ಭಾರತವು ಕೃಷಿ ಪ್ರಧಾನ ದೇಶ. ಇಲ್ಲಿ ರೈತರೇ ದೇಶದ ಬೆನ್ನೆಲುಬು. ಕೃಷಿ ಚಟುವಟಿಕೆಗಳಲ್ಲಿ ರೈತರು ತಮ್ಮನ್ನು ತಾವು ತೊಡಗಿಸಿಕೊಳ್ಳದೆ ಹೋದರೆ ದೇಶ ಆರ್ಥಿಕವಾಗಿ ಎಷ್ಟೇ ಬಲಿಷ್ಠವಿದ್ದರೂ ಹಸಿವಿನಲ್ಲಿ ನರಳಾಡುವ ಪರಿಸ್ಥಿತಿ ಎದುರಾಗುತ್ತದೆ. ಕೃಷಿ ವಲಯಗಳಲ್ಲಿ ಇಂದು ರೈತರಿಗೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ಏನೇ ಕೃಷಿ ಚಟುವಟಿಕೆಗಳನ್ನು ಮಾಡುವುದಿದ್ದರೂ ಅತಿವೃಷ್ಟಿ, ಅನಾವೃಷ್ಟಿ, ಹವಮಾನ ವೈಪರಿತ್ಯಗಳು ಒಂದಲ್ಲ ಒಂದು ಸಮಸ್ಯೆಗಳನ್ನು ಒಡ್ಡುತ್ತಲೇ ಇರುತ್ತದೆ. ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸುವುದಕ್ಕಾಗಿ ಕೃಷಿ ವಲಯಕ್ಕೆ ಸಂಬಂಧಿಸಿದ ಸಾರ್ಟ್ಅಪ್ ಗಳನ್ನು ಸಶಕ್ತಗೊಳಿಸಲು ಕೇಂದ್ರ ಸರ್ಕಾರವು 750 ಕೋಟಿ ರೂಪಾಯಿಗಳ ಅಗ್ರಿಶ್ಯೂರ್ ನಿಧಿಯನ್ನು ಆರಂಭಿಸಿದೆ. ಭಾರತದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪ್ರವರ್ತಕ ಹೆಜ್ಜೆಯಾಗಿದ್ದು, ಇದರೊಂದಿಗೆ ಸರ್ಕಾರ ರೈತರನ್ನು ಸಬಲೀಕರಣ ಗೊಳಿಸುವುದಕ್ಕೂ ಗಮನ ನೀಡಿದೆ. ಕೃಷಿಗೆ ಸಂಬಂಧಿಸಿದ ಹೊಸ ವಿಧಾನಗಳನ್ನು ಅನ್ವಯಿಸುವ ಸಂಸ್ಥೆಗಳಿಗೂ ಸಹಾಯ ಮಾಡುವ ನಿಧಿಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಚಾಲನೆ ನೀಡಿದರು ಕೇಂದ್ರದ ಈ ಉಪಕ್ರಮವು ದೇಶದ ಕೃಷಿ ವಲಯದ ಸುಧಾರಣೆಗೆ ನೆರವಾಗಲಿದೆ.
ಕೇಂದ್ರ ಸಚಿವರಿಂದ ಚಾಲನೆ
ದೇಶದ ಆರ್ಥಿಕತೆಯ ಪ್ರಮುಖ ಬೆನ್ನೆಲುಬಾದ ಕೃಷಿ ವಲಯ ಉತ್ತೇಜಿಸುವುದಕ್ಕಾಗಿ ಕೃಷಿ ಕ್ಷೇತ್ರಕ್ಕೆ ಸುಮಾರು 14 ಸಾವಿರ ಕೋಟಿ ರೂಪಾಯಿಗಳ ಏಳು ಯೋಜನೆಗಳಿಗೆ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಕುರಿತು ಕಾರ್ಯಕ್ರಮ ಒಂದರಲ್ಲಿ ಮಾಹಿತಿ ನೀಡಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೃಷಿನಿವೇಶ್ ಮತ್ತು ಅಗ್ರಿಶ್ಯೂರ್ ನಿಧಿ ಹೆಸರಿನ ಸಮಗ್ರ ಕೃಷಿ ಹೂಡಿಕೆ ಪೋರ್ಟಲ್ ಗೆ ಚಾಲನೆ ನೀಡಿದರು. 750 ಕೋಟಿ ರೂಪಾಯಿಗಳ ದ್ವಿತೀಯ ಅಗ್ರಿಶ್ಯೂರ್ ಕೃಷಿ ವಲಯದಲ್ಲಿ ಕಾರ್ಯನಿರ್ವಹಿಸುವ ಸ್ಟಾರ್ಟ್ಅಪ್ ಗಳು ಮತ್ತು ಗ್ರಾಮೀಣ ಸಂಸ್ಥೆಗಳಿಗೆ ಹಣಕಾಸಿನ ನೆರವು, ಈಕ್ವಿಟಿ ಮತ್ತು ಸಾಲದ ಬಂಡವಾಳ ಎರಡನ್ನೂ ಒದಗಿಸುವ ಮೂಲಕ ಸ್ಟಾರ್ಟ್ಅಪ್ ಗಳು ಮತ್ತು ಕೃಷಿಕರಿಗೆ ಬೆಂಬಲ ನೀಡುತ್ತದೆ.
