ಮಳೆಗಾಲ ಬಂತೆಂದರೆ ಸಾಕು. ಮಕ್ಕಳ ಹರುಷಕ್ಕೆ ಪಾರವೇ ಇಲ್ಲ. ದೊಪ್ಪನೆ ಸುರಿಯುವ ಮಳೆಯ ಅವಾಂತರಗಳನ್ನು ತಡೆಯಲು ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತದೆ. ಮಳೆಗಾಲದಲ್ಲಿ ಮಳೆ ಬಾರದೆ ಇದ್ದರೆ ಆದೀತೆ..? ಮಳೆಗಾಲದಲ್ಲಿ ಮಳೆ ಬರುವುದು ಸರ್ವೇ ಸಾಮಾನ್ಯ. ಆದರೆ ಮನುಷ್ಯ ಅವೈಜ್ಞಾನಿಕ ರೀತಿಯಲ್ಲಿ ಪ್ರಕೃತಿಯ ಮೇಲೆ ಮಾಡುತ್ತಿರುವ ದೌರ್ಜನ್ಯದ ಪ್ರತಿಫಲವಾಗಿ ಪ್ರಕೃತಿ ವಿಕೋಪಗಳು ಎದುರಾಗುತ್ತಲೇ ಇರುತ್ತದೆ. ಅತಿವೃಷ್ಟಿ, ಭೂ ಕುಸಿತ, ಪಟ್ಟಣಗಳಲ್ಲಿ ಕೃತಕ ನೆರೆ, ಪ್ರವಾಹ, ಕಡಲ್ಕೊರೆತ ಹೀಗೇ ಮಳೆಗಾಲದ ಅವಾಂತರ ಒಂದೆರಡಲ್ಲ. ಇವೆಲ್ಲದರಿಂದ ಪಾರಾಗಲು ಮಕ್ಕಳಿಗೆ ಭರ್ಜರಿ ರಜೆಗಳಂತು ಮಜಾ ಕೊಡುತ್ತಲೇ ಇರುತ್ತದೆ.
ಕಳೆದ ಎರಡು ವಾರಗಳಿಂದ ಮಕ್ಕಳ ಪಾಲಿಗೆ ಶಾಲೆ ಮರೀಚಿಕೆಯಂತಾಗಿದೆ. ಗರಿ ಬಿಚ್ಚಿ ಕುಣಿಯುವ ನಲಿವಿನಂತೆ ಮಕ್ಕಳು ಕೂಡ ಕುಣಿದು ಕುಪ್ಪಳಿಸುತ್ತಲೇ ಇದ್ದಾರೆ. ಆದರೆ ಈ ರಜೆ ಮಕ್ಕಳ ಬದುಕಿಗೆ ಸಜೆಯಾಗದಿರಲಿ. ಪೋಷಕರು ಈ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಲೇ ಬೇಕು.
ಇದನ್ನೂ ಓದಿ: ಮಳೆಗಾಲದಲ್ಲಿ ವಿದ್ಯುತ್ ಬಗ್ಗೆ ಎಚ್ಚರವಿರಲಿ
ಮಳೆಗಾಲದ ರಜೆ ಯಲ್ಲಿ ಪೋಷಕರು ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಕೆಳಗಿನಂತಿವೆ.
- ಮಳೆಗಾಲದಲ್ಲಿ ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡುವುದು ಮಕ್ಕಳ ಸುರಕ್ಷತೆಗೆ ವಿನಃ ಮೋಜು ಮಸ್ತಿಗಾಗಿ ಅಲ್ಲವೇ ಅಲ್ಲ ಎಂಬುದನ್ನು ಮಕ್ಕಳು ಹಾಗೂ ಪೋಷಕರು ಮನದಟ್ಟು ಮಾಡಿಕೊಳ್ಳಬೇಕು.
