“ಆರೋಗ್ಯವೇ ಭಾಗ್ಯ” ಎಂದು ಬಲ್ಲವರು ಹೇಳಿದ್ದಾರೆ. ಆರೋಗ್ಯವೊಂದು ಚೆನ್ನಾಗಿದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಬೇರೊಂದಿರದು. ಆದರೆ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿ ಬದಲಾಗುತ್ತಿದ್ದು ಜಗತ್ತು ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿದೆ. ಮೂರು ವರ್ಷಗಳ ಹಿಂದೆ ಕರೋನ ಎಂಬ ಮಹಾಮಾರಿಯೂ ಇಡೀ ಜಗತ್ತನ್ನೇ ಅಲ್ಲೋಲಕಲ್ಲೋಲವಾಗಿಸಿದೆ. ಎಂದು ಕಾಣದ ದಿಗ್ಬಂದನದ ಅನುಭವವೂ ಹಲವು ದೇಶಗಳಿಗೆ ಕರೋನ ವೈರಸ್ ಇಂದ ಆಯಿತು. ಆದರೆ ಈಗ ಮಂಕಿ ಪಾಕ್ಸ್ ಎಂಬ ವೈರಸ್ ವಿಶ್ವವನ್ನೇ ದಂಗಾಗಿಸುತ್ತಿದೆ.
*ಏನಿದು ಮಂಕಿ ಪಾಕ್ಸ್?
ಮಂಕಿ ಪಾಕ್ಸ್ ಅಥವಾ Mpox ಎಂಬುದು ಮಂಕಿ ಪಾಕ್ಸ್ ಎಂಬ ಒಂದು ವೈರಸ್ ನಿಂದ ಹರಡುವ ಸೋಂಕು ಕಾಯಿಲೆ. ಇದು ”ಆರ್ಥೋಪಾಕ್ಸ್ ವೈರಸ್” ಎಂಬ ಪಂಗಡಕ್ಕೆ ಸೇರಿದ ವೈರಸ್ ಆಗಿದೆ. ಇದು ಸಿಡುಬು ರೋಗವನ್ನುಂಟು ಮಾಡುವ ವೈರಸ್ನಂತೆಯೇ ಇರುತ್ತದೆ.
ಮಂಕಿ ಪಾಕ್ಸ್ ವೈರಸ್ ಪತ್ತೆಯಾಗಿದ್ದು ಎಲ್ಲಿ?
1958ರಲ್ಲಿ ಈ ವೈರಸ್ ಮೊದಲ ಬಾರಿಗೆ ಮಂಗಗಳಲ್ಲಿ ಕಾಣಿಸಿಕೊಂಡಿತು. ಅದೇ ಕಾರಣದಿಂದ ಈ ರೋಗಕ್ಕೆ ಮಂಕಿ ಪಾಕ್ಸ್ ಎಂಬ ಹೆಸರು ಬಂದಿದೆ. ಅಲ್ಲದೆ ಈ ರೋಗವು ಮೊಲ, ಇಲಿ, ಅಳಿಲು ಮೊದಲಾದ ಪ್ರಾಣಿಗಳಲ್ಲೂ ಕಾಣಿಸಿಕೊಳ್ಳುತ್ತದೆ. 1970ರಲ್ಲಿ ಕಾಂಗೋ ದೇಶದಲ್ಲಿ ಮೊದಲ ಬಾರಿಗೆ ಮನುಷ್ಯರ ದೇಹದಲ್ಲಿ ಈ ಕಾಯಿಲೆಯು ಪತ್ತೆಯಾಯಿತು. ಉಷ್ಣವಲಯದ ಮಧ್ಯ ಹಾಗೂ ಪಶ್ಚಿಮ ಆಫ್ರಿಕನ್ ದೇಶಗಳ ಗ್ರಾಮೀಣ ಪ್ರದೇಶಗಳಲ್ಲಿ ಈ ರೋಗ ಹೆಚ್ಚಾಗಿ ಕಂಡು ಬರುತ್ತಿದೆ .ಜನರು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಮಾನಗಳಲ್ಲಿ ಹೆಚ್ಚಾಗಿ ಪ್ರಯಾಣಿಸುವುದರಿಂದ ರೋಗದ ಹರಡುವಿಕೆಯು ಹೆಚ್ಚಾಗಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆಂಶನ್ ಅಂಡ್ ಕಂಟ್ರೋಲ್ ಸ್ವೀಡನ್ ನಲ್ಲಿ ಸೋಂಕು ಪತ್ತೆಯಾದ ಬಳಿಕ ಆಫ್ರಿಕಾದ ಹೊರಗೆ ಈ ರೋಗದ ಅಪಾಯದ ಮುನ್ಸೂಚನೆಯನ್ನು ಕೊಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಂಕಿ ಪಾಕ್ಸ್ ರೋಗವನ್ನು ಅಂತರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿದೆ. ನಮ್ಮ ದೇಶದಲ್ಲಿ ಈ ಬಗ್ಗೆ ಸಾರ್ವಜನಿಕ ಕಾಳಜಿಯು ಎಲ್ಲಿದೆ ವ್ಯಕ್ತವಾಗುತ್ತಿದೆ. ಜಾಗತಿಕವಾಗಿ 2022 ರಿಂದ ವಿಶ್ವ ಆರೋಗ್ಯ ಸಂಸ್ಥೆಯು 116 ದೇಶಗಳಿಂದ ಮಂಕಿಪಾಕ್ಸ್ ರೋಗದ 99,176 ಪ್ರಕರಣಗಳನ್ನು ಮತ್ತು 208 ಸಾವುಗಳನ್ನು ವರದಿ ಮಾಡಿದೆ.
ಮಂಕಿ ಪಾಕ್ಸ್ ವೈರಸ್ ಅಲ್ಲಿನ ವಿಧಗಳು
ಮಂಕಿ ಪಾಕ್ಸ್ ಅನ್ನು ಕ್ಲೇಡ್-1 (ಕಾಂಗೋ ಬೇಸಿನ್ ಕ್ಲೇಡ್) ಹಾಗೂ ಕ್ಲೇಡ್-2 (ಪಶ್ಚಿಮ ಆಫ್ರಿಕಾದ ಕ್ಲೇಡ್) ಎಂಬ ಎರಡು ರೂಪಾಂತರ ವೈರಸ್ ವಿಧಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಕ್ಲೇಡ್-1 ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ನ್ಯೂಮೋನಿಯಾ, ಬ್ಯಾಕ್ಟೀರಿಯಾ ಸೋಂಕುಗಳು ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಮಂಕಿ ಪಾಕ್ಸ್ ಹೇಗೆ ಹರಡುತ್ತದೆ?
ಈ ಕಾಯಿಲೆಯು ಸೋಂಕು ಇರುವ ಪ್ರಾಣಿಗಳ ಜೊತೆ ನೇರ ಸಂಪರ್ಕವಿರುವ ಮನುಷ್ಯರಿಗೆ ಮೊದಲು ಹರಡುತ್ತದೆ. ರೋಗ ತಗುಲಿರುವ ಪ್ರಾಣಿಗಳ ಮಾಂಸ ಸೇವನೆಯಿಂದಲೂ ಈ ರೋಗ ಬರಬಹುದು. ಸೋಂಕಿತ ವ್ಯಕ್ತಿಗಳ ಉಸಿರಾಟದಿಂದ ಹೊರ ಬೀಳುವ ಕಣಗಳಿಂದ ಬೇರೆಯವರಿಗೆ ಸೋಂಕು ತಗುಲುವ ಸಾಧ್ಯತೆಯೂ ಇದೆ. ಹೊಕ್ಕುಳ ಬಳ್ಳಿಯ ಮೂಲಕ ತಾಯಿಯಿಂದ ಭ್ರೂಣಕ್ಕೆ ಸೋಂಕು ಪ್ರಸರಣವಾಗಬಹುದು. ಈ ಸೋಂಕು ತಗುಲಿದ ಆರರಿಂದ 13 ದಿನಗಳಲ್ಲಿ ರೋಗ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಐದರಿಂದ ಇಪ್ಪತ್ತು ದಿನಗಳ ಅವಧಿಯಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು. ರೋಗನಿರೋಧಕ ಶಕ್ತಿ ಚೆನ್ನಾಗಿದ್ದವರನ್ನು ಈ ಕಾಯಿಲೆ ಅಷ್ಟಾಗಿ ಬಾಧಿಸುವುದಿಲ್ಲ.
