ಕಥಾ ಲೋಕಸಾಹಿತ್ಯ ಲೋಕ

ಹೆಣ್ಣೆಂದರೆ ಅಷ್ಟೇ ಸಾಕೆ?

Share news

ಸುಮಿತ್ರಾಳಿಗೆ ಇನ್ನೂ ಇಪ್ಪತ್ತೊಂಭತ್ತು ವರ್ಷ. ಮಕ್ಕಳಿಲ್ಲದೆ ನಾಲ್ಕು ವರ್ಷಗಳಿಂದ ಏಕಾಂಗಿಯಾಗಿ ದುಡಿಯುತ್ತಿದ್ದಾಳೆ. ತಾನು ತನ್ನ ಕಾಲ ಮೇಲೆ ನಿಲ್ಲುವವರೆಗೂ ಯಾವ ಮದುವೆರನ್ನು ಆಗುವುದಿಲ್ಲವೆಂದು ತಂದೆ ತಾಯಿಗಳಿಗೆ ಶಪಥ ಮಾಡಿ ಹೇಳಿಬಿಟ್ಟಿದ್ದಳು. ಅದರಂತೆಯೇ ಚೆನ್ನಾಗಿ ಓದಿ ಒಳ್ಳೆಯ ಸರ್ಕಾರಿ ಕೆಲಸ ದಕ್ಕಿಸಿಕ್ಕೊಂಡಳು. ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ಸಂಬಳ ಸಿಗುತ್ತಿತ್ತು. ಆರು ತಿಂಗಳು ದುಡಿದ ಹಣದಲ್ಲಿ ಅಪ್ಪನಿಗೆ ಸೆಕೆಂಡ್ ಹ್ಯಾಂಡ್ ಸ್ಕೂಟರ್, ಅಮ್ಮನಿಗಾಗಿ ಹೊಸ ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್. ಅಕ್ಕನ ಇಬ್ಬರು ಮಕ್ಕಳಿಗೂ ಟ್ಯಾಬುಗಳನ್ನು ಕೊಡಿಸಿ ,ತನ್ನ ಗೆಳೆಯ ಗೆಳತಿಯರ ವೃಂದಕ್ಕೆ ಭರ್ಜರಿ ಪಾರ್ಟಿ ಕೊಡಿಸಿದ್ದಳು. ಅಷ್ಟೊತ್ತಿಗೆ ವಯಸ್ಸು ಇಪ್ಪತ್ತೈದು ಆಗಿತ್ತು. ಅಪ್ಪ ಅಮ್ಮ ಪದೇ ಪದೇ ವಯಸ್ಸಿನ ಬಗ್ಗೆ ಎಚ್ಚರಿಸುವುದರಿಂದ ತಪ್ಪಿಸಿಕೊಳ್ಳಲು ಮದುವೆಗೆ ಒಪ್ಪಿಕೊಂಡಳು. ಲವ್ ಮ್ಯಾರೇಜ್ ಅಲ್ಲದಿದ್ದರೂ ಹುಡುಗ ಒಳ್ಳೆಯವನೇ ಸಿಕ್ಕ. ಖಾಸಗಿ ಕಂಪನಿಯೊಂದರಲ್ಲಿ ತಿಂಗಳಿಗೆ ಐವತ್ತು ಸಾವಿರ ರೂಪಾಯಿ ಸಂಬಳಕ್ಕಾಗಿ ದುಡಿಯುತ್ತಿದ್ದ. ಆತನೂ ಓದುದರಲ್ಲಿಯೇ ತನ್ನ ಹರೆಯವನ್ನು ಮುಗಿಸಿದ್ದ. ಅವನಿಗೆ ಮೂವತ್ತೆಂಟು ವರ್ಷ ಆಗಿತ್ತು. ಆಗ ಸುಮಿತ್ರಾಳ ಜೊತೆ ಮದುವೆಯಾಯಿತು.

ಮದುವೆಯಾದ ನಾಲ್ಕೇ ತಿಂಗಳಿಗೆ ಗಂಡ ತೀರಿಕೊಂಡ. ತನ್ನ ಕಂಪೆನಿಯಿಂದ ವಿದೇಶಕ್ಕೆ ಯಾವುದೋ ಪ್ರಾಜೆಕ್ಟ್ ಮೇಲೆ ಟ್ರಿಪ್ ಕಳಿಸಿದ್ದರು. ಅಲ್ಲಿಂದ ವಾಪಸ್ಸು ಬಂದವನೇ ಹಾಸಿಗೆ ಹಿಡಿದುಬಿಟ್ಟ.ತನ್ನ ಮನೆಯವರು ಮಾಡಿದ್ದ ಸಾಲ ತೀರಿಸಲು ಹತ್ತು ವರ್ಷ ನಿರಂತರವಾಗಿ ದುಡಿದಿದ್ದ. ತೋಳಿನಲ್ಲಿದ್ದ ಬಲ ಅಡಗುವವರೆಗೂ ಊಟ, ನಿದ್ದೆ ಬಿಟ್ಟು ಹಗಲು ರಾತ್ರಿ ದುಡಿದಿದ್ದ. ಅದರ ಪರಿಣಾಮ ಆರೋಗ್ಯ ಕಾಪಾಡುವಲ್ಲಿ ಸೋತು, ಸುಮೀತ್ರಾಳಿಗೆ ಯಾವುದೇ ಖುಷಿ ನೀಡಿದ ತೃಪ್ತಿ ಇಲ್ಲದೇ ಒಬ್ಬಳನೇ ಬಿಟ್ಟು ಹೊರಟೇಬಿಟ್ಟ. ಸುಮಿತ್ರಾಳಿಗೆ ಒಂದು ಕಡೆ ತನ್ನ ತಂದೆ ತಾಯಿಯ ಮೇಲೆ ಸಿಟ್ಟು ಇತ್ತು. ಮದುವೆ ವಿಷಯದಲ್ಲಿ ಇಷ್ಟವಿಲ್ಲದ ತನಗೆ ಮದುವೆ ಮಾಡಿ ಇಷ್ಟು ಬೇಗ ವಿಧವೆಯ ಪಟ್ಟ ಕೊಟ್ಟುಬಿಟ್ಟರಲ್ಲ ಎಂದು. ಇನ್ನೊಂದು ಕಡೆ ಸುಮಿತ್ರಾಳ ತಂದೆ ತಾಯಿಗೂ ಕೋಪ ಇತ್ತು. ನಾವು ಹೇಳಿದ ಹಾಗೆ ಇಪ್ಪತ್ತು ವರ್ಷಕ್ಕೆ ಮದುವೆಯಾಗಿದ್ದರೆ ಇದೆಲ್ಲವನ್ನೂ ತಪ್ಪಿಸಬಹುದಿತ್ತು ಎಂದು. ಆದರೆ ವಿಧಿಯ ಕೋಪದ ಬಗ್ಗೆ ಅವರ್ಯಾರೂ ಯೋಚಿಸಲಿಲ್ಲ.

ಕೆಲಸ ಬಿಟ್ಟು ಮನೆಯಲ್ಲೇ ಇರು ಅಂತ ಅತ್ತೆ ಮಾವ ಕೇಳಿಕೊಂಡರೂ ಯಾರ ಮಾತಿಗೂ ಜಗ್ಗದೆ, ತಾನು ಬಿಕಾರಿಯಲ್ಲ ಎಂಬ ಪಟ್ಟವನ್ನು ಸ್ವೀಕರಿಸದೆ ದುಡಿದ ಹಣವನ್ನೆಲ್ಲಾ ಅನಾಥಾಶ್ರಮ ಮತ್ತು ವೃಧ್ಧಾಶ್ರಮಗಳಿಗೆ ಕೊಟ್ಟುಬಿಡುತ್ತಿದ್ದಳು. ಎಷ್ಟೋ ಜನ ಇವಳ ಅಂದ ಚೆಂದ ಮೈಮಾಟಕ್ಕೆ ಮಾರು ಹೋಗಿ ಬಾಳು ಕೊಡಲು ಮುಂದೆ ಬಂದರೂ ಸುಮಿತ್ರಾಳ ಮನಸ್ಸು ಯಾರನ್ನೂ ಒಪ್ಪಲಿಲ್ಲ. ಯಾಕೆಂದರೆ ಅವಳು ಅದಾಗಲೇ ಎಲ್ಲರ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಳು. ಆಫೀಸಿನಲ್ಲಿರುತ್ತಿದ್ದ ಅಕ್ಕ ಪಕ್ಕದವರ ಓರೆಕಣ್ಣುಗಳು ಯಾವಾಗಲೂ ಇವಳ ಎದೆ, ತೊಡೆ, ಸೊಂಟದ ಮೇಲೇ ಇರುತ್ತಿದ್ದವು. ಆ ಕಣ್ಣುಗಳಲ್ಲಿರುತ್ತಿದ್ದ ಕಾಮದಾಹಕ್ಕೆ ಸುಮೀತ್ರಾ ಸಿಕ್ಕಿ ಹಾಕಿಕೊಂಡಿದ್ದರೆ ಅವಳು ಇನ್ನಿಲ್ಲದಂತೆ ತಿಂದು ಮುಗಿಸಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದರು. ಹೋಗಿ ಬರುವಾಗ ಯಾವ್ಯಾವುದೋ ನೆಪದಲ್ಲಿ ಇವಳ ಅಂಗಾಂಗಗಳನ್ನು ಸ್ಪರ್ಶಿಸಿ ಏನೂ ಕಾಣದವರಂತೆ ಇದ್ದುಬಿಡುತ್ತಿದ್ದರು. ಊಟದ ವಿರಾಮದಲ್ಲಿ ಬಾಯಿಗೆ ಬಂದ ಹಾಗೆ ಅವಳ ಬೆತ್ತಲೆ ದೇಹದ ಬಗ್ಗೆ ಹರಟಿಸುತ್ತಿದ್ದರು. ಇದೆಲ್ಲದರಿಂದ ಬೇಸತ್ತು ಸುಮೀತ್ರಾ ಒಂದು ಉಪಾಯ ಮಾಡಿದಳು. ಇಷ್ಟು ದಿನ ಸೀರೆ ಉಟ್ಟು ಕೆಲಸಕ್ಕೆ ಬರುತ್ತಿದ್ದವಳು ಒಂದು ದಿನ ಬೇಕುಬೇಕಂತಲೇ ಅಂಗಾಂಗಗಳನ್ನು ತೋರ್ಪಡಿಸುವ ಮಾರ್ಡನ್ ಉಡುಪುಗಳನ್ನು ತೊಟ್ಟು ಕೆಲಸಕ್ಕೆ ಬಂದಳು. ನಿರೀಕ್ಷಿಸಿದ ಹಾಗೆಯೇ ಅಕ್ಕ ಪಕ್ಕದವರ ಕಣ್ಣುಗಳು ಕ್ಷಣವೂ ತಮ್ಮ ರೆಪ್ಪೆಗಳನ್ನು ಮಿಟುಕಿಸದೆ ಸುಮೀತ್ರಾಳ ಅಂಗಾಂಗಗಳ ಮೇಲೆ ವಿರಾಮವಿಲ್ಲದಂತೆ ದಾಳಿ ನಡೆಸುತ್ತಿದ್ದವು. ಸುಮೀತ್ರಾ ಶೌಚಕ್ಕೆ ಎದ್ದು ಹೋಗಿ ವಾಪಸ್ಸು ಬಂದು ಕೂತಳು. ದಾಳಿ ಮುಂದುವರೆಸಲು ತಯಾರಾಗಿದ್ದ ಕಣ್ಣುಗಳು ನೋಡಬಾರದ್ದೆನನ್ನೋ ನೋಡಿ ಸೋತುಬಿಟ್ಟವು. ತಮ್ಮ ಬಗ್ಗೆ ತಾವೇ ಅಸಹ್ಯ ಪಟ್ಟಕೊಂಡು ಮೂಲೆ ಸೇರಿದವು.

