ರಾಜ್ಯದ ರೈತರು ಹವಾಮಾನ ವೈಪರೀತ್ಯದಿಂದ ನಾನಾ ರೀತಿಯಲ್ಲಿ ಬೆಳೆ ನಷ್ಟ ಅನುಭವಿಸುತ್ತಿದ್ದು ರೈತರ ಈ ಸಮಸ್ಯೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಪರಿಹರಿಸುವ ಸಲುವಾಗಿ ಬೆಳೆಗಳಿಗೆ ವಿಮೆ ಮಾಡಿಸುವ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಿದೆ. ಈಗಾಗಲೇ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದು ಬಾಕಿ ಇರುವ ರೈತರು ಬೆಳೆವಿಮೆ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅಡಿಯಲ್ಲಿ ಅಡಿಕೆ, ಕಾಳು ಮೆಣಸು ಮತ್ತು ಭತ್ತ ಸೇರಿದಂತೆ ಹಲವು ಬೆಳೆಗಳ ಹಾನಿಗೆ ವಿಮಾ ಯೋಜನೆಯ ಮೂಲಕ ಪರಿಹಾರ ಪಡೆಯಲು ಅವಕಾಶವಿದೆ. ಮಲೆನಾಡು, ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳ ರೈತರಿಗೆ ಈ ಮೇಲಿನ ಬೆಳೆಗಳಿಗೆ ವಿಮೆ ಮಾಡಿಸಲು ಆದೇಶ ಹೊರಡಿಸಿದೆ.
ಬೆಳೆವಿಮೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ
ಈ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಲು ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿಗೆ ಭೇಟಿ ನೀಡಬೇಕಾಗಿದ್ದು ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ. ವಿಮಾ ನೋಂದಣಿಗೆ ಬೆಳೆ ಸಾಲ ಪಡೆದ ಹಾಗೂ ಸಾಲ ಪಡೆಯದ ರೈತರು ಅರ್ಹರಾಗಿರುತ್ತಾರೆ. ವಿಮಾ ನೋಂದಣಿಗೆ ರೈತರು ಕಟ್ಟಬೇಕಾದ ಪ್ರೀಮಿಯಮ್ ಮೊತ್ತ, ಮುಂಗಾರು ಹಂಗಾಮಿನಲ್ಲಿ ತೋಟಗಾರಿಕಾ ಬೆಳೆಗಳ ವಿಮಾ ಕಂತು, ವಿಮಾ ಮೊತ್ತದ ಶೇಕಡಾ 5ರಷ್ಟಿರುತ್ತದೆ. ಉಳಿದ ಬಾಕಿ ಪ್ರೀಮಿಯಮ್ ಅನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಭರಿಸಲಿವೆ.
ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆ ವಿಮೆ ನೋಂದಣಿಗೆ ರೈತರು ಕಟ್ಟಬೇಕಾದ ಪ್ರೀಮಿಯಮ್ ಹಣ ಅಡಿಕೆ ಬೆಳೆಗೆ ಪ್ರತೀ ಹೆಕ್ಟೇರ್ಗೆ 6400 ರೂ. ಹಾಗೂ ಕರಿಮೆಣಸು ಹೆಕ್ಟೇರಿಗೆ 2350 ರೂ. ಆಗಿರುತ್ತದೆ.
ಬೆಳೆ ವಿಮೆ ಯೋಜನೆ ಮಾಡಿಸಬೇಕಾದರೆ ರೈತರ ಜಮೀನುಗಳು FRUIT (Farmer Registration & Unified Beneficiary Information System) ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ಅಲ್ಲದೆ ಬೆಳೆ ಸರ್ವೆ ಕೂಡ ಆಗಿರಬೇಕು. ರೈತರ ಹೆಸರಿನಲ್ಲಿರುವ ಜಮೀನಿನ ಪಹಣಿಯಲ್ಲಿ ಕೃಷಿಭೂಮಿಯಲ್ಲಿರುವ ಬೆಳೆಗಳ ಹೆಸರು ನಮೂದಾಗಿರಬೇಕು. ಇಲ್ಲವಾದಲ್ಲಿ ಹತ್ತಿರದ ಕಂದಾಯ ಇಲಾಖೆ ಅಥವಾ ತೋಟಗಾರಿಕಾ ಇಲಾಖೆಯ ಕಛೇರಿಗೆ ಭೇಟಿ ನೀಡಿ ಇಲಾಖೆಯ ತಂತ್ರಾಂಶದಲ್ಲಿ ಹೆಸರನ್ನು ನೋಂದಾಯಿಸುವುದು ಕಡ್ಡಾಯ.
ಇದನ್ನೂ ಓದಿ : ಕೃಷಿ ನೀರಾವರಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್..!
ಬೆಳೆವಿಮೆಯಂತಹ ಯೋಜನೆಯ ಪರಿಹಾರ ಪಡೆಯಲು ಆಧಾರ್ ಕಾರ್ಡ್ ಮ್ಯಾಪಿಂಗ್ ಆಗಿರಬೇಕು. ಆಧಾರ್ ಕಾರ್ಡ್ ಮ್ಯಾಪಿಂಗ್ ಎಂದರೆ ಆಧಾರ್ ಸಂಖ್ಯೆ ಜೊತೆಗೆ ಬ್ಯಾಂಕ್ ಖಾತೆಯನ್ನು ಸಂಯೋಜನೆಗೊಳಿಸುವ ಪ್ರಕ್ರಿಯೆಯಾಗಿದ್ದು NPCI (National Payment Corporation of India) ಯಿಂದ ಇದು ಸುಲಭವಾಗುತ್ತದೆ. ಅಂದರೆ ಸರ್ಕಾರದಿಂದ ರೈತರು ಪಡೆಯುವ ಪ್ರತಿಯೊಂದು ಸವಲತ್ತುಗಳ ಹಣ ವರ್ಗಾವಣೆ ನೇರವಾಗಿ ರೈತರು ಸೂಚಿಸಿದ ನಿರ್ದಿಷ್ಟ ಖಾತೆಗೆ ಜಮೆಯಾಗುತ್ತದೆ.
ಬೆಳೆ ವಿಮೆ ನೋಂದಣಿ ಮಾಡುವವರು ಪಹಣಿಗೆ ಆಧಾರ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಮೂರ್ನಾಲ್ಕು ತಿಂಗಳ ಹಿಂದೆಯೇ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ. ಗ್ರಾಮ ಲೆಕ್ಕಿಗರ ಕಛೇರಿಗೆ ಭೇಟಿ ನೀಡಿ ಉಚಿತವಾಗಿ ಆಧಾರ್ ಪಹಣಿ ಸೀಡಿಂಗ್ ಮಾಡಿಸಿಕೊಳ್ಳಬಹುದಾಗಿದೆ. ಇನ್ನು ಮುಂದೆ ಬೆಳೆ ವಿಮೆ ಸೇರಿದಂತೆ ಸರ್ಕಾರದ ಸಬ್ಸಿಡಿ, ಲೋನ್ ಪಡೆಯುವುದಾದರೂ ಈ ಪಹಣಿ ಆಧಾರ್ ಸೀಡಿಂಗ್ ಕಡ್ಡಾಯವಾಗಿದೆ.
ಇದನ್ನೂ ಓದಿ : ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024
ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಿಸುವವರು ಹತ್ತಿರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಬೇಕಾದ ಅಗತ್ಯ ದಾಖಲೆಗಳೊಂದಿಗೆ ನೇರವಾಗಿ ಭೇಟಿ ನೀಡಿ.