟು ಸ್ಫೋಟಕಗಳನ್ನು ಹೊತ್ತೊಯ್ಯುವ ಈ ಡ್ರೋನ್ ದೂರದಲ್ಲಿ ಕುಳಿತಿರುವ ಕಂಟ್ರೋಲರ್ ಗಳಿಂದ ಆದೇಶ ಪಡೆದು ದಾಳಿ ನಡೆಸುತ್ತವೆ. ಇವುಗಳನ್ನು ಹಕ್ಕಿಗಳ ಹಿಂಡುಗಳಂತೆ ಏಕಕಾಲಕ್ಕೆ ಕಳುಹಿಸಬಹುದು. ಇದರಿಂದ ಡ್ರೋನ್ ಗಳು ಶತ್ರು ಪಡೆಯ ರೇಡಾರ್ ಗಳ ಕಣ್ಣು ತಪ್ಪಿಸಿ ನಿಗದಿತ ಗುರಿ ತಲುಪಿ ದಾಳಿ ನಡೆಸಲು ಸುಲಭವಾಗಲಿದೆ.
“ಭಾರತವು ಈಗ ಸಂಪೂರ್ಣ ಸ್ವದೇಶಿ ನಿರ್ಮಿತ ಕಮಿಕೇಜ್ ಡ್ರೋನ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಂದಿನ ಕಾಲಮಾನಕ್ಕೆ ಇವು ಹೇಳಿ ಮಾಡಿಸಿದಂತಿದ್ದು, ನಮ್ಮ ಸೇನೆಯ ಬಲವನ್ನು ಹೆಚ್ಚಿಸಲಿದೆ. ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮುಂದುವರಿದಿದೆ,” ಎಂದು ಯೋಜನೆಯ ಹೊಣೆ ಹೊತ್ತಿರುವ ಎನ್ಎಎಲ್ ನ ನಿರ್ದೇಶಕ ಡಾ. ಅಭಯ್ ಪಾಶೀಲ್ಕರ್ ತಿಳಿಸಿದ್ದಾರೆ.
ಕಮಿಕೇಶ್ ಡ್ರೋನ್ ವಿಶೇಷತೆಗಳೇನು?
- ಕಮಿಕೇಜ್ ಡ್ರೋನ್ ಉದ್ದ 2.8 ಮೀಟರ್ ರೆಕ್ಕೆಗಳ ಅಗಲ 3.5 ಮೀಟರ್ ಇದೆ.
- ಈ ಡ್ರೋನ್ 120 ಕೆ.ಜಿ ತೂಕ ಹೊಂದಿದ್ದು, 25 ಕೆಜಿಯಷ್ಟು ಸ್ಫೋಟಕ ಹೊತ್ತಯ್ಯ ಬಲ್ಲ ಸಾಮರ್ಥ್ಯ ಹೊಂದಿದೆ.
- ಈ ಡ್ರೋನ್ ಅಲ್ಲಿ 30 ಅಶ್ವಶಕ್ತಿ ಸಾಮರ್ಥ್ಯದ ವಾಂಕೆಲ್ ಎಂಜಿನ್ ಬಳಕೆ ಮಾಡಲಾಗಿದೆ.
- ಕಮಿಕೇಜ್ ನಿರಂತರವಾಗಿ 1000 ಕಿಲೋಮೀಟರ್ ಹಾರಾಟ ನಡೆಸಬಲ್ಲದು.
- ಗಂಟೆಗೆ 180 ಕಿಲೋಮೀಟರ್ ಗರಿಷ್ಠ ವೇಗದಲ್ಲಿ ಈ ಡ್ರೋನ್ ಸಾಗುತ್ತದೆ.
ಭಾರತೀಯ ಸೇನೆಗೆ ಸೇರ್ಪಡೆಯಾಗುತ್ತಿರುವ ಈ ಡ್ರೋನ್ ಭಾರತೀಯ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಮ್ಮ ಯೋಧರ ಜೊತೆಗೂಡಿ ಈ ಡ್ರೋನ್ ಕೂಡ ತಾಂತ್ರಿಕವಾಗಿ ದೇಶಸೇವೆಯಲ್ಲಿ ತೊಡಗಲಿದೆ ಎಂಬುದು ಹೆಮ್ಮೆಯ ವಿಚಾರವಾಗಿದೆ.