ಪಶ್ಚಿಮ ಬಂಗಾಳ ವಿಧಾನಸಭೆ ಮಂಗಳವಾರ ಪ್ರಬಲ ಅತ್ಯಾಚಾರ ವಿರೋಧಿ ಮಸೂದೆಯನ್ನು ಅಂಗೀಕರಿಸಿದೆ. ಪ್ರತಿಪಕ್ಷಗಳು ಇದಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರಿಂದ ಸರ್ವಾನುಮತದ ಅಂಗೀಕಾರ ಸಾಧ್ಯವಾಗಿದೆ. ಪ್ರಮುಖವಾಗಿ ಅತ್ಯಾಚಾರದ ಅಪರಾಧಿ ಸಂತ್ರಸ್ತೆಯ ಸಾವಿಗೆ ಕಾರಣವಾದರೆ ಅವನಿಗೆ ಗಲ್ಲು ಶಿಕ್ಷೆ ವಿಧಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ.
ಅಪರಾಜಿತ ಮಹಿಳೆ ಮತ್ತು ಮಕ್ಕಳ (ಪಶ್ಚಿಮ ಬಂಗಾಳ ಕ್ರಿಮಿನಲ್ ಕಾನೂನುಗಳು ಮತ್ತು ತಿದ್ದುಪಡಿ) ಮಸೂದೆ 2024 ಎಂಬ ಈ ಶಾಸನ ಅತ್ಯಾಚಾರ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಹಳೆಯ ನಿಬಂಧನೆಗಳನ್ನು ಪರಿಷ್ಕರಿಸುವ ಜೊತೆಗೆ ಹೊಸದನ್ನು ಪರಿಚಯಿಸುವ ಮೂಲಕ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಯನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದೆ. ಇದಕ್ಕಾಗಿ ರಾಜ್ಯ ಸರ್ಕಾರವು 120 ಕೋಟಿ ರೂಪಾಯಿ ಮಂಜೂರು ಮಾಡಿದೆ. ಕಳೆದ ತಿಂಗಳು ಸರ್ಕಾರಿ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯೆಯೊಬ್ಬರ ಅತ್ಯಾಚಾರವೆಸಗಿ ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಸೋಮವಾರ ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಕಾನೂನು ಸಚಿವ ಮೊಲೊಯ್ ಘಟಕ್ ಮಸೂದೆ ಮಂಡಿಸಿದರು.
ಮಸೂದೆಯಲ್ಲಿ ಏನೇನಿದೆ?
ಪೆರೋಲ್ ಇಲ್ಲದ ಜೀವಾವಧಿ ಶಿಕ್ಷೆ: ಮಸೂದೆಯ ಪ್ರಕಾರ ಅತ್ಯಾಚಾರದ ಅಪರಾಧಿಗಳಿಗೆ ಪೆರೋಲ್ ಇಲ್ಲದೆ ಜೀವಾವಧಿ ಶಿಕ್ಷೆ ವಿಧಿಸಬಹುದು.
ಮರಣ ದಂಡನೆ: ಅತ್ಯಾಚಾರದ ಅಪರಾಧಿ ಸಂತ್ರಸ್ತೆಯ ಸಾವಿಗೆ ಕಾರಣವಾದರೆ ಅಥವಾ ಆಕೆಯನ್ನು ಅದೇ ಸ್ಥಿತಿಯಲ್ಲಿ ಬಿಟ್ಟರೆ ಅವನಿಗೆ ಮರಣದಂಡನೆ ವಿಧಿಸಲು ಅವಕಾಶ ನೀಡಿದೆ.
ಪೋಕ್ಸೋ ಕಾಯ್ದೆಯಲ್ಲಿ ಕಠಿಣ ನಿಯಮಗಳು: ಮಸೂದೆ ಪ್ರಕಾರ ಪೋಕ್ಸೋ ಕಾಯ್ದೆಯಲ್ಲಿ ನಿಬಂಧನೆಗಳನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು.
ಅಪರಾಜಿತ ಕಾರ್ಯಪಡೆ: ಪ್ರಾಥಮಿಕ ವರದಿಯ 21 ದಿನಗಳೊಳಗೆ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ಮಸೂದೆಯ ನಿಬಂಧನೆಗಳ ಅನ್ವಯ ಕಾರ್ಯಪಡೆ ರಚಿಸಲಾಗುವುದು.
ವೈದ್ಯರು ಮತ್ತು ದಾದಿಯರಿಗೆ ಭದ್ರತೆ: ಎಲ್ಲಾ ವೈದ್ಯರು ಮತ್ತು ದಾದಿಯರು ಪ್ರಯಾಣಿಸುವ ಮಾರ್ಗಗಳಲ್ಲಿ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುವುದು.