ಹವಾಮಾನ ಬಿಕ್ಕಟ್ಟಿನಿಂದಾಗಿ ವಾತಾವರಣದಲ್ಲಾಗುತ್ತಿರುವ ಅನಿರೀಕ್ಷಿತ ಬೆಳವಣಿಗೆಗಳನ್ನು ಸುಧಾರಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಇತ್ತೀಚೆಗೆ ಸಂಪುಟ ಸಭೆಯಲ್ಲಿ ಮಿಷನ್ ಮೌಸಮ್ ಗೆ ಒಪ್ಪಿಗೆ ನೀಡಿದೆ. ಆ ಮೂಲಕ ಹವಾಮಾನ ವೈಪರಿತ್ಯ ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಊಹಿಸುವುದರ ಜೊತೆಗೆ ಅವುಗಳನ್ನು ನಿಭಾಯಿಸುವಲ್ಲಿ ಭಾರತದ ಸಾಮರ್ಥ್ಯ ವೃದ್ಧಿಸಲು ಈ ಯೋಜನೆ ನೆರವಾಗಲಿದೆ. ಇದಲ್ಲದೆ, ಹವಾಮಾನ ಸಂಬಂಧಿತ ಘಟನೆಗಳ ಬಗ್ಗೆ ನಿಖರವಾದ ಮಾಹಿತಿ ಒದಗಿಸುವುದು ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆಯ ಉದ್ದೇಶವಾಗಿದೆ. ಇದರಿಂದ ಪ್ರಕೃತಿ ವಿಕೋಪಗಳನ್ನು ಎದುರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ.
ಮಿಷನ್ ಮೌಸಮ್ ಪ್ರಯೋಜನಗಳೇನು?
ಐದು ವರ್ಷಗಳ ಮಿಷನ್ ಅನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುವುದು. 2026 ವರೆಗೆ ನಡೆಯುವ ಮೊದಲ ಹಂತವು ವೀಕ್ಷಣಾ ಜಾಲವನ್ನು ವಿಸ್ತರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇನ್ನು ಎರಡನೇ ಹಂತವು ವೀಕ್ಷಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ಉಪಗ್ರಹಗಳ ಸಂಖ್ಯೆ ವೃದ್ಧಿ ಕೇಂದ್ರೀಕರಿಸುತ್ತದೆ. ಮಿಷನ್ ಮೌಸಮ್ ಯೋಜನೆಯಲ್ಲಿ ಹವಾಮಾನಕ್ಕೆ ಸಂಬಂಧಿಸಿದ ನಿಖರ ಮಾಹಿತಿ ಪಡೆಯಲು ಸುಧಾರಿತ ಸಂವೇದಕಗಳನ್ನು ಬಳಸಲಾಗುತ್ತದೆ. ಕೃತಕವಾಗಿ ಮೋಡಗಳನ್ನು ಅಭಿವೃದ್ಧಿಪಡಿಸಲು ಪ್ರಯೋಗಾಲಯ ಸ್ಥಾಪಿಸಲಾಗುವುದು. ಇದರೊಂದಿಗೆ ಮುಂದಿನ ಪೀಳಿಗೆಯ ರಾಡರ್ಗಳ ಸಂಖ್ಯೆಯನ್ನು ಶೇಕಡಾ 150ಕ್ಕಿಂತ ಹೆಚ್ಚಿಸಲಾಗುತ್ತದೆ. ಉಪಗ್ರಹ ವ್ಯವಸ್ಥೆಗಳನ್ನು ನಿಯೋಜಿಸಲಾಗುವುದು. ಅಲ್ಲದೆ, ಹೆಚ್ಚಿನ ಸಾಮರ್ಥ್ಯದ ಸೂಪರ್ ಕಂಪ್ಯೂಟರ್ ಗಳನ್ನು ಸಹ ಬಳಸಲಾಗುವುದು. ಆ ಮೂಲಕ ಮಿಷನ್ ಕೃಷಿ, ವಿಪತ್ತು ನಿರ್ವಹಣೆ, ರಕ್ಷಣೆ, ವಾಯು ಯಾನ, ಇಂಧನ, ಜಲಸಂಪನ್ಮೂಲ ಮತ್ತು ಪ್ರವಾಸೋದ್ಯಮ ಸೇರಿ ಹಲವು ಕ್ಷೇತ್ರಗಳಿಗೆ ಪ್ರಯೋಜನಕಾರಿ ಆಗಲಿದೆ.