ಶೌಚಕ್ಕೆ ಹೋಗಿದ್ದ ಸುಮೀತ್ರಾ ತನ್ನ ಎದೆ ಹಾಗೂ ಸೊಂಟಗಳ ಜಾಗದಲ್ಲಿ ಮದರ್ ತೆರೆಸಾ, ಇಂದಿರಾ ಗಾಂಧಿ, ಅಬ್ಬಕ್ಕ, ಝಾನ್ಸಿ ಲಕ್ಷ್ಮೀಬಾಯಿ ರಾಣಿಯರ ಚಿಕ್ಕ ಚಿಕ್ಕ ಫೋಟೋಗಳನ್ನು ಬಟ್ಟೆಗೆ ಅಂಟಿಸಿಕೊಂಡು ಬಂದಿದ್ದಳು. ಏನನ್ನೋ ನೋಡಬೇಕೆಂದು ಕಾದಿದ್ದ ಕಣ್ಣುಗಳನ್ನು ಫೋಟೋಗಳು ಒಂದೇ ನೋಟಕ್ಕೆ ಒಡೆದು ಹಾಕಿದವು. ಸುಮೀತ್ರಾ ಓರೆಕಣ್ಣುಗಳಿಂದ ಸ್ವತಂತ್ರವಾದಳು.

ಪ್ರತಿಯೊಬ್ಬ ಹೆಣ್ಣಿನಲ್ಲೂ ವೀರವನಿತೆಯರಂತೆ ಹೋರಾಡುವ ಸೈನಿಕರಿರುತ್ತಾರೆ. ಹೃದಯ ವೈಶಾಲ್ಯ ಮೆರೆದು ತಮ್ಮ ಇಡೀ ಜೀವನವನ್ನು ಸಮಾಜಮುಖಿ ಕಾರ್ಯಗಳಿಗಾಗಿ ಮುಡಿಪಾಗಿಡುವ ಮಹನೀಯರೂ ಇರುತ್ತಾರೆ. ಸಂದರ್ಭಕ್ಕನುಗುಣವಾಗಿ ಹೊರಗೆ ಬರುತ್ತಾರೆ. ಅಂಥವರನ್ನು ಹೆಣ್ಣೆಂದರೆ ಅಷ್ಟೇ ಸಾಕೆ??


Share news

Leave a Reply

Your email address will not be published. Required fields are marked *

Back to top button