ನಮ್ಮ ಹಿರಿಯರು ಬಾಳಿ ಬದುಕಿದ ಕಾಲವೊಂದಿತ್ತು. ದಣಿವು ಎಂಬ ಪದದ ಅರ್ಥವನ್ನು ಅರಿಯಲೂ ಪುರುಸೋತ್ತು ಇಲ್ಲದ ದಿನಗಳು. ಹೌದು..ಮುಳಿಹುಲ್ಲಿನ ಕೃಷಿ ಮನೆಯ ಮುಂದೆ ಗದ್ದೆಗಳ ಸಾಲು.. ಹಸಿರಿನಿಂದ ಕಂಗೊಳಿಸುವ ಆ ಗದ್ದೆಗಳಲ್ಲಿ ಮನೆಯ ಮಂದಿಯೆಲ್ಲಾ ಸೇರಿ ಉಳುಮೆ ಮಾಡಿ, ಸಂಧಿ-ಪಾರ್ದನ ಹಾಡಿ ನಾಟಿ ಕೆಲಸ ಮಾಡುತ್ತಿದ್ದ ಆ ಖುಷಿಯ ದಿನಗಳಿಗೆ ಸರಿಸಾಟಿ ಏನಿದೆ ಅಲ್ವಾ..?? ಅಜ್ಜ ಅಜ್ಜಿಯರು ಹಿಂದಿನ ಅವರ ಕಾಲದ ಜೀವನವನ್ನು ವಿವರಿಸುತ್ತಾ ಹೋದರೆ ನಮ್ಮ ಕಣ್ಣಂಚುಗಳು ತುಂಬಿ ಬರುತ್ತದೆ.
ಹೊಟ್ಟೆಗೆ ಹಿಟ್ಟಿಲ್ಲ. ಉಡಲು ತುಂಡು ಬಟ್ಟೆಗೂ ಬರಗಾಲ. ಮಡಿಲಲ್ಲಿ ಪುಟಾಣಿ ಮಕ್ಕಳು. ಮನೆ ತುಂಬಾ ಕೂಡು ಕುಟುಂಬದ ಪ್ರೀತಿ ಬಂಧ…!! ಸೂರ್ಯನ ಬೆಳಕು ಭೂಮಿಗೆ ಬೀಳುವ ಮೊದಲೇ ಗಂಡು ಹೆಣ್ಣೆಂಬ ಬೇಧವಿಲ್ಲದೆ ಎಲ್ಲರೂ ಹೊಲಕ್ಕೆ ಹೋಗಿ ದುಡಿಯಲೇಬೇಕಾದ ಅನಿವಾರ್ಯತೆ. ಹೊಟ್ಟೆಗೆ ಗಂಜಿ ನೀರು ಸಿಕ್ಕರೆ ಅದೇ ದೊಡ್ಡ ಮೃಷ್ಟಾನ್ನ ಭೋಜನ. ಹಸಿವಿನ ಹಂಗು ತೊರೆದು ನಾಳೆಯಾದರೂ ಹೊಟ್ಟೆ ತುಂಬಾ ಮನೆ ಮಂದಿ ಉಣ್ಣೋಣವೆಂದು ದುಡಿಯುತ್ತಿದ್ದ ದಿನಗಳವು.
ಇದನ್ನೂ ಓದಿ : ಕೃಷಿ ನೀರಾವರಿ ಪಂಪ್‌ಸೆಟ್‌ಗೆ ಆಧಾರ್ ಲಿಂಕ್..!
