ಅರೆ..!!ರಾಮಫಲ ಕೇಳಿದ್ದೇನೆ..ಏನಿದು ರಾಮ ಸೆಣಬು?? ಎಂದು ಯೋಚಿಸುತ್ತಿದ್ದೀರಾ.. ಹಾಗಾದರೆ ಈ ರಾಮ ಸೆಣಬಿನ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ.
“ರಾಮ ಸೆಣಬು” ಎಂಬ ಹೆಸರು ಇಡೀ ವಿಶ್ವಕ್ಕೆ ಅಪರಿಚಿತವಾದುದು. ಜಗತ್ತಿನ ಅತಿ ಅಪರೂಪದ ಈ ರಾಮ ಸೇಣಬು ಗಿಡಗಳು ಕರ್ನಾಟಕದ ಹೊಸಪೇಟೆ ಸಂಡೂರಿನ ಬೆಟ್ಟಗಳಲ್ಲಿ ದಶಕಗಳ ನಂತರ ಚಿಗುರೊಡೆದು ಜನರ ಕಣ್ಮನ ಸೆಳೆಯುತ್ತಿವೆ.
ಏನಿದು “ರಾಮ ಸೆಣಬು?”
ರಾಮ ಸೆಣಬು ಎಂಬ ಸಸ್ಯವು ಇಡೀ ಜಗತ್ತಿನಾದ್ಯಂತ ಹುಡುಕಿದರೂ ಕಾಣಸಿಗದು. ಅನಾಮಧೇಯವಾಗಿದ್ದ ಈ ಸಸ್ಯಕ್ಕೆ ‘ಕ್ರೋಟಲೇರಿಯಾ ಸಂಡೂರೆನ್ಸಿಸ್’ ಎಂಬ ಹೆಸರಿನಿಂದ ಕರೆಯುತ್ತಾರೆ.
ಸಮುದ್ರಮಟ್ಟದಿಂದ ಸುಮಾರು ಒಂದು ಸಾವಿರ ಮೀಟರ್ ಎತ್ತರದಲ್ಲಿರುವ ಹೊಸಪೇಟೆ ಸಂಡೂರಿನ ಪರ್ವತಶ್ರೇಣಿಗಳಲ್ಲಿ ಈ ಅಪರೂಪದ ಜೀವ ವೈವಿಧ್ಯದ ಸ್ಥಾನವಾಗಿದ್ದು ರಾಮಸಣಬು ಬೆಳೆಯುವ ವಿಶ್ವದ ಏಕೈಕ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದರೆ ಬಳ್ಳಾರಿಯಲ್ಲಿನ ಅತಿಯಾದ ಗಣಿಗಾರಿಕೆಯ ಅಬ್ಬರದಲ್ಲಿ ನಲುಗಿ ಹೋಗಿದ್ದ ಅನೇಕ ಸಸ್ಯ ಪ್ರಭೇದಗಳಲ್ಲಿ ರಾಮಸೆಣಬು ಕೂಡ ಒಂದಾಗಿತ್ತು. ಆದರೆ ಈಗ ಮತ್ತೆ ಈ ಜೀವ ವೈವಿಧ್ಯ ಸಸಿಗಳು ಜೀವ ತಳೆಯುತ್ತಿರುವುದು ವಿಶೇಷ. ಅದರಲ್ಲೂ ಒಂದು ದಶಕದ ಬಳಿಕ ರಾಮ ಸೆಣಬು ಹೊಸಪೇಟೆ ಸಂಡೂರಿನಲ್ಲಿ ಹೊಸ ಕಳೆಯೊಂದಿಗೆ ನಳನಳಿಸುತ್ತಿದೆ.
ರಾಮ ಸೆಣಬು ಗಿಡದ ವಿಶೇಷತೆಯೇನು?
ಈ ಗಿಡದ ಎಲೆಗಳ ಸುತ್ತಲಿನ ರೋಮಗಳು ಸೂರ್ಯ ರಶ್ಮಿಯಂತೆ ಪಳಪಳನೆ ಹೊಳೆಯುತ್ತವೆ. ಈ ಗಿಡದ ಹೂವು ಹಳದಿ ಬಣ್ಣದ್ದಾಗಿದ್ದು ತಾಯಿಯು ಬುರುಡೆಯಾಕಾರದ ರೀತಿಯಲ್ಲಿದೆ. ಹುರುಳಿಯಕಾರದ ಬೀಜಗಳನ್ನು ಬಿಡುವ ಈ ಸಸ್ಯ ಸೆಣಬಿನ ವರ್ಗಕ್ಕೆ ಸೇರಿದೆ. ಹೇರಳವಾದ ಮಕರಂದವುಳ್ಳ ಈ ಗಿಡ ಜೇನುನೊಣ ಚಿಟ್ಟೆ ಪ್ರಭೇದ ಕೀಟಗಳನ್ನು ಸೆಳೆಯುತ್ತದೆ ಎಂಬುದು ಬಹು ವಿಶೇಷ.
