ಯಕ್ಷಗಾನ ರಂಗದಲ್ಲಿ ಅನೇಕ ಮಹಿಳಾ ಕಲಾವಿದರು ಮಿಂಚುತ್ತಿದ್ದಾರೆ. ಇಂತಹ ಮಹಿಳಾ ಕಲಾವಿದರಲ್ಲಿ ಹಲವರು ಹಿಮ್ಮೇಳ ಕಲಾವಿದರು ಹಲವರು ಮುಮ್ಮೇಳ ಕಲಾವಿದರು.. ಆದರೆ ಮಹಿಳಾ ಪ್ರಸಂಗಕರ್ತೆಯರು ಕೆಲವರು ಮಾತ್ರ… ಭಾಗವತಿಕೆಯನ್ನೂ ಮಾಡುತ್ತಾ ಪ್ರಸಂಗ ಕರ್ತೆಯಾಗಿಯೂ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಲಾವಿದೆ ಸಂಧ್ಯಾ ಪೂಜಾರಿ..
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆಗ್ರಾರ್ ದರ್ಬೆ ಮನೆಯ ದಿವಂಗತ ಚಂದಪ್ಪ ಪೂಜಾರಿ ಹಾಗೂ ಶ್ರೀಮತಿ ಜಯಂತಿ ಇವರ ಮಗಳಾಗಿ, ಅಣ್ಣ ಸಂದೀಪ್ ಪೂಜಾರಿಯ ಪ್ರೀತಿಯ ತಂಗಿಯಾಗಿ ಜನವರಿ 14ರಂದು ಕು.ಸಂಧ್ಯಾ ಪೂಜಾರಿ ಅವರ ಜನನ. M S W (ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ) ಇವರ ವಿದ್ಯಾಭ್ಯಾಸ.
ಇದನ್ನೂ ಓದಿ : 72ರ ಹರೆಯದ ‘ಪ್ರಾಚೀನ ಬಿಲ್ಲುಗಾರ’
ಯಕ್ಷಗಾನ ಇವರಿಗೆ ರಕ್ತಗತವಾಗಿ ಬಂದ ಕಲೆ. ಇಂದು ಇವರು ಈ ಶ್ರೀಮಂತ ಕಲೆಯಲ್ಲಿ ಸಾಧನೆ ಮಾಡಿದ ಹಿಂದೆ ಇವರ ತಂದೆ, ತಾಯಿ ಹಾಗೂ ಅಣ್ಣನ ಪ್ರೋತ್ಸಾಹ ಬಹಳ ಇದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಸಂಧ್ಯಾ ಪೂಜಾರಿ.
ಯಕ್ಷಗಾನದ ಗುರುಗಳು:-
ಶ್ರೀ ಮೋಹನ್ ಬೈಪಾಡಿತ್ತಾಯ,
ಶ್ರೀ ದಯಾನಂದ ಕೋಡಿಕಲ್,
ಕೊರೊನಾ ಸಂದರ್ಭದಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀ ಯೋಗೀಶ್ ಶರ್ಮ.
ಇವರೇ ಬರೆದ ಪ್ರಸಂಗ “ಅಬ್ಬರದ ಗಗ್ಗರ” ಇವರ ನೆಚ್ಚಿನ ಪ್ರಸಂಗ.
ಶಂಕರಾಭರಣ, ಶಿವರಂಜಿನಿ ಇವರ ನೆಚ್ಚಿನ ರಾಗ.
ಶ್ರೀ ತಿರುಮಲೇಶ್ವರ ಅಳಿಕೆ, ಶ್ರೀ ಶ್ರವಣ್ ಕುಮಾರ್ ಕೊಳಂಬೆ, ಶ್ರೀ ಪವನ್ ಕಲ್ಲೂರಾಯ ಇವರ ನೆಚ್ಚಿನ ಚೆಂಡೆ ಹಾಗೂ ಮದ್ದಳೆ ವಾದಕರು.
ಶ್ರೀ ಸಂಜೀವ ಕಜೆಪದವು ಇವರ ನೆಚ್ಚಿನ ಭಾಗವತರು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಒಳ್ಳೆಯದೂ ಇದೆ, ಕೆಟ್ಟದ್ದು ಇದೆ. ಹಲವಾರು ಪ್ರತಿಭೆಗಳು ಯಕ್ಷಗಾನದಲ್ಲಿ ಬೆಳೆಯುತ್ತಿವೆ. ಖುಷಿಯ ವಿಷಯ.