ಮಂಕಿ ಪಾಕ್ಸ್ ಸೋಂಕಿನ ಲಕ್ಷಣಗಳೇನು?
ಜ್ವರ, ತೀವ್ರ ತಲೆನೋವು, ಹಾಲ್ರಸ ಗ್ರಂಥಿಗಳಲ್ಲಿ ಊತ, ಬೆನ್ನು ನೋವು, ಸ್ನಾಯು ನೋವು, ನಿಶಕ್ತಿ, ಮುಖ-ಕೈಕಾಲು-ಹಸ್ತ-ಪಾದಗಳಲ್ಲಿ ದದ್ದುಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಶೇಕಡ 95ರಷ್ಟು ಪ್ರಕರಣಗಳಲ್ಲಿ ಮುಖದಲ್ಲಿಯೇ ಹೆಚ್ಚು ದದ್ದುಗಳು ಕಾಣಿಸಿಕೊಳ್ಳುತ್ತವೆ. ದದ್ದುಗಳು ಚಪ್ಪಟೆಯಾದ ಹುಣ್ಣಾಗಿ ಪ್ರಾರಂಭವಾಗುತ್ತವೆ. ನಿಧಾನವಾಗಿ ದ್ರವದಿಂದ ತುಂಬಿದ ಗುಳ್ಳೆಯಾಗಿ ಬೆಳೆಯುತ್ತದೆ. ಈ ಗುಳ್ಳೆಗಳು ವಿಪರೀತ ತುರಿಕೆ ಮತ್ತು ನೋವನ್ನುಂಟು ಮಾಡುತ್ತದೆ.
ಸದ್ಯಕ್ಕೆ ಮಂಕಿ ಪಾಕ್ಸ್ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ಸೂಕ್ತ ಆರೈಕೆ ಔಷಧಿಗಳಿಂದ ಈ ರೋಗದ ಲಕ್ಷಣಗಳನ್ನು ನಿವಾರಿಸಬಹುದು. ಹೆಚ್ಚಿನ ರೋಗ ಪ್ರಕರಣಗಳು ಸೌಮ್ಯವಾಗಿರುತ್ತದೆ. ಮಂಕಿ ಪಾಕ್ಸ್ ಮತ್ತು ಸಿಡುಬು ಅನುವಂಶಿಯವಾಗಿ ಒಂದೇ ಎಂದು ಪರಿಗಣಿಸಲಾಗಿರುವುದರಿಂದ ಸಿಡುಬು ನಿಯಂತ್ರಣಕ್ಕೆ ಬಳಸುವ ವೈರಸ್ ನಿಯಂತ್ರಣ ಔಷಧಿಯನ್ನೇ ಇದಕ್ಕೆ ಬಳಸಬಹುದು. ಇತರರಿಗೆ ವೈರಸ್ ಹರಡುವುದನ್ನು ತಡೆಯಲು ಕೊರೊನದಂತೆ ಸೋಂಕಿತ ವ್ಯಕ್ತಿಗಳನ್ನು ಪ್ರತ್ಯೇಕಿಸಬೇಕು. ಸೂಕ್ತ ಆರೈಕೆಗಳೊಂದಿಗೆ ಹೆಚ್ಚಿನ ರೋಗಗಳು ಯಾವುದೇ ತೊಂದರೆಗಳಿಲ್ಲದೆ ಈ ರೋಗದಿಂದ ಚೇತರಿಸಿಕೊಳ್ಳಬಹುದಾಗಿದೆ..