ಮಳೆಗಾಲ ಬಂತೆಂದರೆ ಸಾಕು ವಿದ್ಯುತ್ ಅವಘಡಗಳು ಅಲ್ಲಲ್ಲಿ ಸಂಭವಿಸುತ್ತಲೇ ಇರುತ್ತದೆ. ಇದರಿಂದಾಗಿ ಪ್ರತೀ ವರ್ಷ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಆದ್ದರಿಂದ ನಾವು ಮಳೆಗಾಲದಲ್ಲಿ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಪ್ರಾಣಹಾನಿ ಆಗುವುದು ತಪ್ಪುತ್ತದೆ.
ಮೊದಲ ಮಳೆ ಸುರಿಯುತ್ತಿದ್ದಂತೆ ಒಣಗಿದ ಮರಗಳು ಚಿಗುರಿ ಹಸಿರಾಗಿ ದಟ್ಟವಾಗಿ ಬೆಳೆಯುತ್ತದೆ. ಈ ಮರದ ಕೊಂಬೆಗಳು ಮನೆಯ ಹತ್ತಿರದ ಅಥವಾ ರಸ್ತೆ ಬದಿಯ ವಿದ್ಯುತ್ ತಂತಿಗಳಿಗೆ ತಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಯಾರೂ ಅತೀ ಬುದ್ಧಿವಂತಿಕೆ ತೋರಿ ವಿದ್ಯುತ್ ತಂತಿಗಳಿಗೆ ತಗುಳಿದ ಮರದ ಕೊಂಬೆಗಳನ್ನು ಕಡಿಯಲು ಹೋಗದಿರಿ. ಹಸಿ ಮರ ಅಥವಾ ಒದ್ದೆ ಮರವಿದ್ದಾಗ ಅದರಲ್ಲಿ ವಿದ್ಯುತ್ ಪ್ರವಹಿಸುವ ಸಾಧ್ಯತೆಯಿದ್ದು ಪ್ರಾಣಾಪಾಯ ಎದುರಾಗಬಹುದು. ಆದ್ದರಿಂದ ತಕ್ಷಣ ಹತ್ತಿರದ ಲೈನ್ ಮ್ಯಾನ್ ಅವರನ್ನು ಕರೆಸಿ ಮರದ ಕೊಂಬೆಗಳನ್ನು ಕತ್ತರಿಸುವ ಕೆಲಸ ಮಾಡಬೇಕು.
ಮಳೆಗಾಲದಲ್ಲಿ ಸುರಿಯುವ ಧಾರಾಕಾರ ಮಳೆ, ಗುಡುಗು-ಮಿಂಚು, ಬಿರುಗಾಳಿಗೆ ವಿದ್ಯುತ್ ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದು ನೀರಿನಲ್ಲಿ ವಿದ್ಯುತ್ ಪ್ರವಹಿಸುತ್ತದೆ. ವಾಹನ ಸವಾರರು, ಪಾದಚಾರಿಗಳು ಹಗಲಿರುಳು ಈ ಬಗ್ಗೆ ಎಷ್ಟೇ ಕಾಳಜಿ ವಹಿಸಿದರೂ ಕಡಿಮೆಯೇ. ಒಬ್ಬರು ವಹಿಸುವ ಎಚ್ಚರಿಕೆ ಹಲವರ ಪ್ರಾಣ ಉಳಿಸುತ್ತದೆ. ಆದ್ದರಿಂದ ಆದಷ್ಟು ಎಚ್ಚರಿಕೆಯಿಂದ ಪ್ರಯಾಣಿಸುವುದು ಉತ್ತಮ.
ವಿದ್ಯುತ್ ಕಂಬಗಳನ್ನು ಮುಟ್ಟುವುದು, ಕಂಬಗಳಿಗೆ ಪ್ರಾಣಿಗಳನ್ನು ಕಟ್ಟಿ ಹಾಕಲು ಹೋಗಬೇಡಿ.
