ಯಕ್ಷಗಾನ ಕಲಾಕ್ಷೇತ್ರದಲ್ಲಿ ಮುಂಚೂಣಿಯ ಕಲಾವಿದರಾಗಿ 54 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಉಮೇಶ್ ಶೆಟ್ಟಿ ಉಬರಡ್ಕ. ಕಡತೋಕ ಭಾಗವತರು ಮತ್ತು ಚಿಪ್ಪಾರು ಬಲ್ಲಾಳರ ಸಮರ್ಥ ಮಾರ್ಗದರ್ಶನದಲ್ಲಿ ಅಣ್ಣಪ್ಪ, ಕಂಸ, ಹಿರಣ್ಯ, ಕಶ್ಯಪ, ದ್ರೋಣ, ಅತಿಕಾಯ, ಹನುಮಂತ ಮೊದಲಾದ ವೇಷಗಳಿಗೆ ತನ್ನದೆ ಛಾಪು ಭತ್ತಿ ಮೇರು ಕಲಾವಿದರಾದರು.
ಸುಳ್ಯ ತಾಲೂಕು ಉಬರಡ್ಕದ ದಿ.ಕಿಟ್ಟಣ್ಣ ಶೆಟ್ಟಿ ಮತ್ತು ಯಮುನಾ ಶೆಟ್ಟಿ ಇವರ ಮಗನಾಗಿ 16.07.1958 ರಂದು ಜನನ. 7ನೇ ತರಗತಿವರೆಗೆ ವಿದ್ಯಾಭ್ಯಾಸ. ದಿ. ಕುರಿಯ ವಿಠಲ ಶಾಸ್ತ್ರಿ ಮತ್ತು ದಿ.ಪಡ್ರೆ ಚಂದ್ರು 1972 ಧರ್ಮಸ್ಥಳ ಲಲಿತ ಕೇಂದ್ರದ ಮೊದಲನೇ ವರ್ಷದ ವಿದ್ಯಾರ್ಥಿ. 1972 ರಿಂದ 2015 44 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳದಲ್ಲಿ ತಿರುಗಾಟ ಮಾಡಿ ಪ್ರಸ್ತುತ ಹನುಮಗಿರಿ ಮೇಳದಲ್ಲಿ ಅತಿಥಿ ಕಲಾವಿದ ತಿರುಗಾಟವನ್ನು ಮಾಡುತ್ತಿದ್ದಾರೆ.
ಸಹೋದರ ಮಾವನವರಾದ ಯಕ್ಷಗಾನ ದಂತ ಕಥೆ ದಿ. ಅಳಿಕೆ ರಾಮಯ್ಯ ರೈ ಅವರ ಪ್ರೇರಣೆಯಂತೆ ಯಕ್ಷಗಾನ ಪದಾರ್ಪಣೆ. ನಿರಂತರ 44 ವರ್ಷಗಳ ಕಾಲ ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ತಿರುಗಾಟ. ಯಕ್ಷಗಾನ ದಂತ ಕಥೆಗಳಾದ ದಿ. ಪುತ್ತೂರು ನಾರಾಯಣ ಹೆಗ್ಡೆ ಮತ್ತು ದಿ. ಎಂಪೆಕಟ್ಟೆ ರಾಮಯ್ಯ ರೈಯ ಪ್ರಭಾವಿತರು. ಯಕ್ಷಗಾನದಿಂದ ಆರ್ಧಿಕವಾಗಿಗಳಿಸಿದ್ದು ಕಡಿಮೆ. ಜನಪ್ರಿಯತೆ ಮತ್ತು ಪ್ರಶಸ್ತಿಗಳ ಬೆನ್ನು ಹತ್ತಿದವರಲ್ಲ, ಸಹೃದಯ ಕಲಾಭಿಮಾನಿಗಳನ್ನು ಅವರು ಸಂಪಾದಿಸಿದ ಆಸ್ತಿ. ಸದಾಚಾರ, ಶ್ರದ್ಧೆ, ನಿಷ್ಠೆ, ದಕ್ಷತೆಗಳ ಜೊತೆಗೆ ನಿಷ್ಟುರವಾದಿಯೂ ಹೌದು. 