ಮಳೆಗಾಲ ಬಂತೆಂದರೆ ಸಾಕು ಶೀತ, ಜ್ವರ, ಕೆಮ್ಮುವಿನಂತಹ ಆರೋಗ್ಯ ಸಮಸ್ಯೆಗಳು ಎಲ್ಲರನ್ನೂ ಬಾಧಿಸುತ್ತದೆ. ಪ್ರಕೃತಿಯು ಒಮ್ಮೆಗೆ ಏರುಪೇರಾಗುವಾಗ ನಮ್ಮ ಆರೋಗ್ಯದ ಪರಿಸ್ಥಿತಿಯೂ ಏರುಪೇರಾಗುತ್ತದೆ. ಅದರಲ್ಲೂ ಎಳೆಯ ಮಕ್ಕಳಿಗಂತೂ ಈ ಆರೋಗ್ಯ ಸಮಸ್ಯೆಗಳು ಬಹು ಬೇಗನೇ ಅಂಟಿಕೊಳ್ಳುತ್ತದೆ.ಅದಕ್ಕೆ ನಾವೇ ಮನೆ ಮದ್ದು ಮಾಡಬಹುದು.
ಆರೋಗ್ಯ ಸಮಸ್ಯೆಗಳು ಎದುರಾದಾಗ ನಾವು ಆಸ್ಪತ್ರೆಗೆ ಹೋಗಿ ವೈದ್ಯರ ಸಲಹೆ ಪಡೆದು ಔಷಧಿ ತರುವುದು ಸರ್ವೇ ಸಾಮಾನ್ಯ ವಿಷಯ. ಆದರೆ ಪುಟಾಣಿ ಮಕ್ಕಳಿಗೆ ಈ ಔಷಧಿ ದಿನಾ ಕೊಡುವುದು ಅಷ್ಟೊಂದು ಒಳ್ಳೆಯದಲ್ಲ. ಮನೆಯಂಗಳವನ್ನೇ ಆಸ್ಪತ್ರೆಯನ್ನಾಗಿ ಮಾಡಿಕೊಂಡರೆ ಮಕ್ಕಳ ಶೀತ, ಕೆಮ್ಮು, ಕಫದ ಸಮಸ್ಯೆಗಳನ್ನು ನಾವೇ ನಿವಾರಣೆ ಮಾಡಬಹುದು.
ಇದನ್ನೂ ಓದಿ: ಏನಿದು ಡೆಂಗ್ಯೂ ಜ್ವರ ? ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ ?
ತುಳಸಿ ರೋಗ ನಿರೋಧಕ ಶಕ್ತಿ
ತುಳಸಿ ಗಿಡ ಇಲ್ಲದ ಮನೆಯಂಗಳವುಂಟೇ..? ಹಿಂದೂ ಸಂಸ್ಕೃತಿಯಲ್ಲಿ ಹೆಣ್ಮಕ್ಕಳ ಮೊದಲ ಪೂಜೆ ತುಳಸಿ ಮಾತೆಗೆ ಆಗಿರುತ್ತದೆ. ಇದೇ ತುಳಸಿ ಗಿಡಗಳು ಮಳೆ ಬಂತೆಂದರೆ ಮನೆಯ ಸುತ್ತಲೂ ಹಚ್ಚ ಹಸಿರಾಗಿ ಬೆಳೆಯ ತೊಡಗುತ್ತದೆ. ಈ ತುಳಸಿ ಗಿಡದ ಘಮವೇ ಅದೆಷ್ಟೋ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅದರ ಎಲೆಗಳನ್ನು ಸ್ವಲ್ಪ ಬಿಸಿ ಮಾಡಿ ಅಥವಾ ಹಾಗೆಯೇ ಜಜ್ಜಿ ರಸ ತೆಗೆದು ಮಕ್ಕಳಿಗೆ ನಿಯಮಿತವಾಗಿ ಕುಡಿಸುತ್ತಿದ್ದರೆ ಶೀತ, ಕೆಮ್ಮು, ಕಫದ ಸಮಸ್ಯೆಗಳು ನಿವಾರಣೆಯಾಗಿ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಹತ್ತಾರು ತುಳಸಿ ಎಲೆಗಳು, ಕೆಂಡದಲ್ಲಿ ಬಿಸಿ ಮಾಡಿದ ಈರುಳ್ಳಿಯ ಸಣ್ಣ ತೊಳೆ, ಬಿಸಿ ನೀರಿನಲ್ಲಿ ತೊಳೆದು ಸಣ್ಣ ತುಂಡು ಶುಂಠಿ, ಅರ್ಧ ವೀಳ್ಯದೆಲೆಯನ್ನು ಒಟ್ಟು ಸೇರಿಸಿ ಚೆನ್ನಾಗಿ ಜಜ್ಜಿಕೊಳ್ಳಬೇಕು. ನಂತರ ಶುಭ್ರವಾದ ಒಣ ಬಟ್ಟೆಯಲ್ಲಿ ಈ ರಸವನ್ನು ಹಿಂಡಿ ತೆಗೆಯಬೇಕು. ಬೇಕಾದರೆ ಅರ್ಧ ಅಥವಾ ಒಂದು ಕರಿ ಮೆಣಸಿನ ಕಾಳನ್ನೂ ಸೇರಿಸಿಕೊಳ್ಳಬಹುದು. ಆ ರಸಕ್ಕೆ ಒಂದು ಹನಿ ಶುದ್ಧ ಜೇನು ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಂಡು ಬೆಳಿಗ್ಗೆ ರಾತ್ರಿ ಎರಡೆರಡು ಎಂ.ಎಲ್ ಅಷ್ಟು ಕುಡಿಸಿದರೆ ಕೆಮ್ಮು ಕಫದ ಬಾಧೆ ನಿವಾರಣೆಯಾಗುತ್ತದೆ.
