ಜುಲೈ 26 ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ಕೆ ಭದ್ರತೆ ಒದಗಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಭಾರತದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಪಡೆದಿರುವ ಕೆ9 ಶ್ವಾನದಳ ತೆರಳಿದೆ.
ಬೆಂಗಳೂರಿನ ಸಿ.ಆರ್.ಪಿ.ಎಫ್ ಶ್ವಾನದಳ ಕೇಂದ್ರದಲ್ಲಿ ತರಬೇತಿ ಪಡೆದ ಶ್ವಾನಗಳು ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸಲು ತರಬೇತಿ ಮತ್ತು ಪರೀಕ್ಷೆಗಳನ್ನು ನಡೆಸಿದ ನಂತರ ಕೆ9 ತಂಡವನ್ನು ಆಯ್ಕೆ ಮಾಡಲಾಗಿದೆ. ಫ್ರಾನ್ಸ್ ನ ವಿವಿದೆಡೆ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಭದ್ರತೆ ನೀಡಲು ಈ ಶ್ವಾನದಳ ಜುಲೈ 10 ರಂದು ತೆರಳಿದೆ.
ಇದನ್ನೂ ಓದಿ : ಮಂಗಳೂರು-ಮಡಿಕೇರಿ ರಾಷ್ಟ್ರೀಯ ಹೆದ್ದಾರಿ ಬಂದ್
ಭಾರತ ದೇಶದಲ್ಲಿ ವಿವಿಧ ಅಪರಾಧ ನಿಗ್ರಹ ಕಾರ್ಯಾಚರಣೆಗಳಲ್ಲಿ ಶ್ವಾನದಳ ಬಳಕೆಯನ್ನು ಹೆಚ್ಚಾಗಿ ಮಾಡುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಚುರುಕುತನ ತೋರಿ ಪತ್ತೆದಾರಿ ಕಾರ್ಯಾಚರಣೆಗಳಲ್ಲಿ ಯಶಸ್ವಿ ಪ್ರದರ್ಶನ ತೋರಿದ ಶ್ವಾನದಳಗಳ ಸಾಮಾರ್ಥ್ಯವನ್ನು ಭಾರತದಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿ ಗಮನಿಸಿತ್ತು. ಇದೇ ಕಾರಣದಿಂದ ಫ್ರಾನ್ಸ್ ನೆಲದಲ್ಲಿ ನಡೆಯುವ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಹೆಚ್ಚುವರಿ ಭದ್ರತೆಗಾಗಿ K9 ಶ್ವಾನದಳ ಹಾಗೂ ಅವುಗಳಿಗೆ ತರಬೇತಿ ನೀಡಿರುವ ಪೋಲಿಸ್ ಅಧಿಕಾರಿಗಳ ತಂಡವನ್ನು ಕಳುಹಿಸಿ ಕೊಡುವಂತೆ ಭಾರತದದಲ್ಲಿರುವ ಫ್ರಾನ್ಸ್ ರಾಯಭಾರ ಕಚೇರಿ ಭಾರತ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿದ ಭಾರತ ಸರ್ಕಾರ ಆಗಸ್ಟ್ 12 ರವರೆಗೆ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಭದ್ರತೆ ಒದಗಿಸಲು K9 ಪಡೆಯ ಚುರುಕುತನದ ಶ್ವಾನಗಳು ಹಾಗೂ ಪೋಲಿಸ್ ಸಿಬ್ಬಂದಿಗಳನ್ನು ಕಳುಹಿಸಿ ಕೊಡಲು ಮುಂದಾಗಿದೆ.
ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರಳುವ ಭದ್ರತಾ ಪಡೆಗಳ ತಂಡಗಳಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿ.ಆರ್.ಪಿ.ಎಫ್), ಕೇಂದ್ರೀಯ ಸಶಸ್ತ್ರ ಪೋಲಿಸ್ ಪಡೆಗಳು(ಸಿ.ಎ.ಪಿ.ಎಫ್), ಇಂಡೋ ಟಿಬೆಟ್ ಗಡಿ ಪೋಲಿಸ್(ಐ.ಟಿ.ಬಿ.ಪಿ), ಸಶಸ್ತ್ರ ಸೀಮ ಬಲ(ಎಸ್.ಎಸ್.ಬಿ), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ದಳದ(ಎನ್.ಎಸ್.ಜಿ) 10 ಕೆ9 ಶ್ವಾನಗಳು ಹಾಗೂ ಶ್ವಾನದಳ ನಿರ್ವಹಣೆಯ 17 ಸಿಬ್ಬಂದಿಗಳು ನಿಯೋಜನೆಗೊಂಡಿದ್ದಾರೆ.
ಇದನ್ನೂ ಓದಿ : ಅಂಚೆ ಕಚೇರಿಯಲ್ಲಿ ಉತ್ತಮ ಬಡ್ಡಿದರ ಸಿಗುವ ಯೋಜನೆಗಳ ಮಾಹಿತಿ ಇಲ್ಲಿದೆ!
ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದ ಹೆಚ್ಚುವರಿ ಭದ್ರತೆಗಾಗಿ ನಿಯೋಜನೆಗೊಂಡಿರುವ ಶ್ವಾನದಳದಲ್ಲಿ ಬೇರೆ ಬೇರೆ ತಳಿಯ ಶ್ವಾನಗಳು ಇವೆ. ಕೆ9 ಶ್ವಾನದಳದ ಬೆಲ್ಜಿಯನ್ ಶೆಫರ್ಡ್ ಮಾಲಿನೋಯಿಸ್ ತಳಿಯ 5 ವರ್ಷ ಪ್ರಾಯದ ವಾಸ್ಟ್ ಮತ್ತು 3 ವರ್ಷದ ಡೆನ್ಬೈ ಶ್ವಾನಗಳನ್ನು ಆರಿಸಲಾಗಿದೆ. ಇದರ ಜೊತೆಗೆ ಆರು ಬೆಲ್ಜಿಯನ್ ಮೆಲನೆಸ್, ಮೂರು ಜರ್ಮನ್ ಶೆಫರ್ಡ್ ಮತ್ತು ಒಂದು ಲ್ಯಾಬ್ರಡಾರ್ ರಿಟ್ರೈವರ್ ತಳಿಗಳ 10 ನಾಯಿಗಳನ್ನು ಆಯ್ಕೆ ಮಾಡಲಾಗಿದೆ. ಹೆಚ್ಚಿನ ತರಬೇತಿ ಪಡೆದ ಈ ಶ್ವಾನಗಳು ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರ ಸುರಕ್ಷತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಕೆ9 ತಂಡಗಳು ಸ್ಫೋಟಕಗಳು, ಮದ್ದು ಗುಂಡುಗಳು ಮತ್ತು ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿವೆ.
ಕೆ9 ಶ್ವಾನಗಳು ಕಳೆದ ವರ್ಷ ಭಾರತದ ನೆಲದಲ್ಲಿ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ತೋರಿದ ಅಭೂತಪೂರ್ವ ಸಾಮರ್ಥ್ಯವನ್ನು ಎಲ್ಲರೂ ಕೊಂಡಾಡಿದ್ದರು. ಭಾರತವನ್ನು ಬಿಟ್ಟು ವಿದೇಶದಲ್ಲಿ ಈ ಶ್ವಾನದಳ ಇದೇ ಮೊದಲ ಬಾರಿಗೆ ಕರ್ತವ್ಯ ನಿರ್ವಹಿಸುತ್ತಿರುವುದು. ಏನೇ ಆಗಲಿ ನಮ್ಮ ದೇಶದ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ತರಬೇತಿ ಪಡೆದ ಶ್ವಾನದಳ ವಿದೇಶದ ರಕ್ಷಣಾ ಕಾರ್ಯಾಚರಣೆಗೆ ತೆರಳುತ್ತಿರುವುದು ಹೆಮ್ಮೆಯ ವಿಷಯ. ಚುರುಕುತನ, ತೀಕ್ಷ್ಣಮತಿ, ಆಕ್ರಮಣಶೀಲತೆಗೆ ಹೆಸರಾದ ಈ ಶ್ವಾನಗಳು ಭಾರತದ ರಕ್ಷಣಾ ಪಡೆಗಳ ಜೊತೆಗೆ ದೇಶಸೇವೆ ಮಾಡುತ್ತಿರುವುದಕ್ಕೆ ಎಷ್ಟೇ ಸಲಾಂ ಸಲ್ಲಿಸಿದರೂ ಕಡಿಮೆಯೇ ಅಲ್ವಾ…!!??
Nice article