ಫೋರ್ಬ್ಸ್ ಪ್ರತಿ ವರ್ಷ ವಿಶ್ವದ ಪ್ರಭಾವಶಾಲಿ ನಾಯಕರು, ಮಹಿಳೆಯರು ಹಾಗೂ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿತ್ತು ಅದರಲ್ಲಿ ಅಚ್ಚರಿ ಎಂದರೆ ಒಡಿಶಾ ಮೂಲದ ಆಶಾ ಕಾರ್ಯಕರ್ತೆ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದರು. ತಿಂಗಳಿಗೆ ಕೇವಲ 4,500 ರೂ ಸಂಬಳ ಪಡೆಯುವ ಒಡಿಶಾ ಮೂಲದ ಆದಿವಾಸಿ ಸಮುದಾಯದ ಆಶಾ ಕಾರ್ಯಕರ್ತೆ.
45 ವರ್ಷದ ಆಶಾ ಕಾರ್ಯಕರ್ತೆ ಮತಿಲ್ದಾ ಕುಲ್ಲು ಒಡಿಶಾದ ಸುಂದರ್ಗರ್ ಜಿಲ್ಲೆಯವರು. ಇವರು ತೆಹ್ಸಿಲ್ನ 964 ಜನರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಇವರು ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ಕೆಲಸಗಳಿಂದ ಗುರುತಿಸಲ್ಪಟ್ಟಿದ್ದಾರೆ.
ಮತಿಲ್ದಾ ಕುಲ್ಲು ಬರಗಾನ್ ತೆಹ್ಸಿಲ್ನಲ್ಲಿರುವ ಗರ್ಗಡ್ಬಹಲ್ ಗ್ರಾಮದವರು. ಆಶಾ ದೀದೀಯೆಂದು ಕೂಡ ಕರೆಯಲ್ಪಡುವ ಇವರು ಕೋವಿಡ್-19ಗೆ ಸಂಬಂಧಿಸಿದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 2021ರ ಫೋರ್ಬ್ಸ್ ಪಟ್ಟಿಯಲ್ಲಿ ಮತಿಲ್ದಾ ಕುಲ್ಲು ಅಲ್ಲದೇ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಮಾಜಿ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಸೇರಿ 21 ಮಹಿಳೆಯರು ಸ್ಥಾನ ಪಡೆದಿದ್ದಾರೆ.
ಮುಂಜಾನೆ 5 ಗಂಟೆಗೆ ತನ್ನ ದಿನಚರಿ ಶುರು ಮಡುವ ಮತಿಲ್ದಾ ಕುಲು ತನ್ನೆಲ್ಲಾ ಮನೆಕೆಲಸಗಳನ್ನು ಮುಗಿಸಿ ತನ್ನ ಕುಟುಂಬದ ನಾಲ್ವರು ಸದಸ್ಯರಿಗೆ ಆಹಾರವನ್ನು ತಯಾರಿಸುತ್ತಾಳೆ. ಜೊತೆಗೆ ಮನೆಯಲ್ಲಿರುವ ನಾಲ್ಕು ದನಗಳಿಗೂ ಆಹಾರ ನೀಡುವ ಆಕೆ ಇಡೀ ಗ್ರಾಮವನ್ನೇ ತನ್ನ ಕುಟುಂಬವೆಂದು ಭಾವಿಸಿದ್ದಾರೆ.
ಮತಿಲ್ದಾ ಕುಲ್ಲು ತಾವು ಆಶಾಕರ್ತೆಯಾದ ಆರಂಭದ ದಿನಗಳಲ್ಲಿ, ಹಳ್ಳಿಯ ಜನರು ಆರೋಗ್ಯ ಹಾಳಾದ ಕೂಡಲೇ, ವೈದ್ಯರ ಬಳಿ ಹೋಗುವ ಬದಲು ಮಾಟಗಾರರು ಅಥವಾ ಮಾಂತ್ರಿಕರ ಬಳಿ ತೆರಳುವುದನ್ನು ಗಮನಿಸಿದ್ದರು. ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಿ ಅವರ ಈ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಮತಿಲ್ದಾ ಕುಲ್ಲು ನಿರ್ಣಾಯಕ ಪಾತ್ರ ವಹಿಸಿದ್ದರು.
ಪ್ರತಿದಿನ ತನ್ನ ಸೈಕಲ್ನಲ್ಲಿ ತೆರಳುವ ಮತಿಲ್ದಾ ಗ್ರಾಮದಲ್ಲಿ ಪ್ರತಿ ಮನೆ ಬಾಗಿಲುಗಳಿಗೆ ಹೋಗಿ ಜನರ ಆರೋಗ್ಯದ ಕುರಿತಾದ ಮಾಹಿತಿಯನ್ನು ಪಡೆಯುತ್ತಿದ್ದರು. ಅದರ ಜೊತೆ ನವಜಾತ ಮತ್ತು ಹದಿಹರೆಯದ ಹೆಣ್ಣು ಮಕ್ಕಳಿಗೆ ಲಸಿಕೆ ಹಾಕುವುದು ಹೀಗೆ ಆರೋಗ್ಯದ ಅನೇಕ ಸೇವೆಗಳನ್ನು ಹಳ್ಳಿ ಹಳ್ಳಿಗೆ ಜನಜಾಗೃತಿ ಮೂಲಕ ತಿಳಿಸುತ್ತಿದ್ದಾರೆ.
ಪ್ರಸವಪೂರ್ವ ತಪಾಸಣೆ ನಡೆಸುವ ಬಗ್ಗೆ, ಹೆರಿಗೆಗೆ ಸಿದ್ಧತೆ ನಡೆಸುವ ಬಗ್ಗೆ, ಗರ್ಭಿಣಿಯರಿಗೆ ಪೌಷ್ಠಿಕ ಆಹಾರ ನೀಡುವುದು ಸೇರಿದಂತೆ ಹೀಗೆ ಹಲವಾರು ಸಲಹೆಗಳನ್ನು ಗ್ರಾಮಸ್ಥರಿಗೆ ಇವರು ನೀಡುತ್ತಾರೆ. ಮಧ್ಯರಾತ್ರಿ ಹೆರಿಗೆ ನೋವು ಅನುಭವಿಸುವ ಮಹಿಳೆಯರಿಗೆ ಚಿಕಿತ್ಸೆಯನ್ನು ಇವರು ನೀಡಿದ್ದಾರೆ. ಹೀಗೆ ಹಳ್ಳಿಯ ಜನರ ಆರೋಗ್ಯ ಕಾಪಾಡುವ ಅನೇಕ ಜೀವ ಉಳಿಸುವಲ್ಲಿ ಮುಖ್ಯವಾಗಿ ಕೋರೋನ ವಿರುದ್ಧ ಹೋರಾಡುವಲ್ಲೂ ಅವರ ಕೆಲಸ ನಿಜಕ್ಕೂ ಶ್ಲಾಘನೀಯ. ಅವರ ಕಾರ್ಯ ಯುವ ಪೀಳಿಗೆಗೆ ಸ್ಪೂರ್ತಿದಾಯಕ.