- ಮಳೆಗಾಲದಲ್ಲಿ ಮನೆಯ ಸುತ್ತಮುತ್ತ ಚರಂಡಿ, ನದಿ ತೊರೆಗಳು ತುಂಬಿ ಹರಿಯುತ್ತಿರುತ್ತದೆ. ಪುಟ್ಟ ಮಕ್ಕಳು ಈ ನೀರಿನಲ್ಲಿ ಆಟ ಆಡಲು ಹೋಗುತ್ತಾರೆ. ಅವರಿಗೆ ಈ ನೀರಿನ ರಭಸವನ್ನು ತಡೆಯುವ ತಾಕತ್ತು ಇರುವುದಿಲ್ಲ. ಆದ್ದರಿಂದ ಹೆತ್ತವರು ಈ ರೀತಿ ಮಕ್ಕಳನ್ನು ಆಟವಾಡಲು ಬಿಡಬೇಡಿ.
- ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿದ ಬೃಹತ್ ಕಟ್ಟಡಗಳು, ಅತಿಯಾಗಿ ಕೊರೆಯಲ್ಪಟ್ಟ ಕೊಳವೆ ಬಾವಿಗಳ ಪರಿಣಾಮದಿಂದ ಭೂಮಿ ತನ್ನ ಸ್ಥಿಮಿತ ಕಳೆದುಕೊಂಡು ಅಲ್ಲಲ್ಲಿ ಭೂಮಿ ಬಾಯಿ ತೆರೆಯುವುದು, ತಡೆಗೋಡೆ, ಗುಡ್ಡ ಕುಸಿತ, ಮನೆ ಕಟ್ಟಡಗಳು ಕುಸಿಯುತ್ತಿದೆ. ಇದರಿಂದಾಗಿ ಅನೇಕ ಸಾವು ನೋವುಗಳು ಸಂಭವಿಸಿದ್ದು ಈ ರೀತಿ ಸಮಸ್ಯೆಗಳಿದ್ದಲ್ಲಿ ಮಕ್ಕಳನ್ನು ಅಂತಹ ಸ್ಥಳಗಳಿಗೆ ಹೋಗಲು ಬಿಡದಿರಿ.
- ಮನೆಯಂಗಳ ಅಥವಾ ಸುತ್ತಲಿನ ಪ್ರದೇಶ ಅಥವಾ ತೋಟಗಳಲ್ಲಿ ಬಾವಿ ಕರೆಗಳು ನೀರಿನಿಂದ ಸಂಪೂರ್ಣ ತುಂಬಿರುವುದರಿಂದ ಮಕ್ಕಳನ್ನು ಅಪ್ಪಿ ತಪ್ಪಿಯೂ ಇಣುಕಲು ಬಿಡದಿರಿ. ಆಯ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ.
- ಮನೆಯ ಅಂಗಳದ ಸುತ್ತಲೂ ಮಳೆಯಿಂದಾಗಿ ಪಾಚಿ ಹಿಡಿದು ಕಾಲು ಜಾರಿ ಬಿದ್ದು ಮೂಳೆ ಮುರಿತ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳು ಇಂತಹ ಸ್ಥಳಗಳಲ್ಲಿ ಆಟವಾಡುತ್ತಾ ಓಡಾಡುವುದು ಅಪಾಯಕಾರಿ.
- ಮನೆಯ ಸುತ್ತಲೂ ವಿದ್ಯುತ್ ಕಂಬಗಳು, ತಂತಿಗಳು ಹಾದು ಹೋಗಿದ್ದು ಗಾಳಿ ಮಳೆಗೆ ಮರಗಳು ಬಿದ್ದು ತಂತಿ ಕಂಬಗಳು ಬಿದ್ದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳು ಹೋಗುವ ಸ್ಥಳಗಳನ್ನು ಪರಿಶೀಲನೆ ನಡೆಸುವುದು ಒಳಿತು.
- ಮಳೆಯ ನೀರಿನಲ್ಲಿ ಮಕ್ಕಳನ್ನು ನೆನೆಯಲು ಬಿಡಬೇಡಿ. ಶೀತ, ಜ್ವರ, ಕೆಮ್ಮಿನಂತಹ ಆರೋಗ್ಯ ಸಮಸ್ಯೆಗಳು ಎದುರಾಗಬಹುದು.
- ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿ ಸರೋವರಗಳ ವೀಕ್ಷಣೆಗೆ ಮಕ್ಕಳು, ದೊಡ್ಡವರು ಯಾರೂ ಹೊಗಬೇಡಿ. ಅರೆಕ್ಷಣದ ಖುಷಿಗೆ ಮೈ ಮರೆತರೆ ಜೀವನದುದ್ದಕ್ಕೂ ಖುಷಿಯೇ ಇಲ್ಲವಾದೀತು.
- ಶಾಲೆಗಳಿಗೆ ರಜೆ ಇದ್ದು ಆನ್ಲೈನ್ ತರಗತಿಗಳು ನಡೆಯುವುದಾದರೆ ಮಕ್ಕಳನ್ನು ಅದಕ್ಕಾಗಿ ಸಿದ್ಧಪಡಿಸಿ. ಅಥವಾ ಹೆತ್ತವರೇ ಮಕ್ಕಳ ಓದಿಗಾಗಿ ಮುತುವರ್ಜಿ ವಹಿಸಿ ಪಠ್ಯ ವಿಷಯಗಳನ್ನು ಹೇಳಿ ಕೊಡಿ.
- ಪ್ರತಿಯೊಂದು ಎಚ್ಚರಿಕೆಯ ವಿಷಯಗಳನ್ನು ಕೂಡ ಮಕ್ಕಳಿಗೆ ಶಾಂತ ರೀತಿಯಲ್ಲಿ ಮನದಟ್ಟು ಮಾಡುವ ಬಹುದೊಡ್ಡ ಜವಾಬ್ದಾರಿಯನ್ನು ಹೆತ್ತವರು ಮಾಡಲೇಬೇಕು. ಇದು ಮಕ್ಕಳ ಸುರಕ್ಷತೆಗೆ ಹೆತ್ತವರು ಇಡುವ ಮೊದಲ ಹೆಜ್ಜೆಯಾಗಿರುತ್ತದೆ.
- ಎಲ್ಲೆಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇವೆಯೋ ಆ ಬಗ್ಗೆ ಮಕ್ಕಳು ಹಾಗೂ ಪೋಷಕರು ತುರ್ತಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.
- ಶಾಲೆಗೆ ರಜೆ ಎಂಬ ಕಾರಣಕ್ಕೆ ಮಕ್ಕಳನ್ನು ಹೆಚ್ಚಾಗಿ ಟಿವಿ, ಮೊಬೈಲ್ ಅಲ್ಲಿ ಆಟವಾಡಲು ಬಿಡಬೇಡಿ.
ಇದನ್ನೂ ಓದಿ: 1ನೇ ತರಗತಿ ಸೇರಲು ಗರಿಷ್ಠ ವಯೋಮಿತಿ 8 ವರ್ಷಕ್ಕೆ ಹೆಚ್ಚಳ
ಹೆತ್ತವರಿಗೆ ಮಕ್ಕಳೇ ಸಂಪತ್ತು. ದೇಶದ ಭವಿಷ್ಯಕ್ಕೂ ಮಕ್ಕಳೇ ಮುನ್ನುಡಿ ಬರೆಯುವವರು. ಆದ್ದರಿಂದ ಮಳೆಯ ರಜೆ ಮಕ್ಕಳ ಪಾಲಿಗೆ ಎಷ್ಟು ಮಜವೆನಿಸಿವುದೋ ಅಷ್ಟೇ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಇಂದು ಸಿಗುವ ರಜೆ ನಾಳೆ ಸಿಗಬೇಕಾದ ರಜೆಗಳನ್ನು ಕಸಿದುಕೊಳ್ಳುತ್ತದೆ ಎಂಬ ಅರಿವು ಮಕ್ಕಳಿಗಿಲ್ಲ. ಆದ್ದರಿಂದ ಮನೆಯಲ್ಲಿ ಹೆತ್ತವರೊಡನೆ ಖುಷಿ ಖುಷಿಯಾಗಿ ಇರುವುದರೊಂದಿಗೆ ಶಾಲಾ ಪಠ್ಯ ವಿಷಯಗಳನ್ನೂ ಮನನ ಮಾಡಿಕೊಳ್ಳಿ. ಜೊತೆಯಲ್ಲೇ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ.