ಬಾಹ್ಯಾಕಾಶಕ್ಕೆ ತೆರಳಿರುವ ನಾಸಾ ಗಗನ ಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತಾಂತ್ರಿಕ ಕಾರಣಗಳಿಂದ ಮರಳಿ ಭೂಮಿಗೆ ಬರುವುದು ವಿಳಂಬವಾಗುತ್ತಿದೆ. ಪ್ರಸ್ತುತ ಬಾಹ್ಯಾಕಶ್ಯದಲ್ಲಿಯೇ ಉಳಿದುಕೊಂಡಿರುವ ಈ ಘಟನೆಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ. ಅದೆಷ್ಟೋ ಜನರು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿಯೇ ಇದ್ದುಕೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಹೋಗುವುದಿಲ್ಲ. ಇಂತಹ ಜನರಿಗೆ ಈ ಗಗನಯಾತ್ರಿಗಳು ಮಾದರಿಯನಿಸಿಕೊಳ್ಳಲಿದ್ದಾರೆ. ಬಾಹ್ಯಾಕಾಶದಿಂದ ಮತದಾನ ಚಲಾಯಿಸುವುದು ಇದೇ ಹೊಸತೇನಲ್ಲ. ಬಾಹ್ಯಾಕಾಶದಿಂದ ಮತದಾನ ಚಲಾಯಿಸುವುದು ಹೇಗೆ? ಕಾನೂನಾತ್ಮಕವಾಗಿ ಇದಕ್ಕೆ ಅವಕಾಶ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಹಲವರಲ್ಲಿ ಉದ್ಭವಿಸುವುದು ಸಹಜ. ಇದಕ್ಕೆಲ್ಲ ಉತ್ತರ ಈ ಲೇಖನದಲ್ಲಿದೆ.
ಬಾಹ್ಯಾಕಾಶದಿಂದ ಮತದಾನ ಮಾಡುವುದು ಹೇಗೆ?
ಬಾಹ್ಯಾಕಾಶದಿಂದ ಮತದಾನದ ಹಕ್ಕು ಚಲಾಯಿಸುವುದು ಹೊಸ ವಿಷಯವೇನಲ್ಲ. 1997ರಲ್ಲಿ ಟೆಕ್ಸಾಸ್ ಸಂಸದರು ಗಗನಯಾತ್ರಿಗಳಿಗೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿದ್ದಾರೆ. ಹಿಂದಿನ ಸೋವಿಯತ್ ಒಕ್ಕೂಟ ನಿರ್ವಹಿಸುತ್ತಿದ್ದ, ಈಗ ನಿಷ್ಕ್ರಿಯವಾಗಿರುವ ಮೀರ್ ಬಾಹ್ಯಾಕಾಶ ನಿಲ್ದಾಣದಿಂದ ಹಿಂದಿನ ಗಗನಯಾತ್ರಿಗಳು ಮತ ಚಲಾಯಿಸಿದ್ದರು. ಈ ಬಾರಿ ಗಗನಯಾತ್ರಿಗಳು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿರುವ ಸುರಕ್ಷಿತ ವಿದ್ಯುನ್ಮಾನ ಪ್ರಕ್ರಿಯೆಯನ್ನು ಬಳಸಿಕೊಂಡು ಮತ ಚಲಾಯಿಸಲಿದ್ದಾರೆ. ಇಬ್ಬರೂ ಗಗನಯಾತ್ರಿಗಳು ವಾಸಿಸುವ ಟೆಕ್ಸಾಸ್ ನಾ ಹ್ಯಾರಿಸ್ ಕೌಂಟಿಯ ಚುನಾವಣಾ ಅಧಿಕಾರಿಗಳು, ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಾಸಾದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಗಗನಯಾತ್ರಿಗಳು ತಮ್ಮ ಮತಪತ್ರಗಳನ್ನು ಪಿಡಿಎಫ್ ಕಡತದ ರೂಪದಲ್ಲಿ ಕ್ಲಿಕ್ ಮಾಡಬಹುದಾದ ಬಾಕ್ಸ್ಗಳೊಂದಿಗೆ ಸ್ವೀಕರಿಸುತ್ತಾರೆ. ಅವರು ತಮ್ಮ ಆಯ್ಕೆಗಳನ್ನು ಮಾಡಿ ಅದನ್ನು ಸೇವ್ ಮಾಡಿಟ್ಟುಕೊಳ್ಳಬಹುದು ಮತ್ತು ಮರಳಿ ಕಳುಹಿಸಬಹುದು. ವಿಶಿಷ್ಟ ಪಾಸ್ವರ್ಡ್ ಹೊಂದಿರುವ ಪರೀಕ್ಷಾ ಮತಪತ್ರವನ್ನು ಯಾವಾಗಲೂ ಮೊದಲು ಕಳುಹಿಸಲಾಗುತ್ತದೆ. ಗಗನಯಾತ್ರಿಗಲು ತಮ್ಮ ನೇರ ಚುನಾವಣೆಯಲ್ಲಿ ಮತ ಚಲಾಯಿಸಿ ಹಿಂದಿರುಗಿಸಿದ ನಂತರ, ಅದನ್ನು ಮುದ್ರಿಸಲಾಗುತ್ತದೆ ಮತ್ತು ಇತರ ಮತಪತ್ರಗಳೊಂದಿಗೆ ಮುಂದಿನ ಪ್ರಕ್ರಿಯೆ ನಡೆಯುತ್ತದೆ ಎಂದು ಹಾರೀಸ್ ಕೌಂಟಿ ಗುಮಾಸ್ತರ ಕಚೇರಿಯ ವಕ್ತಾರ ಟೊರೆಸ್-ಸೆಗುರಾ ಹೇಳಿದ್ದಾರೆ.
