ಗುಲ್ಬರ್ಗ ಜಿಲ್ಲೆಯ ಸುರಪುರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಇನ್ನೊಂದು ಪ್ರಮುಖ ಸ್ಥಳ. ಸುರಪುರದ ರಾಜ ವೆಂಕಟಪ್ಪ ನಾಯಕನು. ಸಂಗೊಳ್ಳಿರಾಯಣ್ಣ ಕೂಡ ಬ್ರಿಟಿಷರ ವಿರುದ್ಧ ಇವನ ಸಹಾಯವನ್ನು ಕೇಳಿದ್ದನು. ೧೮೩೫ರಲ್ಲಿ ಕಿರಿಯ ವಯಸ್ಸಿನ ರಾಜ ವೆಂಕಟಪ್ಪನು ರಾಜ್ಯ ಗದ್ದುಗೆ ಯನ್ನೇರಿದನು.
ಬ್ರಿಟಿಷರ ಹಿಡಿತದಿಂದ ಹೊರಬರುವ ಉತ್ಸಾಹ ದಿಂದ ಸೈನ್ಯದಲ್ಲಿ ಅರಬ್ಬರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದನು. ಇದನ್ನು ಬ್ರಿಟಿಷರು ಸಹಿಸದಾದರು. ಹೈದರಾಬಾದಿನ ನಿಜಾಮನಾದ ಸಾಲರ್ ಜಂಗನ ಸಹಾಯವನ್ನು ಕೇಳಿ ತಿರಸ್ಕೃತಗೊಂಡಿದ್ದನು. ಬ್ರಿಟಿಷರು ಇವನನ್ನು ಬೇಟೆಯಾಡಲು ನಿರ್ಧರಿಸಿ ಸೆರೆಹಿಡಿದರು. ಅವರ ಕೈಯಲ್ಲಿ ಸಾವನ್ನಪ್ಪಲು ಸಿದ್ಧನಿಲ್ಲದ ವೆಂಕಟಪ್ಪನು ಆತ್ಮಹತ್ಯೆ ಮಾಡಿಕೊಂಡನು.
ಇದೇ ಸಂದರ್ಭದಲ್ಲಿ ತಮ್ಮ ತಮ್ಮ ಸ್ವಾತಂತ್ರ್ಯಕ್ಕೋಸ್ಕರ ಪ್ರಯತ್ನ ನಡೆಸಿ ಬ್ರಿಟಿಷರ ಕುತಂತ್ರಕ್ಕೆ ಬಲಿಯಾದ ಅನೇಕರಿದ್ದಾರೆ. ೧೮೪೦ ಮತ್ತು ೫೦ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಮಡಿದವರು
ಕರ್ನಾಟಕದ ಚರಿತ್ರೆಯಲ್ಲಿ ಹೆಸರಿಸಲೇಬೇಕಾದವರೆಂದರೆ ಬಿದನೂರಿನ ಚನ್ನಬಸಪ್ಪ, ನರಗುಂದದ ಭಾಸ್ಕರ ಅಲಿಯಾಸ್ ಬಾಬಾಸಾಹೇಬ, ಮುಂಡರಗಿಯ ಭೀಮರಾಯ, ಹಮ್ಮಿಗೆ ಕೆಂಚನಗೌಡ, ಆನೆಗೊಂದಿ ಶ್ರೀರಂಗಯ್ಯ ಮುಂತಾದವರು. ರಾಷ್ಟ್ರೀಯ ಸ್ವಾತಂತ್ರ್ಯದ ಪರಿಕಲ್ಪನೆಯಿಲ್ಲದಿದ್ದರೂ ಪ್ರಾಂತೀಯ ನೆಲೆಯಲ್ಲಿ ಸ್ವಾತಂತ್ರ್ಯದ ಪಂಜನ್ನು ಉರಿಸಿದವರು.
ಸಶಸ್ತ್ರ ಬಂಡಾಯಗಳ ಹಂತದಲ್ಲಿ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದ ಇನ್ನೊಂದು ಸಮುದಾಯವೆಂದರೆ ಹಲಗಲಿಯ ಬೇಡರು. ೧೮೫೭ರ ಕಾನೂನಿನ ಪ್ರಕಾರ ಸರಕಾರದ ಅನುಮತಿ ಯಿಲ್ಲದೆ ಯಾರೂ ಶಸ್ತ್ರಗಳನ್ನು ಇಟ್ಟುಕೊಳ್ಳುವ ಹಾಗಿರಲಿಲ್ಲ. ಇಲ್ಲಿಯ ಬೇಡರಿಗೆ ಇದು ಅವಮಾನದ ಸಂಕೇತವಾಯಿತು. ಇವರು ತಮ್ಮ ಮುಖ್ಯಸ್ಥನಾದ ಗುಡುಗಿಯ ಎಂಬವನ ನೇತೃತ್ವದಲ್ಲಿ ಬ್ರಿಟಿಷ್ ಆಜ್ಞೆಯನ್ನು ಮುರಿಯಲು ತೀರ್ಮಾನಿಸಿದರು. ಇವರ ಪ್ರಯತ್ನದ ಬೆನ್ನಲ್ಲೇ ಬ್ರಿಟಿಷರು ಹಲಗಲಿಗೆ ಸೇನೆಯನ್ನು ನುಗ್ಗಿಸಿ ಇವರ ವಿರುದ್ಧ ಹೈ ಕಾರ್ಯಾಚರಣೆ ನಡೆಸಿ ಯಶಸ್ವಿಯೂ ಆದರು. ಆದರೆ ಅವರ ಹೋರಾಟದ ಕಿಡಿ ಮಾತ್ರ ಅವರಿಗೆ ಸದಾ ಉತ್ಸಾಹ ತುಂಬುವ ಶಕ್ತಿಯನ್ನು ಪಡೆದಿತ್ತು.