ಹಲವು ಕಂಬಳಗಳಲ್ಲಿ ಪದಕ ಗೆದ್ದಿರುವ, ತುಳುನಾಡಿನ ಕಂಬಳ ಅಭಿಮಾನಿಗಳ ಪಾಲಿನ “ಲಕ್ಕಿ” ಎಂಬ ಕೋಣವು ಅನಾರೋಗ್ಯದಿಂದ ಬುಧವಾರ ಇಹಲೋಕ ತ್ಯಜಿಸಿದೆ.
ವರಪಾಡಿ ಬಡಗುಮನೆ ಶ್ರೀ ದಿವಾಕರ ಚೌಟ ಎಂಬವರು ಸಾಕುತ್ತಿದ್ದ ಈ ಕೋಣದ ಹೆಸರು “ಲಕ್ಕಿ”. 6 ವರ್ಷ ಪ್ರಾಯದ ಈ ಕೋಣವು ದಿವಾಕರ ಚೌಟ ಮನೆಯಲ್ಲಿ ಒಂಟಿಯಾಗಿಯೇ ಇತ್ತಾದರೂ ಬೇರೆ ಕೋಣಗಳೊಂದಿಗೆ ಜೋಡಿಯಾಗಿ ಕಂಬಳ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಒಂದು ವಾರದಿಂದ ಉದರ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಲಕ್ಕಿಗೆ ಕಾರ್ಕಳದ ಖ್ಯಾತ ವೈದ್ಯರಾದ ಶ್ರೀ ವಾಸುದೇವ ಪೈ ಅವರು ಜುಲೈ 16ರಂದು ಶಸ್ತ್ರ ಚಿಕಿತ್ಸೆಯನ್ನೂ ಮಾಡಿದ್ದರು. ಬುಧವಾರ ಮತ್ತೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರನ್ನು ನೋಡುತ್ತಿದ್ದಂತೆ ಲಕ್ಕಿಯು ಕಕ್ಕಾಬಿಕ್ಕಿಯಾಗಿ ಓಡಿ ತೊಡಗಿತು. ಸಾಕುವವರಿಗೂ ಹಿಡಿತಕ್ಕೆ ಸಿಗದಾಗಿ ಅಲ್ಲೇ ಇದ್ದ ಮರವೊಂದಕ್ಕೆ ಕಟ್ಟಿ ಹಾಕಲಾಗಿತ್ತು. ಆದರೆ ಲಕ್ಕಿಯು ಸ್ವಲ್ಪ ಹೊತ್ತಿನಲ್ಲೇ ಅದೇ ಜಾಗದಲ್ಲಿ ತನ್ನ ಕಂಬಳದ ಪಯಣವನ್ನು ನಿಲ್ಲಿಸಿ ಹೊರಟು ಹೋಗಿತ್ತು.
ಈ ವರ್ಷದ ಕಂಬಳ ದಲ್ಲಿಯೂ ಐದು ಪದಕಗಳನ್ನು ತನ್ನದಾಗಿಸಿಕೊಂಡಿದ್ದ ಲಕ್ಕಿ
ಕಳೆದ ವರ್ಷ ನಡೆದ ಹಲವು ಕಂಬಳಗಳಲ್ಲಿ ಲಕ್ಕಿ ಒಟ್ಟು ಐದು ಪದಕಗಳನ್ನು ಪಡೆದುಕೊಂಡಿತ್ತು. ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದ ಕಂಬಳದಲ್ಲಿ ಲಕ್ಕಿ ನೇಗಿಲು ಹಿರಿಯ ವಿಭಾಗದಲ್ಲಿ ಎರಡನೇ ಬಹುಮಾನವನ್ನು ಪಡೆದಿತ್ತು. ಕಕ್ಯಪದವು, ನರಿಂಗಾನ, ಐಕಳ, ಜೆಪ್ಪು ಹಾಗೂ ಬೆಂಗಳೂರು ಕಂಬಳದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಪದಕ ಗೆದ್ದು ಸಾವಿರಾರು ಅಭಿಮಾನಿಗಳ ಮನಸ್ಸನ್ನೂ ಗೆದ್ದಿತ್ತು. ಈ ವರ್ಷದ ಕಂಬಳದಲ್ಲಿಯೂ ಐದು ಪದಕಗಳನ್ನು ತನ್ನದಾಗಿಸಿಕೊಂಡಿದ್ದ ಲಕ್ಕಿ ಇನ್ನು ನೆನಪು ಮಾತ್ರ.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಲಕ್ಕಿ
ಅತ್ಯಂತ ಶಾಂತ ಸ್ವಭಾವದ ಲಕ್ಕಿ ಮೂಲತಃ ಭಟ್ಕಳ ಎಚ್ ಎನ್ ನಿವಾಸದಲ್ಲಿ ಪವನ್ ಎಂಬ ಕೋಣದ ಜೊತೆಗಾರನಾಗಿತ್ತು. ಅಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಲಕ್ಕಿ ಪವನ್ ಕೋಣಕ್ಕಿಂತ ದೊಡ್ದವನಾದ(6 ಪರು) ಕಾರಣ ಉಳೆಪಾಡಿಯ ದಿವಾಕರ ಚೌಟ ಅವರಿಗೆ ಮಾರಾಟ ಮಾಡಿದ್ದರು. ದಿವಾಕರ ಚೌಟರ ಮನೆಗೆ ಬಂದ ನಂತರ ಕೊಂಡೋಟ್ಟು ಬೊಲ್ಲ, ತೆಗರ್ಸೆ ಪಾಂಡು, ನಾವುಂದ ಪುಟ್ಟ, ಮಳವೂರು ರಾಜೆ ಮೊದಲಾದ ಕೋಣೆಗಳು ಲಕ್ಕಿಗೆ ಯಶಸ್ವಿ ಜೋಡಿಯಾಗಿದ್ದವು.
ಕಾರ್ಕಳದಲ್ಲಿ ಕೊನೆಯುಸಿರೆಳೆದ ಲಕ್ಕಿಯ ಮೃತ ದೇಹವನ್ನು ಉಳೆಪಾಡಿಗೆ ಕರೆತಂದು ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮಳೆಯ ನಡುವೆಯೂ ನೂರಾರು ಕಂಬಳಾಭಿಮಾನಿಗಳು ಲಕ್ಕಿಯ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು-ಕಫಕ್ಕೆ ಸರಳವಾದ ಮನೆ ಮದ್ದು