ತಂತ್ರಜ್ಞಾನ ಎಂದರೇನು?
ಬಾಹ್ಯಾಕಾಶದಿಂದ ಮತದಾನದ ಸಂಪ್ರದಾಯ 1997ರಲ್ಲಿ ಪ್ರಾರಂಭವಾಯಿತು. ಅದೇ ವರ್ಷ ಟೆಕ್ಸಾಸ್ ತನ್ನ ಗಗನಯಾತ್ರಿಗಳು ತಮ್ಮ ಮತವನ್ನು ಅಲ್ಲಿಂದಲೇ ಚಲಾಯಿಸಲು ಅವಕಾಶ ಮಾಡಿಕೊಡುವ ಪ್ರಮುಖ ಕಾನೂನನ್ನು ಜಾರಿಗೆ ತಂದಿತು. ಅಂದಿನಿಂದ, ಹಲವಾರು ಗಗನಯಾತ್ರಿಗಳು ಕಕ್ಷೆಯಿಂದಲೇ ತಮ್ಮ ಪ್ರಜಾಸತ್ತಾತ್ಮಕ ಕರ್ತವ್ಯವನ್ನು ಪೂರೈಸಲು ಈ ವಿಧಾನವನ್ನು ಬಳಸಿದ್ದಾರೆ. ಡೇವಿಡ್ ಉಲ್ಫ್ ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ಅಮೆರಿಕನ್ ಪ್ರಜೆ ಮತ್ತು ತೀರಾ ಇತ್ತೀಚೆಗೆ, ನಾಸಾ ಗಗನಯಾತ್ರಿ ಕೇಟ್ ಟೂ ರೂಬಿನ್ಸ್ 2020ರ ಚುನಾವಣೆಯಲ್ಲಿ ಐ.ಎಸ್.ಎಸ್ ನಿಂದ ಮತ ಚಲಾಯಿಸಿದ್ದರು. ಈ ಪ್ರಕ್ರಿಯೆಯನ್ನು ನಾಸಾದ ಸ್ಪೇಸ್ ಕಮ್ಯುನಿಕೇಶನ್ ಅಂಡ್ ನ್ಯಾವಿಗೇಶನ್ (ಎಸ್.ಸಿ.ಎ.ಎನ್) ಮೂಲಸೌಕರ್ಯದ ಮೂಲಕ ಸುಲಭಗೊಳಿಸಲಾಗುತ್ತದೆ. ಇದು ಮತಪತ್ರಗಳಂತಹ ಸೂಕ್ಷ್ಮ ದತ್ತಾಂಶಗಳ ಸುರಕ್ಷಿತ ಪ್ರಸರಣವನ್ನು ಖಾತ್ರಿಪಡಿಸುತ್ತದೆ ಗಗನಯಾತ್ರಿಗಳು ತಮ್ಮ ಎಲೆಕ್ಟ್ರಾನಿಕ್ ಗೈರು ಹಾಜರಿ ಮತಪತ್ರವನ್ನು ಪೂರ್ಣಗೊಳಿಸಿದ ನಂತರ, ಅದನ್ನು ಎನ್ಕ್ರ್ರಿಪ್ಟ್ ಮಾಡಲಾಗುತ್ತದೆ ಮತ್ತು ನಾಸಾದ ಹತ್ತಿರದ ಫೇಸ್ ನೆಟ್ವರ್ಕ್ ಮೂಲಕ ರವಾನಿಸಲಾಗುತ್ತದೆ. ಮತ ಪತ್ರ ಟ್ರ್ಯಾಕಿಂಗ್ ಮತ್ತು ಡೇಟಾ ರಿಲೇ ಉಪಗ್ರಹಗಳ ಮೂಲಕ ನ್ಯೂ ಮೆಕ್ಸಿಕೋದ ನೆಲದ ಆಂಟೆನಾಕ್ಕೆ ಸಿಗುತ್ತದೆ. ನಂತರ ಹುಸ್ಟನ್ನ ಮಿಷನ್ ಕಂಟ್ರೋಲ್ ಗೆ ಮತ್ತು ಅಂತಿಮವಾಗಿ ಸಂಬಂಧಿಸಿದ ಕೌಂಟಿಂಗ್ ಗುಮಾಸ್ತರಿಗೆ ಕಳುಹಿಸಲಾಗುತ್ತದೆ.