ಇನ್ನಿತರ ಮುಖ್ಯ ಉದ್ದೇಶಗಳು
ಮಿಷನ್ ಮೌಸಮ್ ಯೋಜನೆಯು ಕಡಿಮೆ ಮತ್ತು ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಯ ನಿಖರತೆಯನ್ನು ಶೇಕಡಾ ಐದರಿಂದ ಹತ್ತರಷ್ಟು ಸುಧಾರಿಸುವ ಗುರಿ ಹೊಂದಿದೆ. ಇದರೊಂದಿಗೆ ಎಲ್ಲಾ ಪ್ರಮುಖ ಮೆಟ್ರೋ ನಗರಗಳಲ್ಲಿ ಗಾಳಿ ಗುಣಮಟ್ಟ ಕುರಿತು ಶೇಕಡ ಹತ್ತರಷ್ಟು ನಿಖರವಾದ ಮುನ್ಸೂಚನೆ ನೀಡಲು ಗಮನ ಹರಿಸಲಿದೆ. ಜೊತೆಗೆ ಪಂಚಾಯತ್ ಮಟ್ಟದವರೆಗೆ ಹವಾಮಾನ ಮುನ್ಸೂಚನೆಯನ್ನು ಸಕ್ರಿಯಗೊಳಿಸುತ್ತದೆ. ಗುಡುಗು ಭಾರಿ ಮಳೆ ಅಥವಾ ಹಿಮದಂತಹ ವೇಗವಾಗಿ ಬದಲಾಗುವ ಹವಾಮಾನ ಘಟನೆಗಳನ್ನು ಟ್ರ್ಯಾಕ್ ಮಾಡಲು ಸಹ ಮಿಷನ್ ಒತ್ತು ನೀಡಲಿದೆ.
ಹವಾಮಾನದ ನಿಖರ ಮಾಹಿತಿ ಲಭ್ಯ
ಮುಂಬರುವ ವರ್ಷಗಳಲ್ಲಿ ದೇಶದ ಪ್ರತಿಯೊಬ್ಬರಿಗೂ ಹವಾಮಾನ ಕುರಿತ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಹವಾಮಾನ ಮುನ್ಸೂಚನೆ ವ್ಯವಸ್ಥೆ ಮತ್ತಷ್ಟು ಬಲಪಡಿಸಲು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸಚಿವ ಸಂಪುಟ ಮಹತ್ವದ ಮಿಷನ್ ಮೌಸಮ್ ಆರಂಭಿಸಲಿದೆ. ಎರಡು ಸಾವಿರ ಕೋಟಿ ರೂಪಾಯಿ ವೆಚ್ಚದ ಮಿಷನ್ ಮೌಸಮ್ ಹವಾಮಾನ ಸಂಬಂಧಿತ ಘಟನೆಗಳ ಬಗ್ಗೆ ನಿಖರ ಮಾಹಿತಿ ಒದಗಿಸುವುದು ಯೋಜನೆಯ ಉದ್ದೇಶ. ಇದರಿಂದ ಪ್ರಕೃತಿ ವಿಕೋಪಗಳಂತಹ ಪರಿಸ್ಥಿತಿ ಎದುರಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಮತ್ತು ನಷ್ಟವನ್ನು ತಪ್ಪಿಸಲು ಮಹತ್ವದ ಪಾತ್ರ ವಹಿಸಲಿದೆ.
ಭೂ ವಿಜ್ಞಾನ ಸಚಿವಾಲಯದ ಜವಾಬ್ದಾರಿ
ಯೋಜನೆಯ ಮೊದಲ ಎರಡು ವರ್ಷಗಳವರೆಗೆ ಮಿಷನ್ ಮೌಸಮ್ ಅನ್ನು ಭೂ ವಿಜ್ಞಾನ ಸಚಿವಾಲಯ ಮೂರು ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಮುನ್ನಡೆಸಲಿದೆ. ಭಾರತದ ಹವಾಮಾನ ಇಲಾಖೆ (ಐಎಂಡಿ), ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯಾರೊಲಜಿ) ಮತ್ತು ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ ಭೂ ವಿಜ್ಞಾನ ಸಚಿವಾಲಯಕ್ಕೆ ನೆರವಾಗಲಿವೆ. ಹಾಗೆಯೇ ಈ ಮೂರು ಸಂಸ್ಥೆಗಳಿಗೆ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ, ಧ್ರುವ ಮತ್ತು ಸಾಗರ ಸಂಶೋಧನೆಯ ರಾಷ್ಟ್ರೀಯ ಕೇಂದ್ರ ಮತ್ತು ಸಾಗರ ತಂತ್ರಜ್ಞಾನದ ರಾಷ್ಟ್ರೀಯ ಸಂಸ್ಥೆಗಳು ಸಹಾಯ ಮಾಡಲಿವೆ.
ಮೌಸಮ್ ಅಪ್ಲಿಕೇಶನ್
ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಭೂ ವಿಜ್ಞಾನ ಸಚಿವಾಲಯ ಹಾಗೂ ಇತರ ವೈಜ್ಞಾನಿಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಟ್ ಜಿಪಿಟಿ ಅಂತ ಅಪ್ಲಿಕೇಶನ್ ಮೌಸಮ್ ಜಿಪಿಟಿ ಅನ್ನು ಅಭಿವೃದ್ಧಿಪಡಿಸಲಿದೆ. ಇದು ಬಳಕೆದಾರರು ಮುಂದಿನ ಐದು ವರ್ಷಗಳಲ್ಲಿ ಲಿಖಿತ ಮತ್ತು ಆಡಿಯೋ ರೂಪದಲ್ಲಿ ಹವಾಮಾನ ಮಾಹಿತಿಯನ್ನು ತ್ವರಿತವಾಗಿ ಪಡೆಯಲು ಸಹಾಯ ಮಾಡುತ್ತದೆ.
ಮೌಸಮ್ ಮಿಷನ್ ನ ಅಗತ್ಯವಿತ್ತೇ?
ಭೂ ವಿಜ್ಞಾನ ಸಚಿವಾಲಯದ ಪ್ರಕಾರ, ವಾಯುಮಂಡಲದ ಪ್ರಕ್ರಿಯೆಗಳ ಸಂಕೀರಣತೆ ಮತ್ತು ಪ್ರಸ್ತುತ ವೀಕ್ಷಣೆ ಮತ್ತು ಮಾದರಿ ನಿರ್ಣಯದಲ್ಲಿನ ಮಿತಿಗಳಿಂದಾಗಿ ಉಷ್ಣವಲಯದ ಹವಾಮಾನ ಮುನ್ಸೂಚನೆಯು ಸವಾಲಾಗಿಯೇ ಉಳಿದಿದೆ. ವೀಕ್ಷಣಾ ದತ್ತಾಂಶವು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ತುಲನಾತ್ಮಕವಾಗಿ ವಿರಳವಾಗಿದೆ. ಪ್ರಸ್ತುತ 12 ಕಿಲೋಮೀಟರ್ಗಳಲ್ಲಿರುವ ಸಂಖ್ಯಾತ್ಮಕ ಹವಾಮಾನ ಮುನ್ಸೂಚನೆ (ಎನ್.ಡಬ್ಲ್ಯೂ.ಪಿ)ಮಾದರಿಗಳ ಸಮತಲ ರೆಸಲ್ಯೂಶನ್, ಭಾರತದಲ್ಲಿನ ಸಣ್ಣ ಪ್ರಮಾಣದ ಹವಾಮಾನ ಘಟನೆಗಳನ್ನು ನಿಖರವಾಗಿ ಮುನ್ಸೂಚನೆ ನೀಡುವುದು ಕಷ್ಟಕರವಾಗಿದೆ. ಇದೇ ಸಮಯದಲ್ಲಿ, ಹವಾಮಾನ ಬದಲಾವಣೆಯು ವಾತಾವರಣದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಆಗಾಗ್ಗೆ ಭಾರಿ ಮಳೆ ಮತ್ತು ತೀವ್ರ ಬಿಸಿಲಿನಂತಹ ಪರಿಸ್ಥಿತಿಗಳು ಉಂಟಾಗುತ್ತವೆ. ಇದು ಪ್ರವಾಹ ಮತ್ತು ಬರಗಾಲದಂತಹ ಸವಾಲುಗಳನ್ನು ಒಡ್ಡುತ್ತದೆ. ಇದಲ್ಲದೆ, ಮೇಘ ಸ್ಪೋಟಗಳು, ಗುಡುಗು ಮತ್ತು ಮಿಂಚುಗಳಂತಹ ಹವಾಮಾನ ಪರಿಸ್ಥಿತಿಗಳು ಸಹ ಸಮಸ್ಯೆ ಒಡ್ಡುತ್ತಿವೆ. ಇಂತಹ ಸಂಕೀರ್ಣ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಮೋಡಗಳ ಒಳಗೆ ಮತ್ತು ಹೊರಗೆ ಮೇಲ್ಮೈಯಲ್ಲಿ, ಸಾಗರಗಳು ಮತ್ತು ಧ್ರುವ ಪ್ರದೇಶಗಳಲ್ಲಿ ಸಂಭವಿಸುವ ಭೌತಿಕ ಪ್ರಕ್ರಿಯೆಗಳ ಆಳವಾದ ಜ್ಞಾನದ ಅಗತ್ಯವಿದ್ದು, ಈ ಬಗ್ಗೆ ಮಿಷನ್ ಕಾರ್ಯನಿರ್ವಹಿಸಲಿದೆ.