1912ರಲ್ಲಿ ಯುರೋಪ್ ಮೂಲದ ಸಸ್ಯಶಾಸ್ತ್ರಜ್ಞ ಜೆ ಎಸ್ ಗ್ಯಾಂಬೆಲ್ ಅವರು ರಾಮಘಡ ಪರ್ವತದಲ್ಲಿ ಪಸರಿಸಿದ ಈ ಗಿಡಗಳನ್ನು ಪತ್ತೆ ಮಾಡಿದ್ದರು. ಇತರೆ ಸೆಣಬು ಸಸ್ಯಗಳೊಂದಿಗೆ ಹೋಲಿಸಿದಾಗ ಈ ಪ್ರಭೇದ ಕೇವಲ ರಾಮಗಡ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿದೆ ಎಂಬುದನ್ನು ನಿರ್ಧರಿಸಿದ್ದರು. ಹೀಗಾಗಿ ಈ ಗಿಡಕ್ಕೆ “ಕ್ರೋಟಲೇರಿಯಾ ಸಂಡೂರೆನ್ಸಿಸ್” ಎಂಬ ಹೆಸರಿನಿಂದ ಕರೆಯಬಹುದೆಂದು 1935ರಲ್ಲಿ ಫ್ಲೋರಾ ಆಫ್ ಪ್ರೆಸಿಡೆನ್ಸಿ ಆಫ್ ಮದ್ರಾಸ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಇದಕ್ಕೆ ಕನ್ನಡದಲ್ಲಿ ಯಾವುದೇ ಹೆಸರಿಲ್ಲದಿದ್ದರೂ ರಾಮಸಣಬು ಎಂಬುದು ಕರುನಾಡಲ್ಲಿ ಜನಜನಿತವಾಗಿರುವ ಹೆಸರಾಗಿದೆ.
ಹೊಸಪೇಟೆಯ ತುಂಗಭದ್ರಾ ಜಲಾಶಯದ ಪಕ್ಕದಿಂದ ಆರಂಭಗೊಳ್ಳುವ ರಾಮನಮಲೆ ಬೆಟ್ಟ ರಾಯರ ಕೆರೆ ಹಾದಿಯಾಗಿ ಸಂಡೂರಿನ ಸ್ವಾಮಿಹಳ್ಳಿವರೆಗೆ ಸುಮಾರು 48 ಕಿಲೋಮೀಟರ್ ವ್ಯಾಪಿಸಿದೆ ಸಂಡೂರು ತಾಲೂಕಿನ ಜೈಸಿಂಗಪುರದಿಂದ ರಾಮಗಡ ರಸ್ತೆಯುದ್ದಕ್ಕೆ, ತಾಯಮ್ಮನ ಕೊಳ್ಳದಿಂದ ಯಶವಂತನಗರ ಕಣಿವೆ ಪ್ರದೇಶದಲ್ಲಿ ಈಗ ಹೇರಳವಾಗಿ ಕಂಡುಬರುತ್ತಿದೆ. ಅಕ್ರಮ ಗಣಿಗಾರಿಕೆಗೆ ಕಡಿವಾಣ ಬಿದ್ದ ಬಳಿಕ ಸುಮಾರು ಒಂದು ದಶಕದ ಬಳಿಕ ಈ ವರ್ಷ “ರಾಮ ಸೆಣಬು” ಗಿಡಗಳು ಹೆಚ್ಚಾಗಿ ಕಂಡುಬರುತ್ತಿವೆ. ಚಳಿಗಾಲದ ಆರಂಭದಲ್ಲಿ ಹೂ ಬಿಟ್ಟು ಚಳಿಗಾಲದ ಅಂತ್ಯದ ವೇಳೆಗೆ ಬುರುಡೆ ಆಕಾರದ ಕಾಯಿಗಳು ಬಿಡುತ್ತವೆ. ನೆಲಕ್ಕೆ ಬಿದ್ದ ಬೀಜಗಳು ಮತ್ತೆ ಮಳೆಗಾಲದಲ್ಲಿ ಮೊಳಕೆ ಒಡೆದು ಬೆಳೆಯುವುದು ಗಿಡದ ವಿಶೇಷತೆ ಎನ್ನುತ್ತಾರೆ ಡಾ. ಸಮ್ಮದ್ ಕೊಟ್ಟೂರು.