ಏನಿದು ಅಗ್ರಿಶ್ಯೂರ್ ನಿಧಿ ಎಂಬ ಉಪಕ್ರಮ?
ಅಗ್ರಿಟೆಕ್ ಸ್ಟಾರ್ಟ್ ಅಪ್ ಗಳಿಗೆ ಹಣಕಾಸಿನ ನೆರವು ನೀಡಲು 750 ಕೋಟಿ ರೂಪಾಯಿಗಳ ನಿಧಿ ‘ಅಗ್ರಿಶ್ಯೂರ್’ ಅನ್ನು ಪ್ರಾರಂಭಿಸಲಾಗಿದೆ. ಕೃಷಿ ವಲಯಕ್ಕೆ ಸಂಬಂಧಿಸಿದ ಹೊಸ ಅನ್ವೇಷಣೆ, ವಿಧಾನ ಸೇರಿ ಇತರೆ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಹೊಸ ಸ್ಟಾರ್ಟಪ್ ಕಂಪನಿಗಳಿಗೆ ಹಣವನ್ನು ಒದಗಿಸುವುದು ಅಗ್ರಿಶ್ಯೂರ್ ಉಪಕ್ರಮದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಒಟ್ಟು 750 ಕೋಟಿ ರೂಪಾಯಿಗಳ ನಿಧಿ ಇದಾಗಿದೆ. ಉಪಕ್ರಮಕ್ಕೆ ಚಾಲನೆ ನೀಡಿದ ಕೇಂದ್ರ ಪ್ರತಿ ಸಚಿವರು, ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಹೂಡಿಕೆಗಳನ್ನು ಹೆಚ್ಚಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ಅದರಂತೆ, ದೇಶದ ಕೃಷಿ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಲು ನೆರವಾಗಲಿರುವ ಉಪಕ್ರಮದಲ್ಲಿ ಭಾರತ ಸರ್ಕಾರ, ನಬಾರ್ಡ್ ಮತ್ತು ಖಾಸಗಿ ವಲಯ ಸ್ಥಳ 250 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿವೆ.
ಅಗ್ರಿಶ್ಯೂರ್ ನಿಧಿ ದೊಡ್ಡ ಉಪಕ್ರಮದ ಭಾಗವಾಗಿದೆ. ಭಾರತದ ಗ್ರಾಮಗಳಲ್ಲಿ ವಾಸಿಸುವ ರೈತರು ಮತ್ತು ಗ್ರಾಮೀಣ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಲಿದೆ. ಉಪಕ್ರಮ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವ ಮೂಲಕ ರೈತರು ಹೆಚ್ಚು ಇಳುವರಿ ನೀಡುವ ಬೆಳೆಗಳನ್ನು ಬೆಳೆದು ಉತ್ತಮ ಆದಾಯ ಗಳಿಸಲು ಸಹಾಯಕವಾಗಲಿದೆ.
ಸ್ಟಾರ್ಟ್ಅಪ್ ಗಳಿಗೆ ಬೆಂಬಲ
ಕೃಷಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿರುವ ಹೊಸ ಸ್ಟಾರ್ಟಪ್ ಗಳಿಗೆ ಹಣಕಾಸಿನ ಸಹಾಯ ಒದಗಿಸುವುದು ಅಗ್ರಿಶ್ಯೂರ್ ನಿಧಿಯ ಉದ್ದೇಶವಾಗಿದೆ. ಅದರಂತೆ, ಹೊಸ ಸ್ಟಾರ್ಟ್ ಅಪ್ ಸಂಸ್ಥೆಗಳು ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಥವಾ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದು. ಇದೇ ವೇಳೆ, ಸ್ಟಾರ್ಟ್ ಅಪ್ ಗಳು ಆಹಾರ ಪದಾರ್ಥಗಳನ್ನು ತಯಾರಿಸುವುದು, ಪ್ರಾಣಿಗಳನ್ನು ಸಾಕುವುದು, ಮೀನುಗಳನ್ನು ಸಾಕುವುದು ಅಥವಾ ಕೃಷಿ ಭೂಮಿಯನ್ನು ಸುಧಾರಿಸುವ ಮಾರ್ಗಗಳನ್ನು ಹುಡುಕುವುದು ಮುಂತಾದ ಇತರ ಕ್ಷೇತ್ರಗಳಲ್ಲಿಯೂ ತೊಡಗಬಹುದು.