2015ರಲ್ಲಿ ವೃತ್ತಿ ಪರ ಮೇಳದಿಂದ ತಿರುಗಾಟಕ್ಕೆ ನಿವೃತ್ತಿ. ಪ್ರಸ್ತುತ ಹನುಮಗಿರಿ ಮೇಳದಲ್ಲಿ ಅತಿಥಿ ಕಲಾವಿದ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಸ್ಥಿತಿ ಮತ್ತು ಗತಿ ಸುಧಾರಿಸುತ್ತಾ ಇದೆ ಮತ್ತು ತುಂಬಾ ಉತ್ತಮವಾಗಿದೆ.. ಸೌಲಭ್ಯ ಸಂಭಾವನೆ ವ್ಯವಸ್ಥೆ ಎಲ್ಲವೂ ತುಂಬಾ ಸುಧಾರಿಸಿದೆ. ಕೇವಲ ಹೊಟ್ಟೆಪಾಡಿಗೆ ಯಕ್ಷಗಾನಕ್ಕೆ ಸೇರುವ ಕಾಲವಿತ್ತು. ಈಗ ಹಾಗಲ್ಲ ಸ್ವಂತ ವಾಹನದಲ್ಲಿ ಕಲಾವಿದ ಬರುವಷ್ಟು ಬದಲಾಗಿದೆ .
ಕಾಲದ ಜೊತೆ ಕಲೆ ಮತ್ತು ಕಲಾವಿದ ಹೊಂದಿಕೊಳ್ಳುತ್ತ ಚಲಿಸಬೇಕಾಗುತ್ತದೆ. ಹಳೆಯದು ಒಳ್ಳೆಯದು ಹೊಸತು ಕೆಟ್ಟದ್ದು ಎನ್ನುವ ಹಾಗೆ ವಾದ ಮಾಡುವವ ನಾನಲ್ಲ. ಲೋಪ ದೋಷಗಳು ಎರಡರಲ್ಲೂ ಇದೆ. ಆದ್ರೆ ಕಲೆಗೆ ಅಪಚಾರ ಆಗದ ಹಾಗೆ ಬೆಳೆಸುವ ಹೊಣೆಗಾರಿಕೆ ಕಲಾವಿದ ಮತ್ತು ಪ್ರೇಕ್ಷಕರದ್ದು ಇಬ್ಬರದ್ದೂ ಇದೆ. ಯಾವುದೊ ಒಂದು ಅಪಸವ್ಯವನ್ನೇ ವೈಭವೀಕರಿಸುವ ಪ್ರೇಕ್ಷಕರು ಮತ್ತು ಸಂಘಟಕರು ಇದ್ದರೆ ಕಲಾವಿದ ಹಾಗೆಯೆ ರೂಪುಗೊಳ್ಳುತ್ತಾನೆ. ಹಾಗಾಗಿ ಪ್ರೇಕ್ಷಕರು ಮತ್ತು ಸಂಘಟಕರು ಕೂಡ ಪ್ರಜ್ಞಾವಂತರಾಗಬೇಕಾದ್ದು ಕಲೆಯ ಬೆಳವಣಿಗೆಗೆ ಅನಿವಾರ್ಯ.
ಇನ್ನು ಸಾಮಾಜಿಕ ಜಾಲತಾಣಗಳ ಪ್ರಭಾವ ಕಲೆಗೆ ಮತ್ತು ಕಲಾವಿದನಿಗೆ ತಟ್ಟಿದೆ. ಕೆಲವೊಮ್ಮೆ ಪೂರಕವಾಗಿ ಕೆಲವೊಂದು ವಿಚಾರಗಳಲ್ಲಿ ಮಾರಕವಾಗಿಯೂ ಪರಿಣಮಿಸಿದೆ. ಸಾಮಾಜಿಕ ಜಾಲತಾಣಗಳಿಂದಲೇ ಕೆಲವೊಂದು ಕಲಾವಿದರುಗಳಿಗೆ ಹೆಚ್ಚಿನ ಪ್ರಚಾರವೂ ಸಿಕ್ಕಿದೆ. ಸಾಮಾಜಿಕ ಜಾಲತಾಣಗಳನ್ನು ಕಲೆಗೆ ಪೂರಕವಾಗಿ ಕಲಾವಿದನಿಗೆ ಮಾರಕವಾಗದ ಹಾಗೆ ಬಳಸಿದರೆ ಉತ್ತಮ.
