ಜಾಗತಿಕ ತಂತ್ರಜ್ಞಾನ ವೈಫಲ್ಯದಿಂದಾಗಿ ಜುಲೈ 19 ನೇ ಶುಕ್ರವಾರ ಇಡೀ ಜಗತ್ತು ಅಸ್ತವ್ಯಸ್ತಗೊಂಡಿದೆ. ಮೈಕ್ರೋಸಾಫ್ಟ್ ಸಾಫ್ಟವೇರ್ ಅಲ್ಲಿ ಉಂಟಾದ ಈ ತಾಂತ್ರಿಕ ವ್ಯತ್ಯಯ “ಬ್ಲೂಸ್ಕ್ರೀನ್ ಆಫ್ ಡೆತ್” ದಿಂದಾಗಿ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ವಿಮಾನ ಸೇವೆಯಿಂದ ಹಿಡಿದು, ಬ್ಯಾಂಕಿಂಗ್, ರೈಲ್ವೆ ಸೇವೆ, ಮಾಧ್ಯಮ ವಲಯ, ಆರೋಗ್ಯ ಸೇವೆಗಳ ಮೇಲೆ ಅಗಾಧ ಪರಿಣಾಮ ಬೀರಿದೆ. ಇದರಿಂದಾಗಿ ಜಗತ್ತಿನಾದ್ಯಂತ ಹಲವು ವಿಮಾನಗಳ ಹಾರಾಟ ಸ್ಥಗಿತ ಅಥವಾ ವಿಳಂಬವಾಗಿದೆ. ಇದರಿಂದಾಗಿ ಪ್ರಯಾಣಿಕರ ಪರದಾಟ ಹೇಳತೀರದಂತಾಗಿತ್ತು.
ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಇಂಡಿಗೋ, ಸ್ಪೈಸ್ ಜೆಟ್, ಅಕಾಸಾ ಏರ್, ವಿಸ್ತಾರಾ ಕಂಪನಿಗಳ ಟಿಕೆಟ್ ಬುಕ್ಕಿಂಗ್, ಚೆಕ್ ಇನ್, ಸಂಚಾರ ಮಾಹಿತಿಗಳ ಸೇವೆ ಒದಗಿಸಲು ತುಂಬಾ ಕಷ್ಟವಾಯಿತು. ಆದ್ದರಿಂದ ಪ್ರಯಾಣಿಕರ ಚೆಕ್ ಇನ್ ಪ್ರಕ್ರಿಯೆಯನ್ನು ಅಧಿಕಾರಿಗಳು ಮಾನ್ಯುಯಲ್ ಆಗಿ ನೆರವೇರಿಸಬೇಕಾಯಿತು. ವರದಿಯಂತೆ ಭಾರತದಲ್ಲಿ 140 ವಿಮಾನಗಳ ಪ್ರಮಾಣದಲ್ಲಿ ವ್ಯತ್ಯಯ ಹಾಗೂ ರದ್ದತಿ ಉಂಟಾಯಿತು.
ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಮೈಕ್ರೋಸಾಫ್ಟ್ ಕ್ರ್ಯಾಶ್ “ಬ್ಲೂಸ್ಕ್ರೀನ್ ಆಫ್ ಡೆತ್”ಸಮಸ್ಯೆ ಕೋಲಾಹಲ ಎಬ್ಬಿಸಿದೆ. ಅಮೇರಿಕಾದ ಡೆಲ್ಟ, ಅಮೆರಿಕನ್, ಅಲಿಗೆಂಟ್ ಕಂಪನಿಗಳ ವಿಮಾನಯಾನದಲ್ಲಿ ಸಂಪೂರ್ಣ ಸ್ಥಗಿತ ಉಂಟಾಗಿದೆ. ಉಳಿದ ವಿಮಾನಯಾನಗಳಲ್ಲಿ ವ್ಯತ್ಯಯ ಉಂಟಾಗಿ ಕೆಲವೆಡೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ನಿದ್ದೆಗೆ ಜಾರಿದ ಪ್ರಸಂಗಗಳು ಕಂಡು ಬಂದವು.
ಇನ್ನು ಕೆಲವು ದೇಶಗಳ ಮಾಧ್ಯಮ ವಲಯದಲ್ಲಿ ತೀವ್ರ ಹೊಡೆತ ಉಂಟಾಗಿದೆ. ಸುದ್ಧಿ ಮಾಧ್ಯಮಗಳಲ್ಲಿ ನೇರ ಪ್ರಸಾರ ನೀಡುತ್ತಿದ್ದ ನಿರೂಪಕರು ಈ ತಾಂತ್ರಿಕ ವ್ಯತ್ಯಯದಿಂದಾಗಿ ಅರ್ಧದಲ್ಲೇ ಎದ್ದು ಹೋಗುವ ಪ್ರಮೇಯ ಎದುರಾಯಿತು.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಕ್ರೌಡ್ ಸ್ಟ್ರೈಕ್ ಸಮಸ್ಯೆ ಎಂದರೇನು?