ಮನೆ ಮದ್ದು : ವೀಳ್ಯದೆಲೆ ಕಷಾಯ ಕಫದ ಸಮಸ್ಯೆ ಶಮನ
ವೀಳ್ಯದೆಲೆಗ್ರಾಮೀಣ ಪ್ರದೇಶದಲ್ಲಿ ವೀಳ್ಯದೆಲೆ ಹೆಚ್ಚಿನ ಮನೆಗಳಲ್ಲಿ ಇದ್ದೇ ಇರುತ್ತದೆ. ವಯಸ್ಸಾದವರು, ಕೆಲಸ ಮಾಡುವವರು ಬಾಯಲ್ಲಿ ಎಲೆಯಡಿಕೆ ಹಾಕಿ ಜಗಿಯುತ್ತಲೇ ಇರುತ್ತಾರೆ. ಈ ವೀಳ್ಯದೆಲೆ ವಿಶೇಷವಾಗಿ ಕಫ ಶಮನ ಮಾಡುವ ಗುಣ ಹೊಂದಿದೆ. ಪುಟ್ಟ ಮಕ್ಕಳಿಗೆ ವೀಳ್ಯದೆಲೆಯನ್ನು ಸಣ್ಣಗೆ ಬಾಡಿಸಿ ರಸ ತೆಗೆದು ಕುಡಿಸಬೇಕು. ಆದರೆ ದೊಡ್ಡವರಿಗೆ ವೀಳ್ಯದೆಲೆಯ ಕಷಾಯ ಪರಿಣಾಮಕಾರಿಯಾಗಿದೆ. ಒಂದು ಲೋಟ ನೀರಿಗೆ ಎರಡು ವೀಳ್ಯದೆಲೆ ಹಾಕಿ ಅರ್ಧ ಲೋಟ ಆಗುವಷ್ಟು ಹೊತ್ತು ಕುದಿಸಬೇಕು. ನಂತರ ಸೋಸಿ ಉಗುರು ಬಿಸಿ ಇರುವಾಗಲೇ ಕುಡಿಯಬೇಕು. ಕೆಲ ದಿನ ಈ ಔಷಧಿ ಕಷಾಯವನ್ನು ಸೇವಿಸಿದರೆ ಕಫದ ಸಮಸ್ಯೆ ಶಮನವಾಗುತ್ತದೆ.
ಇದನ್ನೂ ಓದಿ: ಪಾಲಕ್ ಎಂಬ ಆರೋಗ್ಯ ಪಾಲಕ..
ಶೀತದ ಸಮಸ್ಯೆಯಿಂದ ಗಂಟಲು ನೋವು ಆರಂಭವಾಗುತ್ತದೆ. ಈ ರೀತಿ ಆದಾಗ ನಾವು ಕರಿ ಮೆಣಸು ಹಾಗೂ ಬೆಲ್ಲ ಸೇರಿಸಿ ಕಷಾಯ ಅಥವಾ ಪಾನಕ ಕುಡಿಯುತ್ತೇವೆ. ಆದರೆ ಇದೇ ಕರಿ ಮೆಣಸಿನ ಕಷಾಯಕ್ಕೆ ಸ್ವಲ್ಪ ಉಪ್ಪು ಸೇರಿಸಿ ಬಿಸಿ ಬಿಸಿ ಕಷಾಯವನ್ನು ಅರ್ಧ ಲೋಟವಾದರೂ ಕುಡಿಯಿರಿ. ಕರಿಮೆಣಸಿನ ಖಾರ ಹಾಗೂ ಉಪ್ಪು ಬಿಸಿ ಬಿಸಿಯಾಗಿ ಗಂಟಲಲ್ಲಿ ಇಳಿದರೆ ಗಂಟಲು ನೋವು ಮಾಯವಾಗುತ್ತದೆ.
ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಹಿರಿಯರು ಹೇಳಿದಂತೆ ಹಿತ್ತಲ ಗಿಡವೇ ಮದ್ದು. ಹಿರಿಯರು ಹೇಳುವ ಅನುಭವದ ಕೆಲವು ಮನೆ ಮದ್ದುಗಳನ್ನು ನಾವೂ ನಮ್ಮ ಬದುಕಿನಲ್ಲಿ ಪ್ರಯೋಗಿಸುತ್ತಾ ಇದ್ದರೆ, ಅದರಿಂದ ಉತ್ತಮ ಫಲಿತಾಂಶ ನಮಗೆ ಸಿಕ್ಕರೆ ಅದಕ್ಕಿಂತ ದೊಡ್ಡ ಸಾರ್ಥಕತೆ ಇನ್ನೇನಿದೆ ಅಲ್ವಾ..? ಮನೆ ಮದ್ದುಗಳನ್ನು ಅಗತ್ಯವಿದ್ದಾಗ ಬಳಸೋಣ. ಮುಂದಿನ ಪೀಳಿಗೆಗೂ ಮನೆ ಮದ್ದುಗಳ ಘಮವನ್ನು ರವಾನಿಸುವವರು ನಾವಾಗೋಣ.