ಆರ್ಥಿಕತೆಗೆ ಪರೋಕ್ಷ ಕೊಡುಗೆ
ಗ್ರಾಮೀಣ ಭಾರತದಲ್ಲಿ ವಿವಿಧ ಕೃಷಿ ಸಂಬಂಧಿತ ಮೂಲ ಸೌಕರ್ಯಗಳನ್ನು ರಚಿಸಲು ಸರ್ಕಾರ ಒಂದು ಲಕ್ಷ ಕೋಟಿ ರೂಪಾಯಿಗಳ ಕೃಷಿ ಮೂಲ ಸೌಕರ್ಯ ನಿಧಿಯನ್ನು ಪ್ರಾರಂಭಿಸಿದೆ. ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ವಲಯದಿಂದ ಜಿಡಿಪಿಗೆ ಶೇಕಡ 18ರಷ್ಟು ಕೊಡುಗೆ ನೀಡುತ್ತಿದೆ. ರೈತರು ಕೇವಲ ಬೃಹತ್ ಉತ್ಪಾದಕರಷ್ಟೇ ಅಲ್ಲದೆ ಗ್ರಾಹಕರು ಆಗಿರುವುದರಿಂದ ಆರ್ಥಿಕತೆಗೆ ಪರೋಕ್ಷ ಕೊಡುಗೆ ಇನ್ನಷ್ಟು ಹೆಚ್ಚಲಿದೆ.
ರಚನೆಯ ಮಹತ್ವವೇನು?
ಕೃಷಿ ವಲಯ ಎದುರಿಸುತ್ತಿರುವ ಸವಾಲುಗಳಿಗೆ ಪ್ರತಿಕ್ರಿಯೆಯಾಗಿ ಅಗ್ರಿಶೂರ್ ನಿಧಿಯನ್ನು ರಚಿಸಲಾಗಿದೆ. ವಿಶೇಷವಾಗಿ ಕರೋನಾ ಸಮಯದಲ್ಲಿ, ಕೃಷಿ ಕ್ಷೇತ್ರ ಬಹಳಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಲಾಕ್ಡೌನ್ ಸಮಯದಲ್ಲಿಯೂ, ಕೃಷಿ ವಲಯ ತ್ವರಿತವಾಗಿ ಚೇತರಿಸಿಕೊಳ್ಳುವುದರೊಂದಿಗೆ ತನ್ನ ಸಾಮರ್ಥ್ಯ ಸಾಬೀತುಪಡಿಸಿತು. ಆದರೂ, ಈ ವಲಯದಲ್ಲಿನ ಹೊಸ ಸ್ಟಾರ್ಟ್ಅಪ್ ಗಳು ಹಣಕಾಸಿನ ಸೌಲಭ್ಯ ಪಡೆದುಕೊಳ್ಳಲು ಬಹಳಷ್ಟು ತೊಂದರೆಗಳನ್ನು ಎದುರಿಸಿದವು. ಇದರಿಂದಾಗಿ ಅನೇಕ ಸ್ಟಾರ್ಟ್ಅಪ್ ಗಳು ಪ್ರಗತಿ ಹೊಂದಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ನಿಧಿಯ ಮುಖ್ಯ ಉದ್ದೇಶವೆಂದರೆ ಸ್ಟಾರ್ಟ್ ಅಪ್ ಗಳಿಗೆ ಹಣಕಾಸಿನ ಕೊರತೆ ಎದುರಾಗದಂತೆ ನೆರವಾಗುವುದಾಗಿದೆ.
ಹಣಕಾಸಿನ ಕಾರ್ಯ ವಿಧಾನ
ಉಪಕ್ರಮದಲ್ಲಿ ಸ್ಟಾರ್ಟಪ್ ಸಂಸ್ಥೆಗಳಿಗೆ ಹಣವನ್ನು ಎರಡು ರೀತಿಯಲ್ಲಿ ನೀಡಲಾಗುತ್ತದೆ. ಮೊದಲಿಗೆ, ಸ್ಟಾರ್ಟ್ಅಪ್ ಗಳಿಗೆ ಹಣವನ್ನು ನೇರವಾಗಿ ಇಕ್ವಿಟಿ ರೂಪದಲ್ಲಿ ನೀಡಲಾಗುತ್ತದೆ. ಎರಡನೆಯದಾಗಿ, ಸಾಲದ ಮೂಲಕವೂ ಈ ಸಂಸ್ಥೆಗಳಿಗೆ ಹಣ ಲಭ್ಯವಾಗುತ್ತದೆ. ಸ್ಟಾರ್ಟ್ಅಪ್ ಗಳು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಹಣ ಪಡೆಯಬಹುದಾಗಿದೆ.