ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುತ್ತಿರುವುದು ಸಿಗ್ನಲ್ ಜಂಪ್ಗಿಂತ ನಾಲ್ಕು ಪಟ್ಟು ಹೆಚ್ಚಳವಾಗಿದೆ ಎಂಬ ವರದಿಯನ್ನು ದಿಲ್ಲಿ ಐಐಟಿ ನೀಡಿದೆ ಈಗಿನ ಅಪಘಾತಗಳಲ್ಲಿ 75 ರಷ್ಟು ಅತಿವೇಗದ ಚಾಲನೆಯಿಂದಾಗುತ್ತಿದೆ ಚಾಲನೆ ವೇಳೆ ರಾಂಗ್ ಸೈಡ್ ಹಾಗೂ ಮೊಬೈಲ್ ಬಳಕೆಯಂತಹ ಪ್ರವೃತ್ತಿ ಅಪಘಾತಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2021 ರಲ್ಲಿ ರಸ್ತೆ ಅಪಘಾತದಿಂದ 56 ಸಾವಿರಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ವರ್ಷದ ಅನಂತರ ಈ ಸಂಖ್ಯೆ 61,038ಕ್ಕೆ ಏರಿಕೆಯಾಗಿದೆ. ಇದರಲ್ಲಿ 40,000ಕ್ಕೂ ಹೆಚ್ಚು ಸಾವು ಅತೀ ವೇಗದ ವಾಹನ ಚಾಲನೆಯಿಂದ ಸಂಭವಿಸಿದೆ. ಮೊಬೈಲ್ ಬಳಕೆ, ರಾಂಗ್ ಸೈಡ್ ನಲ್ಲಿ ವಾಹನ ಚಲಾಯಿಸಿ ಆದ ಅಪಘಾತದ ಸಾವಿನ ಪ್ರಮಾಣವು ಶೇ. 21ಕ್ಕೆ ಏರಿಕೆಯಾಗಿದೆ. 2021 ರಲ್ಲಿ ಮೊಬೈಲ್ ಬಳಕೆ ಚಾಲನೆಯಿಂದ 1,040 ಸಾವು ಸಂಭವಿಸಿದ್ದರೆ, ರೆಡ್ ಸಿಗ್ನಲ್ ಉಲ್ಲಂಘನೆಗಾಗಿ 222 ಮತ್ತು 2022ರಲ್ಲಿ 271 ಸಾವು ಸಂಭವಿಸಿದೆ. ಇದರಿಂದ ಈ ಸಂಖ್ಯೆ 1132ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ ರಾಂಗ್ ಸೈಡ್ ಡ್ರೈವಿಂಗ್ ಇಂದ ಈ ಎರಡು ವರ್ಷದಲ್ಲಿ 2823 ಮತ್ತು 3544 ಮಂದಿ ಮೃತಪಟ್ಟಿದ್ದಾರೆ.
ದಿಲ್ಲಿ ಐಐಟಿ ನೀಡಿರುವ ಈ ಮೇಲಿನ ವರದಿಯನ್ನು ಗಮನಿಸಿದರೆ ಇಂದಿನ ಯುವಜನತೆ ಯಾವ ರೀತಿ ನಿಯಮಗಳನ್ನು ಉಲ್ಲಂಘನೆ ಮಾಡಿ ನಿರ್ಲಕ್ಷದಿಂದ ವಾಹನ ಚಲಾಯಿಸುತ್ತಿದ್ದಾರೆ ಎಂಬ ಅರಿವು ನಮಗಾಗುತ್ತದೆ. ವಾಹನ ನಮ್ಮದೇ ಆಗಿರಬಹುದು ಜೀವವೂ ನಮ್ಮದೇ ಆಗಿರಬಹುದು. ನಮ್ಮ ಜೀವನ ಈ ರೀತಿ ಎರಡು ದಿನಗಳಲ್ಲಿ ಇಹಲೋಕದ ಕಡೆಗೆ ಪಯಣಿಸಿದರೆ ನಮ್ಮ ಹೆತ್ತವರು, ಕುಟುಂಬದವರು ನಮ್ಮನ್ನು ನಂಬಿಕೊಂಡು ಬದುಕುತ್ತಿರುವವರ ಪಾಡೇನು? ಎಂಬುದನ್ನು ನಾವು ಯೋಚಿಸಬೇಕಾಗಿದೆ. ನಾವು ಮಾಡುವ ಒಂದು ತಪ್ಪಿನಿಂದ ಇನ್ನೊಂದು ವಾಹನದವನ ಬದುಕೂ ದುರ್ಬರವಾಗಿ ಹೋಗುತ್ತದೆ. ಭೀಕರ ಅಪಘಾತಗಳಿಗೆ ನಾವು ಕಾರಣರಾಗಿ, ಇನ್ನೊಂದು ಜೀವಗಳನ್ನು ಬಲಿ ಪಡೆಯುವ ಹಕ್ಕು ನಮಗಿಲ್ಲ. ಆದ್ದರಿಂದ ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ.