ಬೆಂಗಳೂರು : ಕ್ರೀಡೆಯಲ್ಲಿ ಯೋಗದ ಪಾತ್ರ ಮಹತ್ವವಾದದ್ದು. ಅದು ಕ್ರೀಡಾಳುಗಳ ಮಾನಸಿಕ ಸ್ಥಿಮಿತತೆಯನ್ನು ಕಾಪಾಡುವುದಲ್ಲದೆ, ದೈಹಿಕವಾಗಿ ಸದೃಢವಾಗುವಂತೆ, ಗಾಯಗಳನ್ನೂ ಬಹುಬೇಗ ಗುಣವಾಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ. ದಿನನಿತ್ಯದ ಜೀವನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಹಾಗೂ ಯೋಗದ ಅಭ್ಯಾಸ ಅತ್ಯಗತ್ಯ ಎಂದು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ಭಾರತ ಕಬ್ಬಡ್ಡಿ ತಂಡದ ಮುಖ್ಯ ತರಬೇತುದಾರ ಇ. ಭಾಸ್ಕರನ್ ಅವರು ಹೇಳಿದರು.
ಉತ್ಥಾನ ಮಾಸಪತ್ರಿಕೆಯ ವತಿಯಿಂದ ಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 2023ನೇ ಸಾಲಿನ ವಾರ್ಷಿಕ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿ ಪ್ರಜಾವಾಣಿಯ ಕ್ರೀಡಾ ಪತ್ರಕರ್ತ ಗಿರೀಶ್ ದೊಡ್ಡಮನಿ ಮಾತನಾಡಿ ನಮ್ಮ ದೇಶದಲ್ಲಿ ಐತಿಹಾಸಿಕ ಮಹತ್ವವಿರುವ ಹಲವಾರು ಕ್ರೀಡೆಗಳಿವೆ. ಆದರೆ ಆರ್ಥಿಕತೆ, ಜನಪ್ರಿಯತೆ, ಸಾಮಾಜಿಕ ಹವ್ಯಾಸವಾಗಿ ಕ್ರಿಕೆಟ್ ಒಂದು ಜನಪದವಾಗಿ ಬೆಳೆದಿದೆ. ಕ್ರಿಕೆಟ್ ನಂಬಿ ಬಂದವರಿಗೆ ಉದ್ಯೋಗ ಸೃಷ್ಟಿ ಮತ್ತು ಉಪಜೀವನದ ಹಾದಿಯನ್ನು ರೂಪಿಸಿ, ಬೃಹತ್ ಮಾರುಕಟ್ಟೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಕ್ರಿಕೆಟ್ ಗೆ ನೀಡಿದ ಪ್ರಚಾರವೆಷ್ಟು ಕಾರಣವೋ, ಉಳಿದ ಭಾರತೀಯ ಕ್ರೀಡಾ ಒಕ್ಕೂಟಗಳಲ್ಲಿರುವ ಸಾಂಸ್ಥಿಕ ಲೋಪಗಳೂ ಕಾರಣ ಎಂದು ಅಭಿಪ್ರಾಯಪಟ್ಟರು.
ನಮ್ಮ ರಾಷ್ಟ್ರದಲ್ಲಿ ಆರ್ಥಿಕ ಮತ್ತು ಪ್ರತಿಭಾ ಸಂಪನ್ಮೂಲ ಸಮೃದ್ಧವಾಗಿಯೇ ಇದೆ. ನಾನಾ ಸವಾಲುಗಳನ್ನು ದಾಟಿಕೊಂಡು ಜಾಗತಿಕವಾಗಿ ಭಾರತದ ಕೀರ್ತಿಯನ್ನು ಹೆಚ್ಚಿಸುವಲ್ಲಿ ಕ್ರೀಡಾಪಟುಗಳು ತಮ್ಮ ವೈಯಕ್ತಿಕ ತ್ಯಾಗ ಮತ್ತು ಸಾಮರ್ಥ್ಯಗಳಿಂದ ಶ್ರಮಿಸುತ್ತಿದ್ದಾರೆ. ನಮ್ಮ ರಾಷ್ಟ್ರೀಯ ಸಂಪನ್ಮೂಲಗಳನ್ನು ಸರಿಯಾಗಿ ಬಳಸಬೇಕಾಗಿರುವುದು ನಮ್ಮ ಜವಾಬ್ದಾರಿ. ನಮ್ಮ ಮಕ್ಕಳ ಆಸಕ್ತಿಯನ್ನು ಅರಿತು ಅವರಿಷ್ಟದ ಕ್ಷೇತ್ರದಲ್ಲಿ ಮುಂದುವರೆಯುವಂತೆ ಪ್ರೋತ್ಸಾಹಿಸುವುದು ಅಗತ್ಯ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ರೀಡಾಭಾರತಿಯ ದಕ್ಷಿಣ ಮಧ್ಯ ಕ್ಷೇತ್ರದ ಸಂಯೋಜಕ ಚಂದ್ರಶೇಖರ ಜಾಗೀರ್ ದಾರ್ ಅವರು ಭಾರತೀಯ ಕಲ್ಪನೆಯಲ್ಲಿ ಪ್ರತಿ ಕಾರ್ಯದ ಉದ್ದೇಶವೂ ಆನಂದವೇ ಆಗಿದೆ.