ಯಕ್ಷಗಾನ ಪ್ರಸಂಗ ಬರೆಯಲು ಪ್ರೇರಣೆ:-
ಮೂಲ ಕಾರಣ ಭಾಗವತರಾದ ಶ್ರೀ ಸಂಜೀವ ಕಜೆಪದವು. ಮೊದಲಿಗೆ ಒಂದು ತಾಯಿ ಮಂತ್ರದೇವತೆಯ ಜಾನಪದ (ಯಾರೂ ಬರೆದು ಕೊಟ್ಟ ಕಥೆ ಅಲ್ಲ. ಪುರಾಣ ಕಥೆ) ಕಥೆ ಇತ್ತು. ಅದಕ್ಕೆ ಖಾಲಿ ಪದ್ಯ ಬರೆದಿದ್ದೆ. ಅದನ್ನು ತಾಳಮದ್ದಳೆಯ ರೂಪದಲ್ಲಿ ಬಿಡುಗಡೆ ಮಾಡಿದ್ದೆ. ಅಲ್ಲಿಂದ ಒಂದು ಧೈರ್ಯ ಇತ್ತು. ನಾನು ಕೂಡಾ ಒಂದು ಪ್ರಸಂಗ ಬರೆಯಬಲ್ಲೆ ಎಂದು. ನಂತರ ಇನ್ನೊಂದು ಸಮಯದಲ್ಲಿ ನಾನೇ ಪ್ರಸಂಗ ಬರೆಯಲು ಪ್ರೇರಕರಾಗಿ ಬಂದದ್ದು ಭಾಗವತರಾದ ಸುಶಾಂತ್ ಕೈಕಂಬ.
ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆಯಾ:- ಆಸಕ್ತಿ ಇಲ್ಲ. ಆದರೆ ಸ್ತ್ರೀ ವೇಷ ಕೊಟ್ಟರೆ ಮಾಡುವೆ ಅನ್ನೋ ಧೈರ್ಯ ಇದೆ. ಆದರೆ ನಾಟ್ಯ ಕಲಿತಿಲ್ಲ.
ಹೊಸ ಪ್ರಸಂಗಗಳ ಬಗ್ಗೆ ಆಕ್ಷೇಪಗಳಿವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ:-
ಇಲ್ಲ ಆಕ್ಷೇಪಗಳಿಲ್ಲ. ನಾನು ಬರೆದ ಪ್ರಸಂಗ ಜನಮೆಚ್ಚುಗೆ ಪಾತ್ರ ಆಗಿದೆ. ಆ ಖುಷಿ ಇದೆ. ನಾನು ಪ್ರಸಂಗ ಬರೆದಿದ್ದೇನೆ ಅನ್ನೋ ಅಹಂಕಾರ ಇಲ್ಲ. ನಾನು ಇನ್ನೂ ಈ ಯಕ್ಷಗಾನದಲ್ಲಿ ಮಗು. ಅಂಬೆಗಾಲು ಇಡುತ್ತಾ ಇದ್ದೇನೆ ಅಷ್ಟೇ. ಯಾರಾದರು ನನ್ನ ತಪ್ಪುಗಳನ್ನು ಹೇಳಿದರೆ, ತಲೆ ತಗ್ಗಿಸಿ ಕೇಳಿಸಿಕೊಳ್ಳುವ ತಾಳ್ಮೆ ಇದೆ. ತಪ್ಪು ಇದ್ದರೆ ಸರಿ ಮಾಡಿಸಿಕೊಂಡು ಹೋಗುವೆ. ನನ್ನ ಮನಸ್ಸಿಗೆ ಬಂದ ಒಂದು ಸುಂದರ ಕಥೆ ಬರೆದು ಅದಕ್ಕೆ ಬೇರೆ ಕಲಾವಿದರು ಜೀವ ತುಂಬಿದ್ದಾರೆ. ಅಷ್ಟು ಸಾಕು ನನಗೆ. ನಾನು ಪ್ರಸಂಗ ರಚನೆಯಲ್ಲೂ ಕೂಡಾ ಕಲಿಯಲು ಸಾಕಷ್ಟು ಇದೆ. ಕಲಿಯುವ ಹಂಬಲವೂ ಇದೆ. ಅದೂ ಅಲ್ಲದೆ ನನನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುವ ಜನರು ಕೂಡ ಇದ್ದಾರೆ. ಅಷ್ಟು ಸಾಕು.