ಆದರೆ ಈಗ ಕಾಲ ಬದಲಾಗುತ್ತಿದೆ. ಅಂದು ಕಂಗೊಳಿಸುತ್ತಿದ್ದ ಸಾಲು ಸಾಲು ಗದ್ದೆಗಳು ಮರೆಯಾಗಿ ಅಡಿಕೆ, ತೆಂಗು, ರಬ್ಬರ್ ತೋಟಗಳು ರಾರಾಜಿಸುತ್ತಿವೆ. ಮಾರ್ಗದ ಬದಿಯ ಗದ್ದೆಗಳಲ್ಲಿ ಬೃಹತ್ ಕಟ್ಟಡಗಳು, ಕಾರ್ಖಾನೆಗಳು, ಮನೆಗಳು ತಲೆ ಎತ್ತಿವೆ. ಹಿಂದಿನ ಕಾಲದಲ್ಲಿ ಆ ಸ್ಥಳಗಳಲ್ಲಿ ಗದ್ದೆಗಳು ಇದ್ದವು ಎಂಬುದಕ್ಕೆ ವಯಸ್ಸಾದ ಅಜ್ಜ ಅಜ್ಜಿಯರಷ್ಟೇ ಈಗ ಸಾಕ್ಷಿ. ಈಗ ಎಲ್ಲವೂ ಯಂತ್ರಮಯವಾಗಿದೆ. ತಾಂತ್ರಿಕತೆಯ ತೊಟ್ಟಿಲಲ್ಲಿ ತೂಗುತ್ತಿರುವ ನಮಗೆ ಎಲ್ಲವನ್ನೂ ಕೃತಕವಾಗಿ ಯಂತ್ರಗಳೇ ತಯಾರು ಮಾಡಿ ಕೊಡುತ್ತಿವೆ.
ನಾಟಿ ಮಾಡಲು ಗೊತ್ತಿಲ್ಲದಿದ್ದರೂ ರೈತರ ಆ ಕೆಲಸಗಳನ್ನು ಕಣ್ತುಂಬಿಕೊಳ್ಳಲು ಗದ್ದೆಗಳೇ ಇಲ್ಲ.
ಹಿರಿಯರ ಅನುಭವದ ಮಾತುಗಳನ್ನು ಕೇಳುವಾಗ ಅಯ್ಯೋ ನಾವೆಂತ ನತದೃಷ್ಟರು ಎಂದೆನಿಸುತ್ತದೆ. ಕೇಳಲು ಪಾರ್ದನದ ಸೊಗಡಿಲ್ಲ… ನಾಟಿ ಮಾಡಲು ಗೊತ್ತಿಲ್ಲದಿದ್ದರೂ ರೈತರ ಆ ಕೆಲಸಗಳನ್ನು ಕಣ್ತುಂಬಿಕೊಳ್ಳಲು ಗದ್ದೆಗಳೇ ಇಲ್ಲ. ಎಲ್ಲವನ್ನೂ ಚಿತ್ರಗಳಲ್ಲೇ ನೋಡುವ ಸೌಭಾಗ್ಯ ಈಗಿನ ಯುವ ಜನತೆಯದ್ದಾಗಿದೆ.
ಮಕ್ಕಳು, ಯುವ ಜನರನ್ನು ಒಟ್ಟು ಸೇರಿಸಿ ಭತ್ತದ ನಾಟಿ ಮಾಡಿಸುವ ಕೃಷಿ ಕೆಲಸ ನಡೆಯುತ್ತಿದೆ.
ಆದರೂ ಈಗಿನ ಹಿರಿಯರು ನಮ್ಮ ಮುಂದಿನ ಪೀಳಿಗೆಗೆ ಗದ್ದೆಯ ಸೊಗಡಿನ ಮಹಿಮೆಯನ್ನು ಒಂದು ದಿನದ ಮಟ್ಟಿಗಾದರೂ ಉಣಬಡಿಸುವ ಶ್ರೇಷ್ಠ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅಲ್ಲಲ್ಲಿ ಈಗ ಕಾಣ ಸಿಗುವ ಆಟಿಡೊಂಜಿ ದಿನ, ಕೆಸರ್ಡ್ ಒಂಜಿ ದಿನ, ಕಂಡಡೊಂಜಿ ದಿನ ಎಂಬ ಬ್ಯಾನರ್ ಗಳು ಹೃದಯ ತಣಿಸುತ್ತಿವೆ. ಹೌದು ಅಲ್ಲೋ ಇಲ್ಲೋ ಕಾಣ ಸಿಗುವ ಕೆಲವೊಂದು ಗದ್ದೆಗಳಲ್ಲಿ ಮಕ್ಕಳು, ಯುವ ಜನರನ್ನು ಒಟ್ಟು ಸೇರಿಸಿ ಭತ್ತದ ನಾಟಿ ಮಾಡಿಸುವ ಕೆಲಸ ನಡೆಯುತ್ತಿದೆ. ಕೆಲವೊಂದು ಶಾಲಾ ಕಾಲೇಜುಗಳಲ್ಲೂ ಅಧ್ಯಾಪಕ ವೃಂದ ಈ ಕೆಲಸವನ್ನು ಮಾಡಿಸುತ್ತಿದ್ದಾರೆ. ನಿಜವಾಗಿಯೂ ಇದೊಂದು ಅದ್ಭುತ ಕೆಲಸ. ಮನೆಯಲ್ಲಿ ಹೆತ್ತವರು ದುಡಿದು ತಂದು ಬೇಯಿಸಿ ಹಾಕಿದ ಅನ್ನವನ್ನು ಉಂಡಷ್ಟೇ ನಮಗೆ ಗೊತ್ತಿದೆ. ಆದರೆ ಅನ್ನವಾಗುವ ಆ ಅಕ್ಕಿಯನ್ನು ಒಬ್ಬ ರೈತ ಹೇಗೆ ಕಷ್ಟ ಪಟ್ಟು ನಾಟಿ ಮಾಡಿ ಕಟಾವು ಮಾಡುತ್ತಾನೆ ಎಂಬ ಪ್ರಕ್ರಿಯೆ ಈಗಿನ ಮಕ್ಕಳು ಹಾಗೂ ಯುವ ಜನರಿಗೂ ಅನುಭವವಾಗಬೇಕು. ಇಂದು ಒಂದೆರಡು ದಿನ ಮಕ್ಕಳಲ್ಲಿ ನೇಜಿ ನೆಡಿಸುವ ಕೆಲಸವಷ್ಟೇ ಆಗುತ್ತಿದೆ. ಆದರೆ ನೇಗಿಲು ಹಿಡಿದು ಉಳುಮೆ ಮಾಡುವಲ್ಲಿಂದ ಭತ್ತದ ಕೃಷಿಯ ಪ್ರತಿಯೊಂದು ಹಂತವನ್ನೂ ಮಕ್ಕಳಿಗೆ ಪರಿಚಯಿಸಬೇಕು. ಮಕ್ಕಳಲ್ಲಿ ಈ ಬಗ್ಗೆ ಆಸಕ್ತಿ ಮೂಡಿದರೆ ಮಾತ್ರ ಅಳಿದುಳಿದ ಕೆಲ ಗದ್ದೆಗಳಲ್ಲಿ ಭತ್ತದ ನಾಟಿ ಮುಂದೆಯೂ ನಡೆಯಬಹುದು. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.
ಇದನ್ನೂ ಓದಿ : ಭಾರತೀಯ ಆಹಾರ ಇಲಾಖೆ 11 ಹುದ್ದೆಗಳಿಗೆ ನೇಮಕಾತಿ 2024
ಮಕ್ಕಳು ಗದ್ದೆಯ ತುಂಬಾ ಓಡಾಡಬೇಕು. ಉಳುಮೆ ಮಾಡಿದ ಆ ಗದ್ದೆಯ ಕೆಸರಲ್ಲಿ ಒಮ್ಮೆ ಬಿದ್ದು ಹೊರಳಾಡಿ “ಮಣ್ಣಿನ ಮಕ್ಕಳು ನಾವು” ಎಂದು ಉದ್ಗರಿಸಬೇಕು. ಆಗಲೇ ನಮ್ಮ ಮಣ್ಣಿನ ಶ್ರೇಷ್ಠತೆಯ ಘಮಲು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಳು ಸಾಧ್ಯ. ಆಟಿಡೊಂಜಿ ದಿನ ಮಾತ್ರ ಅಲ್ಲ. ವರ್ಷದುದ್ದಕ್ಕೂ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕೃಷಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ. ಆಗ ಮಾತ್ರ ಹಿರಿಯರಿಂದ ನಡೆದುಕೊಂಡು ಬಂದ ಸಂಪ್ರದಾಯಬದ್ಧ ಕೃಷಿ ಪರಂಪರೆ ಮುಂದಿನ ಪೀಳಿಗೆಗೆ ಉಳಿಯಲು ಸಾಧ್ಯ.