ಕ್ರೀಡೆಯೂ ಆನಂದಕ್ಕಾಗಿಯೇ ಇರುವಂತಹದ್ದು. ರಾಷ್ಟ್ರಭಕ್ತಿ ನಿರ್ಮಾಣದಲ್ಲಿ ಕ್ರೀಡೆಯ ಪಾತ್ರ ಮಹತ್ವವಾದದ್ದು.
ಕ್ರಿಕೆಟ್ ಹೊರತಾಗಿಯೂ ಕ್ರೀಡೆಗಳಿವೆ, ಅವುಗಳಿಗೂ ಸೂಕ್ತ ಪ್ರೋತ್ಸಾಹ ಸಿಗಬೇಕು ಎನ್ನುವುದನ್ನು ಸಕಾರಾತ್ಮಕವಾಗಿ ಸಾಮಾಜಿಕ ಜಾಗೃತಿ ಮೂಡಿಸುವ ಸಲುವಾಗಿ ಕ್ರೀಡಾಭಾರತಿ ಪ್ರಯತ್ನಿಸುತ್ತಿದೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಪರಿಷತ್ ನ ಪ್ರಧಾನ ಕಾರ್ಯದರ್ಶಿ ದಿನೇಶ್ ಹೆಗ್ಡೆ ಅವರು ಮಾತನಾಡಿ ಉತ್ಥಾನ ಮಾಸಪತ್ರಿಕೆ ರಾಷ್ಟ್ರೋತ್ಥಾನ ಪರಿಷತ್ತಿನ ಆರಂಭಿಕ ಉಪಕ್ರಮಗಳಲ್ಲೊಂದು. ಸದಭಿರುಚಿಯ, ಸಂಶೋಧನಾತ್ಮಕ ವಿಷಯಗಳನ್ನು ಪ್ರಕಟಿಸುವ ಮೂಲಕ ಜನಮನ್ನಣೆ ಪಡೆದುಕೊಂಡಿದೆ. ಸಮಾಜದಲ್ಲಿ ರಾಷ್ಟ್ರೀಯ ಭಾವ ಜಾಗರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಅದರ ಭಾಗವಾಗಿ ಯುವ ಬರಹಗಾರರನ್ನು ಪ್ರೋತ್ಸಾಹಿಸಬೇಕೆಂಬ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ ಪ್ರಬಂಧ ಸ್ಪರ್ಧೆ, ಸಾರ್ವಜನಿಕರಿಗೆ ಕಥಾ ಸ್ಪರ್ಧೆಯನ್ನು ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ ಎಂದರು.
2023ನೇ ಸಾಲಿನ ಉತ್ಥಾನ ಮಾಸಪತ್ರಿಕೆಯ ವಾರ್ಷಿಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬೆಂಗಳೂರಿನ ಕಾವ್ಯಜೋಗಿ ಪಡೆದುಕೊಂಡರು.
ದ್ವಿತೀಯ ಬಹುಮಾನವನ್ನು ಬೆಂಗಳೂರಿನ ಸ್ವಾತಿ ಇ ಎಂ, ತೃತೀಯ ಬಹುಮಾನವನ್ನು ಕುಮಟಾದ ಯಂಕನಗೌಡ ಪಡೆದುಕೊಂಡರು.
ಬೆಳಗಾವಿಯ ಪ್ರತೀಕ್ಷಾ ಅಶೋಕ ಜಂತಿ, ಶಿರಸಿಯ ಅಮೃತಾ ರಾಜೇಂದ್ರ ಹೆಗಡೆ, ಬೆಂಗಳೂರಿನ ನಂದಕುಮಾರ್, ಪುತ್ತೂರಿನ ಮೇಘಾ ಡಿ., ಚಿತ್ರದುರ್ಗದ ಪನ್ನಗ ಪಿ. ರಾಯ್ಕರ್, ಮೈಸೂರಿನ ದರ್ಶನ್ ಎಸ್. ಎನ್., ಬೆಂಗಳೂರಿನ ಸಹನಾ ಎಂ, ಕುಮಟಾದ ದೀಪಾ ಕೆ ಬಿ, ಮಂಗಳೂರಿನ ಶಿವಾನಿ ಬಿ ಎಸ್, ಉಡುಪಿಯ ಪೃಥ್ವಿ ನಾಯಕ್ ಸೇರಿದಂತೆ 10 ಮಂದಿ ಮೆಚ್ಚುಗೆಯ ಬಹುಮಾನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ವಾದಿರಾಜ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್, ಉತ್ಥಾನ ಸಂಪಾದಕ ಅನಿಲ್ ಕುಮಾರ್ ಮೊಳಹಳ್ಳಿ, ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕ ವಿಘ್ನೇಶ್ವರ ಭಟ್, ರಾಷ್ಟ್ರೋತ್ಥಾನ ಪರಿಷತ್ ನ ಖಜಾಂಚಿ ನಾರಾಯಣ ಕೆ ಎಸ್ ಉಪಸ್ಥಿತರಿದ್ದರು.