ಕ್ರೌಡ್ ಸ್ಟ್ರೈಕ್ ಅಮೇರಿಕಾದ 83 ಬಿಲಿಯನ್ ಡಾಲರ್ ಮೌಲ್ಯದ ಸೈಬರ್ ಭದ್ರತಾ ಕಂಪನಿಯಾಗಿದ್ದು ಜಗತ್ತಿನಾದ್ಯಂತ ಸುಮಾರು 20 ಸಾವಿರ ಚಂದಾದಾರರನ್ನು ಹೊಂದಿದೆ.
ಕ್ರೌಡ್ ಸ್ಟ್ರೈಕ್ ಎಂಬುದು ಬಳಕೆದಾರರಿಗೆ ಸೈಬರ್ ದಾಳಿಯಿಂದ ಹಿಡಿದು ಬೇರೆ ಬೇರೆ ರೀತಿಯ ಸೈಬರ್ ಸುರಕ್ಷತೆ ನೀಡುವ ಒಂದು ಸಂಸ್ಥೆ. ಮೈಕ್ರೋಸಾಫ್ಟ್ ನ ಕ್ಲೌಡ್ ಸೇವೆಗಳಿಗೆ ಈ ಸಾಫ್ಟವೇರ್ ಭದ್ರತೆಯನ್ನು ಒದಗಿಸುತ್ತದೆ. ಇಂತಹ ಭದ್ರತೆಯನ್ನು ಒದಗಿಸುವ ಕ್ರೌಡ್ ಸ್ಟ್ರೈಕ್ ಸಾಫ್ಟ್ವೇರ್, ತನ್ನಲ್ಲಿನ ಒಂದು ಸಮಸ್ಯೆಯನ್ನು ಬಗೆಹರಿಸಿ ಸಾಫ್ಟವೇರ್ ಅಪ್ಡೇಟ್ ಮಾಡಿದಾಗ ಮತ್ತೊಂದು ಸಮಸ್ಯೆ ಉಂಟಾಗಿ ಇಡೀ ಮೈಕ್ರೋಸಾಫ್ಟ್ ಕ್ಲೌಡ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಅಂದರೆ ಕ್ರೌಡ್ ಸ್ಟ್ರೈಕ್ ಕಂಪನಿ ಬಳಕೆ ಮಾಡುವಂತಹ ಫಾಲ್ಕನ್ ಸೆನ್ಸಾರ್ ಎಂಬ ಸಾಫ್ಟವೇರ್ ಮೈಕ್ರೋಸಾಫ್ಟ್ ವಿಂಡೋಸ್ ನ ಕ್ರ್ಯಾಶ್ ಗೆ ಕಾರಣವಾಗಿದೆ. ಕ್ರೌಡ್ ಸ್ಟ್ರೈಕ್ ಸಂಸ್ಥೆಯ ಸಿಇಒ ಜಾರ್ಜ್ ಕರ್ಟ್ಜ್ ಮಾತನಾಡಿ, ಈಗ ಆಗಿರುವ ಸಮಸ್ಯೆ ಸೈಬರ್ ದಾಳಿಯಲ್ಲ, ಆದಷ್ಟು ಬೇಗ ಈ ತೊಂದರೆಯನ್ನು ನಿವಾರಿಸುವುದಾಗಿ ಹೇಳಿದ್ದಾರೆ.
ಏನಿದು “ಬ್ಲೂಸ್ಕ್ರೀನ್ ಆಫ್ ಡೆತ್” ?
ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಏನಾದರೂ ತೊಂದರೆ ಕಾಣಿಸಿಕೊಂಡಾಗ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಪರದೆ ಮೇಲೆ ಮೂಡುವ ಸಂದೇಶಕ್ಕೆ “ಬ್ಲೂಸ್ಕ್ರೀನ್ ಆಫ್ ಡೆತ್”ಎನ್ನುವರು. ಆಪರೇಟಿಂಗ್ ಸಿಸ್ಟಮ್ ಸುರಕ್ಷಿತವಾಗಿ ಕಾರ್ಯ ನಿರ್ವಹಿಸಲು ಆಗದೇ ಹೋದಾಗ ಈ ಸಂದೇಶ ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಈ ರೀತಿ ಸಿಸ್ಟಮ್ ಕ್ರ್ಯಾಶ್ ಆದಾಗ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ತಂತಾನೇ ಆಫ್ ಆಗಿ ಬಿಡುತ್ತದೆ. ನಂತರ ಪುನಃ ರಿಸ್ಟಾರ್ಟ್ ಆಗುತ್ತದೆ. ಈ ವೇಳೆ ಸೇವ್ ಮಾಡದೆ ಇದ್ದ ಎಲ್ಲಾ ದಾಖಲೆಗಳು ಅಳಿಸಿ ಹೋಗುತ್ತದೆ. ಜಗತ್ತು ನಿಂತಿರುವುದು ತಂತ್ರಜ್ಞಾನದ ಮೇಲೆ. ಒಮ್ಮೊಮ್ಮೆ ಈ ತಂತ್ರಜ್ಞಾನಗಳು ನಮ್ಮನ್ನು ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿ ಬಿಡುತ್ತದೆ. ಏನೇ ಆದರೂ ಸಮಸ್ಯೆ ಮಾತ್ರ ಜನರ ಬೆನ್ನು ಬಿಡದು.
ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