ಜಾತ್ಯಾತೀತ ರಾಷ್ಟ್ರದಲ್ಲಿ ಧರ್ಮಾತೀತವಾಗಿ ಎಲ್ಲಾ ಮಹಿಳೆಯರೂ ಜೀವನಾಂಶ ಪಡೆಯುವ ಹಕ್ಕು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಿ.ವಿ ನಾಗರತ್ನ ಹಾಗೂ ನ್ಯಾಯಮೂರ್ತಿ ಆಗಸ್ಟಿನ್ ಜಾರ್ಜ್ ಮಸಿಹ್ ಅವರ ನ್ಯಾಯಪೀಠ ಐತಿಹಾಸಿಕ ತೀರ್ಪು ನೀಡಿದೆ.
ಈ ತೀರ್ಪು ಮಹಿಳೆಯರ ಆರ್ಥಿಕ ಸ್ಥಿತಿಗತಿ ಹಾಗೂ ಆರ್ಥಿಕ ಅವಲಂಬನೆ, ಕುಟುಂಬ ನಿರ್ವಹಣೆಯಲ್ಲಿ ಹೆಣ್ಣಿನ ಪಾತ್ರ ಮೊದಲಾದ ವಿಚಾರಗಳನ್ನು ಚರ್ಚಿಸಿ ನೀಡಿದ ತೀರ್ಪಾಗಿದೆ. ಅಂದರೆ ಮಹಿಳಾ ಸಬಲೀಕರಣದತ್ತ ಇಟ್ಟ ದಿಟ್ಟ ಹೆಜ್ಜೆ ಇದಾಗಿದೆ.
ಪ್ರಮುಖವಾಗಿ ಈ ತೀರ್ಪಿನಲ್ಲಿ ಪತ್ನಿಯ ಜೀವನಾಂಶದ ಕಾನೂನು ಬದ್ಧ ಹಕ್ಕಿಗೆ ಸಂಬಂಧ ಪಟ್ಟ ಸೆಕ್ಷನ್ 125 ಸಿ.ಆರ್.ಪಿ.ಸಿ ಧರ್ಮದ ಎಲ್ಲೆ ಮೀರಿ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಅಲ್ಲದೆ ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶ ಪಡೆಯಲು ಈ ನಿಯಮದನ್ವಯ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ. ಈ ಮೂಲಕ ಮುಸ್ಲಿಂ ಮಹಿಳಾ ಕಾಯ್ದೆ(ವಿಚ್ಛೇದನ ಮೇಲಿನ ಹಕ್ಕುಗಳ ರಕ್ಷಣೆ)1986, ಜಾತ್ಯಾತೀತ ಕಾನೂನು ವ್ಯಾಪ್ತಿಯಿಂದ ಹೊರತಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿರುವುದು ಶ್ಲಾಘನೀಯ.
ಈ ತೀರ್ಪಿನ ಮಹತ್ವ ಗೊತ್ತಾಗಬೇಕಾದರೆ 1985ರ ಶಾ ಬಾನೋ ಪ್ರಕರಣವನ್ನು ಗಮನಿಸಲೇಬೇಕು. 1985ರ ತೀರ್ಪಿನಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 125 ಅವರ ಧರ್ಮವನ್ನು ಲೆಕ್ಕಿಸದೆ ಎಲ್ಲರಿಗೂ ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.