2003ರ ಫೆಬ್ರವರಿ 1 ರಂದು, ಬಾಹ್ಯಾಕಾಶ ನೌಕೆ ಕೊಲಂಬಿಯಾ ಭೂಮಿಗೆ ವಾಪಸ್ ಆಗುವಾಗ ಛಿದ್ರಗೊಂಡ ಪರಿಣಾಮ ಸಂಭವಿಸಿದ ಭಾರತೀಯ ಅಮೆರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಆರು ಸಿಬ್ಬಂದಿ ದುರಂತ ಸಾವು, ನಾಸಾವನ್ನು ಈಗಲೂ ಕಾಡುತ್ತಿದೆ. ಇದೇ ಕಾರಣಕ್ಕೆ ಇನ್ನೊಬ್ಬ ಭಾರತೀಯ ಅಮೆರಿಕನ್ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರ ಸುರಕ್ಷತೆಗೆ ಆದ್ಯತೆ ನೀಡಲು ನಾಸಾ ನಿರ್ಧರಿಸಿದೆ.
ನಾಸಾ, 1986ರ ಜನವರಿ 28ರಂದು ನಡೆದ ಬಾಹ್ಯಾಕಾಶ ನೌಕೆ ಚಾಲೆಂಜರ್ ದುರಂತವೂ ಸೇರಿದಂತೆ ಹಿಂದಿನ ಎರಡು ಅಪಘಾತಗಳಲ್ಲಿ ಒಟ್ಟು 14 ಗಗನಯಾತ್ರಿಗಳು ಪ್ರಾಣ ಕಳೆದುಕೊಂಡಿದ್ದರು. ಈ ಅಪಘಾತಗಳ ಬಗ್ಗೆ ತನಿಖೆ ನಡೆಸಿದ, ಸ್ವತಃ ಗಗನಯಾತ್ರಿಯಾಗಿರುವ ನಾಸಾ ಆಡಳಿತಾಧಿಕಾರಿ ಬಿಲ್ ನೆಲ್ಸನ್, ಹಳೆಯ ಘಟನೆಗಳು ಸುನೀತಾ ಕುರಿತ ನಿರ್ಧಾರದ ಮೇಲೆ ಬಹಳ ಪರಿಣಾಮ ಬೀರಿವೆ, ಎಂದು ಒಪ್ಪಿಕೊಂಡಿದ್ದಾರೆ. ನಾಸಾ ಈಗಾಗಲೇ ಸೆಪ್ಟೆಂಬರ್ 6 ರೊಳಗೆ ಬೋಯಿಂಗ್ ನ ಸ್ಟಾರ್ ಲೈನರ್ ಅನ್ನು ಸಿಬ್ಬಂದಿ ಇಲ್ಲದೆ ಭೂಮಿಗೆ ಮರಳಿ ತರುವ ಯೋಜನೆ ಘೋಷಿಸಿದೆ. ಸುಮಾರು ಆರು ಗಂಟೆಗಳ ಪ್ರಯಾಣದ ಬಳಿಕ ಸ್ಟಾರ್ ಲೈನರ್, ಭೂಮಿಗೆ ಹಿಂದಿರುಗುವ ನಿರೀಕ್ಷೆ ಇದೆ.
ಸ್ಟಾರ್ ಲೈನರ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಬಾಹ್ಯಾಕಾಶ ಎಂಜಿನಿಯರ್ ಗಳು ಹೀಲಿಯಂ ಸೋರಿಕೆ ಮತ್ತು ಬಾಹ್ಯಾಕಾಶ ನೌಕೆಯ ಸಣ್ಣ ರಾಕೆಟ್ಗಳಲ್ಲಿ ಸಮಸ್ಯೆಗಳನ್ನು ಕಂಡು ಹಿಡಿದಿದ್ದರು.
2025ರ ಫೆಬ್ರವರಿಗೆ ಗಗನಯಾತ್ರಿಕರು ಮರಳುವ ನಿರೀಕ್ಷೆ
ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯ ಬಗ್ಗೆ ಇಂಜಿನಿಯರ್ಗಳು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ನಾಸಾ 2025ರ ಫೆಬ್ರವರಿಯಲ್ಲಿ ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೊರ್ ಅವರನ್ನು ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್ ಬಳಸಿ ಭೂಮಿಗೆ ಮರಳಿ ತರಲು ನಿರ್ಧರಿಸಿದೆ.