ಶಾಲಾ ದಿನಗಳಲ್ಲಿ ಪಠ್ಯ ಪುಸ್ತಕಗಳಲ್ಲಿ ಓದಿದ ನೆನಪು ಈಗಲೂ ಹಾಗೆಯೇ ಅಚ್ಚಳಿಯದೆ ಉಳಿದಿದೆ. ಆಗ ನಮ್ಮ ತಾಲೂಕಿನಲ್ಲೂ ಇಂತಹ ವಿಸ್ಮಯಕಾರಿ ಸ್ಥಳವೊಂದಿದೆಯಾ ಎಂಬ ಅಚ್ಚರಿ ಕೂಡ ಕಾಡಿದ್ದು ಸುಳ್ಳಲ್ಲ. ಆಗ ಸೋಜಿಗ ತರಿಸಿದ ಆ ಹೆಸರೇ “ಇರ್ದೆ ಬೆಂದ್ರ್ ತೀರ್ಥ”.
ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಹಾಗೂ ಚರ್ಮ ರೋಗ ನಿವಾರಣಾ ನಂಬಿಕೆಗೆ ಖ್ಯಾತಿಯಾಗಿ ಗುರುತಿಸಿಕೊಂಡಿದ್ದ ಸ್ಥಳವೇ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಪುತ್ತೂರು ತಾಲೂಕಿನ “ಇರ್ದೆ ಬೆಂದ್ರ್ ತೀರ್ಥ”. ಆದರೆ ಈಗ ಇದೇ ಪ್ರೇಕ್ಷಣೀಯ ಸ್ಥಳ ತೀವ್ರ ನಿರ್ಲಕ್ಷ್ಯಕ್ಕೊಳಗಾಗಿ ಅಳಿವಿನಂಚಿಗೆ ಸಾಗುತ್ತಿದೆ.
ಬೆಂದ್ರ್ ತೀರ್ಥದ ವಿಶೇಷತೆಗಳೇನು?
ಬೆಂದ್ರ್ ತೀರ್ಥ ದಕ್ಷಿಣ ಭಾರತದಲ್ಲೇ ಏಕೈಕ ಬಿಸಿನೀರಿನ ಚಿಲುಮೆಯಾಗಿ ಖ್ಯಾತಿ ಪಡೆದಿದೆ. ಹಲವು ವರ್ಷಗಳ ಹಿಂದೆ ಈ ಅಪರೂಪದ ಸ್ಥಳ ಕಾಣ ಸಿಕ್ಕಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಎಂಬ ಗ್ರಾಮದಲ್ಲಿ. ಹಲವು ವರ್ಷಗಳ ಹಿಂದೆ ಈ ಬಿಸಿ ನೀರಿನ ಚಿಲುಮೆಯಿಂದ ಗಂಟೆಗೆ 1350ರಿಂದ 4600 ಲೀಟರ್ ನೀರು ಚಿಮ್ಮುತ್ತಿತ್ತು. 99 ರಿಂದ 106 ಡಿಗ್ರಿ ಫಾರನ್ ಹೀಟ್ ಉಷ್ಣಾಂಶ ಹಾಗೂ ಗಂಧಕದ ವಾಸನೆಯನ್ನು ಹೊಂದಿರುವ ನೀರು ಚಿಮ್ಮುವುದೇ ಈ ಸ್ಥಳದ ವಿಶೇಷತೆಯಾಗಿತ್ತು. ಇಲ್ಲಿನ ಈ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗದ ಬಾಧೆ ಕಡಿಮೆಯಾಗುತ್ತದೆ ಎಂಬ ನಂಬಿಕೆಗಳು ಜನಜನಿತ ವಾಗಿತ್ತು. ಆದ್ದರಿಂದಲೇ ನಿತ್ಯ ನೂರಾರು ಜನ ಈ ಜಾಗಕ್ಕೆ ಆಗಮಿಸಿ ಬೆಂದ್ರ್ ತೀರ್ಥದಲ್ಲಿ ಸ್ನಾನ ಮಾಡುತ್ತಿದ್ದರು.