ಕಲಾವಿದ ತಾನು ಸಮಾಜದ ಆಸ್ತಿ ಎನ್ನುವ ಪ್ರಜ್ಞೆ ಇರಬೇಕು. ತಾನು ರಂಗದಲ್ಲಿ ಎಷ್ಟೇ ಸಾಧಕನಾದರೂ ಕೂಡ ಸಮಾಜದಲ್ಲಿ ಅವನನ್ನು ನೋಡುವ ಸಾವಿರ ಕಣ್ಣುಗಳು ಇವೆ ಎನ್ನುವ ಕಲ್ಪನೆ ಅವನಿಗೆ ಬೇಕು. ಕಲಾವಿದನನ್ನು ರೋಲ್ ಮಾಡೆಲ್ ಆಗಿ ನೋಡುವ ಸಮಾಜ ಇದು. ಹಾಗಾಗಿ ಕಲಾವಿದ ತನ್ನ ವೈಯಕ್ತಿಕ ಜೀವನದ್ದಲ್ಲಿ ಆದಷ್ಟು ದುಶ್ಚಟಗಳಿಂದ ದೂರ ಇದ್ದು ಶಿಸ್ತಿನಿಂದ ಇರಬೇಕು ಎಂದು ಬಯಸುವವ ನಾನು.
ವಿದ್ಯಾವಂತರು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಇವೆಲ್ಲ ತುಂಬಾ ಸಂತೋಷದ ವಿಚಾರಗಳು. ವಿದ್ಯಾವಂತ ಯುವಕರು , ಡಾಕ್ಟರ್ ಗಳು , ಇಂಜಿನಿಯರ್ ಗಳು ಕೂಡ ವೇಷ ಮಾಡುತ್ತಿದ್ದಾರೆ. ಮಹಿಳೆಯರ ತಂಡಗಳು ಕೂಡ ಸಕ್ರಿಯವಾಗಿದೆ. ಅನೇಕ ಕಡೆ ಶಾಲೆಗಳಲ್ಲಿ ಮಕ್ಕಳ ಯಕ್ಷಗಾನ ತರಬೇತಿ ನಡೆಯುತ್ತಿದೆ. ಇವೆಲ್ಲ ಶ್ರೇಷ್ಠ ಕಲಾವಿದರನ್ನು ಹುಟ್ಟು ಹಾಕದಿದ್ದರೂ ಶ್ರೇಷ್ಠ, ತಿಳುವಳಿಕೆಯುಳ್ಳ, ಪ್ರಜ್ಞಾವಂತ ಯಕ್ಷಗಾನ ಪ್ರೇಕ್ಷಕರನ್ನು ಹುಟ್ಟು ಹಾಕುತ್ತಿದೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಯಕ್ಶಗಾನಕ್ಕೆ ಬರುವ ಪ್ರತಿ ಪ್ರೇಕ್ಷಕನೂ ಅವನ ಮಟ್ಟಿಗೆ ಪಂಡಿತನೇ. ಹಾಗಾಗಿ ಕಲಾವಿದ ಯಾವುದೇ ಉಡಾಫೆ ಮಾಡುವ ಹಾಗಿಲ್ಲ. ಕೆಲವರಿಗೆ ಅನೇಕ ಹಿರಿಯ ಕಲಾವಿದರ ಆಟ ನೋಡಿದ ಅನುಭವವೂ ಇರುತ್ತದೆ. ಹಾಗಾಗಿ ತಿಳುವಳಿಕೆ ಇರುವ ಪ್ರೇಕ್ಷಕರೇ ಬರುತ್ತಾರೆ ಎನ್ನುವ ಭಾವ ನನ್ನದು. ಈಗಿನ ಕಾಲದ ವೇಗದಷ್ಟೇ ಪ್ರೇಕ್ಷಕನೂ ವೇಗವನ್ನು ಬಯಸುತ್ತಾನೆ. ಹಿಂದಿನ ಕಾಲದ ಹಾಗೆ ಕೇವಲ ರಂಗಸ್ಥಳದ ಮುಂದೆ ಕುಳಿತು ನೋಡುವ ಪ್ರೇಕ್ಷಕರು ಮಾತ್ರ ಇರುವುದಲ್ಲ. ಮನೆಯಲ್ಲಿ ಯುಟ್ಯೂಬ್ ನಲ್ಲಿ, ಟಿವಿಯಲ್ಲಿ ಲೈವ್ ನೋಡುವ ಪ್ರೇಕ್ಷಕರೂ ಇದ್ದಾರೆ. ಹಾಗಾಗಿ ಕಲಾವಿದರಿಗೆ ಎಲ್ಲರನ್ನು ಮುಟ್ಟಿ ಮೆಚ್ಚಿಸುವುದೇ ಸವಾಲಾಗಿದೆ .