ಸುನೀತಾ ವಿಲಿಯಂ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿ ಹೇಗಿದ್ದಾರೆ?
ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಸುನಿತಾ ವಿಲಿಯಂ ಮತ್ತು ಬುಚ್ ವಿಲ್ಮೋರ್ ಜೂನ್ 2024ರ ಆರಂಭದಿಂದ ಐಎಸ್ಎಸ್ ನಲ್ಲಿ ಸಿಲುಕಿಕೊಂಡಿದ್ದಾರೆ. ಆರಂಭದಲ್ಲಿ ಅವರ ಮಿಷನ್ ಕೇವಲ ಎಂಟು ದಿನಗಳ ಕಾಲ ನಡೆಯಬೇಕಿತ್ತು. ಆದರೆ ಈಗ ಇವರು ಫೆಬ್ರವರಿ 2025ರ ವರೆಗೆ ಬಾಹ್ಯಾಕಾಶದಲ್ಲಿ ಉಳಿಯಬೇಕಾಗಿದೆ. ನಂತರ ಅವರು ಸ್ಪೇಸ್ ಎಕ್ಸ್ ಕ್ಯಾಪ್ಸೂಲ್ ನಲ್ಲಿ ಮರಳುವ ನಿರೀಕ್ಷೆ ಇದೆ. ಸವಾಲುಗಳ ಹೊರತಾಗಿಯೂ, ಇಬ್ಬರು ನಾಸಾ ಗಗನಯಾತ್ರಿಗಳು ಸಕಾರಾತ್ಮಕ ದೃಷ್ಟಿಕೋನವನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮರಳುವಿಕೆಯನ್ನೇ ವಿಲಂಬ ಗೊಳಿಸಿದ ತಾಂತ್ರಿಕ ಸವಾಲುಗಳ ಹೊರತಾಗಿಯೂ, ಇಬ್ಬರೂ ನಾಸಾ ಗಗನ ಯಾತ್ರಿಗಳು ಬಾಹ್ಯಾಕಾಶದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ. ಕೆಲವರಷ್ಟೇ ಊಹಿಸಬಹುದಾದ ಜಾಗದಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಎತ್ತಿ ಹಿಡಿಯಲಿದ್ದಾರೆ. 2024ರ ಯು ಎಸ್ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ನಾಸಾ ಗಗನಯಾತ್ರಿಗಳು ಭೂಮಿಗೆ ಹಿಂತಿರುಗಲಾಗುವುದಿಲ್ಲ. ಆದ್ದರಿಂದ ಬಾಹ್ಯಾಕಾಶದಲ್ಲಿ ತಮ್ಮ ಸುಧೀರ್ಘ ವಾಸ್ತವ್ಯದ ಹೊರತಾಗಿಯೂ ಈ ಇಬ್ಬರು ಗಗನಯಾತ್ರಿಗಳು ಬಹು ದೂರದಿಂದಲೇ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ನಿರ್ಧರಿಸಿರುವುದು ಅಭಿನಂದನೀಯ.
ಮತದಾನ ಎಂಬುದು ಪ್ರತಿಯೊಬ್ಬರಿಗೂ ರಾಷ್ಟ್ರ ನೀಡುವ ಶ್ರೇಷ್ಠ ಹಕ್ಕು. ಈ ಹಕ್ಕನ್ನು ಚಲಾಯಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಮ್ಮ ರಾಷ್ಟ್ರದ ಅಭ್ಯುದಯಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು. ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೊರ್ ಇದಕ್ಕೆ ಬಹುದೊಡ್ಡ ಉದಾಹರಣೆಯಾಗಿದ್ದಾರೆ. ಆದ್ದರಿಂದ ಎಲ್ಲೇ ಇದ್ದರೂ ಮತದಾನ ಮಾಡುವ ಹಕ್ಕನ್ನು ಮಾತ್ರ ಮರೆಯದಿರೋಣ. ನಮ್ಮ ಒಂದು ಮತ ದೇಶದ ಹೇಳಿಕೆಗೆ ಬಹುದೊಡ್ಡ ಉಡುಗೊರೆಯಾಗಿರುತ್ತದೆ. ಒಂದು ಮತ ತಪ್ಪಿ ಹೋದರು, ದೇಶದ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಬಹುದು ಆದ್ದರಿಂದ ಮತದಾನ ಎಲ್ಲರ ಜೀವನದ ಬಹುದೊಡ್ಡ ಹಕ್ಕು ಎಂಬುದನ್ನು ಮರೆಯಬಾರದು.