ಗ್ರಾಮೀಣ ಪ್ರದೇಶದವಾದರೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದ ಈ ಸ್ಥಳ ಈಗ ನಿರ್ಜನವಾಗಿ ಹೋಗಿದೆ. ವರ್ಷ ಪೂರ್ತಿ ಬಿಸಿ ನೀರಿನ ಚಿಲುಮೆಯನ್ನು ಹೊಂದಿದ್ದ “ಬೆಂದ್ರ್ ತೀರ್ಥ” ಕೆರೆಯಲ್ಲಿ ದಿನ ಕಳೆದಂತೆ ನೀರು ಕಡಿಮೆಯಾಗುತ್ತಾ ಹೋಯಿತು. ಅದರ ಜೊತೆಯಲ್ಲೇ ನೀರಿನ ಉಷ್ಣಾಂಶವೂ ಇಳಿಕೆಯಾಯಿತು. ಬೇಸಿಗೆ ಕಾಲದಲ್ಲಂತು ಈಗ ನೀರು ಸಂಪೂರ್ಣ ಬತ್ತಿ ಹೋಗುತ್ತದೆ. ಇದಕ್ಕೆ ಕಾರಣ ಸುತ್ತ ಮುತ್ತ ಕೊರೆದ ಹಲವು ಕೊಳವೆ ಬಾವಿಗಳು ಎಂಬುದು ಹಲವರ ಅಭಿಪ್ರಾಯವಾಗಿದೆ.
ಪ್ರಸ್ತುತ ದಿನಗಳಲ್ಲಿ “ಇರ್ದೆ ಬೆಂದ್ರ್ ತೀರ್ಥ”ಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಆದರೆ ತೀರ್ಥ ಅಮಾವಾಸ್ಯೆ ಹಾಗೂ ಇನ್ನಿತರ ವಿಶೇಷ ದಿನಗಳಲ್ಲಿ ಇಲ್ಲಿಗೆ ಬಂದು ತೀರ್ಥ ಸ್ನಾನ ಮಾಡುವ ಜನ ಈಗಲೂ ಇದ್ದಾರೆ ಎಂಬುದೇ ವಿಶೇಷ. ಇಲ್ಲಿಗೆ ಸ್ನಾನಕ್ಕೆಂದೇ ಬರುವವರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಕೊಠಡಿಗಳು ನಿರ್ವಹಣೆಯಿಲ್ಲದೆ ಹಲವಾರು ವರ್ಷಗಳಿಂದ ಪಾಳು ಬಿದ್ದಿದೆ. ಅಷ್ಟೇ ಅಲ್ಲದೆ ಕಿಡಿಗೇಡಿಗಳ ಬರಹಗಳು ಈ ಕಟ್ಟಡದ ಗೋಡೆಗಳಲ್ಲೆಲ್ಲಾ ಕಾಣ ಸಿಗುತ್ತಿದೆ.
ಬೆಂದ್ರ್ ತೀರ್ಥದ ಅಭಿವೃದ್ಧಿಯನ್ನು ಸರ್ಕಾರ ಮಾಡಲೇಬೇಕಿದೆ.
ಪ್ರಕೃತಿ ದತ್ತವಾದ ಇಂತಹ ಅಪರೂಪದ ತಾಣಗಳನ್ನು ಉಳಿಸಿ ಬೆಳೆಸಬೇಕಾಗಿದೆ. ಬೆಂದ್ರ್ ತೀರ್ಥದಲ್ಲಿ ಒರತೆ ಮೂಲವನ್ನು ಪತ್ತೆ ಹಚ್ಚಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಅಪರೂಪದ ಪ್ರವಾಸಿ ತಾಣ ಅಳಿವಿನಂಚಿಗೆ ಸಾಗಿ ಅವಶೇಷವಾಗಿ ಉಳಿದು ಬಿಡುತ್ತದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು ಎಂಬುದು ಸ್ಥಳೀಯರ ಅಭಿಪ್ರಾಯ.