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:
ಯಕ್ಷಗಾನದ ತಿರುಗಾಟದಲ್ಲಿ ನನ್ನ ಎಳೆಯ ಪ್ರಾಯದಲ್ಲಿ ಬಿಡುವಿಲ್ಲದೆ ದುಡಿದಿದ್ದೇನೆ. ಮಳೆಗಾಲದಲ್ಲೂ ಮುಂಬೈ , ಬೆಂಗಳೂರು ಹೀಗೆ ತಿರುಗಾಟಗಳಲ್ಲೇ ವ್ಯಸ್ತನಾಗಿದ್ದೆ. ಅತ್ಯಂತ ಬೇಡಿಕೆಯ ಕಲಾವಿದನೂ ಆಗಿದ್ದೆ. ಯಕ್ಷಗಾನ ಮೇಳ ತಿರುಗಾಟದಿಂದ ನನ್ನ 58 ನೇ ವರ್ಷಕ್ಕೆ ನಿವೃತ್ತಿ ಹೊಂದಿದೆ. ದೇವರ ದಯದಿಂದ ಸಂಸಾರದಲ್ಲಿ ಸಂತೃಪ್ತ ನಾನು. ಈಗ ಆರ್ಥಿಕವಾಗಿ ಯಾವುದೇ ಕಷ್ಟ ಇಲ್ಲ. ಹಾಗಾಗಿ ಕೇವಲ ಅತಿಥಿ ಕಲಾವಿದನಾಗಿ ಹೋಗುತ್ತಿದ್ದೆ . ಆದ್ರೆ ಕಳೆದ ಎರಡು ವರ್ಷಗಳಿಂದ ಹನುಮಗಿರಿ ಮೇಳಕ್ಕೆ ಅತಿಥಿಯಾಗಿ ಹೋಗುತ್ತಿದ್ದೇನೆ. ಅದಕ್ಕೆ ಧಣಿಗಳಾದ ಡಾ.ಶ್ಯಾಮ್ ಭಟ್ ಅವರ ಪ್ರೀತಿ ಕಾರಣ. ಯಕ್ಷಗಾನದಲ್ಲಿ ಐದು ದಶಕಗಳಿಂದ ದುಡಿದವ ನಾನು, ಆದರೆ ಡಾ ಶ್ಯಾಮ್ ಭಟ್ಟರಂತ ಕಲಾವಿದರನ್ನು ಪ್ರೀತಿಸುವ ಧಣಿಗಳು ಅಪರೂಪ ಹಾಗಾಗಿ ಹನುಮಗಿರಿ ಮೇಳದಲ್ಲಿ ಸದ್ಯಕ್ಕೆ ಅತಿಥಿಯಾಗಿ ನನ್ನ ತಿರುಗಾಟ. ಕೆಲವು ಶಾಲೆಗಳಲ್ಲಿ ಯಕ್ಷಗಾನ ಕಲಿಸಿದ್ದೇನೆ ಮತ್ತು ಮಕ್ಕಳ ತಂಡಗಳ ಮೂಲಕ ಯಕ್ಷಗಾನ ಪ್ರದರ್ಶನ ಕೊಡಿಸಿದ್ದೇನೆ. ಈಗ ಎಳೆಯ ಕಲಾವಿದರಿಗೆ ಕೇಳಿದಾಗ ನನಗೆ ಗೊತ್ತಿರುವ ವಿಚಾರಗಳನ್ನು ಹಂಚುತ್ತೇನೆ .