ಪದ್ಯ ಬರೆಯುವ ಬಗ್ಗೆ ನಿಮ್ಮ ನಿಲುವು ಏನು:-
ನನಗೆ ತುಂಬಾ ಇಷ್ಟ. ಪ್ರಸಂಗ ಬರೆದಾಗ ಅದಕ್ಕೆ ಜೀವ ತುಂಬುವುದೇ ಪದ್ಯಗಳು. ಅದರಲ್ಲಿ ಒಡ್ಡೋಲಗ, ಸಂವಾದ, ಶೃಂಗಾರ, ಕರುಣಾ, ಭಕ್ತಿ, ಬೀಭತ್ಸ ಇನ್ನೂ ಅನೇಕ ಪ್ರಕಾರಗಳಿವೆ. ಅದನ್ನೆಲ್ಲಾ ಮನಸಲ್ಲಿ ಇಟ್ಟುಕೊಂಡು ಪದ್ಯ ರಚನೆ ಮಾಡಬೇಕು. ಅದರಲ್ಲೂ ಛಂದಸ್ಸು. ನನಗೆ ಅಷ್ಟು ಅದರ ಬಗ್ಗೆ ಜ್ಞಾನ ಇಲ್ಲ. ಆದ್ರೆ ನನ್ನ ಪದ್ಯಗಳು ಛಂದಸ್ಸಿಗೆ ವಿರುದ್ಧವಾಗಿ ಇಲ್ಲ. ನನ್ನ ಗುರುಗಳಾದ ಶ್ರೀ ದಯಾನಂದ ಕೋಡಿಕಲ್ ಅವರು ಆ ಬಗ್ಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಧನ್ಯೋಸ್ಮಿ ಗುರುಗಳೇ.
ತಂದೆಯ ಹೆಸರಿನಲ್ಲಿ ಯಕ್ಷ ಕಾವ್ಯ ತರಂಗಿಣಿ (ರಿ) ದಿವಂಗತ ಭಾಗವತ ಚಂದಪ್ಪ ಪೂಜಾರಿ ಪ್ರತಿಷ್ಠಾನ ಕಟ್ಟಿದ್ದೇವೆ. ಅದನ್ನು ಲೋಕವ್ಯಾಪಿ ಮಾಡುವುದು ಮತ್ತು ಯಕ್ಷಗಾನದಲ್ಲಿ ನನ್ನ ತಂದೆಯ ಹೆಸರು ಉಳಿಸುವುದೆ ಯಕ್ಷರಂಗದಲ್ಲಿ ನನ್ನ ಮುಂದಿನ ಯೋಜನೆ ಎಂದು ಹೇಳುತ್ತಾರೆ ಸಂಧ್ಯಾ ಪೂಜಾರಿ.
ಮಂಗಳಾದೇವಿ ಮೇಳದಲ್ಲಿ ಪ್ರಸಂಗಕ್ಕೆ ಭಾಗವತರಾಗಿ ಹಾಗೂ ಸಸಿಹಿತ್ಲು ಮೇಳಕ್ಕೆ ಸಂಗೀತಕ್ಕೆ ಹೋಗಿ ತಿರುಗಾಟ ಮಾಡಿದ ಅನುಭವ. ಯಕ್ಷಗಾನ ರಂಗದಲ್ಲಿ ಒಟ್ಟು 6 ವರ್ಷಗಳಿಂದ ತಿರುಗಾಟ ಮಾಡಿದ ಅನುಭವ ಇವರದು.
“ಸ್ವರ ಮಾಧುರಿ” ಎಂಬ ಬಿರುದು ಇವರಿಗೆ ದೊರೆತಿರುತ್ತದೆ.
ತಂದೆ ತಾಯಿ ಅಣ್ಣನ ಪ್ರೋತ್ಸಾಹ ಹಾಗೂ ಗುರು-ಹಿರಿಯ ಕಲಾವಿದರ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಮುನ್ನಡೆಯಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳುತ್ತಾರೆ ಸಂಧ್ಯಾ ಪೂಜಾರಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.