ಒದ್ದೆಯಾದ ಕೈಯಲ್ಲಿ ನೀರಾವರಿ ಪಂಪ್ ಶೆಡ್ ಒಳಗೆ ಮುಟ್ಟುವುದು, ಮನೆಯ ಯಾವುದೇ ವಿದ್ಯುತ್ ಸ್ವಿಚ್ ಮುಟ್ಟಬೇಡಿ. ಗಾಳಿ ಮಳೆಗೆ ಅಲ್ಲಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳು ರಸ್ತೆ ಬಿದ್ದಿರುತ್ತದೆ. ಇಂತಹ ಸಮಸ್ಯೆ ಕಣ್ಣಿಗೆ ಕಂಡ ತಕ್ಷಣ ಕೆಇಬಿಗೆ ಕರೆ ಮಾಡಿ ತಿಳಿಸಿ. ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸದಂತೆ ಜಾಗೃತಿ ಮೂಡಿಸುವ ಕೆಲಸ ಮೊದಲು ಮಾಡಬೇಕು.
ವಿದ್ಯುತ್ ಕಂಬಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ರಿಪೇರಿ ಮಾಡಲು ಯಾರೂ ಮುಂದಾಗಬೇಡಿ.
ವಿದ್ಯುತ್ ಕಂಬಗಳನ್ನು ಮುಟ್ಟುವ ಹಕ್ಕು ಸಾರ್ವಜನಿಕರಿಗೆ ಇಲ್ಲವೇ ಇಲ್ಲ. ಪ್ರಾಣಾಪಾಯ ಎದುರಾದರೆ ಅದಕ್ಕೆ ವಿದ್ಯುತ್ ಇಲಾಖೆ ಹೊಣೆಗಾರಿಕೆ ಅಲ್ಲ. ವಿದ್ಯುತ್ ಸಮಸ್ಯೆ ಏನೇ ಇದ್ದರೂ ಲೈನ್ ಮ್ಯಾನ್ ಅಥವಾ ಪರಿಣತ ಎಲೆಕ್ಟ್ರಿಕ್ ಕೆಲಸಗಾರರಿಂದ ಪರಿಹರಿಸಿಕೊಳ್ಳಿ.
ಮಳೆಗಾಲದಲ್ಲಿ ಲೈನ್ ಮ್ಯಾನ್ ಕೆಲಸಗಾರರು ಬಿಡುವಿಲ್ಲದ ಕಾರ್ಯನಿರತರಾಗಿರುತ್ತಾರೆ. ಯಾವುದೇ ಗಾಳಿ ಮಳೆ ಮಳೆ ಬಂದರೂ ವಿದ್ಯುತ್ ಕಂಬಗಳನ್ನೇರುವ ಕಾಯಕ ಯೋಗಿಗಳವರು. ಆದ್ದರಿಂದ ಕೆಲವೊಮ್ಮೆ ನಮ್ಮ ಸಮಸ್ಯೆಗಳಿಗೆ ಓಗೊಟ್ಟರೂ ಓಡೋಡಿ ಬರುವಾಗ ತಡವಾಗುವುದು ಸಹಜ. ಅದಕ್ಕಾಗಿ ಅವರಿಗೆ ಶಾಪದ ಉಡುಗೊರೆ ಕೊಡಲೇಬೇಡಿ. ನಮ್ಮ ಜೀವದಂತೆ ಅವರ ಜೀವವೂ ಅಮೂಲ್ಯ ಅಲ್ಲವೇ..?
ಶಾಲೆಗೆ ಹೋಗುವ ಮಕ್ಕಳು, ವೃದ್ಧರನ್ನು ವಿದ್ಯುತ್ ಸ್ಥಾವರಗಳನ್ನು ಮುಟ್ಟಲು ಬಿಡಬೇಕು. ವಿದ್ಯುತ್ ಇಲಾಖೆ ಈಗ ಗಲ್ಲಿ ಗಲ್ಲಿಗಳಲ್ಲೂ ಅವಘಡಗಳ ಬಗ್ಗೆ ಅರಿವು ಮೂಡಿಸುತ್ತಿದೆ. ಇವುಗಳನ್ನು ಪಾಲಿಸಿ ವಿದ್ಯುತ್ ಅವಘಡಗಳಿಂದ ನಮ್ಮ ಪ್ರಾಣವನ್ನು ನಾವೇ ರಕ್ಷಿಸೋಣ.