ಪ್ರಶಸ್ತಿ ಹಾಗೂ ಸನ್ಮಾನ:-
ಬಹರೈನ್ ಕನ್ನಡ ಸಂಘ 2002.
ಕುವೈತ್ ಬಂಟಯನ 2011.
ಕುವೈತ್ ಬಂಟ್ಸ್ ಸಂಘ 2015.
ಯಕ್ಷ ಧ್ರುವ ಪಟ್ಲ ಸನ್ಮಾನ ದೆಹಲಿ.
ಯಕ್ಷ ಧ್ರುವ ಪಟ್ಲ ಸನ್ಮಾನ ಮಸ್ಕತ್.
ಎಡನೀರು ಮಠ ಸನ್ಮಾನ.
ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ.
ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಪ್ರಶಸ್ತಿ 1994.
ಹವ್ಯಾಸಿ ಬಳಗ ಕದ್ರಿ.
ಮುಂಬೈ ಅಭಿಮಾನಿಗಳ ಸನ್ಮಾನ.
ಡಾ. ವೀರೇಂದ್ರ ಹೆಗ್ಗಡೆ ಸನ್ಮಾನ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ.
ಕರಾವಳಿ ಯಕ್ಷಗಾನ ಕಲಾವಿದರು ಬೆಂಗಳೂರು ಸನ್ಮಾನ.
ಪೈಲಾರು ಯಕ್ಷೋತ್ಸವ ಸನ್ಮಾನ.
ಶ್ರೀ ಕೃಷ್ಣ ಸಭಾ ಸನ್ಮಾನ.
ಯಕ್ಷಗಾನ ಅಕಾಡೆಮಿ ಯಕ್ಷಸಿರಿ ಪ್ರಶಸ್ತಿ
ಮಂಗಳೂರು ಯೂನಿವರ್ಸಿಟಿ ಯಕ್ಷ ಸಾಧಕ ಪ್ರಶಸ್ತಿ.
ರಂಗೋಲಿ ಸಹೋದರರು ಬಿಸಿರೋಡ್ ಸನ್ಮಾನ.
ಸತ್ಯಸಾಯಿ ವಿದ್ಯಾ ಸಂಸ್ಥೆಗಳು ಅಳಿಕೆ ಸನ್ಮಾನ.
ಹಾಗೂ 300 ಕ್ಕೂ ಅಧಿಕ ಕಲಾಭಿಮಾನಿಗಳ ಸನ್ಮಾನ.
ಯಕ್ಷಗಾನ ನಾಟ್ಯ ತರಗತಿ:-
ಸತ್ಯಸಾಯಿ ವಿದ್ಯಾ ಸಂಸ್ಥೆಗಳು ಅಳಿಕೆ.
ಇರಾ ಸೋಮನಾಥೇಶ್ವರ ದೇವಸ್ಥಾನ.
ನಿಡ್ಲೆ ಶಾಲೆ ಧರ್ಮಸ್ಥಳ.
ಸತ್ಯಸಾಯಿ ಸಂಸ್ಥೆ ಹಾಸನ.
ಕಲ್ಲಡ್ಕ ಭಜನಾ ಮಂದಿರ.
ಉಮೇಶ್ ಶೆಟ್ಟಿ ಉಬರಡ್ಕ ಅವರು ಉಷಾ ಅವರನ್ನು ಮದುವೆಯಾಗಿ ಇಬ್ಬರು ಮಕ್ಕಳಾದ ಅವಿನಾಶ್ ಮತ್ತು ಆದರ್ಶ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